»   » ನಮ್ಮವರಿಗೆ ತಾಂತ್ರಿಕ ದಾರಿದ್ರ್ಯ-ಸತ್ಯು

ನಮ್ಮವರಿಗೆ ತಾಂತ್ರಿಕ ದಾರಿದ್ರ್ಯ-ಸತ್ಯು

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಒಂದೂವರೆ ರುಪಾಯಿ ಹಂಚಿಕೊಳ್ಳೋಕೆ ಹೊಡೆದಾಡುವ ಕನ್ನಡ ಚಿತ್ರೋದ್ಯಮದ ಮಂದಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳೋದರಲ್ಲಿ ಕಡು ಬಡವರು. ಕನ್ನಡ ಚಿತ್ರೋದ್ಯಮಿಗಳಿಗೆ ಪುಸ್ತಕಗಳನ್ನು ಓದುವ ಒಳ್ಳೆಯ ಅಭ್ಯಾಸವೇ ಇಲ್ಲ ಎಂದು ಕುರಿ.ಕಾಂ ಖ್ಯಾತಿಯ ನಿರ್ದೇಶಕ ಎಂ.ಎಸ್‌.ಸತ್ಯು ಕಟಕಿಯಾಡಿದ್ದಾರೆ.

ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ನಡೆದ (ಆ.20) ‘ಇಂಡೋ- ಬ್ರಿಟಿಷ್‌ ಡಿಜಿಟಲ್‌ ಫಿಲ್ಮ್‌ ಫೆಸ್ಟಿವಲ್‌’ ಉದ್ಘಾಟನಾ ಸಮಾರಂಭದಲ್ಲಿ ಸತ್ಯು ಕನ್ನಡ ಚಿತ್ರೋದ್ಯಮದ ಮಂದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಚೆನ್ನೈ, ಮುಂಬಯಿ ಮತ್ತು ಕೇರಳದಲ್ಲಿ ಸಿನಿಮಾ ಮಂದಿ ಮುಂದೆ ಹೋಗುತ್ತಿದ್ದಾರೆ. ಆದರೆ ನಮ್ಮವರು ಹೊಸ ತಂತ್ರಜ್ಞಾನದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕನಿಷ್ಠ ಅದರ ಬಗ್ಗೆ ಓದುವ ಗೊಡವೆಗೂ ಹೋಗುವುದಿಲ್ಲ ಎಂದರು.

ಕರ್ನಾಟಕ ಸರ್ಕಾರದ ಭೇದ ಧೋರಣೆಯನ್ನು ಖಂಡಿಸಿದ ಸತ್ಯು, 2001ನೇ ಇಸವಿಯಲ್ಲಿ ಬರದ ನೆಪವೊಡ್ಡಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ನಿಲ್ಲಿಸಿದ್ದು ತರವಲ್ಲ ಎಂದರು. ಅದೇ ವರ್ಷ ಐಟಿ.ಕಾಂ ಮೇಳವನ್ನು ಯಾಕೆ ನಿಲ್ಲಿಸಲಿಲ್ಲ ಅನ್ನೋದು ಸತ್ಯು ತಕರಾರು.

ಕರ್ನಾಟಕ ಸರ್ಕಾರ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸಬೇಕು. ಈವರೆಗೆ ಟೀವಿ ಮತ್ತು ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸುವ ಯೋಚನೆಯನ್ನೇ ಸರ್ಕಾರ ಮಾಡಿಲ್ಲ. ಕಲಾವಿದರ ಹಾಗೂ ಸಿನಿಮಾ ಕ್ಷೇತ್ರದ ಹಿತ ದೃಷ್ಟಿಯಿಂದ ಈ ಅಕಾಡೆಮಿಯಲ್ಲಿ ರಾಜಕೀಯೇತರರು ಇರಬೇಕು. ಆಗ ಮಾತ್ರ ಚಿತ್ರೋದ್ಯಮ ಉದ್ಧಾರದ ಕನಸನ್ನು ಕಾಣಬಹುದು ಎಂಬುದು ಸತ್ಯು ಸಲಹೆ.

ಮಧ್ಯಪ್ರದೇಶದಲ್ಲಿ 300 ಚಿತ್ರಮಂದಿರಗಳಿಗೆ ಡಿಜಿಟಲ್‌ ಸ್ವರೂಪ ಕೊಡುವ ಕೆಲಸ ನಡೆಯುತ್ತಿದೆ. ಮಲೆಯಾಳಿ ಮತ್ತು ಬಂಗಾಳಿ ಸಿನಿಮಾದಲ್ಲಿ ಸಕ್ರಿಯ ಚಳವಳಿ ನಡೆಯುತ್ತಿದೆ. ನಮ್ಮಲ್ಲಿ ತಮಿಳುನಾಡಿನ ಸನ್‌ ಟೀವಿ, ಆಂಧ್ರಪ್ರದೇಶದ ಈ- ಟೀವಿ ಬಿಟ್ಟರೆ ಯಾವ ಕನ್ನಡಿಗನದ್ದೂ ಕನ್ನಡ ಚಾನೆಲ್‌ ಇಲ್ಲವೇ ಇಲ್ಲ. ಬೆಂಗಳೂರು ಬಿಟ್ಟರೆ ಬೇರೆಲ್ಲೂ ಸಿನಿಮಾ ಚಳವಳಿ ನಡೆಸುವ ಪ್ರಯತ್ನವನ್ನೇ ಯಾರೂ ಮಾಡುತ್ತಿಲ್ಲ ಎಂದು ಸತ್ಯು ದೂರಿದರು.

ಅನು ಪ್ರಭಾಕರ್‌ ಹೇಳಿದ್ದು- ಸೀರೆ ಉಟ್ಟು ಝಗಮಗಿಸುತ್ತಿದ್ದ ನಟಿ ಅನು ಪ್ರಭಾಕರ್‌, ಸತ್ಯು ಕಳಕಳಿಯನ್ನು ಸಮರ್ಥಿಸಿದರು. ನಮ್ಮ ಕನ್ನಡ ಚಿತ್ರಗಳ ಮಾರುಕಟ್ಟೆ ಚಿಕ್ಕದು. ಹೀಗಾಗಿ ನಿರ್ದೇಶಕ ದೊಡ್ಡದಾಗಿ ಯೋಚಿಸಿದರೆ ಅದಕ್ಕೆ ತಕ್ಕ ಹಣ ಕೊಡುವ ನಿರ್ಮಾಪಕರು ಸಿಗೋದಿಲ್ಲ. ಡಿಜಿಟಲ್‌ ಚಿತ್ರಗಳು ವೆಚ್ಚವನ್ನು ಪ್ರತಿಶತ 30- 40ರಷ್ಟು ತಗ್ಗಿಸುತ್ತದೆ. ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಯಾರೂ ಯೋಚಿಸದಿರುವುದು ದುರಂತ ಎಂದು ಅನು ಪ್ರಭಾಕರ್‌ ಚಿಕ್ಕದಾಗಿ, ಚೊಕ್ಕವಾಗಿ ಮಾತಾಡಿದರು.

ಇಂಡೋ- ಬ್ರಿಟಿಷ್‌ ಡಿಜಿಟಲ್‌ ಫಿಲ್ಮ್‌ ಫೆಸ್ಟಿವಲ್‌ ಆಗಸ್ಟ್‌ 23ರವರೆಗೆ ನಡೆಯಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada