»   » ಸುದೀಪ್‌ ಕರ್ಕೊಂಡು ಬಂದ ಸಂದೀಪು !

ಸುದೀಪ್‌ ಕರ್ಕೊಂಡು ಬಂದ ಸಂದೀಪು !

Posted By: Staff
Subscribe to Filmibeat Kannada

'ಈ ಕರಾವಳಿ ಮೂಲದ ಹುಡುಗನಿಗೆ ಹಳ್ಳಿ ಸೊಗಡಿಲ್ಲ , ಈತ ಹಿಂದಿಗೇ ಲಾಯಕ್ಕು! ಕನ್ನಡಕ್ಕಲ್ರಿ. ಹಾಡಲ್ಲಿ ನೇಟಿವಿಟಿ ಎಂಬುದು ಇರ್ಬಾರ್ದೆ ? ನಮ್ಮ್‌ ಜಾನಪದ ಮ್ಯೂಸಿಕನ್ನ ಇವ್ನು ಹೇಂಗ್‌ ಹೊಡಿತಾನ್ರಿ? ಮಾಡರ್ನ್‌ ಹಿಂದಿ ಹಾಡಿಗೇ ಇವ ಸರಿರೀ..."

ಹೀಗೆಂದವರು ಯಾರು ಗೊತ್ತಾ ?, ನನಗೆ ಫೋನ್‌ ಮಾಡಿ ' ಸಾರ್‌ ಒಂದು ಹಾಡಿಗೆ, ಸಿನಿಮಾಕ್ಕೆ ಮ್ಯೂಸಿಕ್‌ ಕೊಟ್ರೆ ನಿಮ್ಮ ರೇಟೆಷ್ಟು ಅಂದವರು ". ಅವರು ಯಾವತ್ತು ಸಿನಿಮಾ ಕುರಿತು, ಸಂಗೀತ ಕುರಿತು, ಕನ್ನಡದ ಕುರಿತು ಹೇಳಿಲ್ಲ-ಕೇಳ್ಲಿಲ್ಲ . ಮತ್ತೆ ನಾನೇನು ಹೇಳ್ಲಿ ? ನಿರಾಕರಿಸಿಬಿಟ್ಟೆ.

ಇದು ರಂಗ(ಎಸ್ಸೆಸ್ಸೆಲ್ಸಿ) ಚಿತ್ರಕ್ಕೆ ಸಂಗೀತ ನೀಡಿದ 'ಕಂಪೆನಿ" ಖ್ಯಾತಿಯ ಬೆಂಗಳೂರಿನ ಹುಡುಗ ಸಂದೀಪ್‌ ಚೌಟರ ನುಡಿ. ಅಂತರಂಗದ ರಾಗ ಹೊರಹಾಕಿ ಮುಗುಳುನಕ್ಕ ಚೌಟ ನಿರುಮ್ಮಳವಾದಂತಿದ್ದರು. 'ರಂಗ ಎಸ್‌ಎಸ್‌ಎಲ್‌ಸಿ ಚಿತ್ರದಲ್ಲಿ ಜಾನಪದ ಟ್ಯೂನ್‌, ಕನ್ನಡದ ಶೈಲಿಯನ್ನೆಲ್ಲ ಯಾವ ರೀತಿ ಬಳಸಿದ್ದೇನೆಂದು ನೋಡಿ-ಕೇಳಿ ಹೇಳಿ" ಎನ್ನುವಾಗ ಆತನ ದುಂಡು ಮುಖದಲ್ಲೊಂದು ಆತ್ಮ ವಿಶ್ವಾಸದ ಮಿಂಚು.

'ರಂಗ ಎಸ್‌ಎಸ್‌ಎಲ್‌ಸಿ" ಚಿತ್ರದ ಕೆಸೆಟ್‌ ಬಿಡುಗಡೆ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಸಂದೀಪ್‌ ಚೌಟ, ನಟ ಸುದೀಪ್‌ ಕುರಿತು ಖುಷಿ ವ್ಯಕ್ತಪಡಿಸಿದರು. ಸುದೀಪ್‌ ಎಲ್ಲರಂತಲ್ಲ . ಮೊದಲಿಗೆ ಕತೆ ಹೇಳಿದರು. ನಿಮ್ಮ ಜೊತೆ ಕೆಲಸ ಮಾಡಬೇಕೆಂಬ ಆಸೆ ಅಂದ್ರು. ಒಳ್ಳೇ ವಾತಾವರಣ, ಉತ್ತಮವಾದೊಂದು ಕತೆ, ಸಂದರವಾಗಿರೋ ಪರಿಸರ ಎಂದೆಲ್ಲ ಹೇಳಿದ್ರು. ಸಂತೋಷವಾಯಿತು. ಹಾಗಾಗಿ ಒಪ್ಪಿಕೊಂಡೆ. ಹಣದ ವಿಚಾರ ನಡೆದದ್ದೇ ಆಮೇಲೆ ಎಂದು ಚೌಟ ಹೇಳಿದಾಗ, ಮಾತಿಗೆ ಕಿವಿ ಕೊಟ್ಟಿದ್ದ ಸುದೀಪ್‌ ಕೆನ್ನೆಗಳಲ್ಲಿ ಕೆಂಪು.

ಬಾಲ್ಯದಲ್ಲಿ ತಂದೆ, ಚಿಕ್ಕಪ್ಪನವರು ಹೇಳುತ್ತಿದ್ದ ಕನ್ನಡದ ಸಾಹಿತ್ಯ, ಕನ್ನಡ ಸಂಗೀತ ಲೋಕದ ಕುರಿತು ಕೇಳಿಸಿಕೊಂಡು ದೊಡ್ಡವನಾದೆ. ನಾನು ಹಾಡು ಹಕ್ಕಿ ಮೈಸೂರು ಅನಂತ ಸ್ವಾಮಿ, ಡಿವಿಜಿ, ಜಿ.ಕೆ.ವೆಂಕಟೇಶ್‌ ಹಾಡುಗಳನ್ನು ಕೇಳಿ ಬೆಳೆದವನು. ಆ ಎಲ್ಲಾ ಹಾಡುಗಳ ಸಂಗ್ರಹ ಈಗಲೂ ನನ್ನ ಬಳಿ ಇದೆ. ಈಗ ಏಳು ಹಿಂದಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದರೂ ಬಿಡುವು ಮಾಡಿಕೊಂಡು ಬಂದಿದ್ದೇನೆ ಎನ್ನುವಾಗ ಚೌಟ ಕನ್ನಡಮಯವಾಗಿ ಕಂಡರು.

ಅಂದಹಾಗೆ, ಈ ಸಂದೀಪ್‌ ಚೌಟ ಯಾರೆಂದು ಕೊಂಡಿರಿ? ಈತ ಕರ್ನಾಟಕ ಚಿತ್ರಕಲಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಿ.ಕೆ.ಚೌಟರ ಪುತ್ರ. ಅಪ್ಪನಂತೆ ಮಗ ಅನ್ನುವುದೋ, ಅಪ್ಪನ ಮಿಂಚಿದ ಮಗ ಅನ್ನುವುದೋ ನಿಮಗೆ ಬಿಟ್ಟದ್ದು .

English summary
Sandeep Chowta tunes kannada tones

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada