ದಟ್ಸ್ ಕನ್ನಡ ಲೇಖನಕ್ಕೆ 'ಗನ್' ಹರೀಶ್ ರಾಜ್ ಪ್ರತಿಕ್ರಿಯೆ

"ಇಂಥ ಅಂತೆ ಕಂತೆಗಳ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದು ಗನ್ ಚಿತ್ರದ ನಿರ್ಮಾಪಕ ಮುರಳಿ. ಆತ ನೊಂದಾಯಿತ ನಿರ್ಮಾಪಕನಲ್ಲ ಮತ್ತು ಫೈನಾನ್ಸರ್ ಅಲ್ಲ. ಗನ್ ಚಿತ್ರ ನಿರ್ಮಾಣವಾದದ್ದೇ ಹರೀಶ್ ರಾಜ್ ಬ್ಯಾನರ್ ಅಡಿಯಲ್ಲಿ. ಆತನಿಗೆ ನಾನು ಒಂದೇ ಒಂದು ಪೈಸೆಯನ್ನೂ ನೀಡಬೇಕಾಗಿಲ್ಲ. ನನ್ನ ಶ್ರೇಯಸ್ಸನ್ನು ಸಹಿಸದ 'ಹಾರಿಬಲ್' ನಿರ್ಮಾಪಕ ಮುರಳಿ ನನ್ನ ವಿರುದ್ಧ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದ್ದಾನೆ" ಎಂದು ಮೊಬೈಲ್ ಮಾತುಕತೆಯಲ್ಲಿ ತಿಳಿಸಿದರು.
"ನಾನೊಬ್ಬ ಉತ್ತಮ ನಟ ಅಂತ ಎಲ್ಲರಿಗೂ ಗೊತ್ತು. ಹಿಂದೆ ಚಿತ್ರಗಳು ಸೋತಿದ್ದರೂ ಕಲಾಸರಸ್ವತಿ ನನ್ನ ಕೈಬಿಟ್ಟಿಲ್ಲ. ಈಗಾಗಲೆ, ಗೋವಿಂದಾಯನಮಃ, ಚಾಲೇಂಜ್, ಭಾಷಾ ಸಿತಾರಾ ಮತ್ತು ಶ್ರೀಕ್ಷೇತ್ರ ಆದಿಚುಂಚನಗಿರಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಸಾಕಷ್ಟು ಡಿಮ್ಯಾಂಡ್ ಇದೆ. ಇಲ್ಲದ ಸಾಲ ತೀರಿಸಲು, ಲೇಖನದಲ್ಲಿ ಪ್ರಕಟವಾದಂತೆ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ. ಬೇಕಿದ್ದರೆ ಕಾಲೇಜಿನ ಲೆಕ್ಚರರ್ ಕೆಲಸ ಸಿಗುವುದು ಕಷ್ಟವೇನಲ್ಲ. ಆದರೆ, ಅವಶ್ಯಕತೆಯಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.
"ನಾನು ಚಿತ್ರರಂಗಕ್ಕೆ ಬಂದಿದ್ದು 1997ರಲ್ಲಿ. ಚಿತ್ರರಂಗದಲ್ಲಿ ಹಣಕಾಸಿನ ಸಹಾಯ ನೀಡುವುದು ಇಸಿದುಕೊಳ್ಳುವುದು, ಸೋಲು ಗೆಲುವು ಇದ್ದದ್ದೇ. ಕೆಲ ಚಿತ್ರಗಳು ಸೋತಿದ್ದರೂ ದೇವರ ದಯೆಯಿಂದ ಚೆನ್ನಾಗಿದ್ದೇನೆ. ಚಿತ್ರದ ಸೋಲು ಮತ್ತಷ್ಟು ದುಡಿಯಲು ಪ್ರೇರೇಪಣೆ ನೀಡಿದೆ. ಇಂಥ ಸುಂದರವಾದ ಚಿತ್ರರಂಗವನ್ನು ಬಿಡುವ ಉದ್ದೇಶ ಖಂಡಿತ ಇಲ್ಲ. ನನ್ನನ್ನು ಚಿತ್ರರಂಗದಿಂದ ಪರ್ಮನೆಂಟಾಗಿ ತೊಲಗಿಸಲೆಂದು ವ್ಯವಸ್ಥಿತ ಸಂಚು ನಡೆಯುತ್ತಿದೆ. ಇಂಥ ಸಂಚುಗಳಿಗೆ ನಾನು ಅವಕಾಶ ನೀಡುವುದಿಲ್ಲ" ಎಂದು ಹರೀಶ್ ಮನಸ್ಸನ್ನು ಬರಿದು ಮಾಡಿಕೊಂಡರು.


Click it and Unblock the Notifications











