ಹುಬ್ಬಳ್ಳಿ ಬೆಡಗಿ ರೆಜೀನಾ ಗಾಂಧಿನಗರಕ್ಕೆ ರೀ ಎಂಟ್ರಿ
ಹುಬ್ಬಳ್ಳಿ ಬೆಡಗಿ ರೆಜೀನಾ ಮತ್ತೊಮ್ಮೆ ಗಾಂಧಿನಗರದ ಬಾಗಿಲು ತಟ್ಟಿದ್ದಾರೆ. ಭರವಸೆಯ ನಿರ್ದೇಶಕ ಕೆ ಎಂ ಚೈತನ್ಯ (ಆ ದಿನಗಳು) ಅವರ 'ಸೂರ್ಯಕಾಂತಿ' ಚಿತ್ರ ರಗ್ಗು ಹೊದ್ದುಕೊಂಡು ತಾಚಿಕೊಂಡ ಮೇಲೆ ರೆಜೀನಾ ನಾಪತ್ತೆಯಾಗಿದ್ದರು. ಎರಡು ವರ್ಷಗಳ ಗ್ಯಾಪ್‌ನ ಬಳಿಕ ಇದೀಗ ಎರಡನೆ ಇನ್ನಿಂಗ್ಸ್ ಗೆ ಅಣಿಯಾಗಿದ್ದಾರೆ.
ಡಬಲ್ ಗುಳಿಕೆನ್ನೆ ಸುಂದರ ದಿಗಂತ್ ಚಿತ್ರದ ನಾಯಕ ನಟ. ಎಂ.ಎಸ್ಸಿ ಪದವೀಧರ ಸುಧಾಕರ್ ಆಕ್ಷನ್, ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'ಸ್ಪಂದನ' ಎಂದು ಹೆಸರಿಡಲಾಗಿದೆ. ಓಂ ಪ್ರಕಾಶ್ ರಾವ್, ಸುನಿಲ್ ಕುಮಾರ್ ದೇಸಾಯಿ, ರಾಜಶೇಖರ್ ಮುಂತಾದ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಸುಧಾಕರ್ ಅವರಿಗಿದೆ.
ಚಂದಾಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್ ಎಸ್ ನಾರಾಯಣಸ್ವಾಮಿ ಚಿತ್ರದ ನಿರ್ಮಾಪಕ. 'ಸ್ಪಂದನ' ಚಿತ್ರ ಲವ್ ಸ್ಟೋರಿಯಾಗಿದ್ದು ಮನರಂಜನೆಯ ಅಂಶಗಳು ಸಾಕಷ್ಟು ಇವೆಯಂತೆ. ತಾರಾಬಳಗದಲ್ಲಿ ಅನಂತನಾಗ್, ಸುಧಾ ಬೆಳವಾಡಿ, ಅಶೋಕ್, ಶರಣ್ ಮುಂತಾದವರಿದ್ದಾರೆ.
ಚಿತ್ರಕ್ಕೆ ಸಂಗೀತ ಎ ಎಂ ನೀಲ್ ಅವರದು. ಜನಪ್ರಿಯ ಗೀತ ಸಾಹಿತಿ ದೊಡ್ಡ ರಂಗೇಗೌಡರು ಈ ಚಿತ್ರಕ್ಕಾಗಿ ದೇಶಭಕ್ತಿ ಗೀತೆಯೊಂದನ್ನು ರಚಿಸಿಕೊಟ್ಟಿರುವುದು ವಿಶೇಷ. ರೆಜೀನಾ ಅಭಿನಯಿಸುತ್ತಿರುವ ಎರಡನೆ ಚಿತ್ರವಿದು. ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ರೀ ಎಂಟ್ರಿಕ್ ಕೊಡುತ್ತಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











