»   » ಛೆ, ‘ಮುಕ್ತ’ಕೂ ್ಕ ಮುಕಾ ್ತಯವೇ?

ಛೆ, ‘ಮುಕ್ತ’ಕೂ ್ಕ ಮುಕಾ ್ತಯವೇ?

Subscribe to Filmibeat Kannada
ಗಂಡ ಮನೆಗೆ ಬಂದದ್ದೇ ತಡ, ಆ ಗೃಹಿಣಿ ನೋವಿನಿಂದ ಹೇಳಿದಳು : ತುಂಬ ಸಂಕಟ ಆಗ್ತಾ ಇದೇರೀ. ಏನನ್ನೋ ಕಳೆದುಕೊಂಡಂಥ ಭಾವ. ತೀರಾ ಆಪ್ತವಾಗಿದ್ದ ಯಾರೋ ಇಲ್ಲಿಂದ ಎದ್ದು ಹೋದಾಗ ಆಗುತ್ತಲ್ಲ-ಅಂಥ ಖಾಲಿತನ. ನಿಜಕ್ಕೂ ನನ್ನನ್ನ ನಾನು ಕಂಟ್ರೋಲ್‌ ಮಾಡಿಕೊಳ್ಳಲು ಆಗ್ತಾ ಇಲ್ಲ. ಯಾಕೆ ಗೊತ್ತಾ? ಇವತ್ತಿಗೆ .... ಮುಕ್ತ ಮುಗಿದು ಹೋಯ್ತುರೀ....! ಹೆಂಡತಿಯ ಮಾತು ಮುಗಿದದ್ದೆ ತಡ -ಗಂಡ ತೀರಾ ಅವಸರದಿಂದ ಕೇಳಿದ: ಛೆ, ಮುಗಿದೇ ಹೋಯ್ತಾ? ನಾಳೆಯಿಂದ ಏನ್ಮಾಡೋದೆ? ಅದಿರ್ಲಿ, ಗೌರಿಗೆ ಸ್ವಾಮೀಜಿ ಜತೆ ಮದುವೆಯಾಯ್ತಾ?

ಅವನು ಗೆಳೆಯನೊಂದಿಗೆ ದೂರು ಹೇಳುತ್ತಿದ್ದ : ‘ಮೊದಲು ಜುಲೈಗೆ ಮುಗಿಸ್ತೀನಿ ಅಂದಿದ್ರು. ಆಮೇಲೆ ಆಗಸ್ಟ್‌ ಅಂದ್ರು. ಈಗ ನೋಡಿದ್ರೆ ಸೆಪ್ಟೆಂಬರಿನಲ್ಲೂ ಬರ್ತಾನೇ ಇತ್ತು. ಬಹುಶಃ ಅಕ್ಟೋಬರ್‌ಗೂ ಉಳೀತಾನೇನೋ ಪುಣ್ಯಾತ್ಮ! ಎಲ್ಲಾದ್ರೂ ಸಿಕ್ಕಿದ್ರೆ ಆ ಸೀತಾರಾಂ ಜತೆ ಜಗಳ ಮಾಡ್ಬೇಕು ಅಂದ್ಕೊಂಡಿದ್ದೆ. ಆದ್ರೆ ಮೊನ್ನೆ ಮುಕ್ತ ಮುಗಿದೇ ಹೋಯ್ತು ಕಣೋ... ಹೇಳು, ಈಗ ಯಾರೊಂದಿಗೆ ಜಗಳವಾಡಲಿ? ನಂಗೆ ಒಂಥರಾ ಸಂಕಟ ಆಗ್ತಿದೆ....

ಪತ್ರಕರ್ತರೊಬ್ಬರ ಪಿಸುಮಾತು : ‘ಮುಕ್ತ’ದ ಎಲ್ಲ ಕಂತುಗಳೂ ಸೊಗಸಾಗಿದ್ದವು ಎಂದು ಹೇಳಿದರೆ ತಪ್ಪಾಗುತ್ತದೆ. ಅದೆಷ್ಟೋ ಸಂದರ್ಭದಲ್ಲಿ ಮುಕ್ತದಲ್ಲಿ ಸಹ ಕತೆಯನ್ನು ಎಳೆಯಲಾಗುತ್ತಿತ್ತು. ಆದರೆ ಅಂಥ ಸಮಯದಲ್ಲಿ ಸೀತಾರಾಂ ಕತೆಗೆ ಅನಿರೀಕ್ಷಿತ ತಿರುವು ಕೊಡುತ್ತಿದ್ದರು. ಒಂದೊಂದು ಪಾತ್ರವನ್ನೂ ಅವರು ದುಡಿಸಿಕೊಳ್ತಾ ಇದ್ದರಲ್ಲ-ಅದನ್ನು ಕಂಡಾಗಲೆಲ್ಲ ಹ್ಯಾಟ್ಸಾಫ್‌ ಸೀತಾರಾಮ್‌ಜೀ ಅನ್ನುವ ಮನಸ್ಸಾಗ್ತಾ ಇತ್ತು. ಈಗ, ಇನ್ನೂ ಮುಗೀಲಿಲ್ವಾ ಅನ್ನುವ ಮೊದಲೇ ಮುಗಿದಿದೆ. ಹ್ಯಾಟ್ಸಾಫ್‌ ಸೀತಾರಾಂ ಅಂತ ಖುಷಿಯಿಂದ ಚೀರಬೇಕು ಅನ್ನಿಸಿದೆ....

***

ಮುಕ್ತದ ಸಾರಥಿ ಸೀತಾರಾಮ್‌ ಸಾಹೇಬರೆ,

ಮೊದಲೇ ಹೇಳಿದಂತೆ ಇದೆಲ್ಲ ಅವರಿವರ ಮಾತು. ಇದು ಹೃದಯದ ಮಾತು. ಪ್ರೀತಿಯ ಮಾತು. ಯಾವುದೋ ಒಂದು ಪಾತ್ರ ನೋಡು ನೋಡುತ್ತಿದ್ದಂತೆಯೇ ನಮ್ಮ ನಗುವಾಗಿ, ನಮ್ಮ ಪಾಡಾಗಿ, ನಲಿವಾಗಿ, ಒಲವಾಗಿ, ಬದುಕಾಗಿ, ಕಡೆಗೆ ಆ ಪಾತ್ರವೇ ನಾವಾಗಿಬಿಟ್ಟಾಗ ಸಂತೋಷವೂ, ಸಂಭ್ರಮವೂ, ಉದ್ಗಾರ ಆಗಿ ಕೈ ಜಗ್ಗುತ್ತಲ್ಲ-ಅಂಥ ಮಾತು! ಇದು ನಮ್ಮದೇ ಬದುಕು ಅನಿಸಿದ್ದರಿಂದಲೇ ಮೊನ್ನೆ ‘ಮುಕ್ತ ’ ಮುಗಿದಾಗ ಅದೆಷ್ಟೋ ಸಾವಿರ ಜನ-ನಿಂತಲ್ಲೇ ಕಣ್ತುಂಬಿಕೊಂಡದ್ದು ಅಂದ್ರೆ ನೀವು ಒಪ್ತೀರ ತಾನೆ?

ಇಲ್ಲ, ಎರಡೂವರೆ ವರ್ಷದ ಹಿಂದೆ ನೀವು ‘ಮುಕ್ತ’ ಆರಂಭಿಸಿದಾಗ-ಮುಂದೊಂದು ದಿನ ಈ ಧಾರಾವಾಹಿ ನಮ್ಮ ಬದುಕೇ ಆಗಿಬಿಡಬಹುದು ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇದೂ ಒಂದು ಮೆಗಾ ಸೀರಿಯಲ್‌ ಆಗಬಹುದು. ಅಲ್ಲಿ ಮಾಳವಿಕಾ-ಸೀತಾರಾಂ ಇಬ್ರೂ ಮಿಂಚಬಹುದು. ಅವರ ಜತೆಗೆ ಇನ್ನೂ ಐದಾರು ಪಾತ್ರಗಳು ಎಲ್ಲರ ಮನ ಗೆಲ್ಲಬಹುದು... ಸೀರಿಯಲ್‌ ಕುರಿತು ನಮಗಿದ್ದ ನಿರೀಕ್ಷೆ ಅಷ್ಟೆ.

ಆದ್ರೆ ದಿನ ಕಳೆದ ಹಾಗೆಲ್ಲ - ಮುಕ್ತದ ಮನೆಯಂಗಳ ವಿಶಾಲವಾಗುತ್ತಾ ಹೋಯ್ತು. ಅಲ್ಲಿ ತಂತ್ರಕ್ಕೆ ಛಾಬ್ರಿಯಾ ಇದ್ದ. ಕುತಂತ್ರಕ್ಕೆ ರಾಣೆಯಿದ್ದ. ಮೌನಕ್ಕೆ ಗೌರಿ ಇದ್ದಳು. ಸ್ವಾಮೀಜಿ ಇದ್ದರು! ಗಾಂಭೀರ್ಯಕ್ಕೆ ದೇಸಾಯಿ, ಧೈರ್ಯಕ್ಕೆ ಮಾಧವಿ ಪಟೇಲ್‌, ಸಲಹೆಗೆ ಮೈತ್ರೇಯಿ, ಚೆಲುವಿಗೆ ಅರುಂಧತಿ, ಸಿಡಿಮಿಡಿಗೆ ಮನಮೋಹನ್‌, ಚಟಪಟ ಮಾತಿಗೆ ಚಿನ್ಮಯಿ, ವಾದಕ್ಕೆ ನಂಜುಂಡ, ಸಹನೆಗೆ ವಿಶ್ವೇಶ್ವರ ಚೌಧುರಿಯವರು ಮತ್ತು ನ್ಯಾಯಕ್ಕೆ ಒನ್‌ ಅಂಡ್‌ ದ ಓನ್ಲಿ ಸಿಎಸ್‌ಪಿ!

ಈ ಎಲ್ಲರ ಪಾತ್ರವನ್ನೂ ತಮ್ಮ ತಮ್ಮಲ್ಲೇ ಹೋಲಿಸಿಕೊಂಡು ಖುಷಿ ಪಡುತ್ತಿದ್ದ ಜನ, ಅದೊಂದು ದಿನ ನ್ಯಾಯಮೂರ್ತಿಯ ಗೆಟಪ್ಪಿನಲ್ಲಿ ಬೆಳಗೆರೆ ಮುಕ್ತದ ನಡುಮನೆಯಲ್ಲಿ ನಿಂತಾಗ ಉದ್ಗರಿಸಿದ್ದರು -ರವಿ ಬಂದಾನಲ್ಲ, ಇನ್ನು ಭಯ ಇಲ್ಲ ಬಿಡ್ರೀ. ಅನ್ಯಾಯ ನಡೀಲಿಕ್ಕೆ ಅವ್ನು ಬಿಡಲ್ಲ. ಎಲ್ಲ ಕೇಡಿಗಳಿಗೂ ರವಿ ಪಾಠ ಕಲಿಸ್ತಾನೆ...

ಮುಕ್ತ ಅನ್ನೋದು ಕನ್ನಡಿಗರ ಪಾಲಿಗೆ ಬರೀ ಒಂದು ಸೀರಿಯಲ್‌ ಅಲ್ಲ. ಅದು ಒಂದು ಕೋಣೆಯಲ್ಲಿ ಸೀತಾರಾಂ ಧ್ಯಾನಸ್ಥರಾಗಿ ಕೂತು ಬರೆದ ಕಲ್ಪಿತ ಕಥೆಯಲ್ಲ. ಆ ಪಾತ್ರಗಳ ನೋವು ಕೇವಲ ತೆರೆಯ ಮೇಲಿನದು ಮಾತ್ರವೇ ಅಲ್ಲ, ಮನೆ ಮನೆಯ ಕಥೆಯಾಗಿತ್ತು. ಎಲ್ಲರ ಮನದ ವ್ಯಥೆಯಾಗಿತ್ತು. ಅದೊಂದೇ ಕಾರಣಕ್ಕೆ ಹಸುಕಂದನ ನಗುವಿನಂತೆ, ಆಟದಂತೆ, ಅಳುವಿನಂತೆ ನಮಗೆಲ್ಲ ಇಷ್ಟವಾಗ್ತಾ ಇತ್ತು ಅನ್ನಲು-ಪ್ರಿಯ ಸೀತಾರಾಂ ಸರ್‌, ಹೇಳಿ, ಇನ್ನೂ ಸಾಕ್ಷಿ ಬೇಕಾ?

ಖಾಕಿ, ಕಾವಿ ಮತ್ತು ಖಾದಿ ಈ ಮೂರೂ ವರ್ಗದ ಜನರ ಬದುಕಿನ ಒಳ ಹೊರಗನ್ನು ಇಷ್ಟಿಷ್ಟೇ ಅನಾವರಣಗೊಳಿಸಿದ್ದು ಮುಕ್ತದ ಅಗ್ಗಳಿಕೆ. ಅಷ್ಟೇನಾ ಅನ್ನಬೇಡಿ. ಅಲ್ಲಿ ಸಿಇಟಿ ಸಮಸ್ಯೆ, ಬೆಳೆ ನಷ್ಟದಿಂದ ನಲುಗಿದ ರೈತರ ಸಂಕಟ, ನಕ್ಸಲರ ಕೊನೆಯಿರದ ಯಾತನೆ, ರಾಜಕೀಯದ ಪಾಖಂಡಿಗಳ ವರ್ತನೆ ಎಲ್ಲವೂ ಈರುಳ್ಳಿಯ ಪಕಳೆಯ ಥರಾ ಬಿಚ್ಚಿಕೊಳ್ತಾ ಹೋಯ್ತು. ಸೀರಿಯಲ್‌ ಶುರುವಾಗುವ ಮೊದಲೇ ಈ ದಿನ ಏನಾಗಬಹುದು ಎಂಬ ಬಗ್ಗೆ ಮನೆ ಮಂದಿ ತಮ್ಮದೇ ತರ್ಕ ಮಂಡಿಸುತ್ತಿದ್ದರು.

ಗಂಡನ ಜತೆ ಫ್ರೀಯಾಗಿ ಸೀರಿಯಲ್‌ ನೋಡಬೇಕೆಂಬ ಹಿರಿಯಾಸೆಯಿಂದ ಅದೆಷ್ಟೋ ಗೃಹಿಣಿಯರು ರಾತ್ರಿ ಹನ್ನೊಂದರ ಮುಕ್ತದ ಸೆಕೆಂಡ್‌ ಶೋಗೆ ಕಾದು ಕೂತಿರ್ತಿದ್ರು! ಇದನ್ನೆಲ್ಲ ನೋಡಿದ ನಂತರ ಕೇಳ್ತಾ ಇದೀನಿ-ಸೀತಾರಾಂ ಸರ್‌, ಸೀರಿಯಲ್‌ ಶುರು ಮಾಡ್ತಿದ್ದ ಹಾಗೇ-ವೀಕ್ಷಕರನ್ನೆಲ್ಲ ಹಿಪ್ನಡೈಸ್‌ ಮಾಡುವ ಕೆಲಸವನ್ನು ನೀವು ಮಾಡ್ತಿದ್ರಂತೆ! ಹೌದಾ?

***

ಅನುಮಾನವೇ ಬೇಡ. ಮುಕ್ತ ಬರೀ ಚೆನ್ನಾಗಿರಲಿಲ್ಲ, ತುಂಬಾ ಚೆನ್ನಾಗಿತ್ತು. ಚತುರ ಶಿಲ್ಪಿಯ ಕೈಯಲ್ಲಿ ಕಲ್ಲೊಂದು ದಿವ್ಯ-ಭವ್ಯ ಶಿಲ್ಪವಾಗಿ ಮಾರ್ಪಡುತ್ತಲ್ಲ-ಹಾಗೆ, ನಿಮ್ಮ ನಿರ್ದೇಶನದಲ್ಲಿ ಅದೆಷ್ಟೋ ಮಂದಿ ಸ್ಟಾರ್‌ಗಳಾದ್ರು. ಈ ಎರಡೂವರೆ ವರ್ಷದಲ್ಲಿ ಅದೆಷ್ಟೋ ನೂರು ಜನ, ಅವರ ಸಂಸಾರದ ಮಂದಿ ನೆಮ್ಮದಿಯ ಬದುಕು ನಡೆಸಿದ್ರು. ನೀವಂತೂ ಇಡೀ ಕರ್ನಾಟಕದಲ್ಲೇ ವರ್ಲ್ಡ್‌ ಫೇಮಸ್‌ ಆಗಿಬಿಟ್ರಿ. ಅದೆಲ್ಲ ಸರಿ ಸಾರ್‌. ಆದ್ರೆ....

ಹೇಳಿ ಸರ್‌, ನಿಮಗೂ ಎಷ್ಟೋ ಸಲ ಹಾಗನ್ನಿಸಲಿಲ್ವ? ನೀವು ಸಿಎಸ್‌ಪಿ ಆಗಿ ಪದೇಪದೆ ಗೆಲುವಿನ ಸಿಕ್ಸರ್‌ ಹೊಡೀತಿದ್ದಾಗ- ಒರಿಜಿನಲ್‌ ಲೈಫ್‌ನಲ್ಲೂ ಒಂದು ಕಾಲದಲ್ಲಿ ಲಾಯರ್‌ ಆಗಿದ್ರು ಸೀತಾರಾಮ್‌. ಅವರು ಅಲ್ಲಿ ಗೆಲ್ಲಲಿಲ್ಲವೇನೋ, ಅದೇ ಕಾರಣಕ್ಕೆ ಸೀರಿಯಲ್‌ಗಳಲ್ಲಿ ಸಂಭ್ರಮ ಪಡ್ತಾ ಇದಾರೆ ಅನ್ನೋ ಮಾತು ನಿಮ್ಮ ಕಿವಿಗೂ ಬೀಳಲಿಲ್ವ? ಇದರ ಮಧ್ಯೆಯೇ ಅರರೆ, ಯಾವುದೊ ರಾತ್ರಿಯ ಸರಹೊತ್ತಿನಲ್ಲಿ ಹುಟ್ಟಿಕೊಂಡ ಎರಡೇ ಸಾಲಿನ ಕಥೆ ಇಷ್ಟೆಲ್ಲಾ ಬೆಳೀತಾ ? ಇಷ್ಟೆಲ್ಲ ಸಾಧನೇನ ನಾನು ಮಾಡಿದ್ನಾ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡಲಿಲ್ವ? ಅದೇ ಸಂದರ್ಭದಲ್ಲಿ ಮುಕ್ತ ಮುಗೀತಾನೇ ಇಲ್ವಲ್ರೀ ಎಂಬ ನೆರೆಹೊರೆಯವರ ಮಾತು ನಿಮ್ಮನ್ನು ಡಿಸ್ಟರ್ಬ್‌ ಮಾಡಲಿಲ್ವ?

ಹೀಗಂತೀನಿ ಅಂತ ಬೇಜಾರು ಮಾಡ್ಕೋಬೇಡಿ. ಅದೆಷ್ಟೋ ಬಾರಿ ಮುಕ್ತ ಬೋರ್‌ ಅನ್ನಿಸ್ತಿತ್ತು. ಮುಕ್ತದಲ್ಲಿ ನೀವು ಸಮಸ್ಯೆಗಳ ಕುರಿತು ಮಾತಾಡ್ತಿದ್ರಿ ಸರಿ. ಆದರೆ, ಒಂದು ಖಡಕ್‌ ಪರಿಹಾರ ನಿಮಗೂ ಗೊತ್ತಿರಲಿಲ್ಲ! ಕೋರ್ಟ್‌ ದೃಶ್ಯಗಳಲ್ಲಂತೂ-ಅರರೆ, ಒರಿಜಿನಲ್‌ ಬದುಕಲ್ಲಿ ಹೀಗೆಲ್ಲ ವಾದಿಸಲು; ಲಾ ಪಾಯಿಂಟ್‌ ಹಾಕಲು, ಬೇಂದ್ರೆ ಪದ್ಯ ಓದಲು ಸಾಧ್ಯವಾ ಅನ್ನಿಸ್ತಾ ಇತ್ತು. ಎದುರಾಳಿ ವಕೀಲರನ್ನು ನಿಜಕ್ಕೂ ಸಿಎಸ್‌ಪಿ ಥರ ಚಿತ್‌ ಮಾಡಲು ಆಗುತ್ತಾ? ರಾಣೆಯಂಥ ಪಟಿಂಗರ ವಿರುದ್ಧ ಗೆಲ್ಲಲು ನಿಜಕ್ಕೂ ಆಗುತ್ತಾ ಅನ್ನಿಸ್ತಾ ಇತ್ತು. ತುಂಬಾ ಸಂದರ್ಭದಲ್ಲಿ ಕೋರ್ಟ್‌ ಸೀನು ಸಖತ್‌ ನಾಟಕೀಯ ಅನ್ನಿಸಿಬಿಡ್ತು!

ಸೀರಿಯಲ್‌ ಅಲ್ವೇನ್ರಿ ಅದು? ಅದನ್ನೆಲ್ಲ ಅಡ್ಜೆಸ್ಟ್‌ ಮಾಡ್ಕೋಬೇಕು ಅಂತೀರೇನೋ ನೀವು. ಆದ್ರೆ ಮುಕ್ತ ಸೀರಿಯಲ್‌ ಅಂತ ನಾವು ತಿಳಿದೇ ಇರಲಿಲ್ಲ. ಅದು ನಮ್ಮದೇ ಮನೆಯ, ನಾವು ವಿಪರೀತ ಮೆಚ್ಚಿಕೊಂಡ ಮನಸ್ಸಿನ ಕಥೆ ಅಂದುಕೊಂಡಿದ್ದೆವಲ್ಲ-ಅದೇ ಕಾರಣಕ್ಕೆ ಆಕ್ಟಿಂಗು ಮತು ಓವರ್‌ ಆಕ್ಟಿಂಗು ಶುರುವಾದಾಗಲೆಲ್ಲ ಬೇಜಾರಾಗ್ತಾ ಇತ್ತು. ಆ ಕ್ಷಣಕ್ಕೆ ನಿಮ್ಮ ಮೇಲೆ ಸಿಟ್ಟು ಬರ್ತಿತ್ತು. ಜಗಳಾಡಬೇಕು ಅನ್ನಿಸ್ತಿತ್ತು.... ಆದರೆ- ಅರೆ, ಮುಗೀಲಿಲ್ವಲ್ಲ ಮುಕ್ತ ಎಂದು ನಾವು ಉದ್ಗರಿಸುವ ಮೊದಲೇ ಮುಕ್ತ ಮುಗಿದು ಹೋಗಿದೆ.

ಮದುವೆ ಮುರಿಯುವ ಲಾಯರ್‌ಗಳ ಮಧ್ಯೆಯೇ ಕೊನೆಗೆ ನೀವು ಸನ್ಯಾಸಿಗೂ ಸಂಸಾರದ ದೀಕ್ಷೆ ಕೊಟ್ಟು, ಎಲ್ಲರನ್ನೂ ಖುಷಿ ಪಡಿಸಿದ್ದೀರಿ. ಎಲ್ಲರ ಪರವಾಗಿ ಹೇಳ್ತಿದೀನಿ-ಸದ್ಯಕ್ಕೆ ಧಾರಾವಾಹಿಯಿಂದ ‘ಮುಕ್ತ ’ವಾದ ಖುಷಿಯಲ್ಲಿದ್ದೀರಲ್ಲ-ನಿಮಗೆ ಶುಭವಾಗಲಿ. ನಮಸ್ಕಾರ.


ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada