»   » ಕಾಡ ಬೆಳದಿಂಗಳುಕತೆ ಬರೆದ ಜೋಗಿ ಮಡಿಲಿಗೆ ಪ್ರಶಸ್ತಿ

ಕಾಡ ಬೆಳದಿಂಗಳುಕತೆ ಬರೆದ ಜೋಗಿ ಮಡಿಲಿಗೆ ಪ್ರಶಸ್ತಿ

Posted By:
Subscribe to Filmibeat Kannada


ಬೆಂಗಳೂರು ಕಂಪನಿ ನಿರ್ಮಿತ ಲಿಂಗದೇವರು ನಿರ್ದೇಶನದ ಕಾಡ ಬೆಳದಿಂಗಳು ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದೇ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆಯ ಪ್ರಶಸ್ತಿ ಖ್ಯಾತ ಲೇಖಕ ಜೋಗಿ ಅವರಿಗೆ ಸಂದಿದೆ.

2006-2007ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು, ಜಾಗತೀಕರಣ ಹೇಗೆ ನಮ್ಮ ಗ್ರಾಮಗಳ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ ಎಂಬ ಅಂಶವನ್ನು ಪ್ರೇಕ್ಷಕನ ಮನಸ್ಸಿನಾಳಕ್ಕೆ ನಾಟುವ ಹಾಗೆ ಅತ್ಯಂತ ಮನೋಜ್ಞವಾಗಿ ನಿರೂಪಿಸಲಾಗಿದೆ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.

ಗ್ರಾಮಗಳಲ್ಲಿ ಆಗುತ್ತಿರುವ ಆಘಾತಕಾರಿ ಬೆಳವಣಿಗೆಗಳನ್ನು ಕಾಡ ಬೆಳದಿಂಗಳು ಅತ್ಯಂತ ನೈಜವಾಗಿ ನಿರೂಪಿಸಿದೆ ಎಂದು ನಾಗತಿಹಳ್ಳಿ ನೇತೃತ್ವದ ಚಲನಚಿತ್ರ ಆಯ್ಕೆ ಮಂಡಳಿ ಹೊಗಳಿದೆ.

ಈ ಚಿತ್ರವನ್ನು ಚಿತ್ರಲೋಕ ಡಾಟ್‌ಕಾಂನ ಕೆ.ಎಂ.ವೀರೇಶ್, ಬಿ.ಎಸ್.ಲಿಂಗದೇವರು, ಕೆ.ಎನ್.ಸಿದ್ದಲಿಂಗಯ್ಯ, ವಾಗ್ದೇವಿ, ಲೋಕನಾಥ್, ಜನಾ ಮತ್ತು ಸೆಲ್ವಂ ಅವರು ನಿರ್ಮಿಸಿದ್ದಾರೆ. ಈ ಚಿತ್ರ ಬೆಂಗಳೂರು ಕಂಪನಿಯ ಮೊದಲ ಪ್ರಯತ್ನ.

ಪರ್ತಕರ್ತರಾದ ಜೋಗಿ ಮತ್ತು ಉದಯ ಮರಕಿಣಿ ಅವರು ಸ್ಕ್ರಿಪ್ಟ್ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ಕಾಡ ಬೆಳದಿಂಗಳು ಇತ್ತೀಚೆಗೆ ಓಸಿಯನ್ ಚಿತ್ರೋತ್ಸವದಲ್ಲಿ ಕಲಾಚಿತ್ರ ವಿಭಾಗದಲ್ಲಿ ಪ್ರದರ್ಶಿತವಾಗಿ ಚಿತ್ರವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಅನನ್ಯಾ ಕಾಸರವಳ್ಳಿ, ಲೋಕನಾಥ್, ದತ್ತಣ್ಣ ಮುಂತಾದವರಿದ್ದಾರೆ. ಎಚ್.ಎನ್. ರಾಮಚಂದ್ರ ಅವರು ಕ್ಯಾಮೆರಾ ಸಂಭಾಳಿಸಿದ್ದರೆ, ರಾಜೇಶ್ ರಾಮನಾಥನ್ ಅವರು ಸಂಗೀತ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada