ಗುರು ಗಡ್ಡದ ಗುಟ್ಟೇನು ಗುರುವೆ
ಗುರುಪ್ರಸಾದ್ ಗೆ ರಾಜ್ ಕುಮಾರ್ ಅಂದ್ರೆ ಇಷ್ಟ ಅನ್ಸುತ್ತೆ ಅದಕ್ಕೆ 'ಎದ್ದೇಳು ಮಂಜುನಾಥ' ದಲ್ಲಿ ಅಗಾಗ ಆಣ್ಣಾವ್ರ ನೆನಪಿಸಿಕೊಂಡಿದ್ದಾರೆ ಎಂಬ ಮಾತುಗಳಿಗೆ ಪುಷ್ಟಿ ನೀಡುವಂಥ ಸುದ್ದಿ ಮಿರರ್ ನಲ್ಲಿ ಪ್ರಕಟವಾಗಿದೆ. ಗುರು ಅವರ ಸ್ಫುರದ್ರೂಪಿ ಮೊಗದ ಹಿಂದಿನ ಶಕ್ತಿ ಡಾ. ರಾಜ್ ಎಂಬ ಸಂಗತಿ ನಿಜ ಎಂಬುದು ಆಪ್ತಮೂಲಗಳಿಂದ ತಿಳಿದುಬಂದಿದೆ.
ಆಗಿನ್ನೂ ಮಠ ಬಿಡುಗಡೆಯಾಗಿ ಒಂದೆರಡು ವಾರ ಕಳೆದಿತ್ತು. ಪುನೀತ್ ಅವರ ಮಗು ಹುಟ್ಟುಹಬ್ಬದ ಕಾರ್ಯಕ್ರಮ ಇತ್ತು. ಡಾ. ರಾಜ್ ಅವರ ಮನೆಗೆ ಎಂದಿನಂತೆ ನನ್ನ ಗಡ್ಡ ಹೊತ್ತು ನಡೆದೆ.ಆಗಿನ್ನೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿರಿಸಿದ್ದ ನನಗೆ ಮುಖ್ಯವಾಗಿ ರಾಜಣ್ಣನ ಹಾರೈಕೆ ಬೇಕಿತ್ತು. ಮಠ ಚಿತ್ರದ ಬಗ್ಗೆ ಹೇಳಿದೆ. ಪಿವಿಆರ್ ನಲ್ಲೇ ಆರಾಮವಾಗಿ ಕೂತು ನೋಡಿ ಎಂದೆ. ಖುಷಿಯಿಂದ ಕಥೆ ಕೇಳಿದ ರಾಜ್ , ನನ್ನನ್ನೇ ತದೇಕಚಿತ್ತದಿಂದ ನೋಡುತ್ತಾ ನನ್ನ ಗಡ್ಡದ ಮೇಲೆ ತಮ್ಮ ನೀಳ ಕೈಬೆರಳುಗಳನ್ನಾಡಿಸಿ ನಿಮಗೆ ಗಡ್ಡ ಚೆಂದ ಕಾಣುತ್ತೆ. ತೆಗಿಬೇಡಿ ಅಂದ್ರು.ರಾಜಣ್ಣನ ಹಾರೈಕೆಯಂತೆ, ನಾನು ಅಂದಿನಿಂದ ಶೇವ್ ಮಾಡಲೇ ಇಲ್ಲ ಎಂದರು ಗುರು.
ಮಠ ಚಿತ್ರ ಥೇಟರ್ ಹೊಕ್ಕಿದ್ದು 2006 ರ ಫೆಬ್ರವರಿ ತಿಂಗಳಲ್ಲಿ ಪಿವಿಆರ್ ನಲ್ಲಿ ಅರ್ಧ ಶತಕ ಬಾರಿಸಿದ ಮೊದಲ ಕನ್ನಡಚಿತ್ರ ಎನಿಸಿತು. ಲಕ್ಷಾಂತರ ರು ಹಣಗಳಿಕೆ, ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿತು. ಆದರೆ ಇಷ್ಟಾದ್ರೂ ಗುರುಗೆ ತೃಪ್ತಿ ಆಗಲಿಲ್ಲ. ನೆಚ್ಚಿನ ನಟ ರಾಜ್ ತನ್ನ ನಿರ್ದೇಶನದ ಚಿತ್ರವನ್ನು ನೋಡದೆ ಏಪ್ರಿಲ್ ನಲ್ಲಿ ಪರಲೋಕ ಯಾತ್ರೆ ಮಾಡಿದ್ದು, ಇಂದಿಗೂ ಗುರು ಅವರನ್ನು ಕಾಡುತ್ತಿದೆಯಂತೆ.
ಈಗ ಸುಮಾರು ಎರಡು ವರ್ಷ ಸುದೀರ್ಘ ನಿದ್ದೆಯ ನಂತರ ಎದ್ದೇಳು ಮಂಜುನಾಥ ಚಿತ್ರ ತೆರೆ ಕಂಡು , ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಠ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ಗುರು, ಎದ್ದೇಳು ಮಂಜುನಾಥದಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಆದರೆ ಪಾತ್ರಕ್ಕಾಗಿ ತಮ್ಮ ಗಡ್ಡವನ್ನು ಬಲಿಕೊಟ್ಟಿಲ್ಲ. ಪಾತ್ರಧಾರಿಯನ್ನು ಮುಸ್ಲಿಂ ಇನ್ಸ್ ಪೆಕ್ಟರ್ ಮಾಡಿ, ಗಡ್ಡಧಾರಿಯಾಗೇ ಕಾಣಿಸಿಕೊಂಡು ಗುರು ಜಾಣತನ ಮೆರೆದಿದ್ದಾರೆ. ಇನ್ನೊಂದು ವಿಷ್ಯ, ಋಷಿಗಳಂತೆ, ಮುಲ್ಲಾಗಳಂತೆ ಗಡ್ಡ ಬಿಟ್ಟಿದ್ದರೂ ಗುರುಗೆ ಫ್ರೆಂಚ್ ದಾಡಿ ತುಂಬಾ ಇಷ್ಟ.


Click it and Unblock the Notifications