»   » ಸೈಕಲ್‌ನಿಂದ ಜಾರಿಬಿದ್ದ ಐಶ್ವರ್ಯಾ ಬೆಪ್ಪು, ಯಾರದು ತಪ್ಪು!

ಸೈಕಲ್‌ನಿಂದ ಜಾರಿಬಿದ್ದ ಐಶ್ವರ್ಯಾ ಬೆಪ್ಪು, ಯಾರದು ತಪ್ಪು!

Subscribe to Filmibeat Kannada

ಬಾದಾಮಿ : ಉತ್ತರ ಕರ್ನಾಟಕದ ರಸ್ತೆಗಳೆಂದರೆ ಸುಮ್ಮನೆನಾ? ವೈಯಾರಿಯಂತೆ ಅಂಕುಡೊಂಕಾಗಿ ಬಳುಕುವ ರಸ್ತೆಯ ತುಂಬ ಉಬ್ಬುತಬ್ಬುಗಳು. ನಡೆಯುವವರು ತಬ್ಬಿಬ್ಬಾಗಬೇಕು. ಅಲ್ಲಲ್ಲಿ ಸಮತಟ್ಟಾದ ರಸ್ತೆಗಳು. ಅಲ್ಲಿಯ ರಸ್ತೆಗಳದ್ದೇ ನಖರಾಗಳು ಸ್ವಲ್ಪ ಜಾಸ್ತಿ.

ವಿಷಯ ಏನಪ್ಪಾ ಅಂದ್ರೆ ನಮ್ಮ ಸುರಸುಂದರಿ ಐಶ್ವರ್ಯಾ ರೈ ಸೈಕಲ್‌ ತುಳಿಯಲು ಹೋಗಿ ಬಿದ್ದು ತಮ್ಮ ನುಣುಪಾದ ಮೈಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಛೆಛೆ ಅವರಿಗೆ ಸೈಕಲ್‌ ತುಳಿಯಲು ಬರುತ್ತದೆ. ಬಾದಾಮಿಯ ರಸ್ತೆಗಳದೇ ತಪ್ಪು!

ಮಣಿರತ್ನಂ ಚಿತ್ರಿಸುತ್ತಿರುವ ‘ಗುರು’ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಐಶ್ವರ್ಯಾ ಸೈಕಲ್‌ ಓಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತೋಳುಗಳಿಗೆ ಹಾಗೂ ಕಾಲುಗಳಿಗೆ ಪೆಟ್ಟುಬಿದ್ದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಪದ್ಮನಯನ್‌ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಸ್ತೆ ಮೇಲಿರುವ ಉಬ್ಬುತಬ್ಬುಗಳಾದರೂ ನಮ್ಮ ಐಶೂಗೆ ಹೇಗೆ ಕಾಣಬೇಕು ಹೇಳಿ? ಅಲ್ಲಿನ ರಸ್ತೆಗಳ ಉಬ್ಬುತಬ್ಬುಗಳ ಬಗ್ಗೆ ನಿಖರ ಮಾಹಿತಿ ಇರುವ ಸ್ಥಳೀಯರಾದರೂ ಇದರ ಬಗ್ಗೆ ಎಚ್ಚರವಹಿಸಬೇಡವೇ? ಅವರಾದರೂ ಎಲ್ಲಿ ನೋಡುತ್ತಿದ್ದರೋ? ಹೋಗಲಿ ನಾಯಕ ನಟ ಭಾವೀ ಪತಿ(?) ಅಭಿಷೇಕ್‌ ಬಚ್ಚನ್‌ ಆದರೂ ಎಲ್ಲಿದ್ದರು? ತಿಳಿದುಬಂದಿಲ್ಲ.

ಸ್ಥಳೀಯ ವೈದ್ಯ ಡಾ.ಕಂಠಿ ಐಶ್ವರ್ಯಾ ಅವರಿಗೆ ಚಿಕಿತ್ಸೆ ನೀಡಿದ್ದು, ಸಣ್ಣ ಪ್ರಮಾಣದ ಗಾಯಗಳಾಗಿರುವುದರಿಂದ ಯಾವುದೇ ತರಹದ ಭಯಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದೆ ಹೋಗಲು ತಕರಾರು ಮಾಡಿದ ಸೈಕಲ್ಲನ್ನು ಹಿಂದೂಡಿದ್ದಾರೆ, ಚಿತ್ರೀಕರಣವನ್ನು ಮುಂದೂಡಿದ್ದಾರೆ.

ಮಣಿರತ್ನಂ ನಿರ್ದೇಶನದ ‘ಗುರು’ ಚಿತ್ರತಂಡ, ಕಳೆದ ಕೆಲವು ದಿನಗಳಿಂದ ಬಾಗಲಕೋಟೆ ಸುತ್ತಮುತ್ತ ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರೀಕರಣ (!) ನೋಡಲು ಆಬಾಲವೃದ್ಧರಾದಿಯಾಗಿ ಜನಸಾಗರ ಹರಿದು ಬರುತ್ತಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada