»   » ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು ಗೊತ್ತಾ?

ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು ಗೊತ್ತಾ?

Posted By: ಪ್ರಸಾದ ನಾಯಿಕ
Subscribe to Filmibeat Kannada

ಕಾಲೇಜು ದಿನಗಳಲ್ಲಿ ಪರೀಕ್ಷೆ ಹತ್ತಿರ ಬರುತ್ತಿದ್ದ ಹಾಗೆ ಯದ್ವಾತದ್ವಾ ಗಡ್ಡ ಬಿಟ್ಟು ಬರುತ್ತಿದ್ದ ವಿದ್ಯಾರ್ಥಿಗಳು ಕೆಲವರಿದ್ದರು. ಸಿಕ್ಕಾಪಟ್ಟೆ ಓದ್ತಾಯಿದ್ದಾನೆ ಅಂತ ಕಾಣತ್ತೆ, ಮೂರು ತಿಂಗಳಿಂದ ಗಡ್ಡ ಕೂಡ ಕೆರೆದಿಲ್ಲ ಇವರೇ ಬರೋದು ಫಸ್ಟು ಅಂತೆಲ್ಲ ಮಾತಾಡಿಕೊಳ್ಳುತ್ತಿದ್ದರು. ಆದರೆ ವಿಷಯ ಏನಪ್ಪಾ ಅಂದ್ರೆ ಅವರು ಗಡ್ಡ ಬಿಡುತ್ತಿದ್ದುದೇ ಸಣ್ಣಗೆ ಸುತ್ತಿದ ಕಾಪಿ ಚೀಟಿಯನ್ನು ಗಡ್ಡದಲ್ಲಿ ತೂರಿಸಿ ಬೇಕಾದಾಗ ಕಳ್ಳತನದಿಂದ ಅತ್ಯಂತ ಜಾಣತನದಿಂದ ಕಾಪಿ ಹೊಡೆಯಲು!

ಗ ಇದೇ ಟ್ರೆಂಡ್ ಈಗಿನ ಯುವ ನಾಯಕರಲ್ಲಿಯೂ ಬೆಳೆಯುತ್ತಿದೆ. ಯಾವುದೇ ಹಳೆಯ ನಾಯಕರನ್ನು ಈ ಯುವ ನಾಯಕರು ಕಾಪಿ ಹೊಡೆಯದಿದ್ದರೂ ಗಡ್ಡ ತಾನಾಗಿಯೇ ಚಿಗಿತುಕೊಳ್ಳುತ್ತಿದೆ. ಪೊದೆಯಂಥ ಗಡ್ಡ ಬೆಳೆಸದಿದ್ದರೂ ಕುರುಚಲು ಗಡ್ಡ ಕನ್ನಡ ಚಿತ್ರರಂಗದಲ್ಲೇ ಆಗಲಿ ಬೇರೆ ಚಿತ್ರರಂಗದಲ್ಲೇ ಆಗಲಿ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ. ನುಣ್ಣಗೆ ಗಡ್ಡ ಮೀಸೆ ಬೋಳಿಸಿಕೊಂಡ ಯಾರಾದರೂ ನಾಯಕರು ಕಂಡರೆ ಹೇಳಿ. ಯುವ ನಾಯಕರಾದ ಪ್ರೇಮ್, ಕಾಮಿಡಿ ಟೈಂ ಗಣೇಶ್, ಪುನೀತ್ ರಾಜಕುಮಾರ್, ಮಯೂರ್, ವಿಜಯ ರಾಘವೇಂದ್ರ, ದರ್ಶನ್, ಆದಿತ್ಯ... ಪಟ್ಟಿ ಹಾಗೇ ಬೆಳೆಯುತ್ತಲೇ ಹೋಗುತ್ತದೆ.

ಇತ್ತೀಚೆಗೆ ಮದುವೆಯಾದ ಅಭಿಷೇಕ್ ತನ್ನ ಮದುವೆಯಲ್ಲೇ ಗಡ್ಡ ಬೋಳಿಸದಿರುವುದನ್ನು ನೋಡಿದರೆ ಗಡ್ಡ ಯಾವ ಪರಿ ಹೊಸ ಟ್ರೆಂಡನ್ನು ಹುಟ್ಟುಹಾಕಿದೆ ಎಂದು ಗೊತ್ತಾಗುತ್ತದೆ.

ಇದಕ್ಕೆ ಕಾರಣವಾದರೂ ಏನು? ಪುಟ್ಟದಾಗಿ ಗಡ್ಡ ಬಿಟ್ಟರೆ ಚೆನ್ನಾಗಿ ಕಾಣುತ್ತದೆಯಂತಾ? ಅಥವಾ ಗಡ್ಡ ಬಿಟ್ಟ ನಾಯಕರ ಚಿತ್ರಗಳೆಲ್ಲಾ ಸೂಪರ್ ಹಿಟ್ ಆಗಿವೆಯಂತಾ? ಅಥವಾ ಅದೇ ಚಿಕಿಲಕ ಚಿಕಿಲಕ ಸ್ಟೈಲೋ ಆಗಿದೆಯಾ?

ಯುವ ನಟರು ಹಾಗಿರಲಿ ಹಿರಿಯ ನಟರಾದ ವಿಷ್ಣುವರ್ಧನ್, ಅಮಿತಾಭ್, ರಜನಿಯಂಥವರು ಪರ್ಮನಂಟಾಗಿ ದಾಡಿ ಬಿಟ್ಟುಬಿಟ್ಟಿದ್ದಾರೆ, ತಮ್ಮ ಅಸಲಿ ವಯಸ್ಸು ಗೊತ್ತಾಗಬಾರದೆಂದೇ? ಒಂದಾನೊಂದು ಕಾಲದ ಶಂಕರನಾಗ್ ಬಿಟ್ಟರೆ ಅಂದಿನ ಕಾಲದಲ್ಲಿ ನಾಯಕರು ಗಡ್ಡ ಹಾಳಾಗಲಿ ಮೀಸೆಯನ್ನೂ ಬಿಡುತ್ತಿರಲಿಲ್ಲ. ದಾರದ ಎಳೆಯ ಮೀಸೆ ಮಾತ್ರ ಅಂಟಿಸಿಕೊಳ್ಳುತ್ತಿದ್ದರು. ಇಂದಿನ ಯುವ ನಾಯಕರು ಚಿಗುರು ಮೀಸೆ ಇಲ್ಲದಿದ್ದರೂ ಸರಿ ದಾಡಿ ಮಾತ್ರ ಇರಲೇಬೇಕೆಂಬ ಸಿದ್ಧಾಂತಕ್ಕೆ ಅಂಟಿಸಿಕೊಂಡ ಗಡ್ಡದಂತೆ ಅಂಟಿಕೊಂಡಿದ್ದಾರೆ.

ಅಲ್ಲ, ನುಣ್ಣಗಿನ ಗಲ್ಲದ ಎಳೆಯ ನಾಯಕಿಯರ ಗಲ್ಲಕ್ಕೆ ಗಲ್ಲ ಹಚ್ಚಿ ಡ್ಯುಯೆಟ್ ಹಾಡುವಾಗ ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು ಎಂಬ ಹಾಡನ್ನು ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆತ್ತಿಹೋಯಿತು ಎಂದು ನಾಯಕಿಯರು ಹಾಡುವಂಥ ಪ್ರಸಂಗ ಬಂದಿದೆ. ದಾಡಿ ತೆಗೆಯಲು ಇವರಿಗೇನಾಗಿದೆ ಧಾಡಿ, ಪಾಪ ಆ ನಾಯಕಿಯ ಗಲ್ಲದ ಬಗ್ಗೆಗಾದರೂ ಕಾಳಜಿ ಬೇಡ್ವೆ ಈ ನಾಯಕರಿಗೆ ಅಂತ ಚಿತ್ರನೋಡುವಾಗ ಅಜ್ಜಿಯೊಬ್ಬಳು ಗಲ್ಲಗಲ್ಲ ಬಡಿದುಕೊಂಡಿದ್ದು ಸತ್ಯವಿದ್ದರೂ ಇರಬಹುದು.

ಕಾರ್ಪೋರೇಟ್ ಸ್ಟೈಲಿನ ಚಿತ್ರ ನಿರ್ಮಾಣ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರೂ ಅನೇಕ ನಾಯಕರು ತಮ್ಮ ಗಡ್ಡದ ಸಿದ್ಧಾಂತಕ್ಕೆ ಜೋತುಬಿದ್ದಿದ್ದಾರೆ. ಗಡ್ಡದೊಂದಿಗೆ ಚಿತ್ರವಿಚಿತ್ರವಾಗಿ ಟೀಶರ್ಟ್, ಆರು ಪಾಕೆಟ್‌ಗಳ ಪ್ಯಾಂಟ್‌ಗಳನ್ನು ಧರಿಸಿ ಕಾರ್ಪೋರೇಟ್ ಚಿತ್ರಗಳ ಕಾರ್ಯಕ್ರಮಕ್ಕೂ ನಾಯಕರು ಬರುವ ಪರಿಪಾಠ ಶುರುವಾಗಿದೆ.

ಸದ್ಯಕ್ಕೆ ಈ ನಾಯಕರ ಯಶಸ್ಸಿನ ಗುಟ್ಟು ಗಡ್ಡದಲ್ಲಿ ಅಂಟಿಕೊಂಡಿದೆ. ಇದು ಹೀಗೇ ಮುಂದುವರಿದರೆ ಕಾರ್ಪೋರೇಟ್ ಚಿತ್ರನಿರ್ಮಾತೃಗಳೂ ಟೈಸೂಟನ್ನು ಬಿಸಾಕಿ, ಕುರುಚಲು ಗಡ್ಡ ಬಿಟ್ಟು, ಸಿಕ್ಸ್ ಪಾಕೆಟ್ ಪ್ಯಾಂಟ್, ಡಿಸೈನಿನ ಟೀಶರ್ಟ್ ಧರಿಸಿ ಚಿಕಿಲಕ ಚಿಕಿಲಕ ಸ್ಟೈಲೋ ಅಂತ ಬರುವ ದಿನ ದೂರವಿರಲಿಕ್ಕಿಲ್ಲ.

English summary
Knowingly or unknowingly new young heroes are growing beard these days in Kannada film industry. Is it a new style?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada