»   » ಸೋನಿಯಾ ಭಕ್ತ ಅಂಬರೀಷ

ಸೋನಿಯಾ ಭಕ್ತ ಅಂಬರೀಷ

Posted By:
Subscribe to Filmibeat Kannada
  • ನಾಡಿಗೇರ್‌ ಚೇತನ್‌
ಅಂಬಿ ಒಳ್ಳೆ ನಟ ಅಂತ ಸಂಸತ್ತಿನಲ್ಲಿ ಮಂಗಳವಾರ ( ಆ.19) ಪ್ರೂವ್‌ ಆಗೋಯ್ತ್‌ !ಕಾಂಗ್ರೆಸ್‌ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ಮತ ಚಲಾಯಿಸುವ ಮೂಲಕ ಸೋನಿಯಾ ಭಕ್ತಿಯನ್ನು ಮುಕ್ತವಾಗಿ ಅಂಬರೀಷ್‌ ಪ್ರದರ್ಶಿಸಿದ್ದಾರೆ. ಹಾಗೂ ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಕಪಟ ನಾಟಕ ಎನ್ನುವುದು ಬಯಲಾಗಿದೆ.

ಸುಮಾರು ಒಂದು ವರ್ಷದ ಹಿಂದೆ ಕಾವೇರಿ ಚಳವಳಿ ಉತ್ತುಂಗದಲ್ಲಿತ್ತು. ಕನ್ನಡಿಗರಿಗೇ ನೀರಿಲ್ಲದಿದ್ದಾಗ ಕರ್ನಾಟಕ ಸರ್ಕಾರ ಮನೆಗೆ ಮಾರಿಯಾಗಿ, ರೈತರ ಇಷ್ಟದ ವಿರುದ್ಧ ತಮಿಳುನಾಡಿಗೆ ನೀರು ಬಿಟ್ಟು ಭಾರೀ ಉದಾರತೆ ತೋರಿತ್ತು. ಇದರಿಂದ ಆಕ್ರೋಶಗೊಂಡ ಮಂಡ್ಯ ಸುತ್ತಮುತ್ತಲ ಹಳ್ಳಿಗಳ ರೈತರು ಪ್ರತಿಭಟನೆ ನಡೆಸಿದರು. ರೈತ ನಾಯಕ ಮಾದೇಗೌಡರು ಪ್ರತಿಭಟನೆಗಾರರ ಜತೆ ಸೇರಿ ಸರ್ಕಾರಕ್ಕೆ ನೀರಿಳಿಸಿದರು. ಅಂಬಿಗಿಂತ ಮುಂಚೆ ಮಾದೇಗೌಡ ರಾಜಕಾರಣಿಯಾಗಿ ಮಂಡ್ಯ ರೈತರ ಪಾಲಿಗೆ ಕಬ್ಬಿನ ರಸವಾಗಿದ್ದರು.

ಮಂಡ್ಯದಲ್ಲೇ ಜನರಿಗೇ ಅನ್ಯಾಯವಾದಾಗ ಮಂಡ್ಯದ ಗಂಡು ಸುಮ್ಮನಿದ್ದರೆ ಹೇಗೆ ಸ್ವಾಮಿ?
ಅದಕ್ಕೇ ಅಂಬಿ ರೆಬೆಲ್‌ಸ್ಟಾರ್‌ ಆದದ್ದು ! ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ, ಭಟ್ಟಂಗಿ ಅಭಿಮಾನಿಗಳಿಂದ ‘ಕಲಿಯುಗ ಕರ್ಣ’ ಅಂತ ಜೈಕಾರ ಹಾಕಿಸಿಕೊಂಡು ಮೆರೆದರು.

ಆದರೆ, ಅಂಬರೀಷ್‌ ರಾಜಿನಾಮೆ ನೀಡಿದ ರೀತಿ ಹೇಗಿತ್ತು ನೋಡಿ? ಅವರಿಗೆ ನಿಜವಾಗಲೂ ಚಳವಳಿಯ ಕಳಕಳಿಯ ಕಾರಣಕ್ಕೆ ರಾಜಿನಾಮೆ ಕೊಡುವ ಇರಾದೆ ಇತ್ತೋ ಅಥವಾ ಅಭಿಮಾನಿಗಳ ಒತ್ತಡ ಹಾಗೆ ಮಾಡುವಂತೆ ಪ್ರೇರೇಪಿಸಿತೋ ಗೊತ್ತಿಲ್ಲ. ನಟನೆಯಲ್ಲಿ ಸಖತ್ತಾಗಿ ಪಳಗಿರುವ ಅಂಬಿ ಇನ್ನೊಂದು ಪಾರ್ಟು ಮಾಡಿಬಿಟ್ಟರು. ತಮ್ಮ ರಾಜಿನಾಮೆ ಪ್ರಹಸನದಲ್ಲೂ ಸಣ್ಣ ‘ಫಿಟಿಂಗ್‌’ ಇಟ್ಟ ಅಂಬರೀಷ್‌, ತಮ್ಮ ರಾಜಿನಾಮೆ ಪತ್ರವನ್ನು ಸಂಸತ್‌ ಸಭಾದ್ಯಕ್ಷರಿಗೆ ಕೊಡದೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕೈಗೆ ಕೊಟ್ಟು ಗೊಂದಲಕ್ಕೆ ಕಾರಣರಾಗಿದ್ದರು. ಅಂಬರೀಷ್‌ ರಾಜಿನಾಮೆ ಕೊಟ್ಟ ರೀತಿಯಿಂದ ಕಾಂಗ್ರೆಸ್‌ ಪಕ್ಷದಲ್ಲೇ ಸಣ್ಣಗೆ ಹುಟ್ಟಿದ ಭಿನ್ನಾಭಿಪ್ರಾಯದಿಂದ ಮುಖ್ಯಮಂತಿ ಎಸ್‌.ಎಂ.ಕೃಷ್ಣ ಮುಜುಗರ ಅನುಭವಿಸಿದ್ದೂ ಸುಳ್ಳಲ್ಲ.

ನಂತರ ಸತತ 2 ಬಾರಿ ಅಧಿವೇಶನಕ್ಕೆ ಹೋಗದೆ, ಸಭಾಧ್ಯಕ್ಷರಿಗೆ ರಜೆ ಚೀಟಿ ಕಳಿಸಿ ಸಿನಿಮಾ ಶೂಟಿಂಗಿಗೆ ಹೋದ ಅಂಬರೀಷ್‌ ರಾಜಕೀಯ ನಿಲುವೇನು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅವರು ಇನ್ನೂ ಸಂಸದರೋ, ಅಲ್ಲವೋ? ಅವರದ್ದು ಯಾವ ಪಕ್ಷ ? ಅಭಿಮಾನಿಗಳು ಗೊಂದಲಕ್ಕೆ ಬಿದ್ದರು. ಈ ಮಧ್ಯೆ ಅಂಬರೀಷ್‌ ಕಾಂಗ್ರೆಸ್‌ ಪಕ್ಷದಿಂದ ಹೊರಬಂದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ನಿಲ್ಲುತ್ತಾರೆಂಬ ಗುಲ್ಲು ಹಬ್ಬಿತು.

ಇತ್ತೀಚಿಗೆ ಚಿತ್ರೀಕರಣದ ವೇಳೆ ಭೇಟಿಯಾದ ಪತ್ರಕರ್ತರ ಜೊತೆ ಮಾತಾಡುತ್ತಾ, ತಾವು ಅಧಿವೇಶನಕ್ಕೆ ಹೋಗಿ ಮಾಡುವುದೇನಿದೆ ಎಂದು ಪ್ರಶ್ನಿಸಿದ್ದರು. ಇದುವರೆವಿಗೂ ಸುಮಾರು 14 ಅಧಿವೇಶನಗಳಿಗೆ ಹಾಜರಾಗಿರುವುದಾಗಿಯೂ, ಇನ್ನು ಮುಂದೆ ರಜೆ ಹಾಕಿದರೂ ಪರವಾಗಿಲ್ಲ, ಅಲ್ಲಿ ಕೂರುವುದಕ್ಕಿಂತ ಇಲ್ಲೇ ಇದ್ದು ಜನರ ಕಷ್ಟ ಸುಖ ವಿಚಾರಿಸುವುದೇ ವಾಸಿ. ದಾನ ಮತ್ತು ಸೇವೆ ತಮಗೆ ಬಹಳ ಇಷ್ಟ ಅಂದಿದ್ದರು.

ಬಿಡುವಿನಲ್ಲಿ ಕನ್ನಡ ಚಿತ್ರರಂಗದ ರಗಳೆಗಳು, ಅನೇಕ ಸಮಾರಂಭದ ಉದ್ಘಾಟನೆಗಳಲ್ಲಿ ಬ್ಯುಸಿಯಾಗಿದ್ದ ಅಂಬಿ ಇತ್ತೀಚಿಗೆ ಮತ್ತೆ ‘ದಳಪತಿ’ ಚಿತ್ರದ ಕನ್ನಡ ರೀಮೇಕ್‌ನಲ್ಲಿ ನಟಿಸಲು ಬಣ್ಣ ಹಚ್ಚಿದ್ದಾರೆ.

ಇಷ್ಟಕ್ಕೂ ಅಂಬಿಗೆ ಇಂತಹದೊಂದು ಬೃಹತ್‌ ನಾಟಕವಾಡುವ ಜರೂರತ್ತಿತ್ತೆ ? ಮಂಡ್ಯ- ಮೈಸೂರು ವಲಯದಲ್ಲಿ ರಾಜಕಾರಣಿಯಾಗಿ ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದ ಅಂಬಿ ಈಗ ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆಯೇ? ಕಾಂಗ್ರೆಸ್‌ ಸೋಲುತ್ತದೆ ಎಂದು ಗೊತ್ತಿದ್ದರೂ, ಹೀಗೆ ಮತ ಚಲಾಯಿಸುವದರಿಂದ ತಾವಿನ್ನೂ ಸಕ್ರಿಯ ರಾಜಕಾರಣಿ ಎಂದು ಸಾಬೀತುಪಡಿಸಿದರೆ ? ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಾರೆ ಎಂಬ ಸುದ್ದಿಯನ್ನು ಅಲ್ಲಗೆಳೆಯುವುದಕ್ಕಾಗಿ ಹೀಗೆ ಮಾಡಿದರೆ ? ಅಥವಾ ಇದು ಸೋನಿಯಾ ಭಕ್ತಿ ಮಾತ್ರವೇ ?

ಮಂಡ್ಯದ ಮಂದಿ ತಬ್ಬಿಬ್ಬಾಗಿದ್ದಾರೆ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada