»   » ನಮ್ಮೂರಿಗೊಮ್ಮೆ ಅಣ್ಣಾವ್ರು ಬಂದಿದ್ರು!!!

ನಮ್ಮೂರಿಗೊಮ್ಮೆ ಅಣ್ಣಾವ್ರು ಬಂದಿದ್ರು!!!

Posted By:
Subscribe to Filmibeat Kannada
ನಮ್ಮೂರಿಗೊಮ್ಮೆ ಅಣ್ಣಾವ್ರು ಬಂದಿದ್ರು. ಹೊಸಪೇಟೆಯಲ್ಲಿ ರಸಮಂಜರಿ ಕಾರ್ಯಕ್ರಮಕ್ಕಾಗಿ ಬಂದಿದ್ದರೂ, ಉಳಿದುಕೊಂಡದ್ದು ನಮ್ಮೂರಿನ ರಾಜಕೀಯ ಧುರೀಣರ ಅರಮನೆಯಲ್ಲಿ. ಊರಲ್ಲಿ ಸುದ್ದಿ ಗೊತ್ತಾಗಿದ್ದೇ ನಾನು-ನೀನು-ತಾನೆನ್ನದೆ ಎಲ್ಲರೂ ಅಣ್ಣಾವ್ರನ್ನ ನೋಡಲು ಊರ ಹೊರಗಿರುವ ಅರಮನೆಯ ಕಡೆ ಓಡಿದ್ದರು. ರಸಮಂಜರಿ ಕಾರ್ಯಕ್ರಮಕ್ಕೆ ಐವತ್ತು ರೂಪಾಯಿ ಕೊಟ್ಟು, ಹೊಸಪೇಟೆಗೆ ಹೋಗಿ ಬರುವ ಬಸ್ಸಿನ ಚಾರ್ಜನ್ನು ಕೊಡುವಂತಹ ದುಡ್ಡುಳ್ಳವರು ನಮ್ಮೂರಲ್ಲಿ ಕಡಿಮೆ. ಅದಕ್ಕಾಗಿ ಅವರ ದರ್ಶನ ಸಿಕ್ಕರೂ ಸಾಕೆಂದು ಊರಿಗೆ ಊರೇ ಅಲ್ಲಿಗೆ ದೌಡಾಯಿಸಿತ್ತು.

ಆಗಿನ್ನೂ ನಾನು ಐದನೇ ತರಗತಿಯಲ್ಲಿದ್ದೆ. ಆ ದಿನ ಅಪ್ಪ ಬಳ್ಳಾರಿಗೆ ಹೋಗಿದ್ದ. ಅಮ್ಮನ ಹತ್ತಿರ ನಾನೂ ಅರಮನೆಯ ಕಡೆ ಹೋಗಿ ಅಣ್ಣಾವ್ರನ್ನ ನೋಡಿ ಬರುತ್ತೇನೆಂದು ಒಂದೇ ಹಟ. ಅಮ್ಮನಿಗೂ ನನ್ನೊಡನೆ ಬರುವ ಆಸೆ. ಅಮ್ಮ ಬಳ್ಳಾರಿಯಲ್ಲಿ ಬೆಳೆದವಳಾದ್ದರಿಂದ ತೆಲುಗು ಸಿನಿಮಾಗಳ ಬಗ್ಗೆಯೇ ಒಲವಿತ್ತು. ಆದರೆ ಅಣ್ಣಾವ್ರ ಸಿನಿಮಾ ಬಂದಾಗ ಮಾತ್ರ ತೆಲುಗು ಮರೆಯಾಗಿ ಅಪ್ಪಟ ಕನ್ನಡಾಭಿಮಾನಿಯಾಗಿ ಬಿಡುತ್ತಿದ್ದಳು.

ಅಮ್ಮ ಮತ್ತು ನಾನು ಅರಮನೆಯ ಕಡೆ ಹೊರಟೆವು. ಮಧ್ಯಾಹ್ನದ ಹೊತ್ತು. ಬಳ್ಳಾರಿಯ ರಣ ಬಿಸಿಲು ನೆತ್ತಿ ಸುಡುತ್ತಿತ್ತು. ಚಪ್ಪಲಿ ಹಾಕುವ ಅಭ್ಯಾಸ ಇರಲಿಲ್ಲವಾದ್ದರಿಂದ ಕಾಲುಗಳೂ ಚುರುಗುಟ್ಟುತ್ತಿದ್ದವು. ಆದರೆ ಅಣ್ಣಾವ್ರನ್ನ ನೋಡಲು ಹೋಗುವ ಸಂಭ್ರಮದಲ್ಲಿ ಅದು ಯಾವ ಲೆಕ್ಕ?

ಅರಮನೆಯ ಮುಂದೆ ಜನ ಜಮಾಯಿಸಿಬಿಟ್ಟಿದ್ದರು. ಹತ್ತಿರದ ಹಳ್ಳಿಯಿಂದೆಲ್ಲಾ ಜನ ಬಂಡಿ ಕಟ್ಟಿಕೊಂಡು ಬಂದಿದ್ದರು. ಮುದುಕ, ಹುಡುಗ, ಗಂಡು, ಹೆಣ್ಣು - ಎಲ್ಲರೂ ಅಲ್ಲಿದ್ದರು. ಯಾವಾಗ ಅಣ್ಣಾವ್ರು ಹೊರಬರುತ್ತಾರೋ ಎಂದು ಕಾದು ಕುಳಿತಿದ್ದರು. ಆಗಲೇ ಒಂದೆರಡು ಬಾರಿ ಹೊರಬಂದು ಗಾಳಿಯಲ್ಲಿ ಕೈಯಾಡಿಸಿ, ನಕ್ಕು ಹೋಗಿದ್ದರಾದರೂ ಮತ್ತಷ್ಟು ಹೊಸ ಜನ ಸೇರಿದ್ದರು. ಅವರನ್ನು ಈಗಾಗಲೇ ನೋಡಿದವರೂ ಮನೆಗೆ ಹೋಗುವ ಇಚ್ಛೆಯಿಲ್ಲದೆ, ಮತ್ತೊಮ್ಮೆ ಅಣ್ಣಾವ್ರನ್ನ ಕಣ್ಣುತುಂಬಿಸಿಕೊಳ್ಳಲು ಕಾದು ಕುಳಿತಿದ್ದರು.

ಅಮ್ಮ ಹೆಂಗಸರು ಸೇರಿದ್ದ ಕಡೆಗೆ ನನ್ನನ್ನು ಕರೆದುಕೊಂಡು ಹೋದಳು. ಹೆಂಗಸರೆಲ್ಲರೂ ಅಣ್ಣಾವ್ರ ಸಿನಿಮಾಗಳ ಬಗ್ಗೆ ಮಾತು ಹಚ್ಚಿಕೊಂಡಿದ್ದರು. ಒಂದಿಬ್ಬರು ಅಣ್ಣಾವ್ರ ಸಿನಿಮಾದ ಹಾಡುಗಳನ್ನು ರಾಗವಾಗಿ ಹೇಳಿದರು. ‘‘ಗಂಡು ಎಂದರೆ ಗಂಡು...’’ ಹಾಡನ್ನು ಒಬ್ಬಾಕೆ ಯಾವುದೇ ಸಂಕೋಚವಿಲ್ಲದೆ ಹೇಳಿದಳು. ಉಳಿದ ಹೆಂಗಸರೂ ಆ ಹಾಡನ್ನು ಖುಷಿಯಿಂದ ಕೇಳಿದರು. ಬಿಸಿಲಿಗೆ ತಲೆ ಸುಡದಿರಲಿ ಎಂದು ಅಮ್ಮ ತನ್ನ ಸೆರಗನ್ನು ನನ್ನ ತಲೆಗೆ ಹೊದಿಸಿದ್ದಳು.

‘‘ಹೊರ ಬಂದ್ರು... ಹೊರ ಬಂದ್ರು...’’ ಎಂದು ಯಾರೋ ಕೂಗಿದ್ದೇ ತಡ, ಎಲ್ಲರೂ ಮೈಮೇಲೆ ಆವೇಶ ಬಂದಂತೆ ಅರಮನೆಯ ಗೇಟಿನ ಕಡೆ ಓಡಿದರು. ಹಾಡುವ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಹೆಂಗಸೂ ಓಡಿ ಹೋದಳು. ನಾನೂ ಅಮ್ಮ ಜನರ ಜೊತೆ ಓಡಿದೆವು. ಅಮ್ಮ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು.

ಜನರೆಲ್ಲಾ ಅರಮನೆ ಕಂಪೌಂಡಿಗೆ ಜಮಾಯಿಸಿ ಬಿಟ್ಟಿದ್ದರು. ನುಸುಳಲೂ ಜಾಗವಿಲ್ಲದಂತೆ ಜನ ಸುತ್ತುಗಟ್ಟಿದ್ದರು. ಅಣ್ಣಾವ್ರು ಆಗಲೇ ಅರಮನೆಯ ಅಂಗಳದಲ್ಲಿ ನಿಂತಿದ್ದಾರೆಂಬುದು ಜನರ ಕೇಕೆ, ಹರ್ಷೋದ್ಗಾರದಿಂದ ಗೊತ್ತಾಗುತ್ತಿತ್ತು. ನನಗೆ ಕಾಣಿಸುತ್ತಿಲ್ಲವೆಂಬ ಸಂಕಟ, ಜನರ ಮಧ್ಯೆ ತೂರಲಾಗದ ಅಸಹಾಯಕತೆ. ಅಮ್ಮ ಮಾತ್ರ ‘‘ಸ್ವಲ್ಪ ಜಾಗ ಬಿಡ್ರಮ್ಮ...’’ ಅಂತೆಲ್ಲಾ ಅಂಗಲಾಚುತ್ತಿದ್ದಳು. ಆದರೆ ಯಾರೂ ಅಮ್ಮನ ಮಾತನ್ನು ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಅಮ್ಮ ನನ್ನನ್ನು ಎತ್ತಿ ಹೆಗಲ ಸುತ್ತ ಕಾಲು ಹಾಕಿಸಿಕೊಂಡು ಕೂಡಿಸಿಕೊಂಡಳು. ಅದುವರೆಗೆ ಅಪ್ಪ ಆ ರೀತಿ ಕೂಡಿಸಿಕೊಂಡಿದ್ದರೇ ಹೊರತು ಅಮ್ಮ ಎಂದೂ ನನ್ನನ್ನು ಆ ರೀತಿ ಕೂಡಿಸಿಕೊಂಡಿರಲಿಲ್ಲ.

ದೂರದಲ್ಲಿ, ಅರಮನೆಯ ಅಂಗಳದಲ್ಲಿ ಅಣ್ಣಾವ್ರು ನಿಂತಿದ್ರು. ಬಿಳಿ ಅಂಗಿ, ಬಿಳಿ ಧೋತ್ರ ಕಣ್ಣಿಗೆ ಹೊಳೆಯುವಂತೆ ಕಾಣುತ್ತಿತ್ತು. ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕೈಯನ್ನು ಗಾಳಿಯಲ್ಲಿ ಅಲ್ಲಾಡಿಸಿದರು. ಜನರ ಹರ್ಷಕ್ಕೆ ಎಣೆಯಿಲ್ಲ. ಅಜ್ಜಿಯೊಬ್ಬಳು ಗಾಳಿಯಲ್ಲಿಯೇ ಅಣ್ಣಾವ್ರ ಗಲ್ಲ ಸವರಿ ನೆಟಿಗೆ ಮುರಿದಳು. ಸಾಕಷ್ಟು ಜನರ ಕಣ್ಣಲ್ಲಿ ಖುಷಿಯ ಪನ್ನೀರು ತುಳುಕುತ್ತಿತ್ತು. ಆಣ್ಣಾವ್ರ ಪಕ್ಕ ಪುಟಾಣಿ ಹುಡುಗನೊಬ್ಬನಿದ್ದ. ಅವನನ್ನು ಅಣ್ಣಾವ್ರು ಗೊಂಬೆಯಂತೆ ಎತ್ತಿಕೊಂಡು ತಮ್ಮ ತಲೆಯ ಮೇಲೆ ಹಿಡಿದುಕೊಂಡರು. ಜನರೆಲ್ಲಾ ಮೊದಲು ಯಾರು ಯಾರು ಎಂದು ಗಲಿಬಿಲಿಗೊಂಡರೂ ತಕ್ಷಣ ಕಂಡು ಹಿಡಿದುಬಿಟ್ಟರು. ‘‘ಲೋಹಿತ್‌... ಲೋಹಿತ್‌...’’ ಎಂದು ಕೂಗಿದರು. (ಪುನೀತ್‌ ಅವನ ಇತ್ತೀಚಿನ ಹೆಸರು) ಪುಟಾಣಿ ಲೋಹಿತ್‌ ಗಾಳಿಯಲ್ಲಿ ಎರಡೂ ಕೈಯಾಡಿಸಿದ. ಜನರು ತಾವೂ ಗಾಳಿಯಲ್ಲಿ ಕೈಯಾಡಿಸಿ ಕೇಕೆ ಹಾಕಿದರು. ಕೆಲವು ನಿಮಿಷಗಳ ನಂತರ ಅಣ್ಣಾವ್ರೂ ಜನರೆಲ್ಲರಿಗೆ ಕೈ ಮುಗಿದು ಅರಮನೆಯ ಒಳಗೆ ಹೋಗಿಬಿಟ್ಟರು. ಜನರೆಲ್ಲಾ ಮನೆಗೆ ತೆರಳಿದರು.

