»   » ರಾಜ್‌ಕುಮಾರ್‌ : ಶಕ್ತಿ , ಪುಸ್ತಕ, ಚಾಂಪಿಯನ್‌ !

ರಾಜ್‌ಕುಮಾರ್‌ : ಶಕ್ತಿ , ಪುಸ್ತಕ, ಚಾಂಪಿಯನ್‌ !

Posted By: Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ವರನಟ ಡಾ.ರಾಜ್‌ಕುಮಾರ್‌ ನಟನಾಗದಿದ್ದರೆ ಏನಾಗುತ್ತಿದ್ದರು ? ಸಂತನಾಗುತ್ತಿದ್ದರು !

  ಹಾಗೆಂದರವರು ರಾಜ್‌ರನ್ನು ಆರಾಧಿಸುವ ಮಾಮೂಲು ಅಭಿಮಾನಿಯಲ್ಲ ; ಶಿಕ್ಷಣ ತಜ್ಞರು! ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್‌.ತಿಮ್ಮಪ್ಪ .

  ರಾಜ್‌ಕುಮಾರ್‌ ಕನ್ನಡ ಚಿತ್ರರಂಗ ಪ್ರವೇಶಿಸಿ ನಟನಾಗದಿದ್ದರೆ ಅವರೊಬ್ಬ ದೊಡ್ಡ ಸಂತನಾಗಿ ರೂಪುಗೊಳ್ಳುತ್ತಿದ್ದರು. ಸಂಯಮ, ಮುಗ್ಧತೆ, ಸರಳ ಸ್ವಭಾವ ಹಾಗೂ ಯಾವುದಕ್ಕೂ ಅಂಟಿಕೊಳ್ಳದ- ಅತಿಯಾಗಿ ಹಚ್ಚಿಕೊಳ್ಳದ ಗುಣಗಳು ರಾಜ್‌ ಅವರನ್ನು ವಿಶಿಷ್ಠ ವ್ಯಕ್ತಿಯನ್ನಾಗಿಸಿವೆ ಎಂದು ಡಾ.ತಿಮ್ಮಪ್ಪ ಬಣ್ಣಿಸಿದರು. ರಾಜ್‌ ಚಿತ್ರರಂಗ ಪ್ರವೇಶಿಸಿ 50 ವರ್ಷಗಳು ತುಂಬಿದ ಸಂದರ್ಭದಲ್ಲಿ , ಕನ್ನಡ ಜನಶಕ್ತಿ ಸಂಘಟನೆ ಏರ್ಪಡಿಸಿದ್ದ 'ಮಹಾನ್‌ ಪ್ರತಿಭೆ ಡಾ.ರಾಜ್‌ ಚಿತ್ರರಂಗದ ಅರ್ಧ ಶತಮಾನ : ಒಂದು ವೈಚಾರಿಕ ನೋಟ" ವಿಚಾರ ಸಂಕಿರಣದಲ್ಲಿ (ಜೂ.20, ಭಾನುವಾರ) ಡಾ.ತಿಮ್ಮಪ್ಪ ಮಾತನಾಡುತ್ತಿದ್ದರು.

  ರಾಜ್‌ಕುಮಾರ್‌ ಅವರನ್ನು ಸರಿಗಟ್ಟುವ ಮತ್ತೊಬ್ಬ ನಟ ಕನ್ನಡ ಚಿತ್ರರಂಗದಲ್ಲಿಲ್ಲ . ಕಲ್ಯಾಣ್‌ಕುಮಾರ್‌, ಉದಯಕುಮಾರ್‌ ಜೊತೆಯಲ್ಲೇ ರಾಜ್‌ ಚಿತ್ರರಂಗ ಪ್ರವೇಶಿಸಿದರು. ಆದರೆ ತಮ್ಮ ಅನನ್ಯ ಪ್ರತಿಭೆ ಹಾಗೂ ಉಜ್ವಲ ಗುಣಾದರ್ಶಗಳಿಂದ ಇತರರನ್ನು ಹಿಂದೂಡಿ ಅಗ್ರಗಣ್ಯ ಕಲಾವಿದರೆನ್ನಿಸಿಕೊಂಡರು ಎಂದು ತಿಮ್ಮಪ್ಪ ಹೇಳಿದರು.

  ಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿವಿಧ ಪದವಿ ತರಗತಿಗಳನ್ನು ವಿಶ್ವವಿದ್ಯಾಲಯಗಳು ಆರಂಭಿಸುವ ಅಗತ್ಯವಿದೆ. ಸಮಾಜದ ಮೇಲೆ ಚಿತ್ರರಂಗ ಬೀರುವ ಪ್ರಭಾವವನ್ನು ಪರಿಗಣಿಸಿ, ವಿಶ್ವವಿದ್ಯಾಲಗಳಲ್ಲಿ ಶಾಸ್ತ್ರೀಯ ಅಧ್ಯಯನ ನಡೆಯಬೇಕಿದೆ ಎಂದು ತಿಮ್ಮಪ್ಪ ಅಭಿಪ್ರಾಯಪಟ್ಟರು.

  ರಾಜ್‌- ಒಂದು ಶಕ್ತಿ !

  ಕಲಾವಿದ ಮಾತ್ರವಲ್ಲದೆ ರಾಜ್‌ ಕನ್ನಡಪರ ಹೋರಾಟಗಾರರೂ ಆಗಿದ್ದಾರೆ. ನಾಡು ನುಡಿ ಸಮಸ್ಯೆಗಳು ಎದುರಾದಾಗಲೆಲ್ಲ ರಾಜ್‌ ಹೋರಾಟಕ್ಕೆ ಮುಂದಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆಗಳು ಅಸ್ತಿತ್ವಕ್ಕೆ ಬರಲು ರಾಜ್‌ರ ಹೋರಾಟವೇ ಕಾರಣ ಎಂದು ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ನಿರ್ಮಾಪಕ ಸಾ.ರಾ.ಗೋವಿಂದು ಅಭಿಪ್ರಾಯಪಟ್ಟರು.

  ಸಜ್ಜನಿಕೆ ಹಾಗೂ ಸರಳತೆಯ ಪ್ರತೀಕವಾದ ರಾಜ್‌ಕುಮಾರ್‌ ಕನ್ನಡದ ಸಾಂಸ್ಕೃತಿಕ ರಾಯಭಾರಿ. ರಾಜ್‌ ಕಲೆಯನ್ನು ಹಣಗಳಿಕೆಗಾಗಿ ಎಂದಿಗೂ ಬಳಸಿಕೊಳ್ಳಲಿಲ್ಲ . ಆ ಕಾರಣದಿಂದಾಗಿ ರಾಜ್‌ ವ್ಯಕ್ತಿತ್ವವನ್ನು ತಾವು ಪೂಜಿಸುವುದಾಗಿ ಗೋವಿಂದು ಹೇಳಿದರು.

  ರಾಜ್‌ ಚಿತ್ರರಂಗ ಪ್ರವೇಶಿಸಿದ ಘಟನೆಗೆ ಅರ್ಧ ಶತಮಾನ ತುಂಬಿದ ಸಂದರ್ಭವನ್ನು ಗುರ್ತಿಸಿ ರಾಜ್ಯ ಸರ್ಕಾರ ಸಮಾರಂಭವೊಂದನ್ನು ಏರ್ಪಡಿಸಬೇಕಿತ್ತು ಎಂದು ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಕೆ.ಸಿ.ರಾಮಮೂರ್ತಿ ಅಭಿಪ್ರಾಯಪಟ್ಟರು. ರಾಜ್‌ರದು ಆದರ್ಶ ಜೀವನ, ಮೇರು ವ್ಯಕ್ತಿತ್ವ ಎಂದು ರಾಮಮೂರ್ತಿ ಬಣ್ಣಿಸಿದರು.

  ರಾಜ್‌ ಒಂದು ಪಾಠದ ಪುಸ್ತಕ

  ರಾಜ್‌ಕುಮಾರ್‌ ಅವರ ಬದುಕು ಹಾಗೂ ಸಾಧನೆ ಯುವಜನತೆಗೆ ಮಾದರಿಯಾಗಿದೆ. ಅವರ ಬದುಕೊಂದು ಪುಸ್ತಕ. ಆ ಪುಸ್ತಕದಲ್ಲಿ ಅನೇಕ ಆದರ್ಶ ಪಾಠಗಳಿವೆ ಎಂದು ಕವಿ ದೊಡ್ಡರಂಗೇಗೌಡ ಹೇಳಿದರು. ತಾಯಿ ಹಾಗೂ ತಾಯಿನಾಡಿನ ಬಗೆಗಿನ ರಾಜ್‌ ನಿಲುವು ಶ್ಲಾಘನೀಯ. ಇಂದಿಗೂ ಲೈಟ್‌ಬಾಯ್‌ಗಳೊಂದಿಗೆ ಕೂತು ರಾಜ್‌ ಸೆಟ್‌ನಲ್ಲಿ ಊಟ ಮಾಡುತ್ತಾರೆ. ಅವರ ಸರಳತೆ ಅನುಕರಣೀಯ ಎಂದು ದೊಡ್ಡರಂಗೇಗೌಡ ವರನಟನ ಕುರಿತು ಮೆಚ್ಚಿಕೆ ಮಾತಾಡಿದರು.

  ರಾಜ್‌ರ ನೈತಿಕ ಹೊಣೆಗಾರಿಕೆ ಹಾಗೂ ರಾಜಕೀಯ ಸೇರದಿರುವ ಕುರಿತ ನಿಲುವು ಇತರ ನಟರಿಗೆ ಮಾಗದರ್ಶಕವಾಗಬಲ್ಲವು ಎಂದು ದೊಡ್ಡರಂಗೇಗೌಡ ಹೇಳಿದರು.

  ರಾಜ್‌ಕುಮಾರ್‌ ಓರ್ವ ಚಾಂಪಿಯನ್‌! ನಟರ ಸಂಖ್ಯೆ ದೊಡ್ಡದಿದೆ. ಆದರೆ ಸಮೂಹದ ಮೇಲೆ ರಾಜ್‌ ಬೀರಿದಂಥ ಪರಿಣಾಮವನ್ನು ಮತ್ತೊಬ್ಬ ನಟ ಬೀರಲು ಸಾಧ್ಯವಾಗಿಲ್ಲ ಎಂದು ಕವಯತ್ರಿ ಸಂಧ್ಯಾರೆಡ್ಡಿ ಅಭಿಪ್ರಾಯಪಟ್ಟರು.

  ಹಿರಿಯ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ವರನಟನ ಕುರಿತು ಆಪ್ತ ಮಾತುಗಳನ್ನಾಡಿದರು. ರಾಜ್‌ ಸಿನಿಮಾ ಸಂಕೇತ ಮಾತ್ರವಲ್ಲ ; ಸಾಂಸ್ಕೃತಿಕ ಸಂಕೇತವೂ ಹೌದು ಎಂದ ನಿಸಾರ್‌- ರಾಜ್‌ ಜೀವತುಂಬಿದ ಭಕ್ತ ಕನಕದಾಸ, ಪುರಂದರದಾಸ, ಕೃಷ್ಣದೇವರಾಯ ಪಾತ್ರಗಳನ್ನು ಹೆಸರಿಸಿದರು.

  ಚಿತ್ರ ನಿರ್ಮಾಪಕ ಚಿನ್ನೇಗೌಡ, ಜನಶಕ್ತಿ ಸಂಘಟನೆಯ ಸಿ.ಕೆ.ರಾಮೇಗೌಡ ಮುಂತಾದವರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

  English summary
  Rajkumar a king in films and life: His life is a like a book. It has lessons to offer, says Poet Doddaranegowda

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more