twitter
    For Quick Alerts
    ALLOW NOTIFICATIONS  
    For Daily Alerts

    ನರಸಿಂಹರಾಜು; ಈ ಹೆಸರೊಂದೇ ಸಾಲದೇ...

    By Staff
    |

    ‘ಭಾಮಾ..ಭಾಮಾ..ನಾನರಿಯೆ ಮನದ ಮರ್ಮ.. ಬಿಗುಮಾನ ಬಿಡು ಚಿನ್ನ.. ನೀ ನಗುತಿರೆ ಬಲು ಚೆನ್ನ.. ’ಎಂದು ಆ ಭಾಮಾಳನ್ನೇ ಅಲ್ಲ ಕನ್ನಡ ಸಿನಿ ರಸಿಕರನ್ನು ನಗುತಿರೆ ನೀವು ಬಲು ಚೆನ್ನ, ನಾನು ನಗಿಸುತ್ತೇನೆ ನೀವು ನಗುತ್ತಿರಿ ಎಂದು.. ನಗೆಯ ಚಿಲುಮೆಯನ್ನು ದಶಕಗಳ ಕಾಲ ಬತ್ತದಂತೆ ಕಾಪಾಡಿದರು ನಗೆಸಿಂಹ.

    ಅವರ ಸರಿಯಾದ ಹೆಸರು ನರಸಿಂಹ.. ಅದರರ್ಥ : ಅರ್ಧ ನರ-ಅರ್ಧ ಸಿಂಹ. ಅದು ನಗೆಸಿಂಹ ಎಂದಿರಬೇಕಿತ್ತು. ಪ್ರಹ್ಲಾದನ ಕಾಲದ ನರಸಿಂಹ ಅವತಾರವೆತ್ತಿದ್ದು ರಾಕ್ಷಸ ಸಂಹಾರಕ್ಕೆ. ಕನ್ನಡ ಸಿನಿರಂಗದ ನರಸಿಂಹ ಹುಟ್ಟಿದ್ದು ನಗಬೇಕು..ನಗಿಸಬೇಕು.. ನಕ್ಕರೆ ಇದೆ ಸ್ವರ್ಗ ಎನ್ನುವ ಸತ್ಯವನ್ನು ಹಾಸ್ಯ ಕಲೆಯ ಮೂಲಕ ಜನರಿಗೆ ತಿಳಿಸಲು. ರಾಜ ಎನ್ನುವ ಹೆಸರಿಗೆ ತಕ್ಕಂತೆ ಹಾಸ್ಯಚಕ್ರವರ್ತಿಯಾಗಿದ್ದರು.

    ಉಬ್ಬು ಹಲ್ಲು, ಅಗಲ ಹಣೆ, ಸಾಮಾನ್ಯ ಎತ್ತರ, ತೀಕ್ಷ್ಣ ಕಣ್ಣುಗಳ ಸಾಮಾನ್ಯರಂತೆ ಕಾಣಿಸುತ್ತಿದ್ದ ನರಸಿಂಹರಾಜು ಅವರಲ್ಲಿ ಅದ್ಭುತ ಹಾಸ್ಯಕಲೆ ಅಡಗಿತ್ತು. ಸಂವಾದಕ್ಕೆ ತಕ್ಕಂತೆ ಮುಖದಲಿ ಭಾವಗಳ ಬದಲಿಸುತ್ತಾ, ಉಗುರು ಕಚ್ಚುತ್ತಲೋ, ತಲೆಕೆರೆಯುತ್ತಲೋ, ಕೊಂಕು ನುಡಿಯುತ್ತಲೋ ಮುಗ್ಧತೆ, ಜಾಣ್ಮೆ, ಪೆದ್ದುತನ ತೋರುತ್ತಾ, ಮಾತಿನ ಏರಿಳಿತಗಳ ವೈಖರಿಯ ನಟನೆಗೆ ಯಾವುದೇ ಸ್ಫುರದ್ರೂಪಿ ನಟನ ಜೊತೆ ನಟಿಸುತ್ತಿದ್ದರೂ ರಸಿಕರನ್ನು ತಮ್ಮತ್ತ ಆಕರ್ಷಿಸುವ ಶಕ್ತಿ ಇತ್ತು.

    ಐವತ್ತು, ಅರವತ್ತರ ದಶಕಗಳಲ್ಲಿ ಡಾ.ರಾಜ್‌ ಚಿತ್ರಗಳೇ ಆಗಿರಲಿ, ಇನ್ಯಾವ ನಟರ ಚಿತ್ರಗಳೇ ಆಗಿರಲಿ ಆ ಚಿತ್ರಗಳಲ್ಲಿ ನರಸಿಂಹರಾಜು, ಬಾಲಕೃಷ್ಣ, ಪಂಡರೀಭಾಯಿ, ಅಶ್ವಥ್‌, ಸಂಪತ್‌ ಗುಂಪು ಇರುತ್ತಿತ್ತು. ಅದರಲ್ಲೂ ಡಾ. ರಾಜ್‌ ಚಿತ್ರಗಳಲ್ಲಿ ನರಸಿಂಹರಾಜು ಅವರದು ಚೇಲಾ, ಸಹಾಯಕ, ದೋಸ್ತ್‌, ಆಪತ್ಬಾಂಧವನ ಪಾತ್ರ. ನರಸಿಂಹರಾಜು ಅವರು ಡಾ.ರಾಜ್‌ ಅವರೊಡನೆ ಇಲ್ಲದಿದ್ದರೆ ಆ ಚಿತ್ರದಲ್ಲಿ ಮಜ ಹೆಚ್ಚು ಇರುತ್ತಿರಲಿಲ್ಲ. ಸಾಮಾಜಿಕ, ಪೌರಾಣಿಕ, ಕೌಟುಂಬಿಕ, ಡಿಶುಂ-ಡಿಶುಂ ಯಾವುದೇ ಬಗೆಯ ಚಿತ್ರಗಳೇ ಆಗಲಿ ನರಸಿಂಹರಾಜು ಅವರಿಗಾಗಿಯೇ ಪಾತ್ರ ಸೃಷ್ಠಿಯಾಗುತ್ತಿದ್ದ ಕಾಲವದು.

    ತಿಪಟೂರು ರಾಮರಾಜು ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳ ಪುತ್ರ ಟಿ.ಆರ್‌.ನರಸಿಂಹರಾಜು ಬದುಕಿದ್ದು ಕೇವಲ 53 ವರುಷಗಳು(1926-1979). ನರಸಿಂಹರಾಜು ಅವರ ತಂದೆಯವರು ಪೊಲೀಸ್‌ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ನರಸಿಂಹರಾಜು ಅವರಿಗೆ ನಾಲ್ಕು ವರುಷವಿದ್ದಾಗ ಒಮ್ಮೆ ಅವರ ಚಿಕ್ಕಪ್ಪನವರಾದ ಲಕ್ಷ್ಮೀಪತಿ ರಾಜು ಅವರು ಅಂದು ತಿಪಟೂರಿನಲ್ಲಿ ಬೀಡು ಬಿಟ್ಟಿದ್ದ ಮಲ್ಲಪ್ಪ ಅವರ ಚಂದ್ರಮೌಳೇಶ್ವರ ನಾಟಕ ಕಂಪನಿಯ ನಾಟಕವೊಂದಕ್ಕೆ ಕರೆದೊಯ್ದರು.

    ನಾಟಕ ನೋಡುವಲ್ಲಿ ತನ್ಮಯತೆಯಿಂದ ತಲ್ಲೀನನಾಗಿದ್ದ ಆ ಚಿಕ್ಕ ಹುಡುಗನ ಆಸಕ್ತಿ, ಆತ್ಮವಿಶ್ವಾಸ, ಅನುಕರಣೆ ಕಂಡ ಅವರು ಮಲ್ಲಪ್ಪನವರ ನಾಟಕ ಮಂಡಳಿಯಲ್ಲಿ ನರಸಿಂಹರಾಜು ಅವರನ್ನು ಸೇರಿಸಿದರು. ಮಲ್ಲಪ್ಪನವರ ಕಂಪನಿಗೆ ಸೇರಿದ ಬಾಲಕನಿಗೆ ನಟನೆಯ ಕಲಿಕೆಯೊಂದಿಗೆ ಓದು ಬರಹದ ಪಾಠವೂ ಸಾಗಿತು. ಇಲ್ಲಿಂದ ಪ್ರಾರಂಭಗೊಂಡ ನರಸಿಂಹರಾಜು ಅವರ ರಂಗಪಯಣ ಬದುಕಿರುವವರೆಗೂ ನಿರಂತರ ಪಯಣವಾಗಿತ್ತು. ಮಲ್ಲಪ್ಪನವರ ಕಂಪನಿಯಲ್ಲಿ ಪ್ರಹ್ಲಾದ, ಲೋಹಿತೇಶ್ವರ, ಕೃಷ್ಣ, ಮಕರಂದರ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಮಗನ ನಾಟಕದ ಗೀಳು ತಾಯಿ ವೆಂಕಟಲಕ್ಷಮ್ಮನವರಿಗೆ ಇಷ್ಟವಿರಲಿಲ್ಲ. ಆದರೆ ಮಗನಿಗೆ ನಾಟಕವೇ ಊಟ ಮತ್ತು ಜೀವವಾಗಿತ್ತು.

    ಮುಂದೆ ದೊಡ್ಡವರಾದಂತೆ ತಮ್ಮದೇ ಆದ ಸ್ವಂತ ನಾಟಕ ಕಂಪನಿ ತೆರೆದು ಗೋರಕುಂಬಾರ, ಹರಿಶ್ಚಂದ್ರ ಮುಂತಾದ ಅನೇಕ ಪೌರಾಣಿಕ ನಾಟಕಗಳ ಪ್ರದಶನದ ಜೊತೆಗೆ, ನಗೆ ಪಾತ್ರಗಳನ್ನೂ ಮಾಡಲಾರಂಭಿಸಿದರು. ಸ್ವಂತ ನಾಟಕ ಕಂಪನಿ ಬಹಳ ದಿನ ನಡೆಯಲಿಲ್ಲ. ಬೇರೆ ಕಂಪನಿಗಳಲ್ಲಿ ಅವಕಾಶಗಳು ಕೈ ಬೀಸಿ ಕರೆಯಿತು. 1946ರಲ್ಲಿ ಎಡತೊರೆ ಕಂಪನಿಯಲ್ಲಿ ಅಲ್ಲಿ ಅವರಿಗೆ ವಿಶ್ವಾಮಿತ್ರ, ರಾಮ, ರಾವಣ, ಭರತ, ಲಕ್ಷ್ಮಣರ ಪಾತ್ರಗಳು ಅಪಾರ ಜನಪ್ರಿಯತೆಯನ್ನು ಗಳಿಸಿಕೊಟ್ಟವು. ಬೇಡರಕಣ್ಣಪ್ಪನ ಕಾಶಿ ಪಾತ್ರ ಜನರ ಮುಟ್ಟಿತು. ಬೇಡರಕಣ್ಣಪ್ಪ ಸುಮಾರು ಸಾವಿರ ಬಾರಿ ಪ್ರದರ್ಶನಗೊಂಡಿತ್ತಂತೆ!

    ಅಂದಿನ ದಿನಗಳಲ್ಲಿ ನಾಟಕ ಕಂಪನಿಗಳು ಬಹಳ ದಿನ ನಡೆಯುತ್ತಿರಲಿಲ್ಲ. ಎಡತೊರೆ ಕಂಪನಿಗೂ ಬೀಗ ಬಿತ್ತು. ನರಸಿಂಹರಾಜು ಅವರಿಗೆ ಹಿರಣ್ಣಯ್ಯನವರ ನಾಟಕ ಮಂಡಳಿಯಲ್ಲಿ ಸ್ತ್ರೀ ಪಾತ್ರ ಮಾಡುವ ಅವಕಾಶ ದೊರಕಿತು. ಹಿರಣ್ಣಯ್ಯನವರು ನರಸಿಂಹರಾಜು ಅವರ ಅಭಿನಯಕ್ಕೆ ತಲೆದೂಗಿದರು.

    ನರಸಿಂಹರಾಜು ಅವರ ಕಾಶಿ ಪಾತ್ರದ ಕೀರ್ತಿ, ನಟನಾ ಕೌಶಲ್ಯದ ವೈಖರಿ ಗುಬ್ಬಿ ವೀರಣ್ಣವರ ಕಿವಿಗೆ ಬಿದ್ದು ಅವರಿಂದ ನರಸಿಂಹರಾಜು ಅವರಿಗೆ ಬುಲಾವ್‌ ಬಂದಿತು. ಅದೂ ಬೇಡರಕಣ್ಣಪ್ಪನ ಕಾಶಿ ಪಾತ್ರಕ್ಕೆ. ಅಲ್ಲಿಯೂ ಕಾಶಿ ಪಾತ್ರ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಕಂಪನಿಯಲ್ಲಿ ಸಾಹುಕಾರ ಮತ್ತು ಅಡ್ಡದಾರಿ ನಾಟಕಗಳಲ್ಲಿ ನಗೆಯ ಅಲೆ ಎಬ್ಬಿಸಿದ ನರಸಿಂಹರಾಜು ಅವರು ವೀರಣ್ಣನವರ ಪ್ರಶಂಸೆಗೆ ಪಾತ್ರರಾದರು.

    ಇದೇ ಸಮಯದಲ್ಲಿ ವೀರಣ್ಣನವರು ಬೇಡರಕಣ್ಣಪ್ಪ ನಾಟಕವನ್ನು ಚಲನಚಿತ್ರವಾಗಿ ತಯಾರಿಸುವ ಪ್ರಯತ್ನ ನಡೆಯುತ್ತಿತ್ತು. ಅಂದಿನ ದಿನಗಳಲ್ಲಿ ಮದರಾಸು ಚಲನಚಿತ್ರಗಳ ನಿರ್ವಹಣೆಯ ಕೇಂದ್ರವಾಗಿತ್ತು. ನಿರ್ದೇಶಕ ಹೆಚ್‌.ಎಲ್‌.ಎನ್‌. ಸಿಂಹ, ಕಾಶಿ ಪಾತ್ರಕ್ಕೆ ನರಸಿಂಹರಾಜು ಅವರನ್ನೇ ಆಯ್ಕೆ ಮಾಡಿದರು. 1954ರಲ್ಲಿ ತೆರೆಕಂಡ ಬೇಡರಕಣ್ಣಪ್ಪ ಅಪಾರ ಜನಪ್ರಿಯತೆಗಳಿಸಿತು. ಈ ಚಿತ್ರ ಸಿನಿರಂಗಕ್ಕೆ ಡಾ.ರಾಜ್‌ ಒಬ್ಬರನ್ನೇ ಅಲ್ಲ ನರಸಿಂಹರಾಜು, ಬಾಲಕೃಷ್ಣ, ಜಿ.ವಿ.ಅಯ್ಯರ್‌ ಅವರನ್ನೂ ಪರಿಚಯಿಸಿತು.

    ಇಲ್ಲಿಂದ ಪ್ರಾರಂಭಗೊಂಡ ನರಸಿಂಹರಾಜು ಅವರ ಸಿನಿ ನಟನೆಯ ಪಯಣ, ಕಡೆಯತನಕ ನಿಲ್ಲಲೇ ಇಲ್ಲ. ಈ ಪಯಣದಲ್ಲಿ ತೆರೆಕಂಡವು ಅವರು ನಟಿಸಿದ ಸ್ಕೂಲ್‌ಮಾಸ್ಟರ್‌, ಕಿತ್ತೂರುಚೆನ್ನಮ್ಮ, ಲಗ್ನಪತ್ರಿಕೆ, ಸಂಧ್ಯಾರಾಗ, ರತ್ನಗಿರಿರಹಸ್ಯ, ಬೀದಿ ಬಸವಣ್ಣ, ಚೂರಿ ಚಿಕ್ಕಣ್ಣ, ಗಂಗೆಗೌರಿ, ದುಡ್ಡೇ ದೊಡ್ಡಪ್ಪ, ಗಂಡೊಂದು ಹೆಣ್ಣಾರು, ಭೂಪತಿರಂಗ, ಭಾಗ್ಯದೇವತೆ, ಶ್ರೀಕೃಷ್ಣದೇವರಾಯ, ನ್ಯಾಯವೇದೇವರು, ಜೇಡರಬಲೆ, ಹಸಿರುತೋರಣ ಮುಂತಾದ ನೂರಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳು.

    ಚಿತ್ರ ರಸಿಕರ ಮನಗೆದ್ದ ವಿನೋದಕಾರ ನರಸಿಂಹರಾಜು ಅವರ ಸಂಧ್ಯಾರಾಗ, ಬೇಡರಕಣ್ಣಪ್ಪ, ಸತ್ಯಹರಿಶ್ಚಂದ್ರ, ಗುಂಡಾಜೋಯಿಸ, ತೆನಾಲಿರಾಮ ಚಿತ್ರಗಳಲ್ಲಿನ ಪಾತ್ರಗಳು ಇಂದಿಗೂ ಸ್ಥಿರವಾಗಿದೆ. ತಾವು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಆಯಾ ಪಾತ್ರಗಳಿಗೆ ಜೀವತುಂಬಿ ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ ನರಸಿಂಹರಾಜು ಎಂದಾಕ್ಷಣ ಕಿರುನಗೆಯೊಂದನ್ನು ಮೂಡಿಸುವ ನಗೆರಾಜರಾಗಿ ನಿಂತಿದ್ದಾರೆ.

    ನಕ್ಕರೆ ಅದೇ ಸ್ವರ್ಗ ನರಸಿಂಹರಾಜು ಅವರ ನೂರನೇ ಚಿತ್ರ. ದಿವಂಗತ ಪುತ್ರ ಶ್ರೀಕಾಂತನ ನೆನಪಿನಲ್ಲಿ ‘ಪ್ರೊಫೆಸರು ಹುಚ್ಚೂರಾಯ’ ಚಿತ್ರ ನಿರ್ಮಿಸಿದರು. ಸಿನಿರಂಗದಲ್ಲಿ ಪ್ರಖ್ಯಾತರಾದರೂ ನಾಟಕರಂಗವನ್ನು ಮರೆಯಲಿಲ್ಲ, ಕೈ ಬಿಡಲಿಲ್ಲ. ಸಾಮಾಜಿಕ, ಪೌರಾಣಿಕ, ಕೌಟುಂಬಿಕ ಚಿತ್ರಗಳಲ್ಲಿ ನಟನಾ ಸಾಮರ್ಥ್ಯದಿಂದ ಜನರ ಮನಗಳಲ್ಲಿ ರಾರಾಜಿಸಿದರು.

    ತೆನಾಲಿರಾಮ, ಬೀರ್ಬಲ್‌ ಕಥೆಗಳು ಯಾರಿಗೆ ಗೊತ್ತಿಲ್ಲ. ಆ ವ್ಯಕ್ತಿಗಳನ್ನು ನಾವ್ಯಾರೂ ಕಂಡಿಲ್ಲ. ಅದರಲ್ಲೂ ತೆನಾಲಿರಾಮ ಹೇಗಿರಬಹುದು ಎಂಬ ಕಲ್ಪನೆ ಬಂದಾಗ ಕಣ್ಮುಂದೆ ನಿಲ್ಲುವ ವ್ಯಕ್ತಿ ಹುಟ್ಟು ವಿನೋದಗಾರ ನರಸಿಂಹರಾಜು. ಅಂದಿನ ತೆನಾಲಿರಾಮ ತನಗೆ ಮುಖ ತೋರಬೇಡವೆಂದ ರಾಜನ ಆಣತಿಗೆ ಮನ್ನಣೆಯಿತ್ತು ಮುಖಕ್ಕೆ ಮಡಿಕೆ ಹಾಕಿಕೊಂಡು ತನ್ನ ಜಾಣ್ಮೆತೋರಿದ. ಕಲ್ಪನೆಯಲ್ಲಿದ್ದ ಆ ಶತಮಾನದ ತೆನಾಲಿರಾಮನನ್ನು ಇದೀಗ 20ನೆಯ ಶತಮಾನದಲಿ ನೋಡಿ ನಲಿದವರು ನಾವುಗಳು.

    ಮತ್ತೊಬ್ಬರನ್ನು ನಗಿಸುವ ಕ್ಲಿಷ್ಟವಾದ ಕಲೆ ಬಲ್ಲ ಪರಿಣಿತರು ಕೆಲವೇ ಮಂದಿ. ಅವರಲ್ಲಿ ನರಸಿಂಹರಾಜು ಅವರೂ ಒಬ್ಬರು. ನರಸಿಂಹರಾಜು ಅವರಿಗೆ ಚಾರ್ಲಿ ಚಾಪ್ಲಿನ್‌ ಅವರ ಪ್ರಭಾವ ಬಹಳಷ್ಟಿತ್ತಂತೆ. ಆ ಚಾಪ್ಲಿನ್‌ ವಿಶ್ವವಿಖ್ಯಾತರಾದವರು ಅವರನ್ನೇ ಆರಾಧಿಸಿದ ನರಸಿಂಹರಾಜು ಕನ್ನಡಿಗರ ಚಾಪ್ಲಿನ್‌ ಆಗಿ ಮೆರೆದರು. ಪುತ್ರ ಶೋಕ ನಿರಂತರದ ನೋವನ್ನು ತಮ್ಮಲ್ಲೇ ಅಡಗಿಸಿಕೊಂಡು ಮತ್ತೊಬ್ಬರನ್ನು ನಗಿಸಿದರು.

    ಕನ್ನಡ ಮೊಟ್ಟ ಮೊದಲ ಟಾಕಿ, ಕಪ್ಪು-ಬಿಳುಪಿನ ಸಿನಿಮಾ ‘ಸತಿ ಸುಲೋಚನ’ ಬಿಡುಗಡೆಯಾದದ್ದು ಮಾರ್ಚ್‌ 3, 1934ರಲ್ಲಿ. 72 ವಸಂತಗಳನ್ನು ಕಳೆದಿರುವ ಈ ಕನ್ನಡ ಟಾಕಿ ಸಿನಿಮಾ ಕನ್ನಡ ಜನತೆಗೆ ನೀಡಿರುವ ಕೊಡುಗೆ ಅಪಾರ. ಅಂತಹ ಕೊಡುಗೆಯೊಂದನ್ನು ನೀಡಿದ್ದು; ನರಸಿಂಹರಾಜು.

    ಬೇಡ..ನಂಬಬೇಡಾ, ಭಾಮೆಯ ನೋಡಲು ತಾ ಬಂದ, ವಿಧಿ ವಿಪರೀತ, ನೀನೇ ಕಿಲಾಡಿ ಹೆಣ್ಣು -ಅಂದಿನ ಚಿತ್ರಗಳ ಈ ಸುಮಧುರ ಹಾಡುಗಳು, ನರಸಿಂಹರಾಜು ಅವರ ಅಭಿನಯ ಮರೆಯುವುದಾದರೂ ಹೇಗೆ? ಜಯಾ-ನರಸಿಂಹರಾಜು, ಮೈನಾವತಿ-ನರಸಿಂಹರಾಜು ಜೋಡಿ, ಪಾಪಮ್ಮ-ನರಸಿಂಹರಾಜು ಜಗಳ, ಕೊಂಕುಮಾತು, ಬಾಲಕೃಷ್ಣ-ನರಸಿಂಹರಾಜು ಮಾತು, ಹಾಸ್ಯ, ಕೊಂಕು, ತರಲೆ ಹಿಟ್‌ ಆಗಿತ್ತು.

    ನಮ್ಮೂರ್ನಾಗ್‌ ನಾನೊಬ್ನೇ ಜಾಣ..ನನ್‌ ಕಂಡ್ರೆ ಎಲ್ಲಾರ್ಗೂ ಪ್ರಾಣ (ನನ್‌ ಹಾಡೂಂದ್ರೆ ಎಲ್ಲಾರ್ಗೂ ಪ್ರಾಣ) ಎಂದು ಹಾಡುತ್ತಾ ಹಾಸ್ಯ ಎಂದರೆ ನರಸಿಂಹರಾಜು ಎಂದೆನಿಸಿದ್ದರು.

    ಸಭ್ಯ ನಡವಳಿಕೆಯ, ಹಸನ್ಮುಖಿ ಹಾಸ್ಯ ಎಲ್ಲರ ಸ್ವತ್ತಲ್ಲ, ಹಾಸ್ಯದಲ್ಲಿ ಅಸಭ್ಯವಿಲ್ಲ, ಹಾಸ್ಯವೆಂದರೆ ಅಸಹ್ಯ ನಡವಳಿಕೆಯಲ್ಲ, ಹಾಸ್ಯ ಹೊರಹೊಮ್ಮಿಸಲು ಅಸಹ್ಯ ಮಾತುಗಳು ಬೇಕಿಲ್ಲ ಎಂದು ಸಾಬೀತು ಪಡಿಸಿ ದಶಕಗಳು ಚಿತ್ರರಸಿಕರ ಮನ ಮನರಂಜಿಸಿದ ನರಸಿಂಹರಾಜು ಅವರ ವಿನೋದ, ನಗಿಸುವ ಕಲೆ, ಮಾತಿನ ಏರಿಳಿತ, ಮುಖಭಾವ, ನಡವಳಿಕೆ ಇಂದಿನ ಹಾಗೂ ಮುಂದಿನ ಹಾಸ್ಯ ನಟರಿಗೆ ಆದರ್ಶವಾಗಿರಲಿ ಎಂಬುದು ನಮ್ಮ ಹಾರೈಕೆ!!

    Post your views

    Thursday, April 25, 2024, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X