twitter
    For Quick Alerts
    ALLOW NOTIFICATIONS  
    For Daily Alerts

    ಸ್ವರ್ಣಕಮಲದ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಸಂದರ್ಶನ

    By ಉಲ್ಲಾಸ್‌ ಕೆ.ಸಿ.ರೆಡ್ಡಿ
    |

    1977 ರಲ್ಲಿ ಚಿತ್ರರಂಗ ಪ್ರವೇಶಿಸಿದ ಗಿರೀಶ್‌ ಕಾಸರವಳ್ಳಿ ಸಿನಿಮಾ ಜಗತ್ತಿನ ಆಗುಹೋಗುಗಳನ್ನು , ಕನ್ನಡ ಸಿನಿಮಾದ ಸ್ಥಿತಿ-ಗತಿಗಳನ್ನು ಸದ್ದಿಲ್ಲದೆ ಗಮನಿಸುತ್ತ, ಹೊಸ ಅಲೆಯ ಚಿತ್ರ ನಿರ್ಮಾಣಕ್ಕೆ ಬೇರೊಂದು ಆಯಾಮವನ್ನೇ ನೀಡಿದವರು. ಇದುವರೆಗೂ ತಮ್ಮ ನಿರ್ದೇಶನದ ನಾಲ್ಕು ಚಿತ್ರಗಳಿಗೆ (ಘಟಶ್ರಾದ್ಧ , ತಬರನ ಕತೆ, ತಾಯಿ ಸಾಹೇಬ, ದ್ವೀಪ) ಸ್ವರ್ಣ ಕಮಲ ಪಡೆದಿದ್ದಾರೆ. ಮಲೆನಾಡಿನ ಕಾಸರವಳ್ಳಿಯಲ್ಲಿ ಜನಿಸಿದ ಗಿರೀಶ್‌, ಕನ್ನಡ ಚಿತ್ರರಂಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ದ ನಿರ್ದೇಶಕ. ಇನ್ನೆರಡು ಚಿತ್ರಗಳಿಗೆ ಸ್ವರ್ಣ ಕಮಲ ಸಿಕ್ಕರೆ, ಗಿರೀಶ್‌ ತಮ್ಮ ಮೆಚ್ಚಿನ ನಿರ್ದೇಶಕ ಸತ್ಯಜೀತ್‌ ರೇಗೆ ಸಮನಾಗುತ್ತಾರೆ. ಅವರೊಂದಿಗೆ ಪುಟ್ಟ ಸಂಭಾಷಣೆ.

    • 'ದ್ವೀಪ" ಚಿತ್ರದ ಮೂಲಕ ನೀವು ಏನನ್ನು ಹೇಳಲು ಪ್ರಯತ್ನಿಸಿದ್ದೀರ ?

    'ದ್ವೀಪ" ಚಿತ್ರ ಅಣೆಕಟ್ಟು ನಿರ್ಮಾಣವಾಗುವ ಸಮಯದಲ್ಲಿ ಮತ್ತು ತದನಂತರ ಮುಳುಗಡೆಯಾಗುವ ಪ್ರದೇಶದ ಜನರ ನೋವು, ನೆನಪು, ಕಷ್ಟ ಮುಂತಾದವುಗಳ ಬಗ್ಗೆ ಹೇಳುತ್ತಾ ಹೋಗುತ್ತದೆ. ಅಪ್ಪ, ಮಗ, ಸೊಸೆ ಇವರ ಸುತ್ತ ಕಥೆ ಹೆಣೆಯಲಾಗಿದೆ. ಇದು ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ. 'ಬಣ್ಣದ ವೇಷ" ಚಿತ್ರವನ್ನು ಹೊರತುಪಡಿಸಿದರೆ ನನ್ನ ಬೇರೆಲ್ಲ ಚಿತ್ರಗಳು ಕಾದಂಬರಿ ಆಧಾರಿತವೇ.

    • ಒಂದು ಚಿತ್ರವನ್ನು ಇದು ಕಲಾತ್ಮಕ, ಇದು ಕಮರ್ಷಿಯಲ್‌ ಎಂದು ತಾರತಮ್ಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ?

    ಒಬ್ಬ ನಿರ್ದೇಶಕನಿಗೆ ಈ ರೀತಿಯ ತಾರತಮ್ಯ ಇರುವುದಿಲ್ಲ. ನಿರ್ದೇಶಕ ತನ್ನ ಹೃದಯಕ್ಕೆ ಹತ್ತಿರವಾದಂಥ, ಮನಸ್ಸಿಗೆ- ಬುದ್ಧಿಗೆ ಸರಿ ಅನ್ನಿಸಿದಂಥ ಚಿತ್ರವನ್ನು ಮಾಡುತ್ತಾನೆ. ಚಿತ್ರವನ್ನು ಬ್ರಾಂಡ್‌ ಮಾಡುವುದು ಮಾಧ್ಯಮದ ಮಂದಿ. ಅವರಿಗೆ ಅದು ಅವಶ್ಯಕವಾಗಿರುತ್ತೆ !

    • ಆಫ್‌ಬೀಟ್‌ ಚಿತ್ರಗಳಿಗೆ ಹಂಚಿಕೆದಾರರು, ನಿರ್ಮಾಪಕರು, ಪ್ರದರ್ಶಕರು ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ನೀವು ಹೇಗೆ ಹೊಂದಿಸಿಕೊಳ್ಳುತ್ತೀರ?

    ನಾನು ಹೊಂದಿಸಿಕೊಳ್ಳೋದಿಲ್ಲ. ಅವರೇ ಬರ್ತಾರೆ. ನಾನು ಇದುವರೆಗೂ ಯಾರ ಬಳಿಯೂ ಹೋಗಿ ಕೇಳಿದ್ದಿಲ್ಲ. ಇದುವರೆಗೂ ಕೈಯಲ್ಲಿ ಚಿತ್ರ ಇಲ್ಲದೆ ಖಾಲಿ ಕುಳಿತಂಥ ಸಂದರ್ಭ ನನಗೆ ಒದಗಿಲ್ಲ.

    • ಒಂದು ಚಿತ್ರದ ಮುಖ್ಯ ಉದ್ದೇಶ ಜನರಿಗೆ ತಲುಪುವುದು. ಆದರೆ ನಿಮ್ಮ ಬಹಳಷ್ಟು ಚಿತ್ರಗಳು ಬಿಡುಗಡೆಯ ಭಾಗ್ಯ ಕಾಣುವುದಿಲ್ಲ. ಇದರ ಬಗ್ಗೆ ಏನು ಹೇಳುತ್ತೀರ ?

    ಇವತ್ತು ಪ್ರೇಕ್ಷಕರ ಅಭಿರುಚಿ ಅಳೆಯುವುದು ಕಷ್ಟ ಸಾಧ್ಯ. ಆದರೂ ನನ್ನ ಚಿತ್ರಗಳನ್ನು ನೋಡುವ ಪ್ರೇಕ್ಷಕರು ದೇಶ ವಿದೇಶಗಳಲ್ಲಿ ಇದ್ದಾರೆ. ಅವರಿಗೆಲ್ಲ ಚಿತ್ರವನ್ನು ತಲುಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ.

    • ಪ್ರಸ್ತುತ ಕನ್ನಡ ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯವೇನು ?

    ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಸೀಮಿತ ಅನ್ನುವುದನ್ನು ಒಪ್ಪಿಕೊಳ್ತೀನಿ. ಏಕೆಂದರೆ ಕರ್ನಾಟಕ ಸಂಯುಕ್ತವಾಗಿದ್ದು 1956 ರಲ್ಲಿ. ಆಗ ರಾಜ್ಯದ ಸರಹದ್ದಿನಲ್ಲಿದ್ದಂಥ ಮಂದಿಗೆ ಕನ್ನಡ ಚಿತ್ರಗಳು ತಲುಪುತ್ತಿರಲಿಲ್ಲ. ಅವರೆಲ್ಲ ಆಯಾ ಸೆರಗಿನ ನೆಲೆಗಟ್ಟಿನ ಪ್ರಭಾವಕ್ಕೆ ಒಳಗಾಗಿದ್ದರು. ಆದರೆ ಈಗ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತಾರವಾಗಿದೆ. ಪ್ರಸ್ತುತ ಕಾಸ್ಮೋಪಾಲಿಟಿನ್‌ ವಾತಾವರಣದಲ್ಲೂ, ಪರಭಾಷೆ ಚಿತ್ರಗಳ ಭಯಂಕರ ಪೈಪೋಟಿಯ ನಡುವೆಯೂ ಬಹಳಷ್ಟು ಕನ್ನಡ ಚಿತ್ರಗಳು ಶತದಿನ ಪೂರೈಸುತ್ತಿರುವುದು ಸಂತೋಷದ ವಿಷಯ.

    • ಪ್ರಶಸ್ತಿಗಳನ್ನು ಪಡೆದ ಚಿತ್ರ ಹಿಟ್‌ ಆಗುತ್ತವಾ ?

    ಯಾಕಿಲ್ಲ. ಬೆಂಗಾಲಿಯ 'ಗೋಪಿ ಗಾಯನ್‌" ವರ್ಷದ ಮೇಲೆ ಓಡಿತು. ಕನ್ನಡ ಸಿನಿಮಾಗಳನ್ನೇ ನೋಡಿ. ಅಮೆರಿಕಾ ಅಮೆರಿಕಾ, ಮುತ್ತಿನ ಹಾರ, ಮೈಸೂರು ಮಲ್ಲಿಗೆ, ನಾಗಮಂಡಲ, ಕಾಡು ಮುಂತಾದ ಚಿತ್ರಗಳು ಬಾಕ್ಸಾಫೀಸನ್ನು ಕೊಳ್ಳೆ ಹೊಡೆದವು. ಘಟಶ್ರಾದ್ಧ ಇದಕ್ಕೆ ಇನ್ನೊಂದು ಉದಾಹರಣೆ.

    • ರಿಮೇಕನ್ನು ನೀವು ಬೆಂಬಲಿಸ್ತೀರಾ ?

    ಸೃಜನಶೀಲತೆಯನ್ನು, ಸ್ವಂತಿಕೆಯನ್ನು ಸಾಯಿಸುವ ರಿಮೇಕ್‌ಗೆ ನಾನು ಪ್ರೋತ್ಸಾಹ ನೀಡುವುದಿಲ್ಲ.

    • ನಿಮ್ಮ ಮೆಚ್ಚಿನ ನಿರ್ದೇಶಕರಾರು ?

    ಭಾರತೀಯ ಚಿತ್ರರಂಗದಲ್ಲಿ ಸತ್ಯಜಿತ್‌ ರೇ. ಉಳಿದಂತೆ ಜಪಾನ್‌ನ ಒಜು, ಸ್ಪೇನ್‌ನ ಬ್ಯುನುಯಿಲ್‌ ಮತ್ತು ಸ್ವೀಡನ್‌ನ ಬರ್ಗ್‌ಮ್ಯಾನ್‌.

    • ಉದಯೋನ್ಮುಖ ನಿರ್ದೇಶಕರಿಗೆ ನಿಮ್ಮ ಸಂದೇಶವೇನು?

    ಕಠಿಣ ಪರಿಶ್ರಮದಲ್ಲಿ ನಂಬಿಕೆ ಇಡಬೇಕು. ನಮ್ಮ ಪ್ರಯತ್ನ ದೇವರ ಮೇಲಿನ ನಂಬಿಕೆಯನ್ನೂ ಮೀರಿಸುತ್ತೆ.(ವಿಜಯ ಕರ್ನಾಟಕ)

    English summary
    An interview with Swarna Kamala director Girish Kasaravalli
    Friday, October 4, 2013, 11:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X