ಚಿತ್ರ ನಿರ್ಮಾಣಕ್ಕೆ ನಟ ಅಜಯ್ ರಾವ್ ಗ್ರಾಂಡ್ ಎಂಟ್ರಿ
ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಜತೆ ಅಭಿನಯಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಆರಂಗೇಟ್ರಂ ಮಾಡಿದ ನಟ ಅಜಯ್ ರಾವ್. ತನ್ನ ಚೊಚ್ಚಿಲ ಚಿತ್ರವೇ ಸೆಂಚುರಿ ಬಾರಿಸಿದ್ದು ಅಜಯ್ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು.
ಆ ಬಳಿಕ ಕೆಲವು ಚಿತ್ರಗಳಲ್ಲಿ ಅಭಿನಯಿಸಿದರೂ ಹೇಳಿಕೊಳ್ಳುವಂತಹ ಹಿಟ್ ಚಿತ್ರಗಳು ದಾಖಲಾಗಲಿಲ್ಲ. 'ತಾಜ್ ಮಹಲ್' ಚಿತ್ರದ ಮೂಲಕ ಬಾಕ್ಸಾಫೀಸಲ್ಲಿ ಮತ್ತೆ ತಮ್ಮ ಖಾತೆಯನ್ನು ತೆರೆದರು. ಆ ಬಳಿಕ ಬಂದ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿಯಂತಹ ಚಿತ್ರಗಳು ಯಶಸ್ವಿಯಾಗುವ ಮೂಲ ಅಜಯ್ ತನ್ನದೇ ಆದಂತಹ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡರು. ಈಗ ಅಜಯ್ ಚಿತ್ರವೊಂದನ್ನು ನಿರ್ಮಿಸಲು ಹೊರಟಿದ್ದಾರೆ.
ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಎಂಬ ತಮ್ಮ ನಿರ್ಮಾಣ ಸಂಸ್ಥೆ ಮೂಲಕ ವರ್ಷಕ್ಕೊಂದು ಸಿನಿಮಾವನ್ನು ನಿರ್ಮಿಸುವ ಸಂಕಲ್ಪವನ್ನು ಅಜಯ್ ಮಾಡಿದ್ದಾರೆ. ಆದರೆ ತಮ್ಮ ನಿರ್ಮಾಣದ ಮೊದಲ ಚಿತ್ರದ ನಟ, ನಿರ್ದೇಶಕ ಯಾರು ಎಂಬ ಬಗ್ಗೆ ಮಾತ್ರ ಅಜಯ್ ಬಾಯ್ಬಿಟ್ಟಿಲ್ಲ.
ನಟನಾಗಿ ಹೆಸರು ಮಾಡಿದ್ದಾಯಿತು. ಈಗ ನಿರ್ಮಾಪಕನಾಗಿ ದುಡ್ಡು ಮಾಡಲು ಹೊರಟಿದ್ದೀರಿ ಮದುವೆ ಬಗ್ಗೆ ಏನೂ ಯೋಚಿಸಿಲ್ಲವೇ ಎಂದರೆ. ಈ ವಿಷಯದಲ್ಲಿ ಮಾತ್ರ ದಿಢೀರ್ ಎಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸ್ವಲ್ಪ ಸಮಯ ಬೇಕು ಎಂದಿದ್ದಾರೆ ಅಜಯ್.
ಅಜಯ್ ಮುಖ್ಯಭೂಮಿಕೆಯಲ್ಲಿರುವ ಮತ್ತೊಂದು ಚಿತ್ರ 'ಅದ್ವೈತ' ಶೂಟಿಂಗ್ ಮುಗಿದಿದೆ. ಈ ಚಿತ್ರಕ್ಕೆ ಗಿರಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದು ಹರ್ಷಿಕಾ ಪೂಣಚ್ಚ ಚಿತ್ರದ ನಾಯಕಿ. ಇದಾದ ಬಳಿಕ ರವಿವರ್ಮ ನಿರ್ದೇಶನದ ಎಸ್ ವಿ ಬಾಬು ನಿರ್ಮಾಣದ ಚಿತ್ರದಲ್ಲಿ ಅಜಯ್ ಅಭಿನಯಿಸಲಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