ಅಮ್ಮ ನನ್ನನ್ನು ಕೆಳಕ್ಕೆ ಇಳಿಸಿದಳು. ’’ಭೇಷ್‌ ಕಾಣಿಸ್ತಾ...’’ ಎಂದು ಕೇಳಿದಳು. ಆವಾಗಲೇ ನನಗೆ ಅಮ್ಮನಿಗೆ ಏನೂ ಕಂಡಿಲ್ಲವೆಂದು ಗೊತ್ತಾಗಿ ಒಂಥರಾ ಬೇಸರವಾಯ್ತು. ಅದನ್ನು ಹೋಗಲಾಡಿಸುವಂತೆ ವಿವರ ವಿವರವಾಗಿ ಎಲ್ಲಾ ದೃಶ್ಯವನ್ನು ಅಮ್ಮನಿಗೆ ಕಟ್ಟಿಕೊಟ್ಟೆ. ’’ಕೊರಳಾಗೆ ಬಂಗಾರದ ಸರ ಹಾಕಿದ್ನಾ?’’ ಎಂದು ಕೇಳಿದಳು. ಅದನ್ನು ನಾನು ಗಮನಿಸಿರಲಿಲ್ಲ. ನನ್ನನ್ನು ಎತ್ತಿಕೊಂಡಿದ್ದರಿಂದ ಅಮ್ಮನಿಗೆ ಸ್ವಲ್ಪ ಬೆನ್ನು ನೋವಾಗಿತ್ತು. ಅದಕ್ಕಾಗಿ ಅಲ್ಲಿಯೇ ಹುಣಸೆ ಮರದ ಕೆಳಗೆ ಸ್ವಲ್ಪ ಹೊತ್ತು ಕುಳಿತುಕೊಂಡು ಸುಧಾರಿಸಿಕೊಂಡಳು. ನಾನು ಪುಟ್ಟ ಕೈಗಳಿಂದ ಅಮ್ಮನ ಹೆಗಲನ್ನು ಒತ್ತುತ್ತಾ ‘‘ಸೂಲಿ ಕಡಿಮಿ ಆಯ್ತಾ?’’ ಎಂದು ಕೇಳಲಾರಂಭಿಸಿದೆ.

ಮನೆಗೆ ಹಿಂತಿರುಗುವದರ ಬದಲು, ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಹನುಮಪ್ಪನ ಗುಡಿಗೆ ನಾನೂ ಅಮ್ಮ ಹೊರೆಟೆವು. ಬಿಸಿಲು ಕಡಿಮೆಯಾಗಿ ಸಂಜೆಯಾಗುತ್ತಿತ್ತು. ಗುಡಿಯಲ್ಲಿ ಯಾರೂ ಜನರಿರಲಿಲ್ಲ. ಅಣ್ಣಾವ್ರನ್ನ ನೋಡುವ ಅಪರೂಪದ ಅವಕಾಶ ಸಿಕ್ಕಿರುವ ದಿನ ಗುಡಿಗೆ ಬರುವವರಾರು? ಅರ್ಚಕರು ಮಾತ್ರ ಒಬ್ಬರೇ ಗರ್ಭಗುಡಿಯಲ್ಲಿ ಕುಳಿತುಕೊಂಡಿದ್ದರು. ಅಮ್ಮ ಮತ್ತು ಅರ್ಚಕರು ಸ್ವಲ್ಪ ಹೊತ್ತು ಕಷ್ಟ ಸುಖ ಮಾತಾಡಿಕೊಂಡರು. ಅಮ್ಮನಿಗೆ ಸುಶ್ರಾವ್ಯ ಕಂಠವಿತ್ತು. ಅರ್ಚಕರು ಅಮ್ಮನಿಗೆ ಹಾಡಲು ಹೇಳಿದರು. ‘‘ಇದು ಏನು ಚರಿತ, ಯಂತ್ರೋದ್ಧಾರ...’’ ಎಂದು ಅಮ್ಮ ಹಾಡಲು ಶುರುವಿಟ್ಟಳು. ನಾನು ಗರುಡಗಂಭವನ್ನು ಹಿಡಿದುಕೊಂಡು ಸುತ್ತುತ್ತಿದ್ದೆ. ಸೂರ್ಯ ನಿಧಾನಕ್ಕೆ ಮುಳುಗುತ್ತಿದ್ದ.

ಅಮ್ಮ ಎರಡನೆ ನುಡಿಯನ್ನಿನ್ನೂ ಎತ್ತಿಕೊಂಡಿರಲಿಲ್ಲ. ಆಗ ಎರಡು ಕಾರುಗಳು ದೇವಸ್ಥಾನದ ಮುಂದೆ ಸದ್ದಿಲ್ಲದೆ ಬಂದು ನಿಂತವು. ಮೊದಲಿಗೆ ಊರಿನ ರಾಜಕೀಯ ಧುರೀಣರು, ಅವರ ಹಿಂದೆಯೇ ಅಣ್ಣಾವ್ರೂ ಇಳಿದರು. ಮತ್ತೊಂದಿಬ್ಬರು ಅವರ ಜೊತೆಯಲ್ಲಿ ದೇವಸ್ಥಾನವನ್ನು ಪ್ರವೇಶಿಸಿದರು. ಹೊಸಪೇಟೆಗೆ ರಸಮಂಜರಿ ಕಾರ್ಯಕ್ರಮಕ್ಕೆ ಹೊರಟವರು ದೇವರ ದರ್ಶನಕ್ಕಾಗಿ ಕಾರನ್ನು ನಿಲ್ಲಿಸಿದ್ದರು. ನಾನು ಬಿಟ್ಟಗಣ್ಣಿಂದ ನನ್ನ ಇಷ್ಟ ದೇವರನ್ನು ನೋಡಲಾರಂಭಿಸಿದೆ. ಒಳಗೆ ಮಾತ್ರ ಅಮ್ಮಗೆ ಬಂದವರಾರೆಂಬ ಧ್ಯಾಸವಿಲ್ಲದೆ ಹಾಡನ್ನು ಮುಂದುವರೆಸಿದ್ದಳು. ಓಡಿ ಹೋಗಿ ಅವಳ ಪಕ್ಕಕ್ಕೆ ಕುಳಿತುಕೊಂಡು, ‘‘ಅಲ್ಲಿ ನೋಡು...’’ ಎಂದು ಸೊಂಟ ತಿವಿದೆ. ಕೈಗೆ ನಿಲುಕುವಷ್ಟು ಹತ್ತಿರದಲ್ಲಿ ಅಣ್ಣಾವ್ರನ್ನು ನೋಡಿದ್ದೇ ಬೆಕ್ಕಸ ಬೆರಗಾಗಿ ಹಾಡನ್ನು ನಿಲ್ಲಿಸಿಬಿಟ್ಟಳು. ಅಣ್ಣಾವ್ರು ಮಾತ್ರ ‘‘ನೀವು ಹಾಡಿ...’’ ಎನ್ನುವ ಅರ್ಥದಲ್ಲಿ ಕೈ ಸನ್ನೆ ಮಾಡಿದರು. ಅಮ್ಮ ನಡುಗುವ ಧ್ವನಿಯಲ್ಲಿ ಹಾಡನ್ನು ಮುಂದುವರೆಸಿದಳು.

ಅರ್ಚಕರು ಮಂಗಳಾರತಿ ತಟ್ಟೆಯನ್ನು ಅಣ್ಣಾವ್ರ ಮುಂದೆ ಹಿಡಿದಾಗ ಕೈ ನಡುಗುತ್ತಿತ್ತು. ಅಣ್ಣಾವ್ರ ಹಿಂದೆ ನಿಂತವರು ಹತ್ತು ರೂಪಾಯಿಗಳನ್ನು ಅವರ ಕೈಯಲ್ಲಿ ಕೊಟ್ಟರು. ಮಂಗಳಾರತಿ ತಟ್ಟೆಯಲ್ಲಿ ಹಾಕಿ, ಗಂಟೆ ಬಾರಿಸಿ, ಒಂದು ಸುತ್ತು ಪ್ರದಕ್ಷಿಣಿ ಹಾಕಿ ಮುಗಿಸುವ ಹೊತ್ತಿಗೆ ಅಮ್ಮನ ಹಾಡು ಮುಗಿದಿತ್ತು. ಮೂಲೆಯಲ್ಲಿ ಕಂಬಕ್ಕೆ ಆತುಕೊಂಡು ಅಮ್ಮ, ಅವಳನ್ನು ಅಂಟಿಕೊಂಡು ನಾನು ನಿಂತಿದ್ದೆವು. ನನ್ನ ಹತ್ತಿರ ಬಂದು ಗಲ್ಲ ಸವರಿ ‘‘ಎಷ್ಟನೇ ಕ್ಲಾಸು?’’ ಎಂದು ಮೃದುವಾಗಿ ಕೇಳಿದರು. ‘‘ಐದು’’ ಅಂದೆ. ‘‘ಚೆನ್ನಾಗಿ ಓದಬೇಕು’’ ಎಂದಿದ್ದೇ ತಲೆಯನ್ನು ಸವರಿ ಕಾರಿನ ಕಡೆ ನಡೆದು ಬಿಟ್ಟರು. ಎರಡೂ ಕಾರುಗಳು ಪುರ್‌ ಎಂದು ಹೊರಟು ಹೋದವು.

ಅಮ್ಮ, ಅರ್ಚಕರು, ನಾನು ಸ್ವಲ್ಪ ಹೊತ್ತು ನಮ್ಮ ಸೌಭಾಗ್ಯವನ್ನು ಹೊಗಳಿಕೊಳ್ಳುತ್ತಾ ಕುಳಿತುಕೊಂಡೆವು. ‘‘ಆತಗೆ ದೇವರು ಅಂದ್ರೆ ಭಾಳ ಭಕ್ತಿ. ಅದಕ್ಕೆ ದೇವರು ಒಳ್ಳೇದು ಮಾಡಾನೆ’’ ಎಂದು ಅರ್ಚಕರು ಹೇಳಿದರು. ಅಣ್ಣಾವ್ರ ಹಸ್ತದಿಂದ ಹಾಕಿದ ಹತ್ತು ರೂಪಾಯಿಗಳನ್ನು ನಾವು ಮೂವರು ಸವರಿ ಸುಖಿಸಿದೆವು. ‘‘ಈ ಹತ್ತು ರೂಪಾಯಿನ್ನ ಮನೆಯಾಗೆ ದೇವರ ಮಾಡದಾಗೆ ಇಟ್ಟು ಬಿಡರಿ. ಯಾವಾಗ್ಲೂ ಖರ್ಚು ಮಾಡಬೇಡರಿ’’ ಎಂದು ಅಮ್ಮ ಅರ್ಚಕರನ್ನು ಬೇಡಿಕೊಂಡಳು. ಅರ್ಚಕರು ಹಾಗೇ ಆಗಲಿ ಎಂದು ಒಪ್ಪಿಕೊಂಡರು. ಮನೆಗೆ ಹೋಗುವಾಗ ಅಮ್ಮ ‘‘ಕೊರಳಾಗೆ ನಾಕು ತೊಲಿ ಚೈನಿತ್ತು. ನೋಡಿದಾ ಇಲ್ಲಾ?’’ ಎಂದು ನನ್ನನ್ನು ಕೇಳಿದಳು. ನಾನು ಖಂಡಿತಾ ನೋಡಿರಲಿಲ್ಲ. ‘‘ಹೌದೌದು, ಭೇಷಿತ್ತು’’ ಎಂದು ಹೇಳಿದೆ.

ಪ್ರತಿ ಬಾರಿ ಯಾರಾದರೂ ನನ್ನನ್ನು ಹೊಗಳಿದರೆ, ನಾನು ಹೊಸ ಬಟ್ಟೆ ಹಾಕಿಕೊಂಡರೆ, ಒಳ್ಳೆಯ ಅಂಕಗಳನ್ನು ಪಡೆದು ಪಾಸಾದರೆ ಅಮ್ಮ ರಾತ್ರಿ ಮಲಗುವ ಮುಂಚೆ ನನಗೆ ದೃಷ್ಟಿ ತೆಗೆಯುತ್ತಿದ್ದಳು. ಅದರ ಅಭ್ಯಾಸವಿದ್ದ ನಾನು ಆ ರಾತ್ರಿ ಅಮ್ಮನ ಹತ್ತಿರ ‘‘ದೃಷ್ಟಿ ತೆಗಿತೀಯೇನಮ್ಮ?’’ ಎಂದು ಕೇಳಿದೆ. ಅದಕ್ಕೆ ಅಮ್ಮ ‘‘ಆತ ದೇವರಂಥಾ ಮನುಷ್ಯ. ಆತನ ಕಣ್ಣು ನಿನ್ನ ಮೇಲೆ ಬಿದ್ದರೆ ನಿಂಗೆ ಒಳ್ಳೇದೇ ಆಗ್ತದೆ. ದೃಷ್ಟಿ ಆಗಂಗಿಲ್ಲ’’ ಎಂದು ಹೇಳಿ ನಿರಾಕರಿಸಿಬಿಟ್ಟಳು.

ಸುಮಾರು ಒಂದು ತಿಂಗಳಿನ ನಂತರ, ಒಂದು ದಿನ ಮಟ ಮಟ ಮಧ್ಯಾಹ್ನ, ಹನುಮಪ್ಪನ ಗುಡಿಯ ಅರ್ಚಕರು ಮನೆಗೆ ಬಂದರು. ಅಮ್ಮ ಅವರಿಗೆ ಊಟಕ್ಕೆ ಬಡಿಸಿದಳು. ಊಟ ಮಾಡಿದ ಮೇಲೆ ‘‘ಏನು ಈ ಕಡೆ ಬಂದಿದ್ದು’’ ಎಂದು ಅಮ್ಮ ಸಹಜವಾಗಿ ಕೇಳಿದಳು. ಅರ್ಚಕರು ಒಂದು ನಿಟ್ಟುಸಿರು ಬಿಟ್ಟು ‘‘ಮನೆಯಾಕಿಗೆ ಮೈಯಾಗೆ ಹುಷಾರಿಲ್ಲ. ಎರಡು ದಿನದಿಂದ ಹಾಸಿಗಿ ಹಿಡಿದು ಬಿಟ್ಟಾಳೆ’’ ಎಂದು ಹೇಳಿ ಕಣ್ಣನ್ನು ಮುಚ್ಚಿಕೊಂಡರು. ಮತ್ತೆ ಒಂದೆರಡು ಕ್ಷಣ ಬಿಟ್ಟು ‘‘ಆ ಹತ್ತು ರೂಪಾಯಿ ಬಳಸಿ ಬಿಟ್ಟೆನಮ್ಮಾ... ಇಕೋ ಔಷಧ ಕೊಂಡು ಕೊಂಡು ಬಂದೆ...’’ ಎಂದು ಮಾತ್ರೆಗಳ ಪಟ್ಟಿಗಳನ್ನು ತೆಗೆದು ತೋರಿಸಿದರು. ಅವರ ಕಣ್ಣುಗಳು ಆರ್ದ್ರವಾಗಿದ್ದವು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada