ಮಳೆ ಹುಡುಗಿ ಪೂಜಾ ತುಳು ಚಿತ್ರಕ್ಕೆ ಎಂಟ್ರಿ
ಮುಂಗಾರು ಮಳೆ ನಂತರ ವೈವಿಧ್ಯಮಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾ ಬಂದ ಪೂಜಾಗಾಂಧಿ, ಕನ್ನಡ ಕಲಿತು ಅಪ್ಪಟ್ಟ ಕನ್ನಡತಿ ಎಂದು ಮೆರೆಯುತ್ತಿರುವುದು ಹಳೆ ಸಂಗತಿ. ಕನ್ನಡ ಭಾಷೆ ಮೇಲೆ ಪ್ರಭುತ್ವ ಸಾಧಿಸಿದ ಮೇಲೆ, ತುಳು ಭಾಷೆ ಕಲಿತುಕೊಳ್ಳಲು ಉತ್ಸುಕರಾಗಿದ್ದಾರೆ. ತಮ್ಮ ಅಪಾರ್ಟ್ಮೆಂಟ್ ಮಹಡಿಯಿಂದ ಉಪ್ಪಿ ಮನೆಗೆ ಇಣುಕುತ್ತಿರುವ ಪೂಜಾಗೆ, ಉಪ್ಪಿಯಿಂದ ತುಳು ಕಲಿಯುವ ಆಸೆಯಂತೆ.
ತುಳು ಕಲಿಯುವ ಹುಚ್ಚು ಈಕೆಗೆ ಯಾರು ಹಚ್ಚಿದರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಬೀರೆ ದೇವಪೂಂಜೆ' ಎಂಬ ಐತಿಹಾಸಿಕ ತುಳು ಸಿನಿಮಾದಲ್ಲಿ ಪೂಜಾ ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡದಲ್ಲಿ ಪೂಜಾ ಅಭಿನಯದ ಆಪ್ತ, ತವರಿನ ಋಣ, ನೀ ರಾಣಿ ನಾ ಮಹಾರಾಣಿ(ದ್ವಿಪಾತ್ರ) ತೆರೆಗೆ ಬರಬೇಕಿದೆ.
ಬೀರೆ ದೇವಪೂಂಜಾ ಚಿತ್ರವನ್ನು ರಾಜ್ಯ ಪ್ರಶಸ್ತಿ ವಿಜೇತ, ಕೋಟಿ ಚೆನ್ನಯ್ಯ ಚಿತ್ರ ಖ್ಯಾತಿಯ ಆರ್ ಧನರಾಜ್ ನಿರ್ದೇಶಿಸುತ್ತಿದ್ದಾರೆ. ಬಂಟ ಸಮುದಾಯದ ವಿಶಿಷ್ಟ ವ್ಯಕ್ತಿತ್ವದ ಪರಿಚಯ ನೀಡಿವ ದೇವ ಪೂಂಜಾ ಚಿತ್ರದಲ್ಲಿ ಗಂಡನನ್ನು ಅತಿಹೆಚ್ಚು ಪ್ರೀತಿಸುವ ಹೆಂಡತಿಯಾಗಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ.
ಸಿದ್ಧಾರ್ಥ್, ಲೀಲಾವತಿ, ಉಮಾಶ್ರೀ, ಮನೋಹರ್ ಪ್ರಸಾದ್, ನವೀನ್ ಡಿ ಪಡಿಲ್, ಭೋಜರಾಜ್ ವಮಂಜೂರು ಪ್ರಮುಖ ಭೂಮಿಕೆಯಲ್ಲಿದ್ದು, ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪುತ್ರ ಮಣಿಕಾಂತ್ ಕದ್ರಿ ಸಂಗೀತ ನೀಡಲಿದ್ದಾರೆ. ಅ.22 ರ ಸಾಂಪ್ರದಾಯಿಕ ಕಾರ್ಯಕ್ರಮ 'ಬೀರೆ' ದಿನದಂದು ಚಿತ್ರ ಸೆಟ್ಟೇರಲಿದೆ. ಪಡುಬಿದ್ರಿ, ವೇಣೂರು, ಮುಲ್ಕಿ ಮತ್ತಿತ್ತರ ಪ್ರದೇಶಗಳಲ್ಲಿ ಚಿತ್ರೀಕರಣ ಸಾಗಲಿದೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS


Click it and Unblock the Notifications











