»   » ಗಾಜನೂರಿಗಿನ್ನು ನಿರಾತಂಕವಾಗಿ ಹೋಗಿ ಬರಬಹುದು - ಡಾ. ರಾಜ್‌

ಗಾಜನೂರಿಗಿನ್ನು ನಿರಾತಂಕವಾಗಿ ಹೋಗಿ ಬರಬಹುದು - ಡಾ. ರಾಜ್‌

Posted By: Super
Subscribe to Filmibeat Kannada

ಬೆಂಗಳೂರು : ನರಹಂತಕ ವೀರಪ್ಪನ್‌ ಸಾವಿನಿಂದಾಗಿ ಇನ್ನು ಮುಂದೆ ತಮ್ಮ ತವರು ದೊಡ್ಡ ಗಾಜನೂರಿಗೆ ಯಾವುದೇ ಅಳುಕು ಹೆದರಿಕೆಯಿಲ್ಲದೆ ಹೋಗಿಬರುವುದಾಗಿ ವರನಟ ಡಾ.ರಾಜ್‌ಕುಮಾರ್‌ ಹೇಳಿದ್ದಾರೆ.

ವೀರಪ್ಪನ್‌ ಅಂತ್ಯದೊಂದಿಗೆ ದುಷ್ಟ ಸಂಹಾರವಾಗಿದೆ. ಆದರೆ ವೀರಪ್ಪನ್‌ ಸಾವಿನಿಂದ ರೋಮಾಂಚನವೇನೂ ಆಗಿಲ್ಲ . ಇಂದು ಅಥವಾ ನಾಳೆ ಸಾವು ನಿಶ್ಚಿತ ಎಂದ ರಾಜ್‌ಕುಮಾರ್‌- ವೀರಪ್ಪನ್‌ಗೆ ಸಾವು ಯಾವಾಗಲೋ ಬರಬೇಕಿತ್ತು ಎಂದು ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಪ್ರತಿಕ್ರಿಯಿಸಿದರು.

ಅ.19ರಂದು ಮಂಗಳವಾರ ಸದಾಶಿವನಗರ ಬಂಗಲೆಗೆ ಭೇಟಿಕೊಟ್ಟ ಸುದ್ದಿಗಾರರೊಂದಿಗೆ ತಮ್ಮ ವನವಾಸದ 108ದಿನಗಳ ನೆನಪಿನ ಬುತ್ತಿ ಹಂಚಿಕೊಂಡ ರಾಜ್‌- ಆ ದಿನಗಳು ಭಯಾನಕ ಎಂದು ಬಣ್ಣಿಸಿದರು. ವೀರಪ್ಪನ್‌ ಭಯದಿಂದಾಗಿ ಈವರೆಗೂ ಇದ್ದ ಭಯ ನಿವಾರಣೆಯಾಗಿದೆ. ಇನ್ನುಮುಂದೆ ಗಾಜನೂರಿಗೆ ಸಲೀಸಾಗಿ ಹೋಗಿಬರಬಹುದು ಎಂದು ರಾಜ್‌ ಹೇಳಿದರು.

ವೀರಪ್ಪನ್‌ಗೆ ರಾಜಕೀಯ ಸಂಪರ್ಕಗಳಿದ್ದ ಬಗ್ಗೆ ತಮಗೇನೂ ತಿಳಿಯದು. ಆದರೆ ವೀರಪ್ಪನ್‌ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದ . ಕಾವೇರಿ ನೀರು ಬಿಡುಗಡೆ ಹಾಗೂ ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆ ಸ್ಥಾಪನೆಯ ಷರತ್ತುಗಳನ್ನು ತಮ್ಮ ಬಿಡುಗಡೆಗೆ ಒಡ್ಡಿದ್ದ ಎಂದು ರಾಜ್‌ ಹೇಳಿದರು.

ವೀರಪ್ಪನ್‌ನನ್ನು ಬದಲಿಸಲು ನಾನು ಪ್ರಯತ್ನಿಸಿದೆ. ಆದರೆ ಆತ ತನ್ನ ಚಟುವಟಿಕೆಗಳನ್ನು ನಿಲ್ಲಿಸಲು ಸಾರಾಸಗಟಾಗಿ ನಿರಾಕರಿಸಿದ ಎಂದು ರಾಜ್‌ ತಿಳಿಸಿದರು.

ವೀರಪ್ಪನ್‌ ಬಗ್ಗೆ ಸಿನಿಮಾ ಇಲ್ಲ

ವೀರಪ್ಪನ್‌ ಕಥಾವಸ್ತುವಿನ ಸಿನಿಮಾ ತೆಗೆಯುವ ಸಾಧ್ಯತೆಯೇ ಇಲ್ಲ ಎಂದು ರಾಜ್‌ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ರಾಜ್‌ ಪರವಾಗಿ ಪ್ರತಿಕ್ರಿಯಿಸಿದ ರಾಘವೇಂದ್ರ- ವೀರಪ್ಪನ್‌ ಕುರಿತ ಚಿತ್ರ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ರಾಜ ಕುಟುಂಬ ಇಂಥ ಚಿತ್ರಗಳನ್ನು ಹಿಂದೆಂದೂ ನಿರ್ಮಿಸಿಲ್ಲ , ಮುಂದೆಯೂ ನಿರ್ಮಿಸುವುದಿಲ್ಲ ಎಂದರು.(ಇನ್ಫೋ ವಾರ್ತೆ)

English summary
I can visit Doddagajanur without fear, says Dr. Rajkumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada