»   » ನಾಗತಿಹಳ್ಳಿಯ ಪ್ಯಾರಿಸ್‌ ಪ್ರಣಯದ ಸುತ್ತ...

ನಾಗತಿಹಳ್ಳಿಯ ಪ್ಯಾರಿಸ್‌ ಪ್ರಣಯದ ಸುತ್ತ...

Posted By: Staff
Subscribe to Filmibeat Kannada

ನಾಗತಿಹಳ್ಳಿ ಬಲು ಖಿಲಾಡಿ. ಸದ್ದೇ ಇಲ್ಲದೆ 'ಪ್ಯಾರಿಸ್‌ ಪ್ರಣಯ" ಶುರುವಿಟ್ಟುಕೊಂಡಿದ್ದಾರೆ. ಡೆಟ್ರಾಯಿಟ್‌ನಲ್ಲಿ ನಡೆದ 'ಅಕ್ಕ" ವಿಶ್ವ ಕನ್ನಡ ಸಮ್ಮೇಳನದಲ್ಲೇ ಕೆಮೆರಾ ಕಣ್ಣು ತೆರೆದು, ಅದೇನೇನೋ ತುಂಬಿಸಿಕೊಂಡ ನಾಗತಿ, ಈಗ ಫ್ರಾನ್ಸ್‌, ಪೋರ್ಚುಗಲ್‌, ಸ್ಪೇನ್‌, ಇಟಲಿ ಹಾಗೂ ಆಸ್ಟ್ರಿಯಾ ದೇಶಗಳಲ್ಲಿ 'ಪ್ರಣಯ" ಮುಂದುವರೆಸಿದ್ದಾರೆ.

ಈ ಪ್ರಣಯ ಯಾರ ಯಾರ ನಡುವೆ ಅನ್ನೋದನ್ನ ಮಾತ್ರ ಸದ್ಯಕ್ಕೆ ಹೇಳಲು ಅವರು ತಯಾರಿಲ್ಲ. ನಾಯಕ/ನಾಯಕಿಗೆ ಸಾಕಷ್ಟು ತಲಾಷು ನಡೆಸಿದ ನಂತರ ಅವರಿಗೆ ಸಿಕ್ಕಿರುವುದು ಕನ್ನಡಿಗರೇ ಅನ್ನುತ್ತಿದೆ ಅವರ ಆಪ್ತ ವಲಯ. ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ಬರೋವರೆಗೆ ಪ್ಯಾರಿಸ್‌ ಪ್ರಣಯದ ತಾರಾಬಳಗವನ್ನು ಸೀಕ್ರೇಟ್‌ ಆಗಿಡೋದು ನಾಗತಿ ಬಯಕೆ.

ಏನೆಲ್ಲಾ ಭರದಲ್ಲಿ ಸಂದರ್ಶನ ನಡೆಸಿದರೂ, ಈ ಬಾರಿ ನಾಗತಿಗೆ ಅನಿವಾಸಿ ಕನ್ನಡ ಮುಖಗಳು ಹಿಡಿಸಿಲ್ಲ. ಬೆಂಗಳೂರಿನ ಮಾಡೆಲ್‌ ರಘು ಮುಖರ್ಜಿ 'ಪ್ರಣಯ"ದ ನಾಯಕ. ಧಾರಾನಗರಿಯ ವಿಮಾನ ಹಾರಾಟ ಕೇಂದ್ರದ ಅಧಿಕಾರಿ ಮಗಳು ಮಿನಾಲ್‌ ಪಟೇಲ್‌ ನಾಯಕಿ. ಅಂದಹಾಗೆ, ರಘುಗೆ 2002ನೇ ಇಸವಿಯ ಗ್ರಾಸಂ ಸೂಪರ್‌ ಮಾಡೆಲ್‌ ಕಿರೀಟವೂ ದಕ್ಕಿದೆ.

ಈ ಬಾರಿ ನಾಗತಿ ಸ್ಕಿೃೕನ್‌ ಟೆಸ್ಟ್‌ ಮಾಡಿರುವ ಪರಿಯೂ ಅನನ್ಯವಾಗಿದೆ. ಮೊದಲು ಈ ಹೊಸ ಮುಖಗಳ ಅಭಿನಯದ ಒಂದು ತುಣುಕನ್ನು ಚಿತ್ರೀಕರಿಸಿಕೊಂಡು, ಅದನ್ನು ತೆರೆ ಮೇಲೆ ನೋಡಿದ ನಂತರ ಇವರೇ ತಮ್ಮ ನಾಯಕ/ನಾಯಕಿ ಅಂತ ನಾಗತಿ ತೀರ್ಮಾನಿಸಿದ್ದು.

ಪ್ಯಾರಿಸ್‌ ಪ್ರಣಯದ ಸಂಗೀತ ಮತ್ತು ಹಾಡುಗಳ ಬಗ್ಗೆ ನಾಗಿತಿಗೆ ಅಪಾರ ಪ್ರೀತಿ. ಜಿಎಸ್ಸೆಸ್‌ ವಿರಚಿತ 'ಎದೆ ತುಂಬಿ ಹಾಡಿದೆನು" ಭಾವಗೀತೆಯನ್ನು ಮೈಸೂರು ಅನಂತ ಸ್ವಾಮಿಯವರ ರಾಗದಲ್ಲಿ ಯಥಾವತ್ತಾಗಿ ಅಳವಡಿಸಲಾಗಿದೆ. ಇದಕ್ಕೆ ಹೊಸ ರಾಗ ಹಾಕಿಸಲು ನಾಗತಿಗೆ ಇಷ್ಟವಿದ್ದರೂ, ಅದಕ್ಕೆ ಜಿಎಸ್ಸೆಸ್‌ ಒಲ್ಲೆ ಅಂದರಂತೆ. ಬೆಂಗಳೂರಿನ ಯುವ ಸಂಗೀತ ಪ್ರತಿಭೆ ಪ್ರಯೋಗ್‌ ಎಂಬಾತನನ್ನು ಪ್ಯಾರಿಸ್‌ ಪ್ರಣಯದ ಮೂಲಕ ಪರಿಚಯಿಸಿದ್ದಾರೆ.

ದೇವದಾಸ್‌ ಚಿತ್ರದ 'ಬೇರಿ ಪಿಯಾ ಬಡಾ ಬೇದರ್ದಿ" ಹಾಡಿನ ಮೂಲಕ ಮನೆಮಾತಾಗಿರುವ ಶ್ರೇಯಾ ಘೋಷಲ್‌ ಹಾಗೂ ಪಂಜಾಬಿ ಹಾಡುಗಾರ್ತಿ ಜಸ್ವಿಂದರ್‌ ನರೂಲ ಕಂಠದಲ್ಲಿ ಕನ್ನಡ ಹಾಡುಗಳನ್ನು ಹೇಳಿಸಿರುವ ಪ್ರಯೋಗ್‌ ಪ್ರಯೋಗದ ಬಗ್ಗೆ ನಾಗತಿಗೆ ಅಪಾರ ಭರವಸೆಯಿದೆ.

ಪ್ರಣಯದ ಬಗ್ಗೆ ಸಾಕಷ್ಟು ಸರಕುಂಟು. ಆದರೆ ಈಗಲೇ ಎಲ್ಲವನ್ನೂ ಬಹಿರಂಗ ಪಡಿಸಲು ನಾಗತಿ ಒಲ್ಲೆ ಎನ್ನುತ್ತಿದ್ದಾರೆ. ಡೆಟ್ರಾಯಿಟ್‌ ಸಮ್ಮೇಳನದಲ್ಲೂ ಶೂಟಿಂಗ್‌ ಮಾಡಿಕೊಂಡು ಬಂದು, ಅಲ್ಲಿನ ಜನರ ವರ್ತನೆಯನ್ನು ಎಕ್ಕಾ ಮಕ್ಕಾ ಜರೆದು, 'ಹಾಯ್‌ ಬೆಂಗಳೂರ್‌"ನಲ್ಲಿ 'ಪ್ರೀತಿಯ ಹುಡುಗಿ"ಗೆ ಪತ್ರವನ್ನೂ ಬರೆದಿರುವ ನಾಗತಿ ಬಹುಮುಖ ಪ್ರತಿಭೆಗೆ ನೀವು ಯಾವ ವ್ಯಾಖ್ಯಾನ ಕೊಡುತ್ತೀರಿ? ವಾರ್ತಾ ಸಂಚಯ

English summary
Nagathihalli Chandrashekhar is busy shooting Paris Pranaya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada