»   » ದ್ವಾರಕೀಶ್‌ ಕನಸುಗಳಲ್ಲಿ ಐಶ್ವರ್ಯಾ ರೈ !

ದ್ವಾರಕೀಶ್‌ ಕನಸುಗಳಲ್ಲಿ ಐಶ್ವರ್ಯಾ ರೈ !

Posted By: Staff
Subscribe to Filmibeat Kannada
Dwarakish's
ಕನ್ನಡದ ಕುಳ್ಳ ದ್ವಾರಕೀಶ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಎಲ್ಲವನ್ನು ಸಿನಿಮಾದಿಂದಲೇ ಸಂಪಾದಿಸಿ, ಅಲ್ಲಿಯೇ ಕಳೆದುಕೊಂಡರು ಉತ್ಸಾಹ ಕಡಿಮೆಯಾಗಿಲ್ಲ. ಫೀನಿಕ್ಸ್‌ನಂತೆ ತಮ್ಮ ಅರವತ್ತೆರಡನೆಯ ವಯಸ್ಸಲ್ಲೂ ಕ್ರಿಯಾಶೀಲತೆಯಿಂದ ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಆಪ್ತಮಿತ್ರ ನೆರವಾಗುವನೇ ?

ಸಿನಿಮಾದಲ್ಲಿ ಅಪ್ರಸ್ತುತರಾಗಿ ಮರೆಗೆ ಸರಿದರು ಎನ್ನುವಾಗಲೇ, ಕನ್ನಡ ನಾಡು ವೇದಿಕೆಯ ಮೂಲಕ ದ್ವಾರಕೀಶ್‌ ರಾಜಕೀಯಕ್ಕೆ ಜಿಗಿದರು. ಹುಣಸೂರು ವಿಧಾನಸಭಾ ಆಭ್ಯರ್ಥಿಯಾಗಿ ಜನರ ಮನಗೆಲ್ಲಲಾಗದೇ ಸುಸ್ತಾದರು. ಮತ್ತೆ ಬಣ್ಣದ ಪ್ರಪಂಚಕ್ಕೆ 'ಆಪ್ತಮಿತ್ರ" ಚಿತ್ರದೊಂದಿಗೆ ಪ್ರವೇಶ ಪಡೆದರು. ಕಳ್ಳ-ಕುಳ್ಳ ಜೋಡಿ ಮತ್ತೆ ಒಂದಾಯಿತು. ವಿಷ್ಣುವರ್ಧನ್‌-ಸೌಂದರ್ಯ ಜೋಡಿಯ ಆಪ್ತಮಿತ್ರ ಇನ್ನೇನು ಬಿಡುಗಡೆಗೆ ಸಿದ್ಧ . ಆದರೆ ಈ ಸುದ್ದಿ ಆಪ್ತಮಿತ್ರನಿಗೆ ಸಂಬಂಧಿಸಿದ್ದಲ್ಲ , ಕಳ್ಳರಿಗೆ ಸಂಬಂಧಿಸಿದ್ದು .

ಆಪ್ತಮಿತ್ರ ಬಿಡುಗಡೆಗೆ ಮೊದಲೇ 'ಆಲಿಬಾಬಾ ಮತ್ತು ನಲವತ್ತು ಜನ ಕಳ್ಳರು" ಎನ್ನುವ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಸೆಟ್ಟೇರಿಸುವ ಚಿಂತನೆಯಲ್ಲಿ ದ್ವಾರಕೀಶ್‌ ಮುಳುಗಿದ್ದಾರೆ. ಮಕ್ಕಳಿಂದ ಮುದುಕರವರೆಗೆ ಇಂದಿಗೂ ಆಕರ್ಷಣೆ ಉಳಿಸಿಕೊಂಡಿರುವ ಈ ಕತೆಯನ್ನು ಸಿನಿಮಾ ಮಾಡುವ ದ್ವಾರ್ಕಿ ಕನಸು ಇಂದಿನದಲ್ಲ. ರಾಜ್‌ಕುಮಾರ್‌ರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಆಂದುಕೊಂಡಿದ್ದರಂತೆ. ಆಮೇಲೆ ವಿಷ್ಣುವರ್ಧನ್‌-ಶ್ರೀದೇವಿ ಜೋಡಿಯನ್ನು ಹಾಕಿಕೊಂಡು ಚಿತ್ರ ಮಾಡಲು ಯೋಚಿಸಿದ್ದರೂ ಆಗ ಕೈಗೂಡಿರಲಿಲ್ಲ. ಕನಸು ಮತ್ತೆ ಚಿಗುರಿದ್ದು ಈಗ.

ಗಾಂಧಿನಗರದ ಮೂಲಗಳ ಪ್ರಕಾರ- ಆಲಿಬಾಬಾದಲ್ಲಿ ನಟಿಸಲು ಉಪೇಂದ್ರ ಮನಸ್ಸು ಮಾಡಿದ್ದಾರೆ. ನಾಯಕಿಯಾಗಿ ಸುರಸುಂದರಿ ಐಶ್ವರ್ಯ ರೈ ಚಿತ್ರ ದ್ವಾರಕೀಶ್‌ ಕಣ್ಣಲ್ಲಿದೆ. ಈಕೆ ಹ್ಞೂಂ ಅಂತಾಳಾ ಅನ್ನೋದು ಬೇರೆ ಪ್ರಶ್ನೆ .

ಕನ್ನಡ ಮಾತ್ರವಲ್ಲದೆ 'ಆಲಿಬಾಬಾ ಮತ್ತು ನಲವತ್ತು ಜನ ಕಳ್ಳರು" ಚಿತ್ರವನ್ನು ತೆಲುಗು, ಇಂಗ್ಲಿಷ್‌ನಲ್ಲೂ ನಿರ್ಮಿಸುವ- ಜಪಾನ್‌, ರಷ್ಯಾ, ಇಟಲಿ ಮತ್ತಿತರ ದೇಶಗಳಲ್ಲಿ ಚಿತ್ರ ಪ್ರದರ್ಶಿಸುವ ಐಡಿಯಾ ದ್ವಾರಕೀಶ್‌ ಅವರದು. ಚಿತ್ರದ ಬಜೆಟ್‌ ಎಷ್ಟು ? ಈ ಬಗ್ಗೆ ದ್ವಾರಕೀಶರದು ಡೋಂಟ್‌ಕೇರ್‌ ಪಾಲಿಸಿ. ದ್ವಾರಕೀಶ್‌ ಹೇಳೋದು ಇಷ್ಟೇ- ದೃಶ್ಯ ಮಾಧ್ಯಮದ ಅಪಾರ ಸಾಧ್ಯತೆಗಳನ್ನು ಬಳಸಿಕೊಂಡು ಅನ್ನ ನೀಡಿದ ಅಭಿಮಾನಿ ದೇವರುಗಳಿಗೆ ಅತ್ಯುತ್ತಮ ಚಿತ್ರ ನೀಡುವುದು ನನ್ನ ಕರ್ತವ್ಯ. ಭಲೇ ಕುಳ್ಳ ದ್ವಾರಕೀಶ್‌ಗೆ ಬೆಸ್ಟ್‌ ಆಫ್‌ ಲಕ್‌ ಅನ್ನೋಣ.

English summary
Dwarakish's 'Aapthamitra' is ready for screening. He dreams about 'Alibaba mattu Kallaru'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada