ಈ ವರ್ಷ 6 ತಿಂಗಳಲ್ಲಿ ಸ್ಟಾರ್ಸ್ ಚಿತ್ರಗಳಿಲ್ಲದೇ ಚಿತ್ರರಂಗ ಖಾಲಿ ಖಾಲಿ: 108 ಸಿನಿಮಾಗಳಲ್ಲಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?
ನೋಡ ನೋಡುತ್ತಲೇ ಹೊಸ ವರ್ಷದಲ್ಲಿ 6 ತಿಂಗಳು ಕಳೆದೇ ಹೋಗಿದೆ. ಈ 24 ವಾರಗಳಲ್ಲಿ ಕನ್ನಡದ ನೂರಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿತ್ತು. ಆದರೆ ಈ 6 ತಿಂಗಳಲ್ಲಿ ಸ್ಯಾಂಡಲ್‌ವುಡ್ ಸಾಧನೆ ನೀರಸ ಎನಿಸುತ್ತದೆ. ಸ್ಟಾರ್ ನಟರ ಸಿನಿಮಾಗಳಿಲ್ಲದೇ ಚಿತ್ರರಂಗ ಬಣಗುಟ್ಟಿದ್ದು ಸುಳ್ಳಲ್ಲ. ಇಂಡಸ್ಟ್ರಿ ಪ್ಯಾನ್ ಇಂಡಿಯಾಗಳ ಹಿಂದೆ ಬಿದ್ದು ಹಿಂದಕ್ಕೆ ಹೋಗ್ತಿದೆ.
ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಿದ್ರೆ ಮಾತ್ರ ಇಂಡಸ್ಟ್ರಿಗೆ ಉಳಿಗಾಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ ಯಾರು ಕೂಡ ಅದನ್ನು ಪಾಲಿಸುತ್ತಿಲ್ಲ. ಪರಿಣಾಮ ದೊಡ್ಡ ಸಿನಿಮಾಗಳಿಲ್ಲದೇ ಥಿಯೇಟರ್‌ಗಳು ಮುಚ್ಚುವಂತಾಗಿದೆ. ಸ್ಟಾರ್ ಕಲಾವಿದರು ಸಿನಿಮಾ ಮಾಡ್ತಿಲ್ಲ. ಹೊಸಬರ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರ್ತಿಲ್ಲ. ಇದೆಲ್ಲದರ ಪರಿಣಾಮವನ್ನು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಎದುರಿಸುವಂತಾಗಿದೆ. ಪ್ರೇಕ್ಷಕರು ಬರದೇ ಥಿಯೇಟರ್‌ಗಳ ನಿರ್ವಹಣೆ ಕಷ್ಟವಾಗುತ್ತಿದೆ.

ಈ 6 ತಿಂಗಳಲ್ಲಿ ರಿಲೀಸ್ ಆಗಿದ್ದು ಒಟ್ಟು 108 ಕನ್ನಡ ಸಿನಿಮಾಗಳು. ಅದರಲ್ಲಿ ಮೂರ್ನಾಲ್ಕು ಸ್ಟಾರ್ ಸಿನಿಮಾಗಳು ಮಾತ್ರ ಬಂದವು. ಅವು ಕೂಡ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾದವು. ಇದ್ದಿದ್ದರಲ್ಲಿ 'ಕ್ರಾಂತಿ', 'ಡೇರ್‌ಡೆವಿಲ್ ಮುಸ್ತಾಫಾ', 'ಗುರುದೇವ್ ಹೊಯ್ಸಳ' ಸಿನಿಮಾಗಳು ಕೊಂಚ ಮಟ್ಟಿಗೆ ಪ್ರೇಕ್ಷಕ ಗಮನ ಸೆಳೆದವು.

'ಕ್ರಾಂತಿ' 109 ಕೋಟಿ ರೂ. ಬ್ಯುಸಿನೆಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಜನವರಿ 26ಕ್ಕೆ ರಿಲೀಸ್ ಆಗಿತ್ತು. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್, ರಚಿತಾ ರಾಮ್ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಸಿನಿಮಾ ರಿಲೀಸ್ ಆದ 4 ದಿನಕ್ಕೆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ 109 ಕೋಟಿ ರೂ. ಎಂದು ವಿನ್ಯಾಸಗೊಳಿಸಿದ ಕೇಕ್ ಕತ್ತರಿಸಿ ಸಂಭ್ರಮಿಸಿತು.
'ಗುರುದೇವ್ ಹೊಯ್ಸಳ' ಹವಾ
ಡಾಲಿ ಧನಂಜಯ್ ನಟನೆಯ 'ಗುರುದೇವ್ ಹೊಯ್ಸಳ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬೆಳಗಾಗಿ ಹಿನ್ನೆಲೆಯಲ್ಲಿ ವಿಜಯ್ ಆಕ್ಷನ್ ಕಟ್ ಹೇಳಿದ್ದ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು. ನಿರ್ಮಾಪಕರು ಕಲೆಕ್ಷನ್ ರಿವೀಲ್ ಮಾಡಲಿಲ್ಲ. ಆದರೆ ಸಿನಿಮಾ ಆವರೇಜ್ ಹಿಟ್ ಲಿಸ್ಟ್ ಸೇರಿತ್ತು. ಇನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ 'ಕಬ್ಜ' ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡಿತ್ತು. ಆರ್. ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಿದ್ದರು. ಶಿವಣ್ಣ, ಸುದೀಪ್ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರಕ್ಕೆ ಪ್ಲಸ್ ಆಗಲಿಲ್ಲ.
ಗೆದ್ದ 'ಡೇರ್ ಡೆವಲ್ ಮುಸ್ತಾಫಾ'
ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆ ಆಧರಿಸಿ ಹೊಸ ಪ್ರತಿಭೆಗಳು ಸೇರಿ ಮಾಡಿದ 'ಡೇರ್ ಡೆವಲ್ ಮುಸ್ತಾಫಾ' ಸಿನಿಮಾ ಗೆಲುವಿನ ದಡ ಸೇರಿತ್ತು. ಡಾಲಿ ಧನಂಜಯ್ ಚಿತ್ರತಂಡದ ಬೆನ್ನಿಗೆ ನಿಂತಿದ್ದರು. ಕೆಆರ್‌ಜಿ ಸಂಸ್ಥೆ ಸಿನಿಮಾ ರಿಲೀಸ್ ಮಾಡಿ ಸಕ್ಸಸ್ ಕಂಡಿತ್ತು. ತೇಜಸ್ವಿಯವರ ಅಭಿಮಾನಿಗಳೇ ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ನಿರ್ಮಿಸಿದ್ದರು. ಶಿಶಿರ್ ಬೈಕಾಡಿ, ಆದಿತ್ಯಾ ಆಶ್ರೀ, ಸುಪ್ರೀತರ್ ಭಾರಧ್ಜಜ್ ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದರು. ಶಶಾಂಕ್ ಸೊಗ್ಗಲ್ ಆಕ್ಷನ್ ಕಟ್ ಹೇಳಿದ್ದರು.
ಕನ್ನಡ ಚಿತ್ರರಂಗ ಎಚ್ಚೆತ್ತುಕೊಳ್ಳಬೇಕಿದೆ
ಇನ್ನುಳಿದಂತೆ 'ಹೊಂದಿಸಿ ಬರೆಯಿರಿ', 'ರಾಘವೇಂದ್ರ ಸ್ಟೋರ್ಸ್', 'ಆರ್ಕೇಸ್ಟ್ರಾ ಮೈಸೂರು', 'ಶಿವಾಜಿ ಸುರತ್ಕಲ್'- 2 ಸೇರಿದಂತೆ ಒಂದಷ್ಟು ಸಿನಿಮಾಗಳು ಪರವಾಗಿಲ್ಲ ಎನಿಸಿಕೊಂಡರೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಮುಂದಿನ 6 ತಿಂಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿದ್ದು ಮತ್ತೆ ಚಿತ್ರರಂಗದ ವೈಭವ ಮರಳಿ ಬರುತ್ತಾ ಕಾದು ನೋಡಬೇಕಿದೆ. ಈ 6 ತಿಂಗಳ ಸಾಧನೆ ಬಗ್ಗೆ ಪರಾಮರ್ಶೆ ಮಾಡಿಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಚಿತ್ರರಂಗ ಮತ್ತಷ್ಟು ನಷ್ಟ ಎದುರಿಸಬೇಕಾಗಬಹುದು.


Click it and Unblock the Notifications











