»   » ಕನ್ನಡ ಚಿತ್ರಗಳಲ್ಲಿ ಹೆಚ್ಚುತ್ತಿರುವ ಹಿಂಸೆ, ಸೆನ್ಸಾರ್ ಆತಂಕ

ಕನ್ನಡ ಚಿತ್ರಗಳಲ್ಲಿ ಹೆಚ್ಚುತ್ತಿರುವ ಹಿಂಸೆ, ಸೆನ್ಸಾರ್ ಆತಂಕ

Subscribe to Filmibeat Kannada

ಕನ್ನಡ ಚಿತ್ರಗಳಲ್ಲಿ ಹಿಂಸೆಯ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ. ಅನ್ಯ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಶೇ.29ರಷ್ಟು ಹಿಂಸಾ ಪ್ರಧಾನ ಚಿತ್ರಗಳು ತಯಾರಾಗುತ್ತಿವೆ. ತಮಿಳಿನಲ್ಲಿ ಈ ಪ್ರಮಾಣ ಶೇ.4 ರಷ್ಟಿದ್ದು, ತೆಲುಗಿನಲ್ಲಿ ಶೇ. 2.6ರಷ್ಟಿದೆ. ಆದರೆ ನಮ್ಮಲ್ಲಿ ಮಾತ್ರ ಹಿಂಸೆಯ ಪ್ರಮಾಣ ಹೆಚ್ಚುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ,ಕನ್ನಡ ಚಿತ್ರರಂಗದ ಅಭಿರುಚಿ ಎತ್ತ ಸಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕನ್ನಡದ 127 ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ವರ್ಷ ಅಕ್ಟೋಬರ್ 14ರವರೆಗೆ 145 ಸಿನಿಮಾಗಳಿಗೆ ಅನುಮತಿ ನೀಡಿದ್ದೇವೆ. ವರ್ಷ್ಯಾಂತ್ಯಕ್ಕೆ ಇನ್ನೂ ಕನಿಷ್ಠ 30-35 ಚಿತ್ರಗಳು ನಮ್ಮ ಮುಂದೆ ಬರಲಿವೆ. ಬೆಳೆಯೊಂದಿಗೆ ಕಳೆ ಪ್ರಮಾಣ ಹೆಚ್ಚುತ್ತಿದೆ ಎಂದು ಹೇಳಿದರು. 'ನೋಡಿ ಸ್ವಾಮಿ ನಾವಿರೋದೆ ಹೀಗೆ' ಎಂದು ಶೇ.90ರಷ್ಟು ನಿರ್ದೇಶಕರು ಕಳೆಪೆ ಗುಣಮಟ್ಟದ ಚಿತ್ರಗಳನ್ನು ನಿರ್ದೇಶಿಸುತ್ತಾರೆ. ಇತರೆ ಭಾಷೆಗಳಿಂದ ಕದ್ದ ಮಾಲನ್ನು ಉಪಯೋಗಿಸಿ ಚಿತ್ರ ತಯಾರಿಸುತ್ತಿದ್ದಾರೆ ಎಂದರು.

ಹೊಡಿ, ಬಡಿ, ಕಡಿ ಚಿತ್ರಗಳನ್ನು ಯಾಕೆ ನಿರ್ಮಿಸುತ್ತೀರಿ ಎಂದು ನಿರ್ಮಾಪಕರನ್ನು ಕೇಳಿದರೆ, ಜನ ಇಷ್ಟ ಪಡುವುದು ಅಂಥಹ ಚಿತ್ರಗಳನ್ನೆ. ಹಾಕಿದ ಬಂಡವಾಳಕ್ಕೆ ಮೋಸ ಆಗಲ್ಲ ಎಂಬ ಲೆಕ್ಕಾಚಾರ ಅವರದು. ಈ ರೀತಿಯ ಧೋರಣೆ ಹೋಗಬೇಕು. ಉತ್ತಮ ಅಭಿರುಚಿಯುಳ್ಳ ಚಿತ್ರಗಳು ಹೆಚ್ಚಾಗಿ ಬರಬೇಕು ಎಂದರು. ಕಳೆದ ಭಾನುವಾರ ಸಾಹಿತಿ ಹಾಗೂ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಏಕಲವ್ಯ' ಚಿತ್ರದ 'ನೂರು ದಿನ ನೂರು ಊರು' ಯಾತ್ರೆ ಕುರಿತ ಸಂದರ್ಭದಲ್ಲಿ ಚಂದ್ರಶೇಖರ್ ಈ ವಿಚಾರಗಳನ್ನು ಹೊರಗೆಡುಹಿದರು.

ಕನ್ನಡದಲ್ಲಿ ಹಿಂಸಾ ಪ್ರಧಾನ ಚಿತ್ರಗಳು ಹೆಚ್ಚುತ್ತಿರುವ ಕಾರಣ ಮಧ್ಯಮ ವರ್ಗದ ಬಹಳಷ್ಟು ಪ್ರೇಕ್ಷಕರು ಚಿತ್ರಮಂದಿರಗಳ ಕಡೆಗೆ ತಲೆಹಾಕುತ್ತಿಲ್ಲ. ಅಂತರ್ಜಾಲ ಹಾಗೂ ದೂರದರ್ಶನ ಮಾಧ್ಯಮದ ನಂತರ ಬಹಳಷ್ಟು ಪ್ರಬಲ ಮಾಧ್ಯಮ ಸಿನಿಮಾ. ಈ ಮಾಧ್ಯಮವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರಗಳು ಬರಬೇಕು ಎಂದು ಚಂದ್ರಶೇಖರ ಆಶಿಸಿದರು.

(ದಟ್ಸ್ ಕನ್ನಡ ಸಿನಿವಾರ್ತೆ)

ಅಡಕತ್ತರಿಯಲ್ಲಿ ಬುದ್ಧಿವಂತ!
ಮಾದೇಶನಿಗೆ ಸೆನ್ಸಾರ್ ನಿಂದ ಕೊನೆಗೂ ಮುಕ್ತಿ
ಮಾದೇಶನಿಗೆ ಸೆನ್ಸಾರ್ ಮಂಡಳಿಯ ಮಂಗಳಾರತಿ
ಮಂದಾಕಿನಿಯನ್ನೂ ಬಿಡದ 'ಎ' ಸರ್ಟಿಫಿಕೇಟ್ ಭೂತ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada