»   » ಶಿವಾಜಿ ನೆನಪಲ್ಲಿ ಜಯಂತಿ ಕೆನ್ನೆ ರಂಗು

ಶಿವಾಜಿ ನೆನಪಲ್ಲಿ ಜಯಂತಿ ಕೆನ್ನೆ ರಂಗು

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಹಿರಿಯ ನಟಿ ಜಯಂತಿ ಕೆನ್ನೆ ಈ ವಯಸ್ಸಲ್ಲೂ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಅವರ ಮುಖದಲ್ಲಿ ನೆನಪುಗಳ ಮಂದಹಾಸ. ನಟ ಶಿವಾಜಿ ಗಣೇಶನ್‌ ತುಂಟ ನಗೆಯ ಬಗ್ಗೆ ಮಾತಾಡುತ್ತಾ ಜಯಂತಿ ರಂಗಾದರು. ಶಿವಾಜಿ ನಡೆಯುತ್ತಿದ್ದ ಸ್ಟೈಲ್‌, ಅವರ ಕಣ್ಣ ತುಂಟ ನೋಟ ನಮ್ಮೆದೆಗೆ ಬಾಣ ಚುಚ್ಚುತ್ತಿತ್ತು ಅಂತ ಜಯಂತಿ ನೆನಪಿನಂಗಳಕ್ಕೆ ಕಿತ್ತಳೆ ಬಣ್ಣ ಹಚ್ಚಿದರು.

ಇದು ನಡೆದದ್ದು ಬೆಂಗಳೂರಲ್ಲಿ . ಭಾನುವಾರ (ಅ. 19) ಡಾ। ಶಿವಾಜಿ ಗಣೇಶನ್‌ ಅವರ 76ನೇ ಹುಟ್ಟುಹಬ್ಬ ಸಮಾರಂಭದಲ್ಲಿ. 76 ಕಿಲೋ ತೂಕದ ದೊಡ್ಡ ಕೇಕ್‌ ಕತ್ತರಿಸುವ ಮೂಲಕ ಕಾರ್ಮಿಕ ಸಚಿವ ಖಮರುಲ್‌ ಇಸ್ಲಾಂ ಶಿವಾಜಿ ಹುಟ್ಟುಹಬ್ಬ ಸಮಾರಂಭ ಕಳೆಕಟ್ಟುವಂತೆ ಮಾಡಿದರು. ಶಿವಾಜಿ ಗಣೇಶನ್‌ ಮತ್ತು ಪ್ರಭು ಕ್ಷೇಮಾಭಿವೃದ್ಧಿ ಸಂಘ ಈ ಕಾರ್ಯಕ್ರಮ ಏರ್ಪಡಿಸಿತ್ತು.

ಮುಖ್ಯ ಅತಿಥಿಯಾಗಿ ಕೇಕು ತಿಂದ ಜಯಂತಿ ಸೂರ್ಯ, ಚಂದ್ರ ಇರುವವರೆಗೂ ಶಿವಾಜಿ ಇರುತ್ತಾರೆ ಅಂದಾಗ ಅವರ ಕಣ್ಣಂಚಲ್ಲಿ ಸಣ್ಣ ನೀರ ಹನಿ. ಶಿವಾಜಿ ಗಣೇಶನ್‌ ಜೊತೆ ತಾವು ನಟಿಸಿದ ಚಿತ್ರಗಳನ್ನು ನೆನಪಿಸಿಕೊಂಡ ಜಯಂತಿ, ಹೊಸ ನಟಿಯರಿಗೆ ಅವರು ಬೆನ್ನು ತಟ್ಟುತ್ತಿದ್ದ ವಿಷಯವನ್ನು ಅನುಭವ ಸಾರದ ಮೂಲಕ ಹೇಳಿದರು. ಕರ್ನಾಟಕದಲ್ಲಿ ಶಿವಾಜಿ ಗಣೇಶನ್‌ ಹೆಸರಲ್ಲಿ ಒಂದು ನಾಟಕ ಅಕಾಡೆಮಿಯನ್ನು ಸರ್ಕಾರ ಸ್ಥಾಪಿಸಬೇಕೆಂಬುದು ಜಯಂತಿ ಆಗ್ರಹ.

ಶಿವಾಜಿ ಗಣೇಶನ್‌ ಪುತ್ರ ರಾಮ್‌ಕುಮಾರ್‌ ಶಿವಾಜಿ ಗಣೇಶನ್‌ ಮಾತಾಡಿ, ತಮ್ಮ ಅಪ್ಪನ ಕರ್ನಾಟಕ ಪ್ರೀತಿಯನ್ನು ಬಿಚ್ಚಿಟ್ಟರು. ಕರ್ನಾಟಕದ ಜನತೆ ದೊಡ್ಡ ಕೇಕ್‌ ಕತ್ತರಿಸಿ ಅಪ್ಪನ ಹುಟ್ಟುಹಬ್ಬ ಮಾಡುತ್ತಿರುವುದು ನಮ್ಮ ಮನ ಕಲಕಿದೆ ಎಂದು ಭಾವುಕರಾದರು. ತಾವು, ತಮ್ಮ ಪ್ರಭು ಬೆಂಗಳೂರಲ್ಲಿ ಓದೋಕೆ ಕಾರಣ ತಮ್ಮ ತಂದೆಯ ಕರ್ನಾಟಕ ಪ್ರೀತಿ ಎಂದ ಅವರು, ರವೀಂದ್ರ ಕಲಾಕ್ಷೇತ್ರಕ್ಕೆ ಮೊದಲು 1 ಲಕ್ಷ ರುಪಾಯಿ ದೇಣಿಗೆಯನ್ನು ಶಿವಾಜಿ ಕೊಟ್ಟಿದ್ದನ್ನು ಸ್ಮರಿಸಿದರು.

ಮತ್ತೊಬ್ಬ ನಟ ಚೆನ್ನಿ ಜಯಂತ್‌ ಮಾತಾಡಿ, ತಮಿಳುನಾಡಿನಲ್ಲಿ ಮಾಡದಂಥ ಕೆಲಸವನ್ನು ಕರ್ನಾಟಕದ ಜನತೆ ಮಾಡಿದ್ದಾರೆ. ಇದು 600 ವರ್ಷ ಕಾಲ ಮನಸ್ಸಲ್ಲಿ ನಿಲ್ಲುವಂಥ ವಿಷಯ ಎಂದರು. ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳು ಹಾಗೂ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಕೊಟ್ಟಿದ್ದು ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿತು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada