»   » ವಜ್ರ ದೇಹದ ಹಿಂದಿನ ಮುಗ್ಧ ಮನಸು

ವಜ್ರ ದೇಹದ ಹಿಂದಿನ ಮುಗ್ಧ ಮನಸು

Subscribe to Filmibeat Kannada

ಇತರ ನಟರಿಗಿಂತ ವಿಭಿನ್ನವಾಗಿರುವ 'ದುನಿಯಾ' ವಿಜಯ್ ವಿಭಿನ್ನವಾಗಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಂದಿನ ಸ್ಥಿತಿಗೆ ಅಹಂಕಾರಪಡದ, ಹಿಂದಿನ ಸ್ಥಿತಿಯನ್ನು ಮರೆಯದ ವಿಜಯ್‌ಗೆ ಹುಟ್ಟುಹಬ್ಬದ ವಿಶೇಷ ಶುಭಾಶಯ ಸಲ್ಲಿಸಲು ಅನೇಕ ಕಾರಣಗಳಿವೆ. ನೀವೂ ಹಾರೈಸಿ.

'ಅವ್ವ' ಆಗತಾನೆ ಸೆಟ್ಟೇರಲು ಸಿದ್ಧವಾಗಿ ನಿಂತಿತ್ತು. ವಿಜಯ್‌ಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಬಂದಿತ್ತು. ಸುತ್ತಲೂ ಜನಸಾಗರ. ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ. ವಿಜಯ್ ಮೊಗದಲ್ಲಿ ಅದೇ ಅಸ್ಖಲಿತ ನಗೆ. ಅವ್ವ ತಂಡದ ಇತರ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ನಾಯಕ, ನಾಯಕಿ ಎಲ್ಲ ಸ್ಟೇಜ್ ಮೇಲೆ ಆಸೀನರಾಗಿದ್ದಾರೆ. ಇನ್ನೇನು ಪತ್ರಿಕಾಗೋಷ್ಠಿ ಪ್ರಾರಂಭವಾಗುವ ಹಂತದಲ್ಲಿತ್ತು. ಆದರೆ ವಿಜಯ್ ಮೊಗದಲ್ಲಿ ಏನೋ ಒಂಥರಾ ಚಡಪಡಿಕೆ. ಕುರ್ಚಿಯಲ್ಲಿ ಕೂತರೂ ಮುಳ್ಳು ಮೇಲೆ ಕುಂತಂಥ ಯಾತನೆ. ಏಕೆಂದರೆ ಸ್ಟೇಜ್ ಮೇಲೆ ಇರಲೇಬೇಕಾದ ಇನ್ನೊಬ್ಬ ಕಲಾವಿದ ಪ್ರೇಕ್ಷಕರ ಜಾಗದಲ್ಲಿ ಕುಳಿತಿದ್ದರು. ವೇದಿಕೆಯ ಮೇಲೆ ಜಾಗವಿರಲಿಲ್ಲ.

ವಿಜಯ್ ಎದ್ದುನಿಂತವರೇ "ದಯವಿಟ್ಟು ತಾವೂ ವೇದಿಕೆಯ ಮೇಲೆ ಬರಬೇಕೆಂದು" ಪ್ರೇಕ್ಷಕರ ನಡುವೆ ಕುಂತಿದ್ದ ನಟರಿಗೆ ದುಂಬಾಲು ಬಿದ್ದರು. ಅಲ್ಲಿ ಜಾಗವಿಲ್ಲವೆಂದರೂ ಕೇಳಲಿಲ್ಲ. ಹೇಗೋ ಮಾಡಿ ಅವರನ್ನು ತಾವೇ ಸ್ವತಃ ಎಬ್ಬಿಸಿಕೊಂಡು ಹೋಗಿ ವೇದಿಕೆಯ ಮೇಲೆ ಇನ್ನೊಂದು ಕುರ್ಚಿಯನ್ನು ಹೇಗೋ ಅಡ್ಜಸ್ಟ್ ಮಾಡಿ ಕುಳ್ಳಿರಿಸಿದರು. ಆಗಲೇ ವಿಜಯ್‌ಗೆ ಸಮಾಧಾನ.

ಪ್ರೇಕ್ಷಕರ ನಡುವೆ ಕುಳಿತವರು ರಂಗಾಯಣ ರಘು. ವಿಜಯ್ ಮಾತನಾಡುತ್ತ, ದುನಿಯಾ ಚಿತ್ರದಲ್ಲಿ ಅಭಿನಯದ ಪಟ್ಟುಗಳನ್ನು ಕಲಿಸಿದವರೇ ರಘು. ಅವರ ಸಹಾಯವಿಲ್ಲದಿದ್ದರೆ ಈ ರಾಜ್ಯ ಪ್ರಶಸ್ತಿ ಸಿಗುತ್ತಿರಲಿಲ್ಲ. ಈ ವೇದಿಕೆಯ ಮೇಲೆ ನೀವು ನನ್ನನ್ನು ನೋಡುತ್ತಲೂ ಇರಲಿಲ್ಲ ಎಂದಾಗ ಕಣ್ಣಲ್ಲಿ ಸಾರ್ಥಕ್ಯ ಭಾವ. ವಿಜಯ್ ಹಿರಿಯರಿಗೆ ಮರ್ಯಾದೆ ನೀಡುವುದಿಲ್ಲ ಎಂದು ಹಲ್ಲು ಕಟಿಯುವ ಕಲಾ ಸಾಮ್ರಾಟರಿಗೆ ಈ ಘಟನೆಯೇ ಉತ್ತರ.

ಕಲೆ, ಕನಸು, ಕಸುವು, ಒಂಚೂರು ಅದೃಷ್ಟದ ಜೊತೆ ಬ್ರಹ್ಮಾಂಡದಷ್ಟು ಪ್ರಯತ್ನವಿದ್ದರೆ ಅಂದುಕೊಂಡಿದ್ದು ಸಾಧಿಸಬಹುದು ಅನ್ನುವುದಕ್ಕೆ 'ದುನಿಯಾ' ಚಿತ್ರದ ವಿಜಯ್‌ಗಿಂತ ಬೇರೆ ನಟ ಕಣ್ಮುಂದೆ ಸಿಗಲಿಕ್ಕಿಲ್ಲ. ಜಿಮ್‌ನಲ್ಲಿ ಮೈಬಿರುಸು ಮಾಡಿಕೊಳ್ಳುತ್ತಿದ್ದಾಗ ಕಟ್ಟಿಕೊಂಡಂಥ ಕನಸು, ಕನಸು ನನಸು ಮಾಡಲು ಹೊಂಟಲ್ಲೆಲ್ಲಾ ಅವಮಾನ, ಕೊನೆಗೆ ಕರ್ನಾಟಕದ ಜನತೆ ಹರಸಿದಾಗ ಸಿಕ್ಕಿದ್ದೇ ವಿಜಯ್ ಎಂಬ ಗಂಧ ತೀಡಿದಂತಿರುವ ನಟ. ಹಿಂದಿನದನ್ನು ಮರೆಯದ, ಇಂದಿನ ಸ್ಥಿತಿಯ ಬಗ್ಗೆ ಅಹಂಕಾರಪಡದ ನಟನಿಗೆ ಇಂದು 34ನೇ ಹುಟ್ಟುಹಬ್ಬ.

ಜನ್ಮದಿನದ ಹಾರ್ದಿಕ ಶುಭಾಶಯಗಳು.

ವಿಜಯ್ ಇಂದಿನ, ಹಿಂದಿನ ಕಲಾವಿದರಿಗಿಂತಲೂ ವಿಭಿನ್ನ. ಮೊದಲ ನೋಟದಲ್ಲೇ ಹೀರೋ ಆಗಲು ಅನರ್ಹ ಎಂಬಂಥ ನೋಟ. ನಟನೆಯಲ್ಲಿ, ಸಾರ್ವಜನಿಕ ವರ್ತನೆಯಲ್ಲಿ ಅಸಹಜತೆಯ ಸೊಂಕೂ ಇಲ್ಲ. ಕಟುಮಸ್ತಾದ ದೇಹದ ಹೃದಯದಲ್ಲಿ ಮುಗ್ಧಮಗುವಿನ ಮನಸ್ಸು. ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂಬ ಕನಸು. ವಿಜಯ್ ಚಿತ್ರಗಳ ಯಶಸ್ಸು ಏನೇ ಇರಲಿ. ದುಡಿದದ್ದನ್ನು ವಿನಿಯೋಗಿಸುತ್ತಿರುವ ರೀತಿ ಅನೇಕರಿಗೆ ಇರುಸುಮುರುಸು ಮಾಡುತ್ತಿರುವುದಂತೂ ನಿಜ. ಪತ್ರಕರ್ತ ಗಣೇಶ್ ಕಾಸರಗೋಡು ಅವರೊಂದಿಗೆ ಕೈಜೋಡಿಸಿರುವ ವಿಜಯ್ ಹಿರಿಯರಿಗೆ ಅನಾಥಾಲಯ ನಿರ್ಮಿಸುವುದಕ್ಕೆ ಸ್ಥಳವನ್ನು ನೀಡಿರುವುದೇ ಅವರ ಹೃದಯ ವೈಶಾಲ್ಯಕ್ಕೆ ನಿದರ್ಶನ.

ಹೀರೋಗೆ ಬೇಕಾದ ಯಾವುದೇ ಮಾನದಂಡಗಳಾಗಲಿ, ಗಾಡ್ ಫಾದರ್ ಆಗಲಿ ಇಲ್ಲ. ಚಿತ್ರರಂಗದ ಹಿನ್ನಲೆ ಮೊದಲೇ ಇಲ್ಲ. ಆದರೆ ನಟನೆಗೆ ಬೇಕಾದ ಪ್ರತಿಭೆ ಮಾತ್ರ ದಂಡಿಯಾಗಿದೆ. ಪ್ರತಿಭೆಯನ್ನೇ ತೋರಿಸಿಕೊಳ್ಳಲು ಅವಕಾಶಕ್ಕಾಗಿ ಬೀದಿ ಬೀದಿ ಅಲೆದದ್ದೇ ಬಂತು. ನಿರ್ದೇಶಕ ಸೂರಿ ಅದ್ಯಾವ ಗಳಿಗೆಯಲ್ಲಿ ದುನಿಯಾ ಚಿತ್ರದಲ್ಲಿ ಅವಕಾಶ ಕೊಟ್ಟರೋ ವಿಜಯ್ ತನ್ನ ಅಪ್ಪಟ ಪ್ರತಿಭೆಯನ್ನು ಸಾಬೀತು ಪಡಿಸಿಕೊಂಡರು. ಅಲ್ಲಿಂದ 'ಕರಿಯ'ನ ಜೊತೆಗೆ ನಸೀಬು ಬದಲಾಯಿತು.

ವಿಜಯ್ ಮೊದಮೊದಲು ನಟನೆಯ ಅವಕಾಶಕ್ಕಾಗಿ ಮುಂಬೈವರೆಗೂ ಪಾದ ಬೆಳಸಿದ್ದುಂಟು. ಅಲ್ಲಿಂದ ಗಾಂಧಿನಗರಕ್ಕೆ ಬಂದು ಒಂದೇ ಒಂದು ಅವಕಾಶಕ್ಕಾಗಿ ಅಂಡಲೆದರು. ನಿರ್ಮಾಪಕರ ಕಣ್ಣಿಗೆ ಈತ ಹೀರೋ ಆಗಿ ಕಾಣಲಿಲ್ಲ. ಈತನನ್ನು ಕಂಡು ಮುಸಿಮುಸಿ ನಕ್ಕವರೂ ಇಂದು ಕಾಲ್‌ಶೀಟ್‌ಗಾಗಿ ಆತನ ಮನೆಗೆ ಅಲೆಯುತ್ತಿದ್ದಾರೆ. ಇದೇ ಏನೋ ದುನಿಯಾ ಬದಲಾಗುವುದೆಂದರೆ. ಚಂಡ ಮತ್ತು ಯುಗ ಚಿತ್ರಗಳು ಪರ್ವಾಗಿಲ್ಲ ಅನಿಸಿಕೊಂಡರೂ ಆತನ ಪ್ರತಿಭೆಗೆ ಸವಾಲೊಡ್ಡಿರುವ ಕವಿತಾ ಲಂಕೇಶ್‌ರ 'ಅವ್ವ' ಬಿಡುಗಡೆಯಾಗಬೇಕಿದೆ. ರವಿ ಬೆಳಗೆರೆ ನಿರ್ಮಾಣದ 'ಮುಖ್ಯಮಂತ್ರಿ ಐ ಲವ್ ಯೂ' ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಇಂದು ವಿಜಯ್ ಕತ್ರಿಗುಪ್ಪೆಯಲ್ಲಿರುವ ತಮ್ಮ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳು ಹಾಗೂ ಬಂಧು ಮಿತ್ರರ ಜತೆ ಸಂಭ್ರಮದಿಂದ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಏಳು ವರ್ಷದ ಅಲುಮಮ್ಮ ಎಂಬ ಮಗುವಿನ ಚಿಕಿತ್ಸೆಗೆ ವಿಜಯ್ ಒಂದು ಲಕ್ಷ ರೂ. ಕೊಟ್ಟು ನೆರವಾಗಿದ್ದಾರೆ. ಅದಕ್ಕೇ ಹೇಳಿದ್ದು ವಿಜಯ್ ಅನೇಕ ಇಂದಿನ, ಹಿಂದಿನ ಕಲಾವಿದರಿಗಿಂತ ವಿಭಿನ್ನವೆಂದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada