»   » ವಿಧಿ ವಿಪರೀತ ವಿಧಿ ಆಘಾತ ಎಂದು ಸಾಕ್ಷಿ ಹೊಸ ಹಾಡು ಹಾಡುತ್ತಾಳೇನೊ?

ವಿಧಿ ವಿಪರೀತ ವಿಧಿ ಆಘಾತ ಎಂದು ಸಾಕ್ಷಿ ಹೊಸ ಹಾಡು ಹಾಡುತ್ತಾಳೇನೊ?

Posted By: Staff
Subscribe to Filmibeat Kannada

ಸಾಕ್ಷಿ ಜಾಣೆಯಾಗಿದ್ದಾಳೆ. ಸಾಕ್ಷಿ ನಖರಾಗಳು ಕಡಿಮೆಯಾಗಿವೆ. ಸಾಕ್ಷಿ ಅಭಿನಯಿಸುವುದನ್ನೂ ಕಲಿತಿದ್ದಾಳೆ. 'ಸೈನಿಕ" ಚಿತ್ರದ ಮೂಲಕ ಕಲಾವಿದೆ ಅನ್ನಿಸಿಕೊಂಡು, 'ನಾನು ನಾನೇ" ಚಿತ್ರದ ಮೂಲಕ ಬೆನ್ನು ತಟ್ಟಿಸಿಕೊಂಡ ಸಾಕ್ಷಿ ಶಿವಾನಂದ್‌ ಎನ್ನುವ ಚೆಲುವೆಯ ಕುರಿತು ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆಯ ಮಾತುಗಳೇ ಕೇಳಿಸುತ್ತಿದ್ದರೆ, ನೆರೆಯ ತೆಲುಗು ಚಿತ್ರರಂಗದಲ್ಲಿ ಪಾಪ ಸಾಕ್ಷಿ ಎನ್ನುತ್ತಿದ್ದಾರೆ.

ಸಾಕ್ಷಿ ಅಭಿನಯ ಕಲಿತಿದ್ದೇ ಕನ್ನಡ ಚಿತ್ರಗಳಲ್ಲಿ ಎಂದು ಕನ್ನಡ ಚಿತ್ರ ವಿಮರ್ಶಕರು ಹೇಳುತ್ತಿದ್ದರೆ, ತೆಲುಗಿನಲ್ಲಿ ಜನಪ್ರಿಯತೆ ಕಡಿಮೆಯಾದದ್ದರಿಂದಲೇ ಆಕೆ ಕನ್ನಡದತ್ತ ಹೊರಳಿದ್ದು ಎಂದು ತೆಲುಗು ಚಿತ್ರರಂಗ ಕಿಸಕ್ಕೆನ್ನುತ್ತಿದೆ. ಎರಡೂ ನಿಜವೇನೆ. ಚೆಲುವು ತಾಜಾ ಆಗಿದ್ದಾಗ, ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಸಾಕ್ಷಿ ಕನ್ನಡದ ಕಡೆ ಒಲವು ತೋರಿದ್ದಕ್ಕೆ ಸಾಕ್ಷಿ ಸಿಗುವುದು ಅಷ್ಟಕ್ಕಷ್ಟೇ. ಆದರೆ, ಹೊಸ ಹುಡುಗಿಯರ ಅಬ್ಬರದಲ್ಲಿ ಅವಕಾಶಗಳು ಕಮ್ಮಿಯಾದವು ನೋಡಿ, ಸಾಕ್ಷಿ ಕನ್ನಡದತ್ತ ಹೊರಳಿದಳು ; ಯೋಗೇಶ್ವರ್‌ ನಾಯಕನಾದರೂ ಅಡ್ಡಿಯಿಲ್ಲ ಎಂದು ಅವಕಾಶವಾದಿಯಾದಳು.

ಕಾಗಕ್ಕ ಗೂಬಕ್ಕನ ಅವಳಿ ಜವಳಿ ಕತೆ ಹೇಳುವ ಮೂಲಕ ಕನ್ನಡ ಚಿತ್ರರಂಗವನ್ನು ಸಾಕ್ಷಿ ಬೇಸ್ತು ಬೀಳಿಸಿದ ಘಟನೆಯನ್ನೀಗ ಎಲ್ಲರೂ ಮರೆತಾಗಿದೆ. ಸುದ್ದಿಯಲ್ಲಿರಲು ಆಕೆ ಕತೆಗಾರಳಾದ ಕತೆ ಎಲ್ಲರಿಗೂ ಅರ್ಥವಾಗಿದೆ. ಅವಕಾಶಗಳು ಬೇಕೆಂದರೆ ಸುದ್ದಿಯಲ್ಲಿರುವುದು ಅವಶ್ಯವಲ್ಲವೇ ? ಅಂದಹಾಗೆ, ಅವಕಾಶಗಳಿಗಾಗಿ ಸಾಕ್ಷಿಯೀಗ ಏನು ಮಾಡಿದ್ದಾಳೆ ಗೊತ್ತಾ ?

'ನಂಗೊಂದು ಚಾನ್ಸು ಕೊಡಿ" ಎಂದು ಫೋನ್‌ ಮುಖಾಂತರ ನಿರ್ಮಾಪಕ ನಿರ್ದೇಶಕರ ಹಾಗೂ ಹೀರೋಗಳ ಬೆನ್ನು ಹತ್ತಿರುವ ಸುದ್ದಿಗಳು ಸಾಕ್ಷಿ ವರಸೆಗಳ ಬಗೆಗಿನ ರಂಗುರಂಗಾದ ಸುದ್ದಿಗಳು ಹೈದರಾಬಾದ್‌ನಿಂದ ವರದಿಯಾಗಿವೆ. ಒಂದು ಕಾಲಕ್ಕೆ ತೆಲುಗು ಸಿನಿಮಾಗಳ 'ಚಿನ್ನದ ಕಾಲುಗಳ ಹುಡುಗಿ" ಎಂದು ಹೆಸರಾಗಿದ್ದ ಸಾಕ್ಷಿ ಕಾಲುಗುಣದ ಬಗ್ಗೆ ಈಗ ತೆಲುಗು ಮಂದಿಗೆ ಅಂಥ ಒಲವೇನಿಲ್ಲ .

ಸಾಕ್ಷಿ ನಖರಾಗಳ ಬಗ್ಗೆ ಅನೇಕ ಕತೆಗಳು ತೆಲುಗು ಚಿತ್ರರಂಗದಲ್ಲಿ ಚಾಲ್ತಿಯಲ್ಲಿವೆ. ಸಿನಿಮಾ ಸೆಟ್ಟೊಂದರಲ್ಲಿಯೇ ಸಾಕ್ಷಿಯನ್ನು ಜವಾಬ್ದಾರಿಯಿಲ್ಲದ ಹುಡುಗಿ ಎಂದು ನಾಯಕ ನಟ ಮೋಹನ್‌ ಬಾಬು ಸಾರ್ವಜನಿಕವಾಗಿ ಜರೆದಿದ್ದ . ನಿರ್ಮಾಪಕರೊಬ್ಬರು ಸಾಕ್ಷಿ ವಿರುದ್ಧ ಚಿತ್ರ ಕಲಾವಿದರ ಸಂಘಕ್ಕೆ ದೂರು ಸಲ್ಲಿಸಿದ್ದರು. ಈಗ 'ಹಳೆಯದನ್ನೆಲ್ಲಾ ಮರೆತುಬಿಡಿ" ಎನ್ನುತ್ತಿದ್ದಾಳೆ ಸಾಕ್ಷಿ . ಮತ್ತೆ ತೆಲುಗು ಚಿತ್ರರಂಗದಲ್ಲಿ ತಳವೂರುವುದು ಆಕೆಯ ಕನಸು. ಆದರೆ, ಸಾಕ್ಷಿ ಮಾತುಗಳನ್ನು ನಂಬುವ ನಿರ್ಮಾಪಕರ ಸಂಖ್ಯೆ ಸಾಕಷ್ಟಿಲ್ಲ !

English summary
Sakshi shivanand is looking for chances in Tallywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada