ನಟಿ ರಮ್ಯಾ ರಾಜಕೀಯ ಪಯಣದಲ್ಲಿ ಹೊಸ ತಿರುವು
ನಟಿ ರಮ್ಯಾ ಅವರ ರಾಜಕೀಯ ಪಯಣ ಹೊಸ ತಿರುವ ಪಡೆದುಕೊಳ್ಳುವ ಹಂತದಲ್ಲಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಸೆ.10ರಿಂದ ಆರಂಭವಾಗಲಿದೆ. ಅಕ್ಟೋಬರ್ 2ರೊಳಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಮ್ಯಾ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಭಾನುವಾರ (ಆ.21) ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾರೆ. ಆದರೆ ವಿವರಗಳು ಬಹಿರಂಗಗೊಂಡಿಲ್ಲ. ಇದೇ ಮೊದಲ ಬಾರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತಿರುವುದು ರಾಜಕೀಯ ಕ್ಷೇತ್ರದಲ್ಲಿ ಹೊಸ ಕಲರವ ಶುರುವಾಗಿದೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಮ್ಯಾ ಅವರೊಂದಿಗೆ ಪ್ರಮುಖ ರಾಜಕಾರಣಿಗಳ ಕುಡಿಗಳು ಸ್ಪರ್ಧಿಸಲಿದ್ದಾರೆ. ಹಾಗಾಗಿ ಘಟಾನುಘಟಿ ರಾಜಕಾರಣಿಗಳ ತೆರೆಮರೆಯ ಕಸರತ್ತುಗಳು ತೀವ್ರಗೊಂಡಿವೆ. ತಮ್ಮ ರಾಜಕೀಯ ಮುಂದಿನ ನಡೆಯ ಬಗ್ಗೆ ರಮ್ಯಾ ಟ್ವಿಟ್ಟರ್‌ನಲ್ಲಿ ಸುಳಿವು ನೀಡದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ, ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಮೊಮ್ಮಗ ರೆಹಮಮಾನ್, ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ವ ಸೇರಿದಂತೆ ಹಲವು ಪ್ರಮುಖ ಮುಖಂಡರ ಸಂಬಂಧಿಗಳು ಸ್ಪರ್ಧಿಸಲಿದ್ದು, ರಮ್ಯಾ ಅವರಿಗೆ ತೀವ್ರ ಸ್ಪರ್ಧೆ ಎದುರಾಗಲಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ರಂಗಿನ ರಾಜಕೀಯಕ್ಕೆ ಕ್ಷಣಗಣನೆ ಆರಂಭವಾಗಿದೆ. (ಏಜೆನ್ಸೀಸ್)


Click it and Unblock the Notifications











