»   » ಕಿಡ್ನಿ ತೊಂದರೆ : ಆಸ್ಪತ್ರೆಯಲ್ಲಿ ಪಂಡರಿಬಾಯಿ

ಕಿಡ್ನಿ ತೊಂದರೆ : ಆಸ್ಪತ್ರೆಯಲ್ಲಿ ಪಂಡರಿಬಾಯಿ

Posted By: Staff
Subscribe to Filmibeat Kannada

ಕಷ್ಟಗಳು ಬಂದರೆ ಹೀಗೇ ಒದ್ದಕೊಂಡು ಬರುತ್ತವೆ. ಮೂತ್ರಕೋಶದ ತೊಂದರೆಯಿಂದಾಗಿ ಹಿರಿಯ ನಟಿ ಪಂಡರಿಬಾಯಿ ಈಗ ಚೆನ್ನೈನ ಅಪೊಲೋ ಆಸ್ಪತ್ರೆಯ ಹಾಸಿಗೆ ಹಿಡಿದಿದ್ದಾರೆ.

ಇದು ತಿಂಗಳುಗಳಿಂದ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆ. ಬುಧವಾರ (ಡಿ.18) ತೊಂದರೆ ತಾರಕಕ್ಕೆ ಹೋಯಿತು. ತಡೆಯಲಾಗದ ಪಂಡರಿಬಾಯಿ ಮಾಮೂಲು ಆಸ್ಪತ್ರೆಗೆ ಹೋಗಿ ಸೇರಿಕೊಂಡರು. ಪಂಡರಿಬಾಯಿಯವರಿಗೆ ಹೀಗಾಗಿದೆ ಅಂತ ಗುರುವಾರ ಮುಖ್ಯಮಂತ್ರಿ ಜಯಲಲಿತಾ ಕಿವಿಗೆ ಬಿದ್ದಿತು. ತಕ್ಷಣವೇ ಆಕೆಯನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿ, ಒಳ್ಳೆಯ ಚಿಕಿತ್ಸೆ ಕೊಡಿಸಿ ಅಂತ ಅಮ್ಮ ಜಯಲಲಿತಾ ಅಪ್ಪಣೆ ಕೊಡಿಸಿದರು. ಈಗ ಅಪೋಲೋ ಆಸ್ಪತ್ರೆಯ ವೈದ್ಯರು ಪಂಡರಿಬಾಯಿ ಅವರ ಅನಾರೋಗ್ಯಕ್ಕೆ ಮುಲಾಮು ಹಚ್ಚಲು ಶತಾಯ ಗತಾಯ ಯತ್ನಿಸುತ್ತಿದ್ದಾರೆ.

ಎಪ್ಪತ್ಮೂರು ವಯಸ್ಸಿನ ಪಂಡರಿಬಾಯಿ ನಾಯಕಿಯಾಗಿ ದಕ್ಷಿಣ ಭಾರತದ ಸಿನಿಮಾಗಳಿಗೆ ಬಂದರೂ, ಮನದಲ್ಲಿ ಮನೆ ಮಾಡಿದ್ದು ಅಮ್ಮನ ಪಾತ್ರಗಳ ಮೂಲಕ. ವರನಟ ರಾಜ್‌ಕುಮಾರ್‌ ಜೊತೆ ಒಂದು ಕಾಲದಲ್ಲಿ ನಾಯಕಿಯಾಗಿ ಅಭಿನಯಿಸಿದ ಈಕೆ ಆಮೇಲೆ ಅವರ ಅಮ್ಮನಾಗಿಯೂ ನಟಿಸಿ ಸೈ ಎನಿಸಿಕೊಂಡವರು. ತಮಿಳು ಸಿನಿಮಾದಲ್ಲೂ ಎಂ.ಜಿ.ಆರ್‌., ಶಿವಾಜಿ ಗಣೇಶನ್‌ ಅವರಂಥ ನಟರ ಜೊತೆಗೆ ಅಭಿನಯಿಸಿರುವ ಪಂಡರಿಬಾಯಿ ದೀರ್ಘ ಕಾಲ ನಟಿಯಾಗಿ ಉಳಿದವರು.

ಎಂಟು ವರ್ಷಗಳ ಹಿಂದೆ ವೆಲ್ಲೂರು ರಸ್ತೆ ಅಪಘಾತದಲ್ಲಿ ಅವರ ಒಂದು ಕೈ ತೀರಾ ಘಾಸಿಯಾಗಿದ್ದರಿಂದ, ಅದನ್ನು ವೈದ್ಯರು ಕತ್ತರಿಸಬೇಕಾಯಿತು. ಅನೇಕ ವರ್ಷಗಳಿಂದ ನಟಿಗೆ ಮಧುಮೇಹ ರೋಗ ಕಾಡುತ್ತಿದ್ದು, ಈಗ ಮೂತ್ರಪಿಂಡದ ಸಮಸ್ಯೆಯನ್ನು ತಂದೊಡ್ಡಿದೆ. ಈ ಹಿರಿಯ ಕಲಾವಿದೆ ಬೇಗ ಗುಣಮುಖರಾಗಲಿ.

ಅಂದಹಾಗೆ, ಇವರ ಆಸ್ಪತ್ರೆಯ ಖರ್ಚನ್ನೆಲ್ಲಾ ಜಯಲಲಿತಾ ಅವರ ಅಮ್ಮನ ಟ್ರಸ್ಟೇ ಭರಿಸಲಿರುವುದು ಒಳ್ಳೆಯ ಸುದ್ದಿ. ಪದೇಪದೇ ಆಸ್ಪತ್ರೆಗೆ ಫೋನಾಯಿಸಿ ಪಂಡರಿಬಾಯಿ ಅವರ ದೇಹ ಸ್ಥಿತಿಯನ್ನು ಜಯಲಲಿತಾ ವಿಚಾರಿಸುತ್ತಿರುವುದು ಶ್ಲಾಘನೀಯ. ಒಂದು ಕಾಲದಲ್ಲಿ ತಾವೂ ನಟಿಯಾಗಿದ್ದ ಜಯಲಲಿತಾ ಕಷ್ಟ ಕಾಲದಲ್ಲಿ ಕಲಾವಿದೆಯ ಕೈಹಿಡಿದಿರುವುದನ್ನು ಮೆಚ್ಚಲೇಬೇಕು.

English summary
Pandaribai hospitalised, Jaya to spend for her treatment

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada