For Quick Alerts
  ALLOW NOTIFICATIONS  
  For Daily Alerts

  ಉಪ್ಪಿಗಿಂತ ರುಚಿ ಇಲ್ಲ , ಒಪ್ಪಿಕೊಂಡೋರು ದಡ್ಡರಲ್ಲ !

  By Super
  |

  ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ ಉಪೇಂದ್ರರ ಪತ್ನಿ ಪ್ರಿಯಾಂಕ ತಾಯಿಯಾಗಲಿರುವ ಸಮಾಚಾರ ಕೆಲವೇ ದಿನಗಳ ಹಿಂದೆ ದಿನಪತ್ರಿಕೆಯಾಂದರಲ್ಲಿ ಪ್ರಕಟವಾಗಿತ್ತು. ಆ ಸುದ್ದಿ ತುಣುಕಿನ ತಲೆಬರಹವೇನಿತ್ತು ಗೊತ್ತಾ? - 'ಉಪ್ಪಿ ಮುಟ್ಟಿದ್ದೆಲ್ಲಾ ಸುದ್ದಿ !" ಹೌದು, ಅದೇ ಉಪೇಂದ್ರ! ಅವರು ಹೋದಲ್ಲಿ , ಬಂದಲ್ಲಿ ಸುದ್ದಿಯೇ. ಉಪೇಂದ್ರ ಚಿತ್ರ ಗೆದ್ದರೂ ಸುದ್ದಿ, ಮೂರು ದಿನವೂ ಓಡದೆ ಬಿದ್ದರೂ ಸುದ್ದಿ , ಸುದ್ದಿಯಾಗಲೇಬಾರದೆಂದು ಗುಟ್ಟಾಗಿ ಮದುವೆಯಾಗಿ ಬಂದಿದ್ದಕ್ಕೂ ಪ್ರಚಾರ. ವಿಸ್ಕಿ ಬಾಟಲಿಗೆ ರೂಪದರ್ಶಿಯಾಗಿದ್ದೂ ದೊಡ್ಡ ವಿಚಾರ. ಈ ಬಣ್ಣದ ಬದುಕೇ ಹೀಗೆ - ಇಲ್ಲಿ ಸುದ್ದಿಯಲ್ಲಿದ್ದರೆ ಸಾಕು, ಎಲ್ಲಾ ಓಕೆ..... ಬೇರೆ ಮಾತೆಲ್ಲಾ ಈಗ ಯಾಕೆ?

  ಗಂಗಾಜಲದಂತೆ ಪವಿತ್ರವಾಗಿದ್ದ ಕನ್ನಡ ಚಿತ್ರರಂಗದಲ್ಲಿ ಕಾಮದ ಸಿನಿಮಾಗಳ ಕೆಟ್ಟ ಟ್ರೆಂಡ್‌ ಹುಟ್ಟುಹಾಕಿದ ಪರಮಪೋಲಿ ಕಾಶಿನಾಥರನ್ನು, ಕನ್ನಡ ಜನಗಳು ಒಂದೇ ಒಂದು ಕಾರಣಕ್ಕಾಗಿ ಸುಲಭವಾಗಿ ಕ್ಷಮಿಸಿಬಿಡಬಹುದು. ಅದೇನೆಂದರೆ - ಒಂದು ಕಾಲದಲ್ಲಿ ಉಪೇಂದ್ರ, ದೇಸಾಯಿ, ವಿ. ಮನೋಹರ್‌... ಮುಂತಾದ ಪ್ರಚಂಡ ಪ್ರತಿಭೆಗಳೆಲ್ಲ ನೆಲೆಸಿದ್ದು ಇದೇ ಕಾಶಿಯಲ್ಲಿ ! ಜಗ್ಗೇಶರ ಮಹಾತರಲೆ ಸಿನಿಮಾವೊಂದರ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಉಪೇಂದ್ರ ಇವತ್ತಿನ ದಿನ ಈ ಪರಿ ಬೆಳೆದು ನಿಲ್ಲುತ್ತಾರೆಂದು ಅವರಿವರಿರಲಿ, ಸ್ವತಃ ಉಪೇಂದ್ರ ಕೂಡ ಕನಸು ಕಂಡಿರಲಿಕ್ಕಿಲ್ಲ. ಚಿತ್ರದಿಂದ ಚಿತ್ರಕ್ಕೆ ಮಿಂಚಿನವೇಗದಲ್ಲಿ ಬೆಳೆದ ಉಪೇಂದ್ರನ ಗೆಲುವನ್ನು ಅದೃಷ್ಟಕ್ಕಿಂತ ಪವಾಡ ಎಂದರೇ ಹೆಚ್ಚು ಸರಿಹೊಂದೀತು!

  ಯಾಕೆಂದರೆ ಈ ಮೊದಲು ಚಿತ್ರರಂಗದಲ್ಲಿ ಪ್ರತಿಭೆಯಾಂದೇ ಅಳತೆಗೋಲಾಗಿತ್ತಾದರೂ, ಸದ್ಯದ ಪರಿಸ್ಥಿತಿಯಲ್ಲಿ ಕಲಾವಿದನ ಪ್ರತಿಭೆಯನ್ನೂ ಕೂಡ ಬೇರೆ ಕೆಲವು ಮಾನದಂಡದಿಂದ ಅಳೆಯಲಾಗುತ್ತಿದೆ. ಇಲ್ಲಿ ನಟನೊಬ್ಬನ ಬೆನ್ನಿಗೆ ಗಾಡ್‌ಫಾದರ್‌ ಒಬ್ಬ ಇರಬೇಕು, ಅಥವಾ ಸಿನಿಮಾ ಸೋತರೂ ಧೃತಿಗೆಡದೆ ಮತ್ತೆ ಮತ್ತೆ ಹಣ ಸುರಿಯಬಲ್ಲ ನಿರ್ಮಾಪಕನೇ ಅಪ್ಪನಾಗಿರಬೇಕು. ಇದಾವುದೂ ಇಲ್ಲದೆ ಯಶಸ್ಸಿನ ಅಮೃತಫಲ ಕೈಗೆಟುಕಿಸಿಕೊಳ್ಳಲು ಬಯಸುವ ನಟನಿಗೆ ಕೊನೆಯಪಕ್ಷ, ರಾಜಕುಮಾರ್‌ ಪ್ರಭಾವಳಿಯಲ್ಲಿಯೂ ಮಸುಕಾಗದೆ ಬೆಳಗಿಬರಲು, ವಿಷ್ಣುವಿಗಿದ್ದಂತಹ ನಾಗರಹಾವಿನ ಛಲವಾದರೂ ಇರಬೇಕು. ಇಲ್ಲವಾದಲ್ಲಿ, ಪ್ರತಿಭೆಯಾಂದನ್ನೇ ಬಂಡವಾಳವಾಗಿಸಿಕೊಂಡು ಬಂದ ಉಪೇಂದ್ರನಿಗಿದ್ದಂತಹ ಚಾಟಿಯಿಲ್ಲದೆ ಬುಗುರಿಯಾಡಿಸಬಲ್ಲೆ ಎಂಬ ಬುದ್ಧಿಬಲವಾದರೂ ಇರಲೇಬೇಕು.

  ನಟನೆ, ನಿರ್ದೇಶನ, ಚಿತ್ರಕಥೆ, ಸಂಭಾಷಣೆ, ಗೀತರಚನೆ . .... ಯಾವ ಕೋನದಿಂದ ನಿಂತು ನೋಡಿದರೂ ಉಪೇಂದ್ರ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ ! ಅವರು ಈ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿ, ಸೈ ಅನ್ನಿಸಿಕೊಂಡಿದ್ದರೂ, ನನಗೆ ಮಾತ್ರ ಚಿತ್ರ-ವಿಚಿತ್ರ ವೇಷ ಹಾಕುವ ನಟ ಉಪೇಂದ್ರನಿಗಿಂತ ಹೊಸ ರೀತಿಯಲ್ಲಿ ಯೋಚಿಸಬಲ್ಲ ನಿರ್ದೇಶಕ ಉಪೇಂದ್ರನೇ ಎತ್ತರ, ನಿರ್ದೇಶಕ ಉಪೇಂದ್ರನಿಗಿಂತ ಹಾಡು- ಕಥೆ ಬರೆಯಬಲ್ಲ ಬರಹಗಾರ ಉಪೇಂದ್ರನೇ ಮನಸ್ಸಿಗೆ ಬಹಳ ಹತ್ತಿರ! ಭಾರೀ ತಾರಾಗಣ, ದುಬಾರಿ ಹೊರಾಂಗಣ ಎಲ್ಲಾ ಇದ್ದೂ ಕೂಡ ಉತ್ತಮ ಕಥೆ-ಚಿತ್ರಕಥೆಗಳ ಕೊರತೆಯಿಂದ ನೆಲಕಚ್ಚಿದ ಚಿತ್ರಗಳಿಗೆ ಲೆಕ್ಕವಿದೆಯೇ? ಅದೇ ಬರಹಗಾರನಿಗಿರುವ 'ಬ್ರಹ್ಮ" ಬಲ! 'ಓಳು.. ..ಬರೀ ಓಳು", 'ಓತಲಾ....ಓತಲಾ...ಓಟಿಲ್ಲಿ ಓತಲಾ....." ಎಂಬ ಉಪೇಂದ್ರನ ಓತ್ಲಾ ಹಾಡುಗಳಷ್ಟೇ ಜನಪ್ರಿಯವಾಗಿದ್ದರೂ, 'ಹೂವೇ, ಹೂವೇ, ಹೂವೇ....ನಿನ್ನೀ ನಗುವಿಗೆ ಕಾರಣವೇನೇ? ಸೂರ್ಯನ ನಿಯಮಾನೇ? ಚಂದ್ರನ ನೆನಪೇನೇ?" - ಮುಂತಾದ ಮಧುರ ಗೀತೆಗಳನ್ನು ಬರೆವಾಗ ಮಾತ್ರ ಉಪೇಂದ್ರ ಚಿತ್ರ ಜಗತ್ತಿನ ಎಲ್ಲಾ ತಂಟೆ-ತಕರಾರುಗಳನ್ನು ಬದಿಗೊತ್ತರಿಸಿ ಬರೆಯಲು ಕುಳಿತ ಅಪ್ಪಟ ಕವಿ!

  ಶ್‌, ಓಂ, ಎ, ಉಪೇಂದ್ರದಂತಹ ಕೆಲವನ್ನು ಬಿಟ್ಟರೆ ಉಪೇಂದ್ರರ ಇತರ ಚಿತ್ರಗಳು ಸೋಲುಂಡಿದ್ದೇ ಹೆಚ್ಚು. ಸ್ವಸ್ತಿಕ್‌, ಆಪರೇಷನ್‌ ಅಂತ ಮುಂತಾದ ಚಿತ್ರಗಳು ಯಾವಾಗ ಬಂದವೋ? ಯಾಕೆ ಬಂದವೋ? ಎಂದು ಕೇಳುವಂತಹ ಪರಿಸ್ಥಿತಿ. ಚಿತ್ರಗಳ ಸಂಖ್ಯೆ ಬೆಳೆಯಿತೇ ಹೊರತು ಅವು ಗಲ್ಲಾಪೆಟ್ಟಿಗೆಯಲ್ಲೂ ಗೆಲ್ಲಲಿಲ್ಲ , ಅಭಿಮಾನಿಗಳ ಮನಸ್ಸಿನಲ್ಲಿಯೂ ನಿಲ್ಲಲಿಲ್ಲ. ಎಲ್ಲಿಯೂ ಸಲ್ಲಲಿಲ್ಲ ! ಆದರೆ ಈ ವೇಳೆಗಾಗಲೇ ಉಪ್ಪಿಯ ವರ್ಚಸ್ಸು ಬೆಳೆದಿತ್ತು , ಉಪೇಂದ್ರ ಯಶಸ್ಸಿನ ಶಿಖರವೇರಿ ಕುಳಿತಾಗಿತ್ತು !

  ಚಿತ್ರಜಗತ್ತಿನಲ್ಲಿ ಯಶಸ್ಸು ಎಂಬುದು ಕ್ಷಣ ಮಾತ್ರ ಮಿಂಚಿ ಮರೆಯಾಗಿಹೋಗುವ ಮರೀಚಿಕೆ ಇದ್ದಂತೆ. ಆದರೆ ಇದು ನಮ್ಮ ನಟ-ನಟಿಯರಲ್ಲಿ ವಿಚಿತ್ರ ಭ್ರಮೆಗಳನ್ನು ಮೂಡಿಸಿ, ಬಹಳಷ್ಟು ಅನಾಹುತಕ್ಕೆ ಕಾರಣವಾಗಿಬಿಡುತ್ತದೆ . ಬಹುಶಃ ನೆತ್ತಿಗೇರಿದ ಪಿತ್ಥ ! ಈ ಯಶಸ್ಸಿನ ಪಿತ್ಥ ನೆತ್ತಿಗೆ ಹತ್ತದಿದ್ದುದು ಒಬ್ಬ ಅಣ್ಣಾವ್ರಿಗೆ ಮಾತ್ರ ಇರಬೇಕು. ಉಳಿದವರೆಲ್ಲಾ ಮೀಸೆತಿರುವಿ ಮೆರೆದು, ಮಣ್ಣಾಗಿ ಹೋದ ಅಣ್ಣಗಳೇ! ಉಪೇಂದ್ರ ಕೂಡ ಇದಕ್ಕೆ ಹೊರತಾಗಿ ಉಳಿಯಲಿಲ್ಲ. ಆ ಸಮಯದಲ್ಲಿ ಉಪೇಂದ್ರರ ಅಹಂಕಾರ, ಉಡಾಫೆ, ಉದ್ಧಟತನ, ಅವರ ಚಿತ್ರಗಳಲ್ಲಿನ ಅಶ್ಲೀಲತೆ, ಸ್ತ್ರೀವಿರೋಧೀ ಧೋರಣೆಗಳು ಜನಮನದಲ್ಲಿ ಮೂಡಿಸಿದ ಅಸಮಾಧಾನ ಅಷ್ಟಿಷ್ಟಲ್ಲ. ಅದರಲ್ಲಿ ಬಹುಪಾಲು ಸ್ವಯಂಕೃತ ಅಪರಾಧಗಳಾದರೆ, ಮತ್ತೆ ಕೆಲವು ಉಪೇಂದ್ರನಂತಹ ತಾಜಾ ಪ್ರತಿಭೆಯನ್ನು ಕನ್ನಡ ಚಿತ್ರೋದ್ಯಮದಿಂದಲೇ ಶಾಶ್ವತವಾಗಿ ಹೊಸಕಿ ಹಾಕಲು ಕೆಲ ಅಸೂಯಾಪರರು ನಡೆಸಿದ ಪಿತೂರಿ!

  ಉಪೇಂದ್ರ ಬಗೆಗೆ ಇರುವ ಇನ್ನೊಂದು ಮುಖ್ಯ ದೂರನ್ನು ಇಲ್ಲಿ ಹೇಳಲೇಬೇಕು. ಅದೇನೆಂದರೆ - ಉಪ್ಪಿಯಾಡನೆ ಒಮ್ಮೆ ನಾಯಕಿಯಾಗಿ ನಟಿಸಿದ ನಟಿಯರು, ಜನ್ಮೇಪಿ ಉಪೇಂದ್ರನೊಡನೆ ಮತ್ತೆ ನಟಿಸುವುದಿಲ್ಲ ಎಂದು ಬೆನ್ನು ತಿರುಗಿಸಿ ನಡೆಯುತ್ತಾರಂತೆ, ಅದೇಕೋ? ಆ ಕುಸುಮಕೋಮಲ ಬಾಲೆಯರಿಗೆ ನಮ್ಮ ಉಪೇಂದ್ರ ಕೊಡುವ ಟ್ರೀಟ್‌ಮೆಂಟ್‌ ಅಷ್ಟು ಕೆಟ್ಟದಾಗಿರುತ್ತಾ ? 'ಪ್ರೀತ್ಸೆ " ಯ ಮೋಹಕ ನಟಿ ಸೋನಾಲಿ ಬೇಂದ್ರೆಯಿಂದ ಹಿಡಿದು 'ಸೂಪರ್‌ ಸ್ಟಾರ್‌" ನಾಯಕಿ ಕೀರ್ತಿರೆಡ್ಡಿಯವರೆಗೂ ಎಲ್ಲರೂ ಹೋಗುವಾಗ ಹೇಳಿದ್ದು ಇದನ್ನೇ!

  ಇದು ನಿಜವಾಗಿಯೂ ನಿಜವೋ? ಸುಳ್ಳೊ? - ಉತ್ತರ ಇರುವುದು ಉಪೇಂದ್ರ ಬಳಿಯಲ್ಲಿ ಮಾತ್ರ. ಇದೆಲ್ಲಾ ಬರೀ ಗಾಳಿಸುದ್ದಿ ಎಂದು ತಳ್ಳಿಹಾಕಿದರೂ ಕೂಡ, ಅತ್ಯಂತ ಸುಸಂಸ್ಕೃತ ಹಿನ್ನಲೆ ಇರುವ ಕನ್ನಡ ಚಿತ್ರರಂಗದಲ್ಲಿ ಇನ್ನೂ ಬೆಳೆಯಬೇಕಾಗಿರುವ ನಟನೊಬ್ಬ ಇಂತಹ ಅಸಹ್ಯಕರ ಪುಕಾರುಗಳನ್ನು ಕೊಳೆತ ಹೆಣದಂತೆ ಹೆಗಲ ಮೇಲೆ ಹೊತ್ತು ತಿರುಗುವುದು ಅಂತಹ ಒಳ್ಳೆಯ ಲಕ್ಷಣವೇನಲ್ಲ. ಕುಡಿಯುತ್ತಿರುವುದು ಮಜ್ಜಿಗೆಯೇ ಆದರೂ ಈಚಲಮರದ ಕೆಳಗೆ ಇರದಿದ್ದರಾಯಿತು! ಕೆಲವು ದಿನಗಳ ಹಿಂದೆ ಕಿರುತೆರೆಯಲ್ಲಿ , ಕನ್ನಡದ ಹಿರಿಯ ನಟಿಯರಾದ ಜಯಂತಿ, ಸರೋಜಾದೇವಿಯವರು ತಮ್ಮೊಡನೆ ನಟಿಸಿದ ರಾಜ್‌, ಎನ್‌.ಟಿ.ಆರ್‌, ಶಿವಾಜಿ ಗಣೇಶನ್‌ ಮುಂತಾದ ನಾಯಕ ನಟರ ಬಗ್ಗೆ ಆಡಿದ ಸವಿನುಡಿಗಳು ನನ್ನ ಕಿವಿಯಲ್ಲಿ ಇನ್ನೂ ಮಾರ್ದನಿಸುತ್ತಿವೆ. ಅಂತಹ ಮಾತುಗಳು ಕೇಳಲು ಎಷ್ಟು ಚಂದ!

  ಉಪೇಂದ್ರ ಈವರೆಗೆ ಕೆಲವು ಹಿಟ್‌ ಚಿತ್ರಗಳನ್ನು ಕೊಟ್ಟಿರಬಹುದಾದರೂ ಅವರಲ್ಲಿ ಅವಿತಿರುವ ಕಲಾವಿದ ಅಲ್ಲೆಲ್ಲಿಯೂ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮಿದಂತಿಲ್ಲ. ಉತ್ತಮವಾದದ್ದು ಇನ್ನಷ್ಟೇ ಬರಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿಂತ ನೀರಾಗಿ ಹೋಗಿರುವ ಕನ್ನಡ ಚಿತ್ರರಂಗ ಉಪೇಂದ್ರನಂತಹ ಸೃಜನಶೀಲ ನಿರ್ದೇಶಕ ಉಂಟುಮಾಡಬಲ್ಲ ಹೊಸ ಸಂಚಲನಕ್ಕಾಗಿ ಆಸೆ ತುಂಬಿದ ಕಣ್ಣುಗಳಿಂದ ಎದುರು ನೋಡುತ್ತಿದೆ. ಇಂತಹ ಸಮಯದಲ್ಲಿ ಉಪೇಂದ್ರ ತಮ್ಮ ಹೊಣೆ ಅರಿತು ನಡೆದುಕೊಳ್ಳಬೇಕು, ತಮ್ಮಲ್ಲಿರುವ ಪ್ರತಿಭೆಯನ್ನು ವಿವೇಕ, ವಿನಯದ ಜೊತೆಗೆ ಬೆರೆಸಿ ಹದಮಾಡಿಟ್ಟುಕೊಳ್ಳಬೇಕು. ಚಿತ್ರೋದ್ಯಮದ ಮಂದಿ ಕೂಡ ತಮ್ಮತಮ್ಮಲ್ಲಿನ ಒಳಜಗಳ, ಸಣ್ಣತನಗಳನ್ನು ಮರೆತು ಉಪೇಂದ್ರನಲ್ಲಿ ಅಡಗಿರುವ ಕಲಾವಂತಿಕೆಯನ್ನು, ಕಸುಬುಗಾರಿಕೆಯನ್ನು ರಚನಾತ್ಮಕವಾಗಿ ಬಳಸಿಕೊಳ್ಳುವತ್ತ ಮನಸ್ಸು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾಳೆಯ ಬಗೆಗೆ ನಮ್ಮಲ್ಲಿ ನೂರು ಭರವಸೆ ಹುಟ್ಟಿಸುವ ಈ ಕನಸುಗಾರ ರಿಮೇಕ್‌ ಕೆಸರಿನಲ್ಲಿ ಸಿಲುಕಿ, ನಿಧಾನವಾಗಿ ಕಣ್ಮರೆಯಾಗಿ ಹೋಗುವ ಮೊದಲು, ಅದನ್ನು ತಡೆಯಲು ಏನಾದರೂ ಮಾಡಲೇಬೇಕು!

  ಕೆಲವರನ್ನು ಛೀ.... ಎಂದು ತಿರಸ್ಕರಿಸಿ, ದೂರ ಇಟ್ಟಬಿಡಬಹುದು, ಇನ್ನೂ ಕೋಪವಿದ್ದರೆ ಮನ ಬಂದಂತೆ ನಿಂದಿಸಿ ಸೇಡು ತೀರಿಸಿಕೊಳ್ಳಬಹುದು, ಅವರ ಬಗೆಗೆ ಮನಸ್ಸಿನಲ್ಲಿಯೇ ಒಂದು ಬಗೆಯ ಕೆಟ್ಟ ಅಸಹನೆಯನ್ನೂ ಬೆಳೆಸಿಕೊಂಡು ಬಿಡಬಹುದು, ಆದರೆ ಅಂತವರನ್ನು ಮೆಚ್ಚಿಕೊಳ್ಳದಿರಲು, ಪ್ರೀತಿಸದೆ ಇರಲು ಮಾತ್ರ ಸಾಧ್ಯವೇ ಆಗುವುದಿಲ್ಲ. ಅನೇಕರ ಪಾಲಿಗೆ ಈ ಉಪೇಂದ್ರ ಕೂಡ ಹಾಗೆಯೇ!

  English summary
  Kannada Hero, Director, Producer Upendra : An ACG (Actor Cardiogram) Report

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X