»   » ಹೊಸ ಹುಡುಗಿ ಯಜ್ಞಾಶೆಟ್ಟಿ ಜೊತೆ ಒಂದಿಷ್ಟು ಮಾತು

ಹೊಸ ಹುಡುಗಿ ಯಜ್ಞಾಶೆಟ್ಟಿ ಜೊತೆ ಒಂದಿಷ್ಟು ಮಾತು

Posted By:
Subscribe to Filmibeat Kannada

'ಎದ್ದೇಳು ಮಂಜುನಾಥ' ಚಿತ್ರದ ನಾಯಕಿ ಯಜ್ಞಾಶೆಟ್ಟಿ, ಕನ್ನಡದ ಹುಡುಗಿ. ಜೊತೆಗೆ ಎಂಬಿಎ ಪದವೀಧರೆ. ಎರಡನೇ ಸಲ ಸಿನಿಮಾಗಾಗಿ ಬಣ್ಣ ಹಚ್ಚುತ್ತಿರುವ ಯಜ್ಞಾಶೆಟ್ಟಿಯ ಒಲವು ನಿಲುವುಗಳು ಇಲ್ಲಿವೆ.

  • ಶಾಮ್
ಸೂರ್ಯವಂಶಿಯಾದ ನನಗೆ ಬೆಳಗ್ಗೆ ಬೇಗ ಎದ್ದೇಳುವುದೆಂದರೆ ತುಂಬಾ ಹಿಂಸೆ. ಆದರೂ ನಿರ್ಮಾಪಕರ ಕಾಟತಾಳಲಾರದೆ "ಎದ್ದೇಳು ಮಂಜುನಾಥ" ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಕಳೆದ ಗುರುವಾರ(ನ.15) ಬೆಳಗ್ಗೆ ಬೆಳಗ್ಗೆನೆ ಎದ್ದು ಕಾಫೀನೂ ಕುಡಿಯದೆ ಹೊರಟಿದ್ದೆ. ದಕ್ಷಿಣಧ್ರುವ ಕೋಣನಕುಂಟೆಯಿಂದ ಉತ್ತರಧ್ರುವ ಬೆಂಗಳೂರು ಅರಮನೆ ಕಡೆ ಓಡುತ್ತಿದ್ದ ಕಾರು ಸಾರಕ್ಕಿ ಟ್ರಾಫಿಕ್ ಸಿಗ್ನಲ್ ನಲ್ಲಿ ಸರಕ್ಕನೆ ಪದ್ಮನಾಭನಗರದ ಕಡೆ ತಿರುಗಿಕೊಂಡಿತು. "ಏ ಯಾಕಪ್ಪಾ ದೇವೇಗೌಡ್ರ ಮನೆಗೆ ಹೋಗ್ತಾಯಿದಿಯಾ ?" ಅಂತ ಡ್ರೈವರ್ ಗೆ ಕೇಳಲಾಗಿ ಅದಕ್ಕೆ ಆ ಹುಡುಗ "ಇಲ್ಲಾ ಸಾರ್ ಹೀರೋಯಿನ್ ಪಿಕ್ ಅಪ್ ಮಾಡಬೇಕು ಸಾರ್" ಅಂದ . ಓ ಬಾಯ್.

ನವರಸ ನಾಯಕ ಜಗ್ಗೇಶ್ ಆ ಸಿನಿಮಾದ ಹೀರೋ ಎಂದು ಗೊತ್ತಿತ್ತು. ನಾಯಕಿ ಯಾರು ? ನನಗೆ ಸಮಾಚಾರ ಇರಲಿಲ್ಲ. ಯಾರಿರಬಹುದು ? ಯಾರಿರಬಹುದು ? ಯೋಚಿಸುತ್ತಾ ಇದ್ದೆ. ಕಾರು ದೇವೇಗೌಡ ಪೆಟ್ರೋಲ್ ಬಂಕ್ ದಾಟಿ ಸೀದಾ ಹನುಮಂತನಗರಕ್ಕೆ ಬಂದು ಯಾವುದೋ ಫೇಮಸ್ ಬೇಕರಿ ಅಂತೆ, ಅದರ ಎದುರುಗಡೆ ಇರುವ ನೋ ಪಾರ್ಕಿಂಗ್ ಬೋರ್ಡ್ ಪಕ್ಕ ಸ್ಟಾಪ್ ಆಯಿತು.

ಕಾರಲ್ಲೇ ಕುಳಿತು ನಾಯಕಿಯ ಆಗಮನ ಎದುರುನೋಡುತ್ತಾ ಕಾಲತಳ್ಳುತ್ತಿದ್ದೆ.ಅಷ್ಟರಲ್ಲಿ ಸುಮಾರು 50ವರ್ಷ ವಯಸ್ಸಿನ ಒಬ್ಬ ಮಹಿಳೆ ಸೀದಾ ಬಂದು ಕಾರಿನ ಬಾಗಿಲ ಬಳಿ ನಿಂತರು. ಬಿಳಿ ಕುಪ್ಪುಸ, ತುರುಬು ! ಮುಗುಳು ನಗೆ !. "ಯಾರು ನೀವು ? ನಿಮಗೆ ಯಾರು ಬೇಕಾಗಿತ್ತು ?" ಎಂದು ಕೇಳೋಣ ಅನ್ನುವಷ್ಟರಲ್ಲಿ ಆ ತಾಯಿಯ ಹಿಂದುಗಡೆಯಿಂದ ಬಳಕುವ ತರುಣಿಯೊಬ್ಬಳು ಹಾಜರಾದಳು.

ಕಾರು ಬಾಗಿಲು ತೆರೆದುಕೊಂಡು ಅವರಿಬ್ಬರೂ ಸೀದಾ ಹಿಂದಿನ ಸೀಟಿನಲ್ಲಿ ಆಸೀನರಾಗುವತನಕ ನಾನು ಆಮ್ ಆದ್ಮಿ ಆಗಿದ್ದೆ. ಒಂದು ಮಿಂಟೋಸ್ ಬಾಯಿಗೆ ಎಸೆದುಕೊಂಡೆ ನೋಡಿ. ದಿಮಾಗ್ ಕಿ ಬತ್ತಿ ಜಲ್ ಗಯಾ ! ದೀಪ ಹೊತ್ತಿಕೊಳ್ಳುತ್ತಲೇ ಜ್ಞಾನೋದಯದ ಬೆಳಕು ಹರಿಯಿತು. ಹೇಮಾ ಮಾಲಿನಿಯ ಅಮ್ಮ, ರೇಖಾನ ಅಮ್ಮ,ಶ್ರುತಿಯ ಅಮ್ಮ ,ಮಾಲಾಶ್ರೀ ಅಮ್ಮ..ಅಮ್ಮಂದಿರೆಲ್ಲ ಆರಂಭದಲ್ಲಿ ನಾಯಕಿ ಆಗಲು ಹೊರಟ ತಮ್ಮ ಮಗಳ ಹೋದಕಡೆಯಲೆಲ್ಲಾ ಹೀಗೇನೇ ತಾವೂ ತಪ್ಪದೆ ಹಾಜರಾಗುತ್ತಿದ್ದುದು ನೆನಪಾಯಿತು.

ಹನುಮಂತನಗರದಲ್ಲಿ ನನಗೆ ಭೇಟಿ ಆದದ್ದು ಇದೇ 'ಎದ್ದೇಳು ಮಂಜುನಾಥ' ಚಿತ್ರದ ನಾಯಕಿ ಯಜ್ಞಾ ಶೆಟ್ಟಿ ಮತ್ತು ಅವರ ತಾಯಿ ಜಯಂತಿ. ಅರಮನೆ ಬರೋತನಕ ಕಾರಿನಲ್ಲಿ ನಮ್ಮ ಮಾತುಗಳು ಸಾಗಿದವು. ಮಂಗಳೂರು, ಬಂಟರು, ಬಂಟರ ಮನೆ ಮದುವೆ, ವರದಕ್ಷಿಣೆ, ಅಡುಗೆ ಶೈಲಿ, ಮಾಂಸಾಹಾರ ರೆಸಿಪಿ, ಎಜುಕೇಷನ್ ಸಿಸ್ಟಂ ಮುಂತಾದ ವಿಷಯಗಳ ಬಗೆಗೆ ಅವರಿಬ್ಬರೂ ಕನ್ನಡದಲ್ಲಿ , ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡಿದರು. ಅವರಿಬ್ಬರಿಗೆ ಚೆನ್ನಾಗಿ ಗೊತ್ತಿರುವುದು ಆದರೆ ನನಗೆ ಏನೇನೂ ಗೊತ್ತಿಲ್ಲದಿರುವ ಸಂಗತಿಯೆಂದರೆ ತುಳು ಭಾಷೆ ಮಾತ್ರ. ಎಂಚಿನ ಮಾರಾಯ್ರೆ.

'ಒಂದು ಪ್ರೀತಿಯ ಕಥೆ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯಜ್ಞಾಶೆಟ್ಟಿ ಅವರಿಗೆ 'ಎದ್ದೇಳು' ಸಿನಿಮಾ ದ್ವಿತೀಯ ಚುಂಬನ. ಮಂಗಳೂರಿನಲ್ಲಿ ಮಣಿಪಾಲದಲ್ಲಿ ವ್ಯಾಸಂಗ ಮಾಡುವಾಗ ಕಾಲೇಜು ಹಬ್ಬಗಳಲ್ಲಿ ಪಾಶ್ಚಿಮಾತ್ಯ ನೃತ್ಯಮಾಡುತ್ತ ಕುಣಿದದ್ದು ಬಿಟ್ಟರೆ ತಮಗೆ ಬೇರೆ ಎಂತ ಕಲ್ಚುರಲ್ ಬ್ಯಾಕ್ ಗ್ರೌಂಡ್ ಇಲ್ಲ ಎಂದು ಹೇಳಿದರು ಯಜ್ಞಾ. ಆದರೆ, ಓದುವುದರಲ್ಲಿ ಜಾಣೆಯಾದ ತಮ್ಮ ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವ ಆಸೆ ಅವರ ತಂದೆತಾಯಿಗೆ. ಅಂತೆಯೇ ಯಜ್ಞ 5ವರ್ಷದ ಬಿಬಿಎಂ ಕಲಿತು 2ವರ್ಷ ಕೋರ್ಸಿನ ಎಂಬಿಎ ( Finance) ಪೂರೈಸಲು ಸಾಧ್ಯವಾಯಿತು ಎಂದು ತಾಯಿ ಜಯಂತಿ ದನಿಗೂಡಿಸಿದರು.

'ಒಂದು ಪ್ರೀತಿಯ ಕಥೆ' ಚಿತ್ರದ ನಂತರ ಯಜ್ಞಾ ಮತ್ತೆ ಗಾಂಧೀನಗರದ ಕಡೆ ಗಮನ ಕೊಟ್ಟಿರಲಿಲ್ಲವಂತೆ. ಯಾಕಂತೆ ಅಂದರೆ ಎಂಬಿಎ ಪರೀಕ್ಷೆಗಳು ಮುಗಿಯುವತನಕ ಗಮನ ಅತ್ತಇತ್ತ ಹರಿಯಗೊಡಬಾರದು ಎನ್ನುವ ಏಕಾಗ್ರತೆ. ಅವರ ಪರಿಶ್ರಮ ಫಲಕೊಟ್ಟು ಯಜ್ಞ 93 % ಗಳಿಸಿ ತೇರ್ಗಡೆಯಾಗಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅವರ ಮೂಲಕ ಒದಗಿರುವ ಹೊಸ ಅವಕಾಶದಿಂದ ಸಂತೋಷವಾಗಿದೆ. ಮತ್ತೆ ಹೀರೋಯಿನ್ ಆಗಿ ಬರ್ತಾಯಿದೀನಿ ಅಂದರು ಯಜ್ಞಾ.

ಎಂಬಿಎ ಪಾಸು ಮಾಡಿ ನೀವು ಎಲ್ಲಾಬಿಟ್ಟು ನಟಿಯಾಗುವುದಕ್ಕೆ ಯಾಕೆ ಬಂದ್ರೀ ? ಮುಂತಾದ ಸಿನಿಮಾ ಪತ್ರಕರ್ತರ ಟಿಪಿಕಲ್ ಪ್ರಶ್ನೆಗಳಿಗೆ ಯಜ್ಞಾ ಸಾವಧಾನದಿಂದ ಉತ್ತರ ನೀಡುತ್ತಿದ್ದರು. "ಅಭಿನಯ ನನಗೆ ತುಂಬಾ ಸಂತೋಷಕೊಡುವ ಕಲೆ. ಮೇಲಾಗಿ ಅವಕಾಶ ಮನೆಬಾಗಿಲಿಗೆ ಬಂದಿದೆ. ಸಿಕ್ಕ ಅವಕಾಶಗಳನ್ನು ಇಫೆಕ್ಟೀವ್ ಆಗಿ ಬಳಸಿಕೊಳ್ಳುವ ಸಂಕಲ್ಪ ತಮ್ಮದು" ಎಂದರು ಅವರು. ಮುಂದಿನವಾರ ನನ್ನಕ್ಕನ ಮದುವೆ ನಿಶ್ಚಿತಾರ್ಥ ಇದೆ. ಇನ್ನೆರಡು ತಿಂಗಳು ಸಿನಿಮಾ ಶೂಟಿಂಗ್ ನಲ್ಲಿ ಬಿಜಿ ಆಗಿರುವೆ. ಆನಂತರ ನೋಡೋಣ. ಎಂಬಿಎ ಡಿಗ್ರಿ ಇರುವುದರಿಂದ ನಾನು ಯಾವಾಗಬೇಕಾದರೂ ಕಾರ್ಪೋರೇಟ್ ಪ್ರಪಂಚದ ಸೇರ್ಕೋಬಹುದು.

ಅಂದರೆ, ಕನ್ನಡ ಚಿತ್ರರಂಗ ಕಾರ್ಪೋರೇಟ್ ಅಲ್ವಾ? ಎಂಬ ಮರುಪ್ರಶ್ನೆಗೆ ನಿರುತ್ತರರಾದ ಯಜ್ಞಾ, ಅವರ ತಾಯಿಯ ಕಡೆ ನೋಡಿದರು. ತಾಯಿ ಜಯಂತಿ ಹೇಳಿದರು. ಹೆಣ್ಣುಮಕ್ಕಳು ಎಷ್ಟೇ ಓದಿದರೂ ಎಷ್ಟೇ ಕಲಿತರೂ ಎಷ್ಟೇ ಪ್ರಸಿದ್ಧಿಗೆ ಬಂದರೂ ಮನೆಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದನ್ನು ಕಲಿಯಲೇಬೇಕು. ನಮ್ಮ ನಾಕೂ ಹೆಣ್ಣಮಕ್ಕಳಿಗೆ ಮನೆಕೆಲಸ ಕಲಿಸಿದ್ದೀನಿ. ಅವರು ಕೆಲಸಗಳನ್ನು ಸಂತೋಷದಿಂದ ಶ್ರದ್ಧೆಯಿಂದ ಮಾಡುತ್ತಾರೆ ಎಂದರು ಜಯಂತಿ.

ಮನೆಕೆಲಸ ಅಂದರೆ ಅಡುಗೆ ಮಾಡ್ತೀರಾ ಯಜ್ಞಾ ? ಅದು ನಮ್ಮ ಪ್ರಶ್ನೆ. ಓ ಯಸ್, ಎಲ್ಲಾ ತರ ಅಡುಗೆ ಬರತ್ತೆ. ನಮ್ಮ ಮನೆಯಲ್ಲಿ ಕೋರಿ ರೊಟ್ಟಿ ಮತ್ತು ಚಿಕನ್ ಸ್ಪೆಷಲ್ ಐಟಂ. ಒಣಮೆಣಸಿನ ಕಾಯಿ ಮತ್ತು ಹುಣಿಸೆಹಣ್ಣಿನ ರಸದ ಮಸಾಲೆಯಿಂದ ಬಾಂಗಡಾ ಮೀನಿನ ಅಡುಗೆ ಮಾಡ್ತೀನಿ. ಅದಕ್ಕೆ ನಮ್ಮ ಭಾಷೆಯಲ್ಲಿ ಪುಳಿಮುಂಚಿ ಅನ್ನುತ್ತಾರೆ. ತುಂಬಾ ರುಚಿಯಾಗಿರುತ್ತೆ ಅಂತಾರೆ ತಿಂದವರು ಎಂದರು ಯಜ್ಞ. ಅಂದರೆ ನೀವು ರುಚಿ ನೋಡಲ್ವಾ ? ಇಲ್ಲ ಇಲ್ಲ ನಾನು strictly ವೆಜ್ಜು, ನನಗೆ ಏನಿದ್ರೂ ವೆಜಿಟೇರಿಯನ್ ಅಡುಗೆಗಳೇ ಇಷ್ಟ ಎನ್ನುವ ಆಕೆಗೆ ಅಯ್ಯಂಗಾರ್ ಪುಳಿಯೋಗರೆ ಮತ್ತು ನೀರು ದೋಸೆ ಅಂದರೆ ಪಂಚಪ್ರಾಣ ಎಂದು ಹೇಳುವಹೊತ್ತಿಗೆ ಅರಮನೆ ಬಂತು.

ಹೊಟ್ಟೆ ಆದಿತಾಳ ಹಾಕುತ್ತಿತ್ತು. ಯಾರಿಗೂ ಹಲೋ ಕೂಡ ಹೇಳದೆ ಸೀದಾ ಮೂರೂ ಜನ ಬ್ರೇಕ್ ಫಾಸ್ಟ್ ಟೇಬಲ್ಲಿಗೆ ಹೋದರೆ ಅಲ್ಲಿ ಸಿಕ್ಕಿದ್ದು ಅದೇ ಉಪ್ಪಿಟ್ಟು, ಅದೇ ಕೇಸರೀ ಭಾತು,ಬಿಸಿಬಿಸಿ ಪೊಂಗಲ್ಲು ಅದಕ್ಕೆ ಈರುಳ್ಳಿ ಮೊಸರುಭಜ್ಜಿಯ ಸಪೋರ್ಟು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada