For Quick Alerts
  ALLOW NOTIFICATIONS  
  For Daily Alerts

  ನಂಗೆ ಬೆಂಗ್ಳೂರೇ ಇಷ್ಟ-ಛಾಯಾ ಸಿಂಗ್‌

  By Staff
  |

  *ವಿಘ್ನೕಶ್ವರ ಕುಂದಾಪುರ

  ಈ-ಟಿವಿಯಲ್ಲಿ ‘ಸರೋಜಿನಿ’ ಧಾರಾವಾಹಿ ಬರುವವರೆಗೆ ಛಾಯಾ ಸಿಂಗ್‌ ಪ್ರತಿಭೆ ಜೋರಾಗಿ ಅನಾವರಣಗೊಂಡಿರಲಿಲ್ಲ. ಆಮೇಲೆ ‘ಚಿಟ್ಟೆ’ ಸಿನಿಮಾದಲ್ಲಿ ಮಿಂಚಿಂಗು. ಇಂದ್ರಜಿತ್‌ ನಿರ್ದೇಶನದ ‘ತುಂಟಾಟ’ದಲ್ಲಿ ಈಕೆಯ ನಟನೆಯ ಜೊತೆಗೆ ಗ್ಲ್ಯಾಮರ್‌ ಕೂಡ ಅಭಿಮಾನಿಗಳನ್ನು ಸಂಪಾದಿಸಿತು. ಆಮೇಲೆ ಈಕೆ ಕನ್ನಡ ಚಿತ್ರಗಳತ್ತ ತಿರುಗಿ ನೋಡಲಾಗಲೇ ಇಲ್ಲ. ಯಾಕೆಂದರೆ, ತಮಿಳಿನಲ್ಲೀಗ ‘ಮೋಸ್ಟ್‌ ಹ್ಯಾಪೆನಿಂಗ್‌’ ನಾಯಕಿ ಛಾಯಾ ಸಿಂಗ್‌. ಜೊತೆಗೊಂದು ಮಲೆಯಾಳಿ ಸಿನಿಮಾ ಕೂಡ ಕೈಲುಂಟು. ಸಾಯಿ ಪ್ರಕಾಶ್‌ ನಿರ್ದೇಶನದ ಶಿವರಾಜ್‌ ನಾಯಕ ನಟರಾಗಿರುವ ‘ರೌಡಿ ಅಳಿಯ’ ಚಿತ್ರದಲ್ಲಿ ಛಾಯಾ ಸಿಂಗ್‌ ಒಂದು ಪಾತ್ರದಲ್ಲಿ ನಟಿಸಲು ಮೊನ್ನೆ ಬೆಂಗಳೂರಿಗೆ ಬಂದಿದ್ದರು.

  ತವರಿಗೆ ಬಂದ ಖುಷಿಯಲ್ಲಿದ್ದ ಛಾಯಾಗೆ ಈಗ ಮೊದಲಿನಂತೆ ಪುರುಸೊತ್ತೇ ಇಲ್ಲ. ಅರ್ಧ ತಾಸು ಮಾತಿಗೆ ಕೂತ ಆಕೆ ಮಾತಾಡಲಾಗಿದ್ದು ಹತ್ತೇ ನಿಮಿಷ. ಮಿಕ್ಕೆಲ್ಲಾ ಟೈಮನ್ನು ಮೊಬೈಲ್‌ ಫೋನ್‌ ಸಂಭಾಷಣೆ ನುಂಗಿ ಹಾಕಿತು. ಛಾಯಾ ಜೊತೆ ಹೊಡೆದ ಪಟ್ಟಾಂಗದ ತುಣುಕುಗಳು-

  ‘ತಿರುಡಾ ತಿರುಡಿ’ ತಮಿಳು ಚಿತ್ರದಲ್ಲಿ ನೀವು ಫೇಮಸ್ಸಾಗಲು ಕಾರಣ?
  ಅಲ್ಲಿನ ಅಭಿಮಾನಿಗಳು ಹೇಳುವಂತೆ- ಒಂದು ಹಾಡಲ್ಲಿ ನಾನು ಸೂಪರ್ಬ್‌ ಆಗಿದ್ದೀನಂತೆ. ‘ಮನ್ಮಥರಾಜಾ’ ಎಂಬ ಆ ಹಾಡನ್ನು ಶೂಟ್‌ ಮಾಡಿದ್ದು ಕೋಲಾರದಲ್ಲಿ. ನಾನು ಒಂದಿಪ್ಪತ್ತು ಸಾರಿ ಆ ಹಾಡು ಕೇಳಿದ್ದೀನಿ. ಅದರಲ್ಲಿ ಅಂಥದ್ದೇನಿದೆ ಅಂತ ನನಗೆ ಗೊತ್ತೇ ಇರಲಿಲ್ಲ. ಆದರೆ ಸಿನಿಮಾ ಬಿಡುಗಡೆ ಆಗಿ ಮೂರು ವಾರದ ನಂತರ ಅದರಲ್ಲಿ ನಾನು ತುಂಬಾ ಹಿಟ್‌ ಆಗಿದ್ದೀನಿ ಅನ್ನೋದು ಗೊತ್ತಾಯಿತು.

  ನೀವು ತಮಿಳ್ಮಣಿಯಾಗಿಬಿಟ್ಟಿದ್ದೀರಿ. ಕನ್ನಡ ಸಿನಿಮಾಗಳಲ್ಲಿ ಆಫರ್‌ ಸಿಗುತ್ತಿಲ್ಲವೇ?
  ಹಾಗೇನಿಲ್ಲ. ‘ಹೃದಯವಂತ’ ಚಿತ್ರದ ಅನು ಪ್ರಭಾಕರ್‌ ಪಾತ್ರವನ್ನು ನಾನೇ ಮಾಡಬೇಕಿತ್ತು. ನಿರ್ಮಾಪಕ ಕೆ.ಮಂಜು ನನ್ನನ್ನು ಸಂಪರ್ಕಿಸಿದ್ದರು. ಆದರೆ ಆಗ ನಾನು ‘ತಿರುಡಾ ತಿರುಡಿ’ ಶೂಟಿಂಗಲ್ಲಿ ಬ್ಯುಸಿಯಾಗಿದ್ದೆ. ಡೇಟ್ಸ್‌ ಹೊಂದಿಸಲು ಆಗಲಿಲ್ಲ. ಸುದೀಪ್‌ ಅಭಿನಯದ ಇನ್ನೊಂದು ಚಿತ್ರದ ನಾಯಕಿಯ ಆಫರ್‌ ಕೂಡ ಬಂದಿತ್ತು. ಆದರೆ ಆಗ ಮಲೆಯಾಳಂ ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಅದಕ್ಕೂ ಒಪ್ಪಿಕೊಳ್ಳಲು ಆಗಲಿಲ್ಲ. ಈಗ ಫ್ರೀ ಆಗಿದ್ದೆ. ಅದಕ್ಕೇ ‘ರೌಡಿ ಅಳಿಯ’ದಲ್ಲಿ ನಟಿಸುತ್ತಿದ್ದೇನೆ. ಕನ್ನಡ ಚಿತ್ರಗಳಿಗೆ ನನ್ನ ಪ್ರಯಾರಿಟಿ.

  ತಮಿಳು ಭಾಷೆ ನಿಮಗೆ ಗೊತ್ತಿತ್ತ ? ಅಲ್ಲಿ ಚಿತ್ರೋದ್ಯಮದ ಮಂದಿ ಹೇಗಿದ್ದಾರೆ?
  ನನಗೆ ಮೊದಲು ತಮಿಳು ಭಾಷೆ ಅಷ್ಟೇನೂ ಚೆನ್ನಾಗಿ ಬರ್ತಿರಲಿಲ್ಲ. ‘ತಿರುಡಾ ತಿರುಡಿ’ ಟೀಂ ಚೆನ್ನಾಗಿ ಕೋ- ಆಪರೇಟ್‌ ಮಾಡಿತು. ನಾಯಕ ಧನುಷ್‌ ಕೂಡ ತುಂಬಾ ಒಳ್ಳೆಯವರು. ಸಿನಿಮಾ ಮುಗಿಯುವ ಹೊತ್ತಿಗೆ ಅರಳು ಹುರಿದಂತೆ ತಮಿಳಿನಲ್ಲಿ ಮಾತಾಡುವುದನ್ನು ಕಲಿತಿದ್ದೆ. ತಮಿಳುನಾಡಿನ ಚಿತ್ರೋದ್ಯಮದಲ್ಲಿ ಹೊಸಬರಿಗೆ ಬೆನ್ನು ತಟ್ಟುವವರಿದ್ದಾರೆ. ಸಂತೋಷವಾಗುತ್ತೆ.

  ಇನ್ಯಾವುದಾದರೂ ಕನ್ನಡ ಸಿನಿಮಾ ಸೈನ್‌ ಮಾಡಿದ್ದೀರಾ?
  ‘ರೌಡಿ ಅಳಿಯ’ ಆದಮೇಲೆ ಸದ್ಯಕ್ಕೆ ಬೇರಾವುದೂ ಕೈಲಿಲ್ಲ. ತಮಿಳಿನಲ್ಲಿ ನಾನು ಸಿಕ್ಕಾಪಟ್ಟೆ ಚಿತ್ರಗಳಿಗೆ ಸೈನ್‌ ಮಾಡಿದ್ದೀನಿ ಅಂತ ಸುದ್ದಿ ಹಬ್ಬಿಸಿ ಬಿಟ್ಟಿದ್ದಾರೆ. ಆದರೆ ಅಲ್ಲೂ ನಾನು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ‘ವರ್ಮಾ’ ಎಂಬ ಚಿತ್ರವನ್ನು ‘ತಿರುಡಾ ತಿರುಡಿ’ಗೆ ಮುಂಚೆಯೇ ಒಪ್ಪಿಕೊಂಡಿದ್ದೆ. ಅದರ ಶೂಟಿಂಗ್‌ ಮುಕ್ತಾಯದ ಹಂತದಲ್ಲಿದೆ.

  ಬೆಂಗಳೂರು ಚೆನ್ನವೋ, ಚೆನ್ನೈ ಚೆನ್ನವೋ?
  ನಮ್ಮ ಬೆಂಗಳೂರೇ ಚೆನ್ನ :)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X