»   » ಸ್ಯಾಂಡಲ್‌ವುಡ್‌ ಖಳನಾಯಕ ನೀಗ್ರೋ ಜಾನಿ ಬದುಕೀಗ ಕತ್ತಲೆ

ಸ್ಯಾಂಡಲ್‌ವುಡ್‌ ಖಳನಾಯಕ ನೀಗ್ರೋ ಜಾನಿ ಬದುಕೀಗ ಕತ್ತಲೆ

Posted By: Super
Subscribe to Filmibeat Kannada

ಕಂಚಿನ ಕಂಠ, ಕಟ್ಟುಮಸ್ತು ದೇಹ, ಮೊನಚು ನೋಟ ಇವಿಷ್ಟನ್ನೂ ಬಂಡವಾಳವಾಗಿಟ್ಟುಕೊಂಡು ಕನ್ನಡ ಸಿನಿಮಾ ಸಹೃದಯರ ಜನಮನದಲ್ಲಿ ನಿಂತ ನೀಗ್ರೋ ಜಾನಿ ಇವತ್ತು ಕ್ರೆೃಸ್ಟ್‌ ಕಾಲೇಜಿನ ದೇವಾಲಯದಲ್ಲಿ ಧ್ಯಾನಾಸಕ್ತ. ಬೆಳಕಿಗಾಗಿ ಭಗವಂತನಲ್ಲಿ ಮೊರೆ!

ಸುಮಾರು ಇನ್ನೂರು ಚಿತ್ರಗಳಲ್ಲಿ ಖಳನಾಯಕ ಅಥವಾ ಆತನ ಚೇಲಾ ಪಾತ್ರಗಳಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಅಭಿನಯಿಸಿದ ನೀಗ್ರೋ ಜಾನಿ ಈಗ ಅಕ್ಷರಶಃ ಕುರುಡ. ಕಿಡ್ನಿ ವೈಫಲ್ಯವಾಗಿ, ಕಣ್ಣಿನ ಪೊರೆಯೇ ರಕ್ತವಾಗಿ ಹರಿದು ಹೋಗಿದೆ. ಒಂದು ದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕು. ಆದರೂ ಕಣ್ಣು ಬಂದೇ ಬರುತ್ತೆ ಅಂತ ಗ್ಯಾರಂಟಿ ಕೊಡೋಕಾಗಲ್ಲ ಅಂತ ಡಾಕ್ಟರು ಹೇಳಿಬಿಟ್ಟಿದ್ದಾರೆ. ನಾಲ್ಕನೇ ಕ್ಲಾಸು ಓದುತ್ತಿರುವ ಮಗಳು ರಿಚ್ಚು ಮೇರಿ, ತನ್ನ ಸಂಪಾದನೆಯನ್ನೇ ನೆಚ್ಚಿಕೊಂಡಿರುವ ಹೆಂಡತಿ, ಜೊತೆಗೆ ನಾಲ್ವರು ತಂಗಿಯರು-ಇಬ್ಬರು ಸೋದರರ ಜವಾಬ್ದಾರಿ. ಇಷ್ಟು ವರ್ಷಗಳ ಕಾಲ ಇವರೆಲ್ಲರ ಹೊಣೆ ಹೊತ್ತು, ನಿಭಾಯಿಸಿಕೊಂಡು ಬಂದ ಜಾನಿ ಈಗ ಅಸಹಾಯಕ.

ಹತಾಶೆ ಪರಾಕಾಷ್ಠೆ ಮುಟ್ಟುತ್ತಿದೆ. ಇಂಥಾ ಸನ್ನಿವೇಶದಲ್ಲಿ ನೀಗ್ರೋ ಅಳಲನ್ನು ಅವರ ಮಾತುಗಳಲ್ಲೇ ಹೇಳುವುದಾದರೆ...

ಅಂಬರೀಶಣ್ಣ ಆವತ್ತೇ ಹೇಳಿದ್ದರು- 'ನನ್ನಂಥವನನ್ನೇ ಈ ಉದ್ಯಮದ ಜನ ದುಡ್ಡು ಕೊಡದೆ ಆಟ ಆಡಿಸುತ್ತಿರುತ್ತಾರೆ, ಇನ್ನು ನಿನ್ನಂಥವನ ಪಾಡೇನು. ದುಡ್ಡು ಮಾಡ್ಕೊಳೋ ತಮ್ಮ. ಮುಂದೆ ಕೈಲಾಗದ ಪರಿಸ್ಥಿತಿಯಲ್ಲಿ ಕೈ ಹಿಡಿಯೋದು ನೀನು ಸಂಪಾದಿಸುವ ದುಡ್ಡು" ಅಂತ. ಆವತ್ತು ನಾನು ಅಂಬರೀಶಣ್ಣನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ದುಡ್ಡೇ ದೊಡ್ಡಪ್ಪ ಅಲ್ಲ ಎಂಬ ನಮ್ಮ ಮೇಷ್ಟ್ರು ಮಾತಿಗೇ ಕಟ್ಟು ಬಿದ್ದೆ. ತೋಳ್ಬಲದ ಮೇಲೆ ದಿವ್ಯ ನಂಬಿಕೆ ಬೇರೆ. ಯಾವತ್ತೂ ಜಾಲಿಯಾಗಿಯೇ ಇರುತ್ತೇನೆಂಬ ಅಖಂಡ ವಿಶ್ವಾಸ. ಆದರೆ ಈಗ ಅಂಬರೀಶಣ್ಣನ ಮಾತನ್ನು ಕೇಳಿದ್ದಿದ್ರೆ ಚೆನ್ನಾಗಿತ್ತು ಅನಿಸುತ್ತೆ.

ಆಪರೇಷನ್‌ ಮಾಡಿಸಿಕೊಂಡರೂ ಕಣ್ಣು ಕಾಣೋದು ಗ್ಯಾಂರಂಟಿ ಇಲ್ಲ ಅಂತ ಡಾಕ್ಟರು ಹೇಳಿದ ಮೇಲೂ ಲಕ್ಷಾಂತರ ರುಪಾಯಿ ಸುರಿಯುವುದಾದರೂ ಹೇಗೆ, ಎಲ್ಲಿಂದ? ಅದಕ್ಕೇ ಕ್ರಿಸ್ತ ಹಾಗೂ ರಾಘವೇಂದ್ರ ಸ್ವಾಮಿ ಮುಂದೆ ಕುಳಿತು ಕಣ್ಣು ಕೊಡಪ್ಪಾ ಅಂತ ಕೇಳುತ್ತಿದ್ದೇನೆ. ಮಾತ್ರೆ ತಗೋಳೋದನ್ನ ಬಿಟ್ಟುಬಿಟ್ಟಿದ್ದೇನೆ. ತಿಂಗಳಿಗೆ ಔಷಧಿಗಾಗೇ ಹತ್ತು ಹದಿನೈದು ಸಾವಿರ ರುಪಾಯಿ ಖರ್ಚು ಆಗುತ್ತಿತ್ತು. ಎಲ್ಲಿಂದ ತರೋದು? ಈ ಡಾಕ್ಟರುಗಳು ಸಿನಿಮಾದವರು ಸಿಕ್ಕಾಪಟ್ಟೆ ದುಡ್ಡು ಮಾಡಿಕೊಂಡಿರುತ್ತಾರೆ ಅನ್ನುವ ಭ್ರಮೆಯಲ್ಲಿ ಸುಲಿಯುತ್ತಾರೆ. ಆದರೆ ನನ್ನ ಹತ್ತಿರ ಈಗ ಹಣವಿಲ್ಲ ಎಂಬುದೇ ಸತ್ಯ. ನನ್ನನ್ನು ನಂಬಿಕೊಂಡ ಮನೆಯವರ ಪಾಡೇನು ಎಂಬ ಚಿಂತೆ.

ನಿಮಗಿದು ಗೊತ್ತೆ ?
'ಶಾರದಾ" ಎಂಬ ಸಿನಿಮಾ ನೀಗ್ರೋ ಜಾನಿ ಅವರ ಹಲವು ವರ್ಷಗಳ ಕನಸು. ಅಂದುಕೊಂಡಂತೆ ನಡೆದಿದ್ದರೆ ಈ ವರ್ಷದ ಮೇ ತಿಂಗಳಲ್ಲಿ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಒಂದು ವರ್ಷದ ಹಿಂದಿನಿಂದ ಕೈಕೊಟ್ಟ ಆರೋಗ್ಯ ಕನಸನ್ನು ಕನಸಾಗಿಯೇ ಉಳಿಸಿತು. ಈಗ ಸಂಸಾರದ ಪಥ ಸಾಗಿದರೆ ಸಾಕೆಂಬ ಮುಗಿಲು ಮುಟ್ಟಿರುವ ಹತಾಶೆ.

ನೀಗ್ರೋ ಜಾನಿ ಅವರಿಗೆ ಧನ ಸಹಾಯ ಮಾಡುವ ಮನಸ್ಸು ನಿಮ್ಮದಾದರೆ, ಅವರ ಖಾತೆ ನಂಬರ್‌ 2417, ನ್ಯಾಷನಲ್‌ ಕೋ ಆಪರೇಟಿವ್‌ ಬ್ಯಾಂಕ್‌, ಬುಲ್‌ಟೆಂಪಲ್‌ ರಸ್ತೆ, ಬಸವನಗುಡಿ, ಬೆಂಗಳೂರು- 560 004ಕ್ಕೆ ಹಣ ಜಮೆ ಮಾಡಿ.

English summary
Nigro Johny lost sight, needs your help!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada