For Quick Alerts
  ALLOW NOTIFICATIONS  
  For Daily Alerts

  ‘ಸ್ಲಿಂ’ ರಾಧಿಕಾಗೆ ಶ್ರಾವಣ ಬಂತು !

  By Staff
  |
  • ರಾಜು ಮಹತಿ
  ರಾಧಿಕಾ ಎಲ್ಲಿಹೋದಳು ? ‘ನಿನಗಾಗಿ’ ಎನ್ನುವ ಹಿಟ್‌ ಚಿತ್ರ, ‘ಪ್ರೇಮಖೈದಿ’ ಎನ್ನುವ ಯಶಸ್ವಿ ಚಿತ್ರ, ‘ತವರಿಗೆ ಬಾ ತಂಗಿ’ ಎನ್ನುವ ಸೂಪರ್‌ಹಿಟ್‌ ಚಿತ್ರಗಳ ನಾಯಕಿ ರಾಧಿಕಾ ಇಲ್ಲಿ ಹೋದಳು ?

  ಇದೋ ನಾ ಇಲ್ಲೇ ಇದ್ದೇನೆ ಎನ್ನುತ್ತಿದ್ದಾರೆ ರಾಧಿಕಾ. ಹೌದು, ರಾಧಿಕಾ ಗಾಂಧಿನಗರದಲ್ಲಿ ಮರಳಿ ಕಾಣಿಸಿಕೊಂಡಿದ್ದಾರೆ. ಆಕೆಯೇ ಹೇಳಿಕೊಳ್ಳುವ ಪ್ರಕಾರ ಕೈಯಲ್ಲೊಂದೆರಡು ಚಿತ್ರಗಳೂ ಇವೆ !

  ಅದಿರಲಿ, ರಾಧಿಕಾ ಇಷ್ಟು ದಿನ ಎಲ್ಲಿ ಹೋಗಿದ್ದಳು ?

  ಇಲ್ಲೇ, ಪಕ್ಕದ ತಮಿಳು, ತೆಲುಗಿನಲ್ಲೊಂದು ರೌಂಡ್‌ ಹೊಡೆದುಬಂದೆ. ಮಲಯಾಳಂನಲ್ಲೂ ಒಂದು ಅವಕಾಶವಿತ್ತು . ತೆಲುಗು-ತಮಿಳಲ್ಲಿ ಮುಳುಗಿದ್ದೆ ನೋಡಿ ; ಡೇಟ್ಸ್‌ ಸಿಗಲಿಲ್ಲ ಎಂದು ರಾಧಿಕಾ ಕಣ್ಣರಳಿಸುತ್ತಾ ಹೇಳುತ್ತಾರೆ. ‘ಈಯರ್‌ ಕೈ’ ಎನ್ನುವ ತಮಿಳು ಚಿತ್ರದಲ್ಲಿ ನಟಿಸಿದ್ದೇನೆ. ‘ವರ್ಣಜಾಲಂ’ ಚಿತ್ರ ಬಿಡುಗಡೆ ಆಗಬೇಕಿದೆ. ಇನ್ನು ‘ಉಳ್ಳತ್ತಿಲ್‌ ಕಡತ್ತಲ್‌’ ಎನ್ನುವ ಚಿತ್ರದಲ್ಲೂ ನಟಿಸಿದ್ದೇನೆ. ತೆಲುಗಿನ ಮಾತಿಗೆ ಬಂದರೆ- ‘ಭದ್ರಾಚಲ ರಾಮುಡು’. ಈ ಚಿತ್ರದಲ್ಲಿ ಎನ್‌ಟಿಆರ್‌ ಕುಟುಂಬದ ತಾರಕ ರತ್ನ ಹೀರೋ ಎಂದು ರಾಧಿಕಾ ಕಂಠಪಾಠ ಮಾಡಿದಂತೆ ಪಟ್ಟಿ ಒಪ್ಪಿಸುತ್ತಾರೆ.

  ರಾಧಿಕಾ ಬದಲಾಗಿಲ್ಲ . ಅದೇ ಮುಗ್ಧ ಮುಖ, ಹೊಳಪು ಕಂಗಳು. ಹೌದು, ಈ ಹೆಣ್ಣುಮಗಳು ಬದಲಾಗಿಲ್ಲ . ‘ಇಲ್ಲ ಸಾರ್‌, ನಾನು ಬದಲಾಗಿದ್ದೇನೆ. ನಾನೀಗ ಮೊದಲಿಗಿಂತ ಸ್ಲಿಂ ಆಗಿಲ್ವಾ ? ಚೆನ್ನಾಗಿ ಕಾಣ್ತಿಲ್ಲವಾ ?’ ಎಂದು ರಾಧಿಕಾ ಕೂತಲ್ಲೇ ಬಳುಕುತ್ತಾರೆ. ಹೌದು, ರಾಧಿಕಾ ತೆಳ್ಳಗಾಗಿದ್ದಾರೆ. ಹಾಗಾಗಿ ಬಳ್ಳಿಯಂತಿದ್ದಾರೆ ಎನ್ನಬಹುದು.

  ಎಲ್ಲರಿಗೂ ಕೆಟ್ಟಕಾಲ ಅಂತ ಒಂದಿರುತ್ತದಲ್ಲ . ರಾಧಿಕಾಗೂ ಅಂತದೊಂದು ಕಾಲಬಂದಿತ್ತು . ಪಾಪ, ಅವಕಾಶಗಳೇ ಇರಲಿಲ್ಲ . ರಾಧಿಕಾ ಏನೋ ಚೆಂದದ ಹುಡುಗಿ ; ಮಾತು ಮೊದ್ದಾದರೂ ರೂಪ ಮುದ್ದು. ಆದರೆ ಆಕೆಯ ಅಪ್ಪನ ಕಿರಿಕ್ಕಿಗೆ ಬೇಸತ್ತು ನಿರ್ಮಾಪಕರು ಈ ಹೆಣ್ಣುಮಗಳನ್ನು ಮರೆತೇಬಿಟ್ಟಿದ್ದರು. ಹಾಗಾಗಿ ಕಡ್ಡಾಯ ವಿಶ್ರಾಂತಿಯ ದಿನಗಳಲ್ಲಿ ಮನೇಲಿ ಪುರುಸೊತ್ತಾಗಿ ಕೂತ ರಾಧಿಕಾ ತಿಂದುಂಡು ಒಂದು ರೌಂಡು ಊದಿಕೊಂಡಿದ್ದರು. ಹಾಗೆನ್ನುತ್ತಿತ್ತು ಗಾಂಧಿನಗರದ ಕನ್ನಡಿ. ‘ನಾನು ಸ್ಲಿಂ ಆಗಿದ್ದೇನೆ’ ಎಂದು ಇದೀಗ ರಾಧಿಕಾ ಹೇಳುತ್ತಿರುವುದನ್ನು ನೋಡಿದರೆ ಅವರು ಊದಿಕೊಂಡಿದ್ದು ಸತ್ಯವಿರಬೇಕು ! ಈಗ ತೆಳ್ಳಗಾಗಿದ್ದಾರಲ್ಲ , ಅಷ್ಟು ಸಾಕು, ‘ದುರ್ಗಿ’ಯನ್ನು ಸಹಿಸಿಕೊಂಡಿರುವ ಬಡಪಾಯಿ ಪ್ರೇಕ್ಷಕನಿಗೆ ‘ಮರಿದುರ್ಗಿ’ಯ ಹೊರೆ ತಪ್ಪಿತು.

  ಅದು ಸರೀನಮ್ಮಾ ರಾಧಿಕಾ, ಕನ್ನಡದಲ್ಲಿ ಅವಕಾಶಗಳೇ ಇರಲಿಲ್ಲವಂತಲ್ಲಾ ? ಈಗ ಹೇಗಿದೆ ಗಾಳಿ? ಶ್ರಾವಣದಲ್ಲೇನಾದರೂ ದೆಸೆ ತಿರುಗಿದೆಯಾ ?

  ಎಲ್ಲ ಸುಳ್ಳು ಬಿಡಿ ಸಾರ್‌. ಅವಕಾಶಗಳು ಯಾವಾಗಿರಲಿಲ್ಲ ಹೇಳಿ. ತೆಲುಗಿಗೆ, ತಮಿಳಿಗೆ ಹೋಗಿದ್ದೆ ನೋಡಿ. ಬಿಡುವೇ ಇರಲಿಲ್ಲ . ಹಾಗಾಗಿ ಕನ್ನಡದಲ್ಲಿ ಕಾಣಿಸಿಕೊಂಡಿರಲಿಲ್ಲ , ಅಷ್ಟೇ ಎಂದು ರಾಧಿಕಾ ಸತ್ಯಾಂಶ ಹೇಳುತ್ತಾರೆ.

  ಸದ್ಯಕ್ಕೆ ರಾಧಿಕಾ ಕೈಯಲ್ಲಿ ಎರಡು ಕನ್ನಡ ಚಿತ್ರಗಳಿವೆ. ಒಂದು ‘ಜಂಭದ ಕೋಳಿ’. ಇನ್ನೊಂದು ‘ಋಷಿ’.

  ಇನ್ನೇನು ಜೀರ್ಣವಾಯಿತು ಎನ್ನುವಂತಿದ್ದ ‘ಜಂಭದ ಕೋಳಿ’ ಪುನಃ ಜೀವಂತವಾಗಿದೆ. ರಾಧಿಕಾ ಎರಡನೇ ಇನಿಂಗ್ಸ್‌ಗೆ ಹೇಳಿಮಾಡಿಸಿದಂಥ ಚಿತ್ರ, ಒಂದಾನೊಂದು ಕಾಲದಲ್ಲಿ ಮಾಲಾಶ್ರೀ ಅಭಿನಯಿಸುತ್ತಿದ್ದಂಥ ಚಿತ್ರ- ಎಂದು ‘ಜಂಭದ ಕೋಳಿ’ ಬಳಗ ಹೇಳುತ್ತಿದೆ. ಇನ್ನು ‘ಋಷಿ’ ಬಗೆಗೂ ರಾಧಿಕಾಗೆ ನಿರೀಕ್ಷೆಗಳಿವೆ. ‘ಖುಷಿ’ ಚಿತ್ರದ ಯಶಸ್ವಿ ನಿರ್ದೇಶಕ ಪ್ರಕಾಶ್‌ ‘ಋಷಿ’ಯ ಸಾರಥ್ಯವನ್ನೂ ವಹಿಸಿರುವುದರಿಂದ ರಾಧಿಕಾ ಖುಷಿಯಾಗಿದ್ದಾರೆ. ಈ ಹೆಣ್ಣುಮಗಳ ಖುಷಿ ದೀರ್ಘಾಯುವಾಗಿರಲಿ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X