»   » ರಾಧಿಕೆ ನಿನ್ನ ಪ್ರವರ ಇದೇನೆ.....

ರಾಧಿಕೆ ನಿನ್ನ ಪ್ರವರ ಇದೇನೆ.....

Subscribe to Filmibeat Kannada


ದುಡ್ಡಿನ ಬೆನ್ನತ್ತಿದ ಕನ್ನಡದ ಹುಡುಗಿ ರಾಧಿಕಾ ದಾರಿ ತಪ್ಪಿದರು ಎಂದು ಸ್ಯಾಂಡಲ್‌ವುಡ್‌ ಪಿಸುಗುಟ್ಟುತ್ತದೆ. ರಾಧಿಕಾ ಡಾಲರ್‌ ಕಾಲನಿಯಲ್ಲಿ ಖರೀದಿಸಿದ 13ಕೋಟಿಯ ಮನೆ, ಅನೇಕ ಅನುಮಾನಗಳಿಗೆ ದಾರಿ ಮಾಡಿದೆ. ರಾಧಿಕಾ ನಡೆದು ಬಂದ ದಾರಿ ಇಲ್ಲಿದೆ.

  • ಮಾಹಿತಿ : ದೇವಶೆಟ್ಟಿ ಮಹೇಶ್‌
ಐದು ವರ್ಷಗಳ ಹಿಂದೆ ‘ನೀಲ ಮೇಘ ಶ್ಯಾಮ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಧಿಕಾ ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಸುಮಾರು ಇಪ್ಪತ್ತೈದು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಚಿತ್ರಕ್ಕೆ ಆಕೆ ಪಡೆದ ಸಂಭಾವನೆ ಕೇವಲ ಹತ್ತು ಸಾವಿರ. ಎರಡನೇ ಚಿತ್ರ ‘ನಿನಗಾಗಿ’ ಇವರಿಗೆ ಅರವತ್ತು ಸಾವಿರ ನೀಡಿತು. ಆಮೇಲೆ ಪ್ರೇಮ್‌ ಖೈದಿ, ರೋಮಿಯಾ ಜ್ಯೂಲಿಯೆಟ್‌, ಮಣಿ, ಊಲಾಲಾ, ಹುಡುಗಿಗಾಗಿ ಚಿತ್ರಗಳ ಸಂಭಾವನೆ ಒಂದು ಲಕ್ಷ ದಾಟಲಿಲ್ಲ.

‘ತವರಿಗೆ ಬಾ ತಂಗಿ’ ಚಿತ್ರದ ಅದ್ಭುತ ಯಶಸ್ಸು ಕಂಡದ್ದು ಈಕೆಯ ಅದೃಷ್ಟ. ಅದಕ್ಕೆ ನಿರ್ಮಾಪಕ ಆರ್‌.ಎಸ್‌.ಗೌಡ ಈಕೆಗೆ ಕೊಟ್ಟದ್ದು ಒಂದೂವರೆ ಲಕ್ಷ. ಅದಾದ ನಂತರ ಮೂರು ನಾಲ್ಕು ಲಕ್ಷ ಸಂಭಾವನೆ ಪಡೆಯತೊಡಗಿದರು. ಸೋತಾಗ ಮಸಾಲಾ, ಗುಡ್‌ಲಕ್‌ ಚಿತ್ರಗಳಲ್ಲಿ ಹಾಟ್‌ ಆಗಿ ಕಾಣಿಸಿದರು.

ಏನೇ ಅದರೂ ಈಕೆ ಇದುವರೆಗೆ ನಟಿಸಿದ ಎಲ್ಲಾ ಚಿತ್ರಗಳ ಸಂಭಾವನೆ ಕೂಡಿಸಿದರೂ ಮೊತ್ತ 70 ಲಕ್ಷ ದಾಟಲಿಕ್ಕಿಲ್ಲ. ಅದರೆ ಇತ್ತೀಚೆಗೆ ಡಾಲರ್ಸ್‌ ಕಾಲೋನಿಯಲ್ಲಿ ಕೊಂಡ ಬಂಗಳೇ ಮೊತ್ತ ಬರೀ 13 ಕೋಟಿಯಂತೆ!

ಬಂಗಲೆಯಲ್ಲಿ ಏನೇನಿದೆ?

ಡಾಲರ್ಸ್‌ ಕಾಲೋನಿಯ ಆರ್‌ಎಂವಿ ಎರಡನೇ ಹಂತ, ಪ್ರಕಾಶ್‌ ರೋಡ್‌ ಲೈನ್ಸ್‌ ಎರಡನೇ ಮುಖ್ಯ ರಸ್ತೆಯಲ್ಲಿ ಈ ಬಂಗಲೆ ಇದೆ. ನಟಿ ದಿ. ಸೌಂದರ್ಯ ಮನೆಗೂ ಮುನ್ನ ಹಂಡ್ರೆಡ್‌ ಬೈ ಹಂಡ್ರೆಡ್‌ ಸೈಟ್‌ನಲ್ಲಿ ಇದನ್ನು ಕಟ್ಟಲಾಗಿದೆ. ರಿಯಲ್‌ ಎಸ್ಟೇಟ್‌ ಏಜೆಂಟರ ಪ್ರಕಾರ ಸೈಟ್‌ ಬೆಲೆಯೇ ಆರು ಕೋಟಿ. ಪ್ರತಿ ಚದರ ಅಡಿಗೆ ಅರು ಸಾವಿರ ಸಾವಿರ ರೂಪಾಯಿ.

ಬಂಗಲೆ ಒಳಗೆ ವಿಶಾಲ ಹಾಲ್‌, ಸಭಾಂಗಣ, ಊಟದ ಕೋಣೆ ಜತೆಗೆ ಐದು ರೂಮ್‌ಗಳು, ಆರು ಬಾತ್‌ ರೂಮ್‌ಗಳಿವೆ.ಒಂದು ಔಟ್‌ ಹೌಸ್‌ ಇದೆ. ಗೃಹ ಪ್ರವೇಶ ಆಗಿಲ್ಲ. ಕೊಂಡ ಬಂಗಲೆಯನ್ನು ಇನ್ನಷ್ಟು ಚೆಂದ ಮಾಡಲು ಸ್ವತಃ ರಾಧಿಕಾ ನಿತ್ಯ ಬೆಳಗ್ಗೆ ಬಂದು ನಿಲ್ಲುತ್ತಿದ್ದರು. ಅಂದ ಹಾಗೆ ಮೂರು ಕೋಟಿ ಬಜೆಟ್‌ನ ಚಿತ್ರ ನಿರ್ಮಿಸುವುದಾಗಿ ಇತ್ತೀಚೆಗೆ ತಮ್ಮ ಅಪ್ತರ ಬಳಿ ಹೇಳಿಕೊಂಡಿದ್ದರಂತೆ!

ಇಲ್ಲೀತನಕ...

ರಾಧಿಕಾ ತಂದೆಯ ಹೆಸರು ದೇವರಾಜ್‌. ತಾಯಿ ಸುರೇಖಾ. ಅಣ್ಣ ರವಿ. ಮೂಲ ಮಂಗಳೂರು. ಅಲ್ಲಿಯ ಪಾಂಡೇಶ್ವರ ಠಾಣೆ ಬಳಿ ಪುಟ್ಟ ಮನೆ ಇತ್ತು. ಮಂಗಳಾ ದೇವಿ ರಸ್ತೆ ಪಕ್ಕದಲ್ಲಿ ಕಬಾಬು ಅಂಗಡಿಯನ್ನು ತಂದೆ ನಡೆಸುತ್ತಿದ್ದರು. ಲಕ್ಷದ ಲೆಕ್ಕದಲ್ಲಿ ಸಾಲವೂ ಇತ್ತಂತೆ. ಅದು ಹೇಗೊ ಮಗಳನ್ನು ಸಿನಿಮಾ ನಟಿ ಮಾಡುವ ಉಮ್ಮೇದಿ ಬಂತು.

ರೂಪತಾರಾದಲ್ಲಿ ಆಕೆಯ ಫೋಟೊ ಪ್ರಕಟವಾಯಿತು. ಆಗ ಸಿಕ್ಕದ್ದೇ ರಾಜ್‌ ಕಿಶೋರ್‌ ನಿರ್ದೇಶನದ ‘ನೀಲ ಮೇಘ ಶಾಮ’ಚಿತ್ರ.

ರಾಧಿಕಾಗೆ ಮದುವೆ ಆಗಿತ್ತಂತೆ!

ನಾಯಕಿಯಾಗುವ ಮುನ್ನವೇ ರಾಧಿಕಾಗೆ ಮಗಳೂರಿನ ಫೈನಾನ್ಸಿಯರ್‌ ವಿಲ್ಸನ್‌ ರತನ್‌ಕುಮಾರ್‌ ಎಂಬಾತನ ಜತೆ ಮದುವೆ ಆಗಿತ್ತು. ಇದನ್ನು ಸ್ವತಃ ಆತನೇ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ರಾಧಿಕಾ ಮತ್ತು ತಾನು ಜತೆಗಿದ್ದ ಫೋಟೊ ಸಹಿತ ವಿವರಿಸಿದ್ದ. ಇದಕ್ಕೆ ಸಾಕ್ಷಿಯಾಗಿ ಆತನ ತಾಯಿ ಪ್ರೇಮ ಕುಮಾರಿ ಜತೆಗೇ ರಾಧಿಕಾ ‘ನೀಲ ಮೇಘ ಶಾಮ’ ಸೆಟ್‌ಗೆ ಬರುತ್ತಿರು. ಅದರೆ ಯಾವಾಗ ‘ನಿನಗಾಗಿ’ ಗೆಲುವು ಕಂಡಿತೊ ಗಂಡ, ಅತ್ತೆಯನ್ನು ದೂರ ಮಾಡಿದಳು ರಾಧಿಕಾ. ಅಥವಾ ಅವಳನ್ನು ಆ ರೀತಿ ಮಾಡುವಂತೆ ಆಪ್ತರು ಬಲವಂತ ಮಾಡಿದರು!

ರತನ್‌ ಕುಮಾರ್‌ ಮೇಲೆ ರಾಧಿಕಾ ತಂದೆ ಕೇಸ್‌ ಹಾಕಿ ಹೆದರಿಸಿದರು. ಆಮೇಲೆ 2002, ಆಗಸ್ಟ್‌ 27ರಂದು ವಿಲ್ಸನ್‌ ಆತ್ಮ ಹತ್ಯೆ ಮಾಡಿಕೊಂಡ. ಇದೇ ಹೊತ್ತಿಗೆ ಬೆಂಗಳೂರಿನ ಸೆಲ್ವರಾಜ್‌ ಎಂಬಾತ, ‘ನನಗೂ ರಾಧಿಕಾಗೂ ನಿಶ್ಚಿತಾರ್ಥ ಆಗಿತ್ತು ’ಎಂದು ಆರೋಪಿಸಿದ. ನಂತರ ಹೇಗೋ ಆ ಪ್ರಕರಣ ಮುಗಿಯಿತು.

ಈಗ ರಾಧಿಕಾ, ಅಪ್ಪ ಅಮ್ಮನ ಜತೆ ಬನಶಂಕರಿಯ ಕತ್ರಿಗುಪ್ಪೆ ಮನೆಯಲ್ಲಿ ಇದ್ದಾಳೆ. ಈಕೆ ಹೆಸರಿನಲ್ಲಿ ಎರಡು ಲಾರಿ, ಬನಶಂಕರಿ ಮತ್ತು ರಾಜಾಜೀನಗರದ ಮೋದಿ ಆಸ್ಪತ್ರೆ ಬಳಿ ಹೋಟೆಲ್‌ಗಳಿವೆ. ಹನ್ನೆರಡು ಲಕ್ಷ ಬೆಲೆಯ ಕಾರ್‌ ಇದೆ. ಇನ್ನೊಂದು ವಿದೇಶಿ ಕಾರ್‌ ಬುಕ್‌ ಆಗಿದೆಯಂತೆ.

ರಾಜ್ಯಪ್ರಶಸ್ತಿ ಪುರಸ್ಕೃತೆ...

ರಾಧಿಕಾ ಚಿತ್ರರಂಗಕ್ಕೆ ಕಾಲಿಟ್ಟಾಗ ಬರಿ ಹಳೆಯ ಮುಖಗಳೆ ಕಾಣುತ್ತಿದ್ದವು. ಮಂಗಳೂರಿನ ಈ ಸ್ನಿಗ್ಧ ಚೆಲುವೆಗೆ ಕನ್ನಡಿಗರು ಮನ ಸೋತಿದ್ದರಲ್ಲಿ ಅಚ್ಚರಿಯಲ್ಲ. ಹಾಗಂತ ಈಕೆ ಅದ್ಭುತ ನಟಿ ಆಗಿರಲಿಲ್ಲ. ಆದರೆ ಪಾತ್ರಕ್ಕೆ ಜೀವ ತುಂಬುತ್ತಿದ್ದಳು. ‘ನಿನಗಾಗಿ’ಚಿತ್ರದ ಪ್ರೇಮಿಯಾಗಿ ಪಕ್ಕದ ಮನೆಯ ಹುಡುಗಿಯಂತೆ ಅಭಿನಯಿಸಿದಳು. ‘ತವರಿಗೆ ಬಾ ತಂಗಿ’ಯಲ್ಲಿ ಎಲ್ಲರ ಮನೆ ಮಗಳಂತೆ ಕಾಣಿಸಿದಳು. ಅದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದಳು.

ವಿಚಿತ್ರ ಗೊತ್ತಾ ? ಸರ್ಕಾರದ ನಿಯಮದ ಪ್ರಕಾರ ಶ್ರೇಷ್ಠ ನಟಿ ಪ್ರಶಸ್ತಿ ಪಡೆಯಲು , ಆ ಪಾತ್ರಕ್ಕೆ ಆಕೆಯೇ ಡಬ್ಬಿಂಗ್‌ (ಧ್ವನಿ) ಮಾಡಬೇಕು. ಅದರೆ ಇದುವರೆಗೆ ಆಕೆ ತಾನು ನಾಯಕಿಯಾದ ಯಾವ ಚಿತ್ರಕ್ಕೂ ಡಬ್ಬಿಂಗ್‌ ಮಾಡಿಲ್ಲ. ಅದರೂ ಕಾಂಗ್ರೆಸ್‌ ಸರಕಾರವಿದ್ದಾಗ ಪ್ರಶಸ್ತಿ ಪಡೆದೇ ಬಿಟ್ಟಳು. ಎಲ್ಲಾ ‘ಶಿವ ’ ಮಯವೋ!

ಪೂರಕ ಓದಿಗೆ
ಐಟಿ ದಾಳಿಗೆ ತತ್ತರಿಸಿದ ಮಂಗಳೂರು ಮಲ್ಲಿಗೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada