»   » ರೆಹಮಾನ್‌ ಮಲಗಿದ್ದಾರೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ

ರೆಹಮಾನ್‌ ಮಲಗಿದ್ದಾರೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ

Posted By: Staff
Subscribe to Filmibeat Kannada

ಎ.ಆರ್‌.ರೆಹಮಾನ್‌ ಈಗೇನು ಮಾಡುತ್ತಿದ್ದಾರೆ?
ಪಾಶ್ಚಿಮಾತ್ಯ ಮಾಧ್ಯಮಗಳ ಸೆಳಕಾಗಿದ್ದಾರೆ. ಹಾಲಿವುಡ್‌ ಓಣಿಗಳಲ್ಲಿ ಬಾರೀ ಬ್ಯುಸಿಯಾಗಿದ್ದಾರೆ. ಇನ್ನೊಂದು ವರ್ಷ ಅವರು ಭಾರತಕ್ಕೆ ಬರುವ ಚಾನ್ಸ್‌ ತುಂಬಾ ಕಡಿಮೆ. ಅವರೀಗ ಆ್ಯಂಡ್ರೂ ಲಾಯ್ಡ್‌ ವೆಬರ್‌ ಅವರ ಬಾಂಬೆ ಡ್ರೀಮ್ಸ್‌ ಎಂಬ ರಂಗ ಸಂಗೀತ ಯೋಜನೆಯಲ್ಲಿ ಕಳೆದುಹೋಗಿದ್ದಾರೆ.

ಇಷ್ಟೇ ಆಗಿದ್ದು ರೆಹಮಾನ್‌ ಮಾಮೂಲಿನಂತಿದ್ದಿದ್ದರೆ ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಆದರೆ ಭಾರತೀಯ ಸಿನಿಮಾಗಳ ಸಂಗೀತದ ಅಪರೂಪದ ಪ್ರತಿಭೆ ರೆಹಮಾನೇ ಅಲ್ಲವೇ. ಅದಕ್ಕೇ ದೊಡ್ಡ ಬ್ಯಾನರಿನ ಹಿಂದಿ ಚಿತ್ರದವರೂ ಈತನನ್ನು ಹುಡುಕಿಕೊಂಡು ಹೋಗುತ್ತಿರುವುದು. ಆದರೆ, ಬಹುತೇಕರು ರೆಹಮಾನ್‌ ಅವರನ್ನು ಫೋನಿನ ಮೂಲಕ ಸಂಪರ್ಕಿಸಲು ಯತ್ನಿಸಿದರೆ, ರೆಹಮಾನ್‌ ಮಲಗಿದ್ದಾರೆ ಅಂತಲೋ, ಅವರು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಅಂತಲೋ ಯಾರಿಂದಲೋ ಉತ್ತರ ಬರುತ್ತದೆ.

ರೆಹಮಾನ್‌ ಈಗ ಕಡ್ಡಿ ಮುರಿದಂತೆ ಹೇಳಿ ಬಿಟ್ಟಿದ್ದಾರೆ, 'ಭಾರತದ ನಿರ್ಮಾಪಕರು ಕೆಲಸ ಆಗಬೇಕಿದ್ದಲ್ಲಿ, ಲಂಡನ್ನಿಗೇ ಬರಬೇಕು". 'ದಿ ಲೆಜೆಂಡ್‌ ಆಫ್‌ ಭಗತ್‌ ಸಿಂಗ್‌" ಹಾಗೂ ಟಿಪ್ಸ್‌ ಕೆಸೆಟ್‌ ತಂಡ ರೀ--ರೆಕಾರ್ಡಿಂಗ್‌ಗೆ 10 ದಿನ ಲಂಡನ್‌ಗೆ ಹೋಗಿತ್ತು. ಇದಕ್ಕೆ ಆದ ಹೆಚ್ಚುವರಿ ಖರ್ಚು ಬರೋಬ್ಬರಿ 50 ಲಕ್ಷ ರುಪಾಯಿ. ರೆಹಮಾನ್‌ ಸಂಭಾವನೆಯೇ ಜಾಸ್ತಿ. ಹಾಗಿರುವಾಗ ತಮಿಳ್ಮಣಿಗಳು ಲಂಡನ್‌ಗೆ ಹೋಗಿ ಬರುವ ಈ ಪಾಟಿ ಖರ್ಚನ್ನು ಭರಿಸುವುದಾದರೂ ಎಂತು?

ಸದ್ಯಕ್ಕೆ ರಜನೀಕಾಂತ್‌ರ 'ಬಾಬಾ" ಚಿತ್ರದ ಸಂಗೀತದ ಹೊಣೆಯನ್ನು ರೆಹಮಾನ್‌ಗೆ ಹೊರಿಸಿದ್ದಾರೆ. ಆದರೆ, ಹಾಡುಗಳ ಬರೆಯುವ ವೈರಮುತ್ತು ಇಲ್ಲಿ. ರೆಹಮಾನ್‌ ಅಲ್ಲಿ, ಲಂಡನ್ನಿನಲ್ಲಿ. ಸಾಲದ್ದಕ್ಕೆ ಬಾಬಾ ಚಿತ್ರಕ್ಕೆ ರೆಹಮಾನ್‌ ಹಾಕಿರುವ ಟ್ಯೂನ್‌ಗಳ ಬಗ್ಗೆ ವೈರಮುತ್ತು ಆಕ್ಷೇಪಣೆ ಎತ್ತಿದ್ದಾರೆ. ಅವನ್ನು ಸರಿ ಪಡಿಸುವುದು ಹೇಗೆ? ಲಂಡನ್ನಿಗೇ ಹೋಗಬೇಕು. ವೈರಮುತ್ತುಗಂತೂ ರೆಹಮಾನ್‌ ಸಹವಾಸ ಸಾಕಾಗಿ ಹೋಗಿದೆ. ರಜನೀಕಾಂತ್‌ಗೆ ನೇರವಾಗಿ ಎಚ್ಚರಿಸಿದ್ದಾರೆ- 'ಆತನ ಸಹವಾಸ ಬಿಟ್ಟುಬಿಡಿ. ನಾನು ಯಾವಾಗ ಫೋನ್‌ ಮಾಡಿದರೂ ಅವರು ಮಲಗಿರುತ್ತಾರೆ, ಇಲ್ಲವೇ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ನನಗಂತೂ ಸಾಕಾಗಿ ಹೋಗಿದೆ" !

ಅಂದಹಾಗೆ, 'ಬಾಬಾ" ಶೂಟಿಂಗ್‌ ಪೂರ್ತಿ ಮುಗಿದ ನಂತರ ರಜನಿ ಖುದ್ದು ಲಂಡನ್‌ಗೆ ಹೋಗಿ, ಟ್ಯೂನ್‌ಗಳನ್ನು ರೆಹಮಾನ್‌ ಕೈಲಿ ಫೈನ್‌ ಟ್ಯೂನ್‌ ಮಾಡಿಸಿಕೊಂಡು ಬರುವರಂತೆ. ಜಾಣ ರಜನಿ ರೀ-ರೆಕಾರ್ಡಿಂಗ್‌ಗೆ ಮತ್ತೆ ಲಂಡನ್‌ ಗೆ ಹೋಗೋದಿಲ್ಲ. ಸಂಗೀತ ನಿರ್ದೇಶಕ ದೇವಾ ಸೋದರ ಸಬೇಶ್‌ ಮುರಳಿಗೆ ಆ ಜವಾಬ್ದಾರಿ ವಹಿಸಿದ್ದಾರೆ.

ಹಾಲಿವುಡ್‌ನಲ್ಲಿ ಗಿಟ್ಟಿದರೆ ಪರವಾಗಿಲ್ಲ. ಇಲ್ಲವಾದರೆ ಅಲ್ಲೂ ಇಲ್ಲ , ಇಲ್ಲೂ ಇಲ್ಲ ಎಂಬಂತಾಗುತ್ತದೆ ರೆಹಮಾನ್‌ ಸ್ಥಿತಿ.ವಾರ್ತಾ ಸಂಚಯ

English summary
Is A.R.Rahman fading out from Indian movies? Now he is very much busy in Hollywood
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada