»   » ‘ಮೊನಾಲಿಸಾ’ಗೆ ಬ್ಯಾಲೆಯ ಬಾಲೆಯರು

‘ಮೊನಾಲಿಸಾ’ಗೆ ಬ್ಯಾಲೆಯ ಬಾಲೆಯರು

Posted By: Staff
Subscribe to Filmibeat Kannada
monalisa
ಚಿತ್ರದಿಂದ ಚಿತ್ರಕ್ಕೆ ವಿಶೇಷ ವಸ್ತುವನ್ನು ಪರಿಚಯಿಸುವ ಆಸೆ ನಿರ್ದೇಶಕ ಇಂದ್ರಜಿತ್‌ಗೆ. ಈ ಆಸೆಯನ್ನು ಬೇಕಿದ್ದರೆ ಹುಚ್ಚು ಅನ್ನಿ , ತುಂಟಾಟ ಅನ್ನಿ ; ಇಂದ್ರಜಿತ್‌ ಬೇಸರಿಸಿಕೊಳ್ಳುವುದಿಲ್ಲ . ಆ ತುಂಟಾಟದ ಮಾತು ಬಿಡಿ, ಮೊನಾಲಿಸಾ ಬಗ್ಗೆ ಮಾತಾಡುವ ಬನ್ನಿ.

ಮೊನಾಲಿಸ ಯಶಸ್ಸಿಗಾಗಿ ಇಂದ್ರಜಿತ್‌ ಏನೆಲ್ಲಾ ಸರ್ಕಸ್‌ ಮಾಡುತ್ತಿದ್ದಾರೆ. ಮುನ್ನಾ ಚಿತ್ರ'ಲಂಕೇಶ್‌ ಪತ್ರಿಕೆ"ಯನ್ನು ನೋಡುಗರು ಕ್ಯಾರೇ ಅನ್ನದೆ ಹೋದುದರಿಂದ, ಮೊನಾಲಿಸ ಬಗ್ಗೆ ಇಂದ್ರಜಿತ್‌ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಅಂದಹಾಗೆ, ಇದು ಹೆಸರಲ್ಲಷ್ಟೇ ಮೊನಾಲಿಸಾ ; ಲಿಯಾನಾರ್ಡೊ ಡಾ ವಿಂಚಿ ಯವರ ಜಗತ್‌ಪ್ರಸಿದ್ಧ ಕಲಾಕೃತಿ ಮುಗುಳ್ನಗೆಯ 'ಮೊನಾಲಿಸಾ"ಗೂ ಸಿನಿಮಾಗೂ ಬಾದರಾಯಣ ಸಂಬಂಧವೂ ಇಲ್ಲ .

ಮೊನಾಲಿಸ ಸಿನಿಮಾಕ್ಕೆ 'ನನ್ನ ಪ್ರೀತಿಯ ಹುಡುಗಿ" ಖ್ಯಾತಿಯ ಧ್ಯಾನ್‌ ನಾಯಕ. ತೆಲುಗಿನ 'ಜಯಂ" ಖ್ಯಾತಿಯ ಸದಾ ನಾಯಕಿ. ಈಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ. ಮಹಾನಗರ ಜೀವನದ ಪ್ರೇಮಕಥೆಯೇ ಚಿತ್ರಕಥೆ. ಭವ್ಯ, ರಾಮಕೃಷ್ಣ, ರಂಗಾಯಣ ರಘು, ದರ್ಶನ್‌ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮಾತಿನ ಮುತ್ತು ಪೋಣಿಸಿದವರು ಬಿ.ಎ.ಮಧು. ಚಿತ್ರವನ್ನು ಕ್ಯಾಮರಾ ಮಸೂರದಲ್ಲಿ ಸೆರೆಹಿಡಿದವರು ಕೃಷ್ಣಕುಮಾರ್‌. ಬಾಬ್ಜಿ ಸಂದೀಪ್‌ ಸಂಗೀತದಲ್ಲಿ 'ದೇವದಾಸ್‌" ಖ್ಯಾತಿಯ ಶ್ರೇಯಾಘೋಯಲ್‌ ಹಾಗೂ ಕನ್ನಡದ ರಾಜೇಶ್‌ ಹಾಡಲಿದ್ದಾರೆ.

ಜೂನಿಯರ್‌ ಲಂಕೇಶ್‌ ಹೇಳಿದಂತೆ ಇದೊಂದು ಸಂಗೀತ ಪ್ರಧಾನ ಸಿನಿಮಾ. ಅದಕ್ಕಾಗಿ ಹಾಡುಗಳ ಮೇಲೆ ವಿಶೇಷ ಅಸಕ್ತಿ ವಹಿಸಿದ್ದಾರೆ. ಥೈಲ್ಯಾಂಡ್‌ನಲ್ಲಿ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ರಶ್ಯನ್‌ ಬ್ಯಾಲೆ ನರ್ತಕಿಯವರನ್ನು ಬೆಂಗಳೂರಿಗೆ ಕರೆಸಿದ್ದಾರೆ!

'ಮೊನಾಲಿಸಾ"ದಲ್ಲಿ ಚೋರಿ ಚೋರಿ ಎಂಬ ಹಾಡಿದೆ. ಈ ಹಾಡಿನಲ್ಲಿ ದರ್ಶನ್‌ ಮತ್ತು ದುರ್ಗಾಶೆಟ್ಟಿ ನೃತ್ಯವಿದೆ. ಇಡೀ ಸಿನಿಮಾಕ್ಕೇ ಹಾಡೇ ಹೈಲೈಟ್‌. ಪ್ರಖ್ಯಾತ ಬ್ಯಾಲೇ ನರ್ತಕಿಯರಾದ ನ್ಯಾತ್‌ಲಿಯಾ, ಅನ್ನಾ ನ್ಯಾತ್ಲೀ ಮತ್ತು ಕ್ಯಾಥೆರ್ನಿಯಾರು ಹಾಡಿಗೆ ನರ್ತಿಸಿದ್ದಾರೆ. ಇಂಗ್ಲೀಷ್‌ ಭಾಷೆಯೂ ಬರದಿದ್ದರೂ ಇವರು ಸಿನಿತಂಡದೊಂದಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಇಂದ್ರಜಿತ್‌ ಹೇಳಿದರು. ಈ ಹಾಡಿನ ಚಿತ್ರೀಕರಣ ನಡೆದದ್ದು ಹಚ್ಚ ಹಸಿರು ಹೊದಿದ್ದ ಜೇಡ್‌ಗಾರ್ಡನ್‌ನಲ್ಲಿ .

ಬ್ಯಾಲೆ ನೃತ್ಯಕ್ಕೆ ಭಾರತೀಯ ಉಡುಪು ಹೊಂದದ ಕಾರಣ ಹೊಸ ವಸ್ತ್ರ ವಿನ್ಯಾಸ ಮಾಡಲಾಗಿದೆ. ಹೊಸ ಹಚ್ಚಡದೊಂದಿಗೆ ಹೆಜ್ಜೆ ಹಾಕಲು ಬ್ಯಾಲೆ ಬಾಲೆಯರಿಗೆ ತುಂಬ ಸಮಯ ಬೇಕಾಯಿತು. ರಷ್ಯಾದ ಬ್ಯಾಲೆ ಬಾಲೆಯರು ಬೆಂಗಳೂರಿಗೆ ಬಂದು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು ಎಂದರು ಇಂದ್ರಜಿತ್‌.

ಅದು ಸರಿ, ದೇಶೀ ಚಿತ್ರಕ್ಕೆ ರಷ್ಯನ್‌ ಹುಡುಗಿಯರೇ ಯಾಕೆ ಬೇಕು ? ಇನ್ನೇಕೆ- ಬ್ಯಾಲೆ ಹುಡುಗಿಯರು ತೊಡುವ ತುಂಡುಗಳನ್ನು ಬೆಂಗಳೂರು ಬಾಲೆಯರು ಮೂಸುವುದಿಲ್ಲ , ಹಾಗಾಗಿ....

ಈ ಮೊದಲು ಶಕೀಲಾ, ಈಗ ರಷ್ಯನ್‌ ಬ್ಯಾಲೆಯ ಬಾಲೆಯರು ! 'ಮೊನಾಲಿಸಾ" ತುಂಟಾಟ ಭಾಗ 2 ರಂತೆ ಇರುತ್ತಾ ? ಜಾಣಜಾಣೆಯರಿಗಂತೂ ಮಸ್ತು ಮಜಾ.

English summary
indrajith brought russian byale dancers for monalisa

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada