ತೆಲುಗಿನಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಕಿಚ್ಚ ಸುದೀಪ್
ಶೀರ್ಷಿಕೆ ವಿವಾದಕ್ಕೆ ಒಳಗಾಗಿರುವ ಸುದೀಪ್, ಭಾವನಾ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ 'ರಾಜಾ ವಿಷ್ಣುವರ್ಧನ'. ಇದು ನಿರ್ಮಾಪಕ ಪ್ರಚಂಡ ಕುಳ್ಳ ದ್ವಾರಕೀಶ್ ಅವರ ಕನಸಿನ ಚಿತ್ರ ಕೂಡ. ಇನ್ನೂ ಚಿತ್ರೀಕರಣದ ಹಂತದಲ್ಲಿರುವ ಈ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲು ಕಸರತ್ತು ಆರಂಭವಾಗಿದೆಯೇ? ಮೂಲಗಳ ಪ್ರಕಾರ ಹೌದು.
ಕನ್ನಡ ಹೊರತಾಗಿ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ಕಿಚ್ಚ ಸುದೀಪ್ ಈ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗುತ್ತಿದ್ದಾರೆ. ನಾಯಕನ ಪಾತ್ರಕ್ಕಾಗಿ ತೆಲುಗಿನ ಖ್ಯಾತ ನಟ ರವಿತೇಜಾ ಅವರನ್ನು ಸುದೀಪ್ ಸಂಪರ್ಕಿಸಿದ್ದಾರೆ. ಸದ್ಯ ರಾಜಮೌಳಿ ನಿರ್ದೇಶನದ ತೆಲುಗು 'ಈಗಾ' ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಸುದೀಪ್, "ಈ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಹೆಚ್ಚಿನ ವಿವರ ಸದ್ಯಕ್ಕೆ ಬಹಿರಂಗ ಪಡಿಸಲಾಗುವುದಿಲ್ಲ" ಎಂದಿದ್ದಾರೆ.
'ರಾಜಾ ವಿಷ್ಣುವರ್ಧನ' ವರ್ಷಾಂತ್ಯದಲ್ಲಿ ಬಿಡುಗಡೆಯಾಗಬಹುದು. ಆ ವೇಳೆಗೆ ಸುದೀಪ್ 'ಈಗಾ' ಶೂಟಿಂಗ್ ಕೂಡ ಮುಗಿಯುವುದರಿಂದ ತೆಲುಗಿನಲ್ಲಿ ತನ್ನ ಚೊಚ್ಚಲ ನಿರ್ದೇಶನ ಮಾಡುವುದು ಹೆಚ್ಚು ಕಮ್ಮಿ ಖಚಿತ ಎನ್ನುತ್ತವೆ ಮೂಲಗಳು. ಎಲ್ಲಾ ಅಂದುಕೊಂಡಂತೆ ಆದರೆ ಸುದೀಪ್ ಮೊದಲ ಬಾರಿಗೆ ನಟಿಸದೆ ಬರೀ ನಿರ್ದೇಶನಕ್ಕೆ ಸೀಮಿತವಾಗಲಿದ್ದಾರೆ.
ಸುಮಾರು 22 ಕೋಟಿ ಬಜೆಟ್‌ನ 'ಈಗಾ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಬರೀ ಕಂಪ್ಯೂಟರ್ ಗ್ರಾಫಿಕ್ಸ್‌ಗೆ ಐದು ಕೋಟಿ ವೆಚ್ಚ ಮಾಡಿದ್ದಾರೆ. ಈ ಚಿತ್ರದ ಹಿಂದಿ ಮತ್ತು ಇಂಗ್ಲಿಷ್ ರಿಮೇಕ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದು ಆ ಎರಡು ಭಾಷೆಯಲ್ಲೂ ಸುದೀಪ್ ನಟಿಸಲಿದ್ದಾರೆಂದು "ಬೆಂಗಳೂರು ಮಿರರ್" ಪತ್ರಿಕೆ ವರದಿ ಮಾಡಿದೆ.


Click it and Unblock the Notifications











