»   »  ಒಳ್ಳೆ ಊಟವನ್ನು ಕೆಟ್ಟ ತಟ್ಟೆಯಲ್ಲಿ ಕೊಡುವುದು ಒಂದು ಕ್ರಮ. ಕೆಟ್ಟ ಊಟವನ್ನು ಒಳ್ಳೆ ತಟ್ಟೆಯಲ್ಲಿ ಕೊಡುವುದು ಇನ್ನೊಂದು ಕ್ರಮ. ಆಯ್ಕೆ ನಿಮದೇ.

ಒಳ್ಳೆ ಊಟವನ್ನು ಕೆಟ್ಟ ತಟ್ಟೆಯಲ್ಲಿ ಕೊಡುವುದು ಒಂದು ಕ್ರಮ. ಕೆಟ್ಟ ಊಟವನ್ನು ಒಳ್ಳೆ ತಟ್ಟೆಯಲ್ಲಿ ಕೊಡುವುದು ಇನ್ನೊಂದು ಕ್ರಮ. ಆಯ್ಕೆ ನಿಮದೇ.

Posted By:
Subscribe to Filmibeat Kannada

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ, ಹಾಯಾಗಿರೋಕೆ.... ಎಂದು ತಾವೇ ಹಾಡಿದ ಸಾಹಸ ಸಿಂಹ ವಿಷ್ಣುವರ್ಧನ್‌ ಹಾಗೂ ಅವರ ಪತ್ನಿ ಭಾರತಿ ವಿಷ್ಣುವರ್ಧನ್‌ ಇತ್ತೀಚೆಗೆ ಊಟ, ತಟ್ಟೆಯ ಬಗ್ಗೆ ಮಾತನಾಡಿದ್ದಾರೆ. ಆ ಸುದ್ದಿಯನ್ನು ನಾವು ಈಗಾಗಲೇ ನಿಮಗೆ ಉಣಬಡಿಸಿದ್ದೇವೆ.

ವಿಷ್ಣು ವರ್ಧನ್‌ ಅಭಿನಯದ ಸೂರ್ಯವಂಶದ 25ನೇ ವಾರದ ಕಾರ್ಯಕ್ರಮಕ್ಕೆ ವಿಷ್ಣು ಗೈರು ಹಾಜರಾಗಿದ್ದರು. ಇದು ಮಾಧ್ಯಮಗಳಿಗೆ ಆಹಾರವಾದ ಭಾರಿ ಸುದ್ದಿ. ಈ ಸಂದರ್ಭದಲ್ಲಿ ವಿಷ್ಣು ಪತ್ನಿ ಅರ್ಥಾತ್‌ ಜನನಿ ಧಾರವಾಹಿಯಲ್ಲಿ ಮಿಂಚಿದ ಭಾರತಿ ವಿಷ್ಣುವರ್ಧನ್‌ ಅವರು ಅಂದು ಬಹು ಕಟುವಾಗಿಯೇ ಮಾತನಾಡಿದರು. ಭಾರತಿ ಅಷ್ಟು ಕಟುವಾಗಿ ಮಾತನಾಡಿದ್ದು ಇದೇ ಮೊದಲೆಂದು ಕಾಣುತ್ತದೆ. ಭಾರತಿ ಅಂದು ಮಾತು ಆರಂಭಿಸಿದ್ದು ಹೀಗೆ:

ನಾನು ನಿಮ್ಮ ಮುಂದೆ ನಿಂತಿದ್ದೇನೆ ಅಂದರೆ ನನ್ನ ಯಜಮಾನರು ಬಂದಿಲ್ಲ ಅಂತಲೇ ಅರ್ಥ. ಅವರು ದೂರದೂರಲ್ಲಿಶೂಟಿಂಗ್‌ನಲ್ಲಿ ದ್ದಾರೆ. ಅಂಥ ದೊಡ್ಡ ಕಲಾವಿದರಿಗೆ ಒಂದು ದಿನದ ಶೂಟಿಂಗ್‌ ರದ್ದುಪಡಿಸಿ ಬರುವುದು ಕಷ್ಟವೇನಲ್ಲ.

ಬರುತ್ತೇನೆ ಅಂತ ಮಾತುಕೊಟ್ಟು ಬರದೇ ಇರುವ ಜಾಯಮಾನ ಅವರದಲ್ಲ. ಅವರು ಯಾವತ್ತೂ ಮಾತಿಗೆ ತಪ್ಪಿದವರೂ ಅಲ್ಲ. ಅಂದ ಮೇಲೆ ಅವರಿಗೆ ಇಲ್ಲಿಗೆ ಬರೋದಕ್ಕೆ ಇಷ್ಟವಿರಲಿಲ್ಲ ಎಂದೇ ಅರ್ಥ. ನಿಜ ಹೇಳಬೇಕೆಂದರೆ ಅವರಿಗೆ ಇಲ್ಲಿ ಕಾರ್ಯಕ್ರಮ ನಡೆಯೋದೇ ಗೊತ್ತಿರಲಿಲ್ಲ. ಯಾರನ್ನಾದರೂ ಮನೆಗೆ ಊಟಕ್ಕೆ ಕರೆಯೋದರಲ್ಲಿ ಎರಡು ವಿಧ. ಒಂದು : ನಾವೊಂದು ಔತಣ ಕೂಟ ಇಟ್ಟು ಕೊಂಡಿದ್ದೇವೆ. ನೀವು ಬಂದರೆ ಸಂತೋಷವಾಗುತ್ತದೆ. ಯಾವಾಗ ತಮಗೆ ಬಿಡುವಿದೆ ಎಂದು ಹೇಳಿದರೆ ಅದೇ ದಿನ ಇಟ್ಟುಕೊಳ್ಳೋಣ ಎನ್ನುವುದು. ಎರಡನೆಯದು : ಅಡಿಗೆ ಮಾಡಿಟ್ಟಿದ್ದೀವಿ. ಇಷ್ಟವಿದ್ದರೆ ಬರಬಹುದು ಅಂತ ಕರೆಯೋದು. ಇಲ್ಲಿ ಎರಡನೆಯದು ಆಗಿದೆ. ಹಾಗಾಗಿ ಅವರು ಬಂದಿಲ್ಲ !

ಈ ಊಟ ತಟ್ಟೆಯ ಕತೆ ಹೇಳಿದ ಭಾರತಿ ಅವರು ತಮ್ಮ ಯಜಮಾನರು ಯಾವ ಕಾರ್ಯಕ್ರಮಕ್ಕೂ ಮಾತು ಕೊಟ್ಟು ತಪ್ಪಿಸೋರಲ್ಲ, ಹಾಗೆಯೇ ಶೂಟಿಂಗ್‌ಗೆ ಕೂಡ ಮಾತು ಕೊಟ್ಟು ಎಂದೂ ತಪ್ಪಿಸಿದ್ದಿಲ್ಲ ಎಂದು ಸಮರ್ಥಿಸಿಕೊಂಡರು.

ಈಗ ಮೊನ್ನೆ ಮೊನ್ನೆ ವಿಷ್ಣು ವರ್ಧನ್‌ ಅವರು ಸಹ ಇದೆ ತಟ್ಟೆ - ಲೋಟ - ಊಟದ ಇನ್ನೊಂದು ಕತೆ ಹೇಳಿದ್ದಾರೆ. ಆ ಕತೆ ಹೀಗಿದೆ : ‘ಒಳ್ಳೆ ಊಟವನ್ನು ಕೆಟ್ಟ ತಟ್ಟೆಯಲ್ಲಿ ಕೊಡುವುದು ಒಂದು ಕ್ರಮ. ಕೆಟ್ಟ ಊಟವನ್ನು ಒಳ್ಳೆ ತಟ್ಟೆಯಲ್ಲಿ ಕೊಡುವುದು ಇನ್ನೊಂದು ಕ್ರಮ. ಆದರೆ ಒಳ್ಳೆ ತಟ್ಟೆಯಲ್ಲಿ ಒಳ್ಳೆ ಊಟವನ್ನು ನಮ್ಮ ಪ್ರೇಕ್ಷಕರಿಗೆ ಕೊಡದಿದ್ರೆ ಅವರು ಅದನ್ನು ರಿಜೆಕ್ಟ್‌ ಮಾಡ್ತಾರೆ’.

ಅಂತೂ ಕನ್ನಡದ ನಟರೆಲ್ಲ ವೇದಿಕೆಗಳಲ್ಲಿ ಹಾಗೂ ಪತ್ರಕರ್ತರೆದುರು ಸ್ವಾರಸ್ಯವಾಗಿ ಹಾಗೂ ಜಾಣತನದಿಂದ ಮಾತನಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಮಿಗಿಲಾಗಿ ಎಲ್ಲರೂ ಉಪಮೆಗಳನ್ನು ನೀಡಲು ಶುರು ಮಾಡಿದ್ದಾರೆ. ಉಪಮಾ ಕಾಳಿದಾಸಸ್ಯ.... ಎನ್ನುವುದನ್ನು ಈಗ ಉಪಮಾ ಕನ್ನಡ ನಾಯಕ ನಟಸ್ಯ ಎನ್ನಲೂ ಬಹುದು. ಮೊನ್ನೆ ಮೊನ್ನೆಯಿಂದ ನಮ್ಮ ಉಪ್ಪಿ ತತ್ವಜ್ಞಾನದ ಮಾತನಾಡುತ್ತಿದ್ದಾರೆ. ಈಗ ಆ ಸರದಿ ಕನ್ನಡದ ಎಲ್ಲ ನಟರಿಗೂ ಬಂದಿದೆ. ಅಂತೂ ಕನ್ನಡ ಚಿತ್ರನಗರಿಯಲ್ಲಿ ತತ್ವಜ್ಞಾನಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯ.

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X