ದೀಪಿಕಾ ಪಡುಕೋಣೆಗೆ ಸಿಕ್ಕಾಪಟ್ಟೆ ಮೈಕೈ ನೋವು!
ಗುಳಿಕೆನ್ನ ಸುಂದರಿ ದೀಪಿಕಾ ಪಡುಕೋಣೆಗೆ ಅಸಾಧ್ಯ ಮೈಕೈ ನೋವಂತೆ. ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂಬಂತೆ ಈ ನೋವಿಗೂ ಮಾಜಿ ಪ್ರಿಯತಮ ರಣಬೀರ್ ಕಪೂರ್‌ಗೂ ಎತ್ತಣಿಂದ ಎತ್ತಣ ಸಂಬಂಧವೂ ಇಲ್ಲ ಬಿಡಿ. ತನ್ನ ಮುಂದಿನ ಚಿತ್ರದ ಐಟಂ ಹಾಡಿಗೆ ಸಿಕ್ಕಾಪಟ್ಟೆ ಕುಣಿದಿರುವುದೇ ಈ ಪಾಟಿ ನೋವಿಗೆ ಕಾರಣವಾಗಿದೆ.
ಆಕೆಯ ನೋವು ನಿವಾರಣೆಗೆ ಯಾವುದೇ ಗುಳಿಗೆ, ಝಂಡು ಬಾಮ್, ಟೈಗರ್ ಬಾಮ್, ಐಯೋಡೆಕ್ಸ್, ಮೂವ್ ಕೆಲಸಕ್ಕೆ ಬರುತ್ತಿಲ್ಲವಂತೆ. ತುರ್ತಾಗಿ ಆಕೆಗೊಬ್ಬ ನುರಿತ ಫಿಜಿಯೋಥೆರಪಿಸ್ಟ್ ಒಬ್ಬರು ಬೇಕಾಗಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. 'ದಂ ಮಾರೋ ದಂ' ಎಂಬ ಚಿತ್ರದ ಐಟಂ ಹಾಡಿನಲ್ಲಿ ಸಿಕ್ಕಾಪಟ್ಟೆ ಕುಣಿದಿದ್ದಾರೆ. ಆಕೆ ಮಾಡಿರುವ ಈ ಘನಂದಾರಿ ಕೆಲಸಕ್ಕೆ ಅಸಾಧ್ಯ ಮೈಕೈ ನೋವು ಕಾಣಿಸಿಕೊಂಡಿದೆ. ಸದ್ಯಕ್ಕೆ ದೀಪಿಕಾ ಬೆಡ್ ರೆಸ್ಟ್‌ನಲ್ಲಿದ್ದಾರೆ.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ಆರ್ ಡಿ ಬರ್ಮನ್ ಸಂಗೀತ ಸಂಯೋಸಿದ್ದ "ದಂ ಮಾರೋ ದಂ..." ರಿಮಿಕ್ಸ್ ಹಾಡಿನಲ್ಲಿ ದೀಪಿಕಾ ಮೈಚಳಿ ಬಿಟ್ಟು ಕುಣಿದಿದ್ದಾರೆ. ಆಕೆ ಹಿಂದೆಂದೂ ಕುಣಿಯದ ರೀತಿಯಲ್ಲಿ ಈ ಚಿತ್ರದಲ್ಲಿ ಕುಣಿದಿರುವುದು ವಿಶೇಷ. ಇದೊಂದು ಫಾಸ್ಟ್ ಬೀಟ್ ಹಾಡಾಗಿದ್ದು ದೀಪಿಕಾ ಅಷ್ಟೇ ವೇಗವಾಗಿ ನೃತ್ಯ ಮಾಡಿ ಮೈಕೈ ನೋಯಿಸಿಕೊಂಡಿದ್ದಾರೆ.
ಈ ಗೀತೆಗೆ ಬಾಸ್ಕೋ ಮತ್ತು ಸೀಸರ್ ಎಂಬುವವರು ನೃತ್ಯ ನಿರ್ದೇಶನ ಮಾಡಿದ್ದು, ತುಂಬಾ ಪ್ರಯಾಸಕರವಾದ ನೃತ್ಯ ಭಂಗಿಗಳಿವೆಯಂತೆ. ಒಟ್ಟಿನಲ್ಲಿ ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಅವರನ್ನು ನೃತ್ಯದಲ್ಲಿ ಮಣಿಸಬೇಕು ಎಂಬಂತೆ ಜಿದ್ದಿಗೆ ಬಿದ್ದು ದೀಪಿಕಾ ಕುಣಿದಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಅಡ್ಡ ಪರಿಣಾಮ ಎಂದರೆ ಅಸಾಧ್ಯ ಮೈಕೈ ನೋವು. ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿದಂತಾಗಿದೆ ದೀಪಿಕಾ ಪರಿಸ್ಥಿತಿ. [ದೀಪಿಕಾ ಪಡುಕೋಣೆ]


Click it and Unblock the Notifications











