ಏರ್‌ಪೋರ್ಟ್‌ನಲ್ಲಿ ಐಶ್ವರ್ಯ ರೈ ಬ್ಯಾಗ್ ಮಂಗಮಾಯ!
ಬಾಲಿವುಡ್ ತಾರೆ ಐಶ್ವರ್ಯ ರೈ ತಬ್ಬಿಬ್ಬಾದ ಘಟನೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಆಕೆ ವಿಮಾನ ಇಳಿದು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಬ್ಯಾಗ್ ನಾಪತ್ತೆಯಾಗಿತ್ತು. ತನ್ನ ಬ್ಯಾಗ್ ಎಲ್ಲಿ ಎಂದು ಐಶು ಕ್ಷಣಕಾಲ ಚಡಪಡಿಸುವಂತಾಯಿತು. ಐಶು ಬ್ಯಾಗ್ ಅದೇಗೆ ಮಂಗಮಾಯವಾಯಿತು ಎಂದು ಏರ್‌ಫೋರ್ಟ್ ಅಧಿಕಾರಿಗಳೂ ಕ್ಷಣಹೊತ್ತು ತಲೆಕೆಡಿಸಿಕೊಂಡರೂ ಪ್ರಯೋಜನವಾಗಲಿಲ್ಲ.
ಜಾಹೀರಾತಿನಲ್ಲಿ ಭಾಗವಹಿಸುವ ಸಲುವಾಗಿ ಐಶ್ವರ್ಯ ರೈ ನವದೆಹಲಿಯಿಂದ ಚೆನ್ನೈಗೆ ಬಂದಿಳಿದಿದ್ದರು. ಆದರೆ ಅಲ್ಲಿ ಆಕೆಯ ಬಟ್ಟೆಬರೆಗಳನ್ನು ತುಂಬಿದ್ದ ಬ್ಯಾಗ್ ದಿಢೀರ್ ಎಂದು ನಾಪತ್ತೆಯಾಗಿ ಆಕೆಯನ್ನು ಚಕಿತಗೊಳಿಸಿತ್ತು. ವಿಧಿಯಿಲ್ಲದೆ ಆಕೆ ವಿಮಾನ ನಿಲ್ದಾಣದಲ್ಲಿ ಶತಪಥ ತಿರುಗುವಂತಾಯಿತು. ಏಕೆಂದರೆ ಕಾರ್ಯಕ್ರಮಕ್ಕೆ ಉಡಬೇಕಾಗಿದ್ದ ಬಟ್ಟೆಬರೆಗಳು ಅದರಲ್ಲೇ ಇದ್ದವಂತೆ!
ಕಡೆಗೆ ಹೇಗೋ ಸಾವರಿಸಿಕೊಂಡು ತನ್ನ ಬ್ಯಾಗ್ ನಾಪತ್ತೆಯಾಗಿರುವ ಸುದ್ದಿಯನ್ನು ಕಾರ್ಯಕ್ರಮ ನಿರ್ವಾಹಕರ ಕಿವಿಗೆ ಹಾಕಿದರು. ಐಶು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಅವರು ಆಕೆಗೆ ಅಲ್ಲಿಯೇ ಬಟ್ಟೆ ಬರೆ ಹಾಗೂ ಒಂದು ಜೊತೆ ಶೂಗಳನ್ನು ಕೊಡಿಸಿದರು. ಅಲ್ಲಿಯವರೆಗೂ ಐಶು ಟ್ರ್ಯಾಕ್ ಸೂಟ್‌ನಲ್ಲಿಯೇ ಇದ್ದರು.
ಚೆನ್ನೈನ ಮಾಲ್ ಒಂದರಲ್ಲಿ ನಡೆದ ಕಾರ್ಯಕ್ರಮವನ್ನು ಐಶ್ವರ್ಯ ರೈ ಹೇಗೋ ನಿಭಾಯಿಸಿದರು. ಆದರೆ ಕಡೆಯ ತನಕ ಆಕೆಗೆ ತನ್ನ ಬ್ಯಾಗ್ ಎಲ್ಲಿ ಎಂಬ ಯಕ್ಷಪ್ರಶ್ನೆ ಮಾತ್ರ ಕಾಡುತ್ತಲೇ ಇತ್ತು. ಐಶು ಬ್ಯಾಗ್ ಮಿಸ್ ಆದ ಬಗ್ಗೆ ಏರ್‌ಲೈನ್ ಅಧಿಕಾರಿಗಳು ಇನ್ನೇನು ಕ್ಷಮಾಪಣೆ ಕೇಳಬೇಕೆಂದಿದ್ದರು, ಅದೇನು ಆಶ್ಚರ್ಯವೋ ಏನೋ ಕಡೆ ಗಳಿಗೆಯಲ್ಲಿ ಪವಾಡ ನಡೆದು ಹೋಗಿದೆ!ಅದೇಗೋ ಏನೋ ಐಶ್ವರ್ಯ ಬ್ಯಾಗ್ ಪತ್ತೆಯಾಗಿದೆ! [ಐಶ್ವರ್ಯ ರೈ]


Click it and Unblock the Notifications











