ಬಾಕ್ಸಾಫೀಸಲ್ಲಿ ಪಂಚರಂಗಿ ಪೋಂ ಪೋಂ!
ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಮೂಲಗಳ ಪ್ರಕಾರ ಚಿತ್ರದ ಎರಡು ವಾರದ ಗಳಿಕೆ ರು.3.57 ಕೋಟಿ ಮುಟ್ಟಿದೆ.ಚಿತ್ರದಲ್ಲಿ ಕಥೆಯಿಲ್ಲದಿದ್ದರೂ ಭಟ್ಟರು ಮನರಂಜನೆಗೆ ಮೋಸ ಮಾಡಿಲ್ಲ ಎಂಬ ಪ್ರೇಕ್ಷಕರ ಮಾತುಗಳೇ ಚಿತ್ರಕ್ಕೆ ಶ್ರೀರಕ್ಷೆಯಾಗಿ ನಿಂತಿವೆ. ಮುಂಬರುವ ದಿನಗಳಲ್ಲಿ 'ಪಂಚರಂಗಿ' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆಯುವ ಎಲ್ಲ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿಬಂದಿವೆ.
ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಪಂಚರಂಗಿ ಗಳಿಕೆ ರು.1.58 ಕೋಟಿಯಷ್ಟಿತ್ತು. ಚಿತ್ರ ಎರಡನೆ ವಾರಕ್ಕೆ ಮುನ್ನುಗ್ಗುತ್ತಿದ್ದಂತೆ ಗಳಿಕೆಯ ಪ್ರಮಾಣ ಶೇ.30ರಷ್ಟು ಹೆಚ್ಚಾಗಿದೆ. ಎರಡನೆ ವಾರದಲ್ಲಿ ರು.1.99 ಕೋಟಿ ಎಣಿಸಿದ್ದಾಗಿ ಬಾಕ್ಸಾಫೀಸ್ ಮೂಲಗಳು ಹೇಳಿವೆ. ಮೂರನೆ ವಾರದಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
'ಪಂಚರಂಗಿ' ಚಿತ್ರವನ್ನು ಒಟ್ಟು 45 ಕೇಂದ್ರಗಳಲ್ಲಿ ಬಿಡುಗಡೆ ಮಾಡಬೇಕೆಂದು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ಹಲವಾರು ಕಾರಣಗಳಿಂದ ಚಿತ್ರ ಎಲ್ಲಾ ಕೇಂದ್ರಗಳಲ್ಲಿ ತೆರೆಕಾಣಲಿಲ್ಲ. ಕೇವಲ 39 ಕೇಂದ್ರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದ ಕರಾವಳಿ ಮತ್ತು ಅತಿವೃಷ್ಟಿಗೆ ಒಳಗಾದ ಬಾಗಲಕೋಟೆ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಿಲ್ಲ. ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದರೆ ಬಾಕ್ಸಾಫೀಸ್ ಕತೆ ಬೇರೆ ಇರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಚಿತ್ರದ ಬಜೆಟ್ ಅನ್ನು ಮೀರಿ 'ಪಂಚರಂಗಿ' ಭಾರಿ ಲಾಭ ಗಳಿಸಿದೆ. 'ಪಂಚರಂಗಿ' ಚಿತ್ರದ ರೀಮೇಕ್ ಹಕ್ಕುಗಳಿಗಾಗಿ ಈಗಾಗಲೆ ತೆಲುಗು, ತಮಿಳು ಮತ್ತು ಹಿಂದಿ ನಿರ್ಮಾಪಕರು ಮುಗಿಬಿದ್ದಿದ್ದಾರೆ. ಈ ವರ್ಷದ ಅತ್ಯಂತ ಯಶಸ್ವಿ ಚಿತ್ರ 'ಆಪ್ತರಕ್ಷಕ' ಚಿತ್ರದ ದಾಖಲೆಯನ್ನು 'ಪಂಚರಂಗಿ' ಅಳಿಸಲಿದೆ ಎಂಬ ಮಾತುಗಳು ಕೇಳಿಬಂದಿದೆ. ಯೋಗರಾಜ್ ಭಟ್ಟರೆ ನೀವೇನಂತೀರಾ? ಅಂದರೆ ಅವರು ತುಟಿಬಿಚ್ಚುತ್ತಿಲ್ಲ.


Click it and Unblock the Notifications











