ನಾಗಚಂದ್ರಿಕಾ ಭಟ್‌ : ನಮ್ಮೂರಿನ ಇನ್ನೊಂದು ಕೋಗಿಲೆ!

By Staff

ನಮಗೆ ಬಿ.ಆರ್‌.ಛಾಯಾ, ಮಂಜುಳಾ ಗುರುರಾಜ್‌, ರತ್ನಮಾಲಾ ಪ್ರಕಾಶ್‌, ಈಗೀಗ ಎಂ.ಡಿ.ಪಲ್ಲವಿ ಹೆಸರುಗಳು ಮಾತ್ರ ನೆನಪಾಗುತ್ತವೆ. ಯಾಕೋ ಏನೋ ಸಿರಿಕಂಠದ ನಾಗಚಂದ್ರಿಕಾ ಭಟ್‌ರನ್ನು ಎಲ್ಲರೂ ಮರೆತಿದ್ದೇವೆ?

  • ಸುಮನ
‘‘ತಾನೊಂದು ಬಗೆದರೆ ದೈವವೊಂದು ಬಗೆಯಿತು’’ --ಈ ನಾಣ್ಣುಡಿಯು ನನಗೆ ಬಹಳವಾಗಿ ಅನ್ವಯಿಸುತ್ತದೆ ಎಂದು ಹೇಳಿಕೊಳ್ಳುತ್ತಾರೆ ಹಿನ್ನೆಲೆ ಗಾಯಕಿ ನಾಗಚಂದ್ರಿಕಾ ಭಟ್‌. ಒಂದು ಕಡೆಗೆ ಹೆಜ್ಜೆಯನ್ನಿಟ್ಟು ಇನ್ನೊಂದೆಡೆಗೆ ಸಾಗಿದಾಗಿನಿಂದ ಇದನ್ನು ನಂಬಿದ್ದಾರೆ.

ಮೂಲತಃ ಬೆಂಗಳೂರಿನವರಾದ, ವೈವಿಧ್ಯತೆಯುಳ್ಳ, ಪ್ರತಿಭಾವಂತ ಹಿನ್ನೆಲೆಗಾಯಕಿಯಾಗಿರುವ ಇವರು ಕನ್ನಡದ ಸಂಗೀತ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಇನ್ನೂ ಸಂಪೂರ್ಣವಾಗಿ ಬೆಳಕಿಗೆ ಬರಬೇಕಿದೆ ಎನ್ನುತ್ತಾರೆ.

ವಿದ್ಯಾಭ್ಯಾಸದಲ್ಲಿ ಬಹಳ ಚುರುಕಾಗಿದ್ದ ಇವರು, ಪ್ರತಿಷ್ಠಿತ ಬಿ.ಎಂ.ಎಸ್‌. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆರಿಟ್‌ ಆಧಾರದ ಮೇಲೆ ಬಿ.ಇ. ಸೀಟು ಪಡೆದರು. ಆದರೆ, ಮೇಲೆ ಇವರೇ ಅಭಿಪ್ರಾಯಪಟ್ಟಂತೆ, ವಿಧಿಯು ಇವರನ್ನು ಕರೆದೊಯ್ದಿದ್ದು ಇನ್ನೊಂದು ಕಡೆಗೆ. ಹೀಗಾಗಿ, ಇಂಜಿನಿಯರ್‌ ಆಗಬೇಕಿದ್ದ ಇವರು ಇಂದು ಹೆಸರಾಂತ ಗಾಯಕಿಯಾಗಿದ್ದಾರೆ.

ತಾಯಿ ಸುಧಾಮಣಿಯವರ ಸಲಹೆ, ಪ್ರೋತ್ಸಾಹದ ಮೇರೆಗೆ ನಾಗಚಂದ್ರಿಕಾ ಅವರು ತಮ್ಮ ಹತ್ತನೆ ವಯಸ್ಸಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ರೋಹಿಣಿ ಪ್ರಭುನಂದನ್‌ ಅವರ ಬಳಿ ಕಲಿಯಲಾರಂಭಿಸಿದರು. ಶೀಘ್ರದಲ್ಲೆ, ರಾಜ್ಯಾದ್ಯಂತ ನಡೆದ ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದರು. ಸಂಗೀತವನ್ನೆ ಗುರಿಯಾಗಿಸಿಕೊಂಡ ಇವರು, ಇಂಜಿನಿಯರಿಂಗ್‌ ಶಿಕ್ಷಣವನ್ನು ನಿಲ್ಲಿಸಿ, ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ.ಎಸ್‌.ಸಿ (ಪಿ.ಸಿ.ಎಂ) ಪದವಿಯ ಶಿಕ್ಷಣವನ್ನು ಪೂರ್ತಿಗೊಳಿಸಿ, ನಂತರ ಸಂಗೀತಸಾಧನೆಯ ಕಡೆಗೆ ಸಂಪೂರ್ಣವಾಗಿ ಗಮನ ಹರಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌.ಎಸ್‌.ಎಸ್‌) ಪ್ರಭಾವಿತ ಕುಟುಂಬದಿಂದ ಬಂದಿರುವ ಇವರು, ಸ್ವಾಭಾವಿಕವಾಗಿ ಆರ್‌.ಎಸ್‌.ಎಸ್‌ ಆಯೋಜಿತ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. 1995ರಲ್ಲಿ, ಇದೇ ರೀತಿ ಆರ್‌.ಎಸ್‌.ಎಸ್‌ ಅವರ ಕ್ಯಾಸೆಟ್‌ ಒಂದಕ್ಕೆ ಹಾಡಿದ್ದು ಇವರ ಮೊದಲ ಧ್ವನಿಮುದ್ರಿತ ಗೀತೆಯಾಯಿತು. ಅದೇ ಸಮಯದಲ್ಲಿ, ಇವರು ಹೊಂಬಾಳೆ ಪ್ರತಿಭಾ ರಂಗ ಸುಗಮ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಈ ಜಯವು, ನಂತರ ಸುಗಮ ಸಂಗೀತ ಮತ್ತು ಕನ್ನಡ ಚಿತ್ರರಂಗಕ್ಕೆ ಕಾಲಿಡಲು ದಾರಿದೀಪವಾಯಿತು.

ಕ್ರಮೇಣ, ಇವರು ತಮ್ಮ ಸಂಗೀತ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತ, ಮುಂದಿನ ವರ್ಷಗಳಲ್ಲಿ ಚಲನಚಿತ್ರಗೀತೆಗಳಿಗೆ ಟ್ರ್ಯಾಕ್‌ ಸಿಂಗರ್‌ ಆದರು. ಚಂದು, ಆತ್ಮೀಯರು ಇವರನ್ನು ಕರೆಯುವಂತೆ, ಇದುವರೆಗು ಸುಮಾರು 300 ಕನ್ನಡ ಚಲನಚಿತ್ರಗಳಲ್ಲಿ ಸಹಗಾಯಕರಾಗಿ ಹಾಡಿದ್ದಾರೆ, ಮತ್ತು ಸುಮಾರು ಅಷ್ಟೇ ಚಿತ್ರಗಳಲ್ಲಿ ಟ್ರ್ಯಾಕ್‌ ಸಿಂಗರ್‌ ಆಗಿ ಹಾಡಿದ್ದಾರೆ. ಇದೀಗ ತಾವೇ ಸ್ವತಃ ಹಿನ್ನೆಲೆ ಗಾಯಕಿಯಾಗಿ ಹಾಡುತ್ತಿರುವ ಇವರು, ನಿಧಾನವಾಗಿಯಾದರೂ, ಕ್ರಮಬದ್ಧವಾಗಿ ಚಿತ್ರರಂಗದ ಒಂದೊಂದೇ ಮೆಟ್ಟಿಲನ್ನು ಹತ್ತುತ್ತಿದ್ದಾರೆ.

ಇವರ ಕೆಲವು ಹೆಸರಾಂತ ಹಾಡುಗಳೆಂದರೆ, ‘‘ಮುಂಗಾರಿನ ಮಿಂಚು’’ ಚಿತ್ರದ ‘‘ದೀಪಾವಳಿಗೆ’’ (ಈಕೆಯ ಮೊದಲ ಚಿತ್ರಗೀತೆ) (ವಿ.ಮನೋಹರ್‌), ‘‘ಕೋತಿಗಳು ಸಾರ್‌ ಕೋತಿಗಳು’’ ಚಿತ್ರದ ‘‘ಬಾರೆ ರಾಜಕುಮಾರಿ’’ (ಹಂಸಲೇಖ), ‘‘ಎಕ್ಸ್‌ಕ್ಯೂಸ್‌ ಮಿ’’ ಚಿತ್ರದಲ್ಲಿನ ‘‘ರೋಡಿಗಿಳಿ ರಾಧಿಕ’’ (ಆರ್‌.ಪಿ.ಪಟ್ನಾಯಕ್‌), ‘‘ಚಪ್ಪಾಳೆ’’ ಚಿತ್ರದ ‘‘ಏನಿವಾಗ’’ (ಆರ್‌.ಪಿ.ಪಟ್ನಾಯಕ್‌), ‘‘ಶ್ರೀರಸ್ತು ಶುಭಮಸ್ತು’’ ಚಿತ್ರದ ‘‘ಪುನಃ ಪುನಃ’’ (ಕೆ.ಕಲ್ಯಾಣ್‌) ಹಾಗು ಮುಂತಾದವುಗಳು.

ಇಲ್ಲಿಯವರೆಗು ಸುಮಾರು 40 ಚಲನಚಿತ್ರಗಳಲ್ಲಿ, ಹಿನ್ನೆಲೆಗಾಯಕಿಯಾಗಿ ಹಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು, ಶ್ರೀರಸ್ತು ಶುಭಮಸ್ತು, ಪರ್ವ, ಷಡ್ಯಂತ್ರ, ಅವಳೆ ನನ್ನ ಹುಡುಗಿ, ಚೆಲುವೆ ಒಂದು ಹೇಳ್ತೀನಿ, ಆನಂದ, ಜೂಟ್‌, ರೋಮಿಯೋ ಜ್ಯೂಲಿಯೆಟ್‌, ಸ್ಮೈಲ್‌, ಕೋತಿಗಳು ಸಾರ್‌ ಕೋತಿಗಳು, ಮುಂಗಾರಿನ ಮಿಂಚು, ಸರೋವರ, ಚಪ್ಪಾಳೆ, ರಾಕ್ಷಸ, ಅಂಬಿ.

ಮತ್ತೊಂದು ಪ್ರಮುಖ ಅವಕಾಶ ಇವರಿಗೆ ಒದಗಿ ಬಂದಿದ್ದು, 2004ರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಿಂಫೊನಿಗಾಗಿ ಹಾಡಲು ಬಂದ ಕರೆಯ ಮೂಲಕ. ಅದು, ಪಾಶ್ಚಿಮಾತ್ಯ ಆರ್ಕೇಷ್ಟ್ರಾ ಮತ್ತು ಪ್ರಾಚೀನ ತಮಿಳು ಸಂಗೀತದ ಸಮ್ಮಿಶ್ರಣವಾಗಿತ್ತು.

‘‘ಸ್ವತಃ ಶಾಸ್ತ್ರೀಯ ಸಂಗೀತ ಪ್ರೇಮಿಯಾಗಿ, ಸಾಹಿತ್ಯದ ಬಗ್ಗೆ ವಿಶೇಷವಾದ ಆಸಕ್ತಿ, ಒಲವಿದ್ದುದರಿಂದ, ನನಗೆ ಸುಗಮ ಸಂಗೀತವು ಅತ್ಯಂತ ಸೂಕ್ತವಾದ ಆಯ್ಕೆಯಾಗಿದ್ದಿತು. ಅದು ಹೃದಯ ತುಂಬಿ ಬರುವ ಸಂಗೀತ, ಮತ್ತು ಸದಾ ಕಾಡುವ ಉತ್ತಮ ಸಾಹಿತ್ಯದೊಂದಿಗೆ ಕೇಳುಗರಿಗೆ ಎರಡೂ ವಿಭಾಗಗಳ ಉತ್ಕೃಷ್ಟ ದರ್ಜೆಯನ್ನು ಒದಗಿಸುತ್ತಾದ್ದರಿಂದ, ನಾನು ಸುಗಮ ಸಂಗೀತವನ್ನೇ ಆರಿಸಿಕೊಂಡೆ’’, ಎನ್ನುತ್ತಾರೆ ಚಂದ್ರಿಕಾ.

ಬೆಂಗಳೂರಿನ ಆಲ್‌ ಇಂಡಿಯ ರೇಡಿಯೊ ಆಕಾಶವಾಣಿ ಕಲಾವಿದೆಯಾಗಿರುವ ಚಂದ್ರಿಕಾ, ಸದ್ಯದಲ್ಲಿ ಚಲನಚಿತ್ರಗಳಲ್ಲಿ ಹಾಡುವುದರ ಜೊತೆಗೆ, ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರ (ಹಂಸಲೇಖ, ವಿ.ಮನೋಹರ್‌, ಸಾಧು ಕೋಕಿಲ, ಗುರುಕಿರಣ್‌, ಕೆ.ಕಲ್ಯಾಣ್‌, ಆರ್‌.ಪಿ.ಪಟ್ನಾಯಕ್‌ ಮುಂತಾದವರು) ಸಂಗೀತದಲ್ಲಿ ಹಾಡಿರುವ ಇವರು, ಸಮನಾಂತರ ಸಂಗೀತ ರಂಗಗಳಲ್ಲೂ ಹಾಡುತ್ತ ಹಲವಾರು ಭಕ್ತಿಪ್ರಧಾನ, ಜನಪದ ಮತ್ತು ಸುಗಮ ಸಂಗೀತದ ಕ್ಯಾಸೆಟ್ಟುಗಳಲ್ಲಿ ಹಾಡಿದ್ದಾರೆ. ಹಾಗೆಯೆ, ಕಥಕ್ಕಳಿ ನೃತ್ಯವೊಂದಕ್ಕೆ ಮತ್ತು ಮಾಯಾರಾವ್‌ ಅವರ ಬ್ಯಾಲೆಟ್‌ ಒಂದಕ್ಕೆ ಹಾಡಿದ್ದಾರೆ.

ಚಂದ್ರಿಕ ನಿಜಕ್ಕೂ ವೈವಿಧ್ಯತೆಯುಳ್ಳ ಪ್ರತಿಭಾನ್ವಿತ ಗಾಯಕಿಯಾಗಿದ್ದು, ಯಶಸ್ಸಿನ ಉತ್ತುಂಗಕ್ಕೇರುವ ನಿರೀಕ್ಷೆಯಲ್ಲಿ ಎಲ್ಲ ಪ್ರಯತ್ನಗಳೊಂದಿಗೆ, ಮುನ್ನಡೆದಿದ್ದಾರೆ.

ನಾವೆಲ್ಲರೂ ಅಚ್ಚಕನ್ನಡದ ಪ್ರತಿಭೆ ಚಂದ್ರಿಕಾ ಅವರಿಗೆ ಶುಭ ಹಾರೈಸೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X