»   » ಸಿನಿಮಾ ಅವಕಾಶಗಳು ಹರಿದು ಬರದಿದ್ದರೇನಂತೆ;ಲೋಕ ದೊಡ್ಡದಾಗಿದೆ

ಸಿನಿಮಾ ಅವಕಾಶಗಳು ಹರಿದು ಬರದಿದ್ದರೇನಂತೆ;ಲೋಕ ದೊಡ್ಡದಾಗಿದೆ

Posted By: Staff
Subscribe to Filmibeat Kannada

ಸ್ಯಾಂಡಲ್‌ವುಡ್‌ನ ಸದ್ಯದ ನಂಬರ್‌ ಒನ್‌ ನಾಯಕಿ ಯಾರು?
ಪ್ರೇಮಾ, ರಕ್ಷಿತಾ, ಅನು ಪ್ರಭಾಕರ್‌, ರಾಧಿಕ... ? ಉಹ್ಞೂಂ ಯಾರೂ ಅಲ್ಲ. ಈಚೀಚೆಗೆ ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ತಾರೆಯರ ಪೈಕಿ ಯಾರನ್ನೂ ನಂಬರ್‌ ಒನ್‌ ಪಟ್ಟಕ್ಕೆ ಕೂರಿಸಲು ಸಾಧ್ಯವೇ ಇಲ್ಲ. 'ಕಂಬಾಲ ಹಳ್ಳಿ" ಚಿತ್ರದಲ್ಲಿ ಮಿಂದ ಪ್ರೇಮಾ, ಮತ್ತೆ ತಮ್ಮ ನಟನೆಯ ಮೊನಚು ಕಂಡುಕೊಳ್ಳಲು ಸುನಿಲ್‌ ಕುಮಾರ್‌ ದೇಸಾಯಿ ನಿರ್ದೇಶನದ 'ಮರ್ಮ" ಬಗ್ಗೆ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಅನು ಪ್ರಭಾಕರ್‌ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಇದ್ದಿದ್ದರಲ್ಲಿ ಬಿಂದಾಸ್‌ ರಾಧಿಕ ಹಸನು ಭವಿತವ್ಯ ಕಂಡುಕೊಳ್ಳುವಲ್ಲಿ ದಾಪುಗಾಲಿಟ್ಟಿದ್ದಾರೆ. ಇನ್ನು ರಕ್ಷಿತ ವಿಮಾನ ಯಾನ ಜೋರು.

ಈ ನಡುವೆ ಕಳೆದು ಹೋದವರಾರು? ತಾಯಾದ ಶೃತಿ, ಸದಾ ಪಾದರಸದಂತಿದ್ದರೂ ಸಿನಿಮಾದಲ್ಲಿ ಅವಕಾಶ ಗಿಟ್ಟದ ಭಾವನ ಹಾಗೂ ಸದ್ಯಕ್ಕೆ ಕಲಾತ್ಮಕ ಚಿತ್ರಗಳ ಆಫರ್ರೂ ಇಲ್ಲದ ತಾರಾ. ಈ ಪೈಕಿ ಭಾವನ ಬಿಸಿಯಾಗಿದ್ದರೂ ಸಿನಿಮಾದಿಂದ ಯಾಕೆ ದೂರಾಗಿದ್ದಾರೆ?

ಪ್ರಶ್ನೆ ಕೇಳಿದರೆ ಭಾವನ ಸುಮ್ಮನೆ ತುಂಟ ನಗೆ ನಗುತ್ತಾರೆ. ಇನ್ನೂ ಕೆಣಕಿದರೆ ಆಫರ್‌ಗಳು ಚೆನ್ನಾಗಿರೋಲ್ಲ ಅಂತಾರೆ. ಹಾಗಂತ ಭಾವನ ಸುಮ್ಮನೆ ಕೂತಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಕುಣಿಯುತ್ತಾರೆ. 'ನಿನಗಾಗಿ" ಚಿತ್ರದ ಒಂದೇ ಒಂದು ನೃತ್ಯದಲ್ಲೇ ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ. ಚೆನ್ನೈನ ಪ್ರಮುಖ ಬೀದಿಗಳಲ್ಲಿ ಒಂದು ಸುತ್ತು ಬಂದರೆ, ಭಾವನಾ ಹೋರ್ಡಿಂಗ್‌ಗಳೇ ನೇತಾಡುತ್ತಿರುತ್ತವೆ. ಕಾಲೇಜು ಕನ್ಯೆಯಾಗಿ, ಮಗುವಿನ ತಾಯಾಗಿ, ಭಾರತೀಯ ನಾರಿಯಾಗಿ... ಹೀಗೆ ಹೋರ್ಡಿಂಗ್‌ ಹುಡುಗಿಯಾಗಿ ಭಾವನಾ ಮಿಂಚುತ್ತಿರುವುದು ದಿಟ.

ಅವರೇ ಹೇಳುವಂತೆ ತಾವು ಜೀವನದ ಪ್ರತಿಯಾಂದು ನಿಮಿಷವನ್ನೂ ಎಂಜಾಯ್‌ ಮಾಡುತ್ತಿದ್ದಾರೆ. 'ಹಲೋ" ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಸಾಕಷ್ಟು ಪ್ರವಾಸ ಮಾಡುವ ಅವಕಾಶವೂ ಸಿಕ್ಕಿದೆ. ಮೇಲಾಗಿ ಅಪ್ಪ- ಅಮ್ಮನ ಜೊತೆ ಕೂತು ಹರಟುವ ಯೋಗವಿದೆ. 'ದೇವದಾಸ್‌" ಹಾಗೂ 'ಬೆಂಡಿಟ್‌ ಲೈಕ್‌ ಬೆಕ್ಹಾಮ್‌" ಚಿತ್ರಗಳನ್ನು ನೋಡಿ ಬರುವಷ್ಟು ಪುರುಸೊತ್ತಿದೆ. ನನ್ನನ್ನು ನಾನು ಸದಾ ಬ್ಯುಸಿಯಾಗಿಟ್ಟುಕೊಂಡಿರುವುದೇ ನನ್ನ ಆತ್ಮವಿಶ್ವಾಸದ ಗುಟ್ಟು ಎಂದು ಭಾವನಾ ತಮ್ಮ ಒಂದು ಹಂತದ ಮಾತು ಮುಗಿಸುವಷ್ಟರಲ್ಲೇ ಯಾವುದೋ ಜಾಹೀರಾತಿನ ಕರೆ ಒದ್ದುಕೊಂಡು ಬರುತ್ತದೆ. ಭಾವನಾ ಕರೆಗೆ ಓಗೊಡುತ್ತಾ ಮತ್ತೆ ನಗುತ್ತಾರೆ....

ಅಂದಹಾಗೆ, ಸೆಪ್ಟೆಂಬರ್‌ನಲ್ಲಿ ಭಾವನಾ ಅಭಿನಯದ 'ರಾಂಗ್‌ ನಂಬರ್‌" ಚಿತ್ರ ತೆರೆ ಕಾಣಲಿದೆ.

English summary
Bhavana still a cool gal !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada