»   » ‘ಪರ್ವ’ದ ವಿಳಂಬ ನೀತಿ ದೇಸಾಯಿಗೆ ಕಲಿಸಿದ ಪಾಠದ ‘ಮರ್ಮ’

‘ಪರ್ವ’ದ ವಿಳಂಬ ನೀತಿ ದೇಸಾಯಿಗೆ ಕಲಿಸಿದ ಪಾಠದ ‘ಮರ್ಮ’

Posted By: Staff
Subscribe to Filmibeat Kannada

ಸುನಿಲ್‌ಕುಮಾರ್‌ ದೇಸಾಯಿ ಈಗ ನಿರ್ಮಾಪಕರ ಥೈಲಿ ಮತ್ತು ಡೆಡ್‌ಲೈನ್‌ ಬಗ್ಗೆ ತೀರಾ ಜಾಗರೂಕರಾಗಿದ್ದಾರೆ. 'ಮರ್ಮ" ಚಿತ್ರದ ಈವರೆಗಿನ ಅವರ ಕೆಲಸವೇ ಇದನ್ನು ಸಾಬೀತುಪಡಿಸುತ್ತಿದೆ.

ಲೊಕೇಷನ್‌ ಅಥವಾ ನಟನೆ ವಿಷಯದಲ್ಲಿ ದೇಸಾಯಿ ರಾಜಿ ಆಗುವ ಜಾಯಮಾನದವರೇ ಅಲ್ಲ ಅನ್ನುವ ಮಾತೀಗ ಅಪವಾದವಾಗಿ ಪರಿವರ್ತಿತವಾಗಿದೆ. ಯಾಕೆಂದರೆ ಮರ್ಮ ಚಿತ್ರಕ್ಕೆ ಅವರು ಬಳಸಿದ ಅಡಿಕೆ ತೋಟ ಇರುವುದು ಹೆಸರುಘಟ್ಟದಲ್ಲಿ. ಟಿಪಿಕಲ್‌ ದೇಸಾಯಿ ಲೆಕ್ಕಾಚಾರದ ಪ್ರಕಾರ ಉತ್ತರ ಕನ್ನಡದ ವೈನಾದ ಅಡಿಕೆ ತೋಟದಲ್ಲಿ ಈ ದೃಶ್ಯ ಚಿತ್ರೀಕರಿಸಬೇಕಿತ್ತು. ಆದರೆ ಎಫೆಕ್ಟ್‌ ಅಷ್ಟೇ ಪ್ರಖರವಾಗಿದೆ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾರೆ ದೇಸಾಯಿ.

ಹೆಸರಘಟ್ಟದಲ್ಲಿ ಆ ದಿನ- ಮೋಡಗಳೇನೋ ಆಡುತ್ತಿದ್ದವು. ಮಡುಗಟ್ಟಿ ನಿಂತ ಮಳೆಹನಿ ಇನ್ನೇನು ಉದುರೇಬಿಟ್ಟಿತು ಎನ್ನುವಂಥಾ ವಾತಾವರಣ. ಅದನ್ನು ಕಂಡೇ ಮರ್ಮ ತಂಡ ಅಲ್ಲಿ ನೆಲೆಯೂರಿ, ಹುಯ್ಯೋ ಹುಯ್ಯೋ ಮಳೆರಾಯ ಅಂತ ಪಾಡುತ್ತಿತ್ತು. ಪ್ರೇಮಾ ಹಾಗೂ ನವ ನಟ ಆನಂದ್‌ಗೆ ಪದೇ ಪದೇ ಟಚ್‌ ಅಪ್‌ ನಡೆಯುತ್ತಲೇ ಇತ್ತು. ದೇಸಾಯಿ ಪದೇ ಪದೇ ವಾಚ್‌ ನೋಡಿಕೊಳ್ಳುತ್ತಿದ್ದರು. ನಿರೀಕ್ಷೆ ಹುಸಿಯಾಗಿ, ಮಳೆ ಬರಲೇ ಇಲ್ಲ. ಆದರೂ ಅಡಿಕೆ ತೋಟದಲ್ಲಿ ಜಿಗಿಜಿಗಿ ಹನಿಗಳು. ಕೃತಕ ಮಳೆ ಧೋ ಅಂತ ಸುರಿದೇ ಬಿಟ್ಟಿತು.

ಶಾಟ್‌ ಓಕೆ ಆದ ನಂತರ ದೇಸಾಯಿ ನಗುನಗುತ್ತಾ ಮಾತಿಗಿಳಿದರು- 'ಇರೋ ಬಜೆಟ್ಟಿನಲ್ಲೇ ಚೆನ್ನಾಗಿ ಸಿನಿಮಾ ಮಾಡಬೇಕು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದೆ. ಶೇ.75ರಷ್ಟು ಚಿತ್ರೀಕರಣ ಮುಗಿದಿದೆ. ಪ್ರೇಮಾ ಚೆನ್ನಾಗಿ ನಟಿಸಿದ್ದಾರೆ. ಹೊಸ ನಟ ಆನಂದ್‌ಗೆ ಒಳ್ಳೆಯ ಭವಿಷ್ಯವಿದೆ. ಆತನ ಮೇಲೆ ನಾನಿಟ್ಟಿರುವ ನಂಬಿಕೆ ಗುಲಗಂಜಿಯಷ್ಟೂ ಹುಸಿಯಾಗಿಲ್ಲ".

ಅಷ್ಟರಲ್ಲಿ ಕಲಾ ನಿರ್ದೇಶಕ ಅರುಣ್‌ ಸಾಗರ್‌ ನಡುವೆ ಬಾಯಿ ಹಾಕಿ, ಶಾಟ್ಸ್‌ ಬಗ್ಗೆ ಮಾತಿಗಿಳಿದರು. ದೇಸಾಯಿ ಮತ್ತೆ ಶೂಟಿಂಗ್‌ನಲ್ಲಿ ಬ್ಯುಸಿಯಾದರು; ಪದೇ ಪದೇ ಗಡಿಯಾರ ನೋಡಿಕೊಳ್ಳುತ್ತ !

ದೇಸಾಯಿ ಈ ಪರಿಯಾಗಿ ಈ ಹಿಂದೆ ಕಂಡ ಉದಾಹರಣೆಯಿಲ್ಲ. ಎಲ್ಲಾ 'ಪರ್ವ"ದ ವಿಳಂಬ ನೀತಿ ಕಲಿಸಿದ ಪಾಠದ 'ಮರ್ಮ" ಅನ್ನೋಣವೇ?!

ಅಂದಹಾಗೆ, ಮರ್ಮ ಚಿತ್ರಕತೆ ದೇಸಾಯಿ ಅವರದ್ದೇ. ದುಡ್ಡು ಹಾಕಿರುವ ನಿರ್ಮಾಪಕರು ಬಿ.ಸುರೇಶ್‌ ಗೌಡ ಮತ್ತು ಬಿ.ಎಸ್‌.ಶ್ರೀನಿವಾಸಮೂರ್ತಿ. ತಾರಾ ಬಳಗದಲ್ಲಿ ಆನಂದ್‌, ಪ್ರೇಮಾ, ಹಿರಣ್ಣಯ್ಯ, ಅರುಣ್‌ ಸಾಗರ್‌, ಕಿಶೋರಿ ಬಲ್ಲಾಳ್‌, ಯಶವಂತ ಸರದೇಶಪಾಂಡೆ ಮೊದಲಾದವರಿದ್ದಾರೆ.ವಾರ್ತಾ ಸಂಚಯ

English summary
Parvas controversies forced Desai to compromise with the situation. Marma is the recent example of it

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada