»   » ಖಂಡಾಂತರ ಹಾರಲಿದೆ ಜಗ್ಗೇಶ್‌ ಕೋಡಗನ 'ಕೋಳಿ'!

ಖಂಡಾಂತರ ಹಾರಲಿದೆ ಜಗ್ಗೇಶ್‌ ಕೋಡಗನ 'ಕೋಳಿ'!

Subscribe to Filmibeat Kannada

ಜಗ್ಗೇಶ್ ಚಿತ್ರ ಎಂದರೆ ಪ್ರೇಕ್ಷಕರು ಸಾಮಾನ್ಯವಾಗಿ ಕಾಮಿಡಿ ಬಯಸುವುದು ಸಹಜ. ಈ ನಂಬುಗೆಯ ಮೇಲೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಅಡಿ ಇಡುತ್ತಾರೆ. ಇತ್ತೀಚೆಗಷ್ಟೇ ತೆರೆಕಂಡ ಜಗ್ಗೇಶ್ ಮತ್ತು ರವಿಚಂದ್ರನ್ ನಟನೆಯ 'ನೀ ಟಾಟಾ ನಾ ಬಿರ್ಲಾ' ಚಿತ್ರ ಯಾಕೋ ಏನೋ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ನಾ ಟಾಟಾ ಬರ್ಲಾ ಎಂದು ಚಿತ್ರಮಂದಿರದಿಂದ ಕಾಲ್ತೆಗೆದಿದ್ದರು.ಜಗ್ಗೇಶ್ ಅಭಿಮಾನಿಗಳ ಆ ದುರಂತ ನೆನಪನ್ನು ಮರೆಸಲೋ ಎಂಬಂತೆ ಈ ಶುಕ್ರವಾರ (ಆ.22) ಜಗ್ಗೇಶ್‌ರ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ 'ಕೋಡಗನ ಕೋಳಿ ನುಂಗಿತ್ತ' ಬಿಡುಗಡೆಯಾಗುತ್ತಿದೆ.

ಗಾಂಧಿನಗರದಲ್ಲಿ ಪ್ರಸ್ತುತ ಬ್ಯುಸಿಯಾಗಿರುವ ನಟಿ ಪೂಜಾ ಗಾಂಧಿ ಈ ಚಿತ್ರದ ನಾಯಕಿ. ಚಿತ್ರೀಕರಣ ಬಹಳಷ್ಟು ದಿನಗಳ ಹಿಂದೆಯೇ ಮುಗಿದಿದ್ದರೂ ಚಿತ್ರ ಬಹಳ ತಡವಾಗಿ ತೆರೆಗೆ ಬರುತ್ತಿರುವುದು ಜಗ್ಗೇಶ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಚಿತ್ರದ ತೆರೆಯ ಹಿಂದಿನ ಸರದಾರರ ಬಗ್ಗೆ ಹೇಳಬೇಕೆಂದರೆ... ವಾಸು ಕಥೆ,ಚಿತ್ರಕಥೆ ಮತ್ತು ನಿರ್ದೇಶನ, ಕೆ.ಆರ್.ರಾಮಯ್ಯ ನಿರ್ಮಾಣ,ಸಾಧುಕೋಕಿಲ ಸಂಗೀತ,ರಾಮ್‍ನಾರಾಯಣ್ ಸಾಹಿತ್ಯ,ಶಿವಸಮಯ ಸಂಭಾಷಣೆ ಹಾಗೂ ನಾಗೇಂದ್ರ ಅರಸ್ ಅವರ ಸಂಕಲನವಿದೆ.

ರಂಗಾಯಣ ರಘು, ಸಾಧು ಕೋಕಿಲಾ, ಶರಣ್, ನಾಗಶೇಖರ್, ಬ್ಯಾಂಕ್ ಜನಾರ್ಧನ್ ,ಹೊನ್ನವಳ್ಳಿ ಕೃಷ್ಣ ಮತ್ತಿತರ ಸಹ ಕಲಾವಿದರ ತಾರಾಬಳಗವೇ 'ಕೋಡಗನ ಕೋಳಿ ನುಂಗಿತ್ತ' ಚಿತ್ರಕ್ಕಿರುವ ಕಾರಣ ಪ್ರೇಕ್ಷಕ ಧೈರ್ಯವಾಗಿ ಚಿತ್ರಮಂದಿರಕ್ಕೆ ಹೆಜ್ಜೆ ಇಡಬಹುದು.

ಚಿತ್ರದ ವಿಶೇಷಗಳು
ಚಿತ್ರ 70 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ರಾಮಯ್ಯ ಈ ಚಿತ್ರಕ್ಕಾಗಿ 2 ಕೋಟು ರು. ಖರ್ಚು ಮಾಡಿದ್ದಾರೆ. ಮೈಸೂರು ಸೋಪ್ಸ್ ಮತ್ತು ಮಾರ್ಜಕ ತಯಾರಿಕಾ ಸಂಸ್ಥೆಯೊಂದಿಗೆ ನಿರ್ಮಾಪಕರು ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಹಲವಾರು ಸನ್ನಿವೇಶಗಳಲ್ಲಿ ಮೈಸೂರು ಸೋಪ್ ಧಾರಾಳವಾಗಿ ಬಳಕೆಯಾಗಿರುವುದು ಗೋಚರಿಸಲಿದೆ!'ಕೋಡಗನ ಕೋಳಿ ನುಂಗಿತ್ತ' ಚಿತ್ರ ವಿದೇಶಗಳಲ್ಲೂ ತೆರೆಕಾಣಲಿದೆ. ಆಸ್ಟ್ರೇಲಿಯಾ,ಅಮೆರಿಕ,ಯುಕೆ,ಸೌದಿ ಅರೇಬಿಯಾ ಹಾಗೂ ಹೊರರಾಜ್ಯದ ಸೋಲಾಪುರ ಕೊಲ್ಲಾಪುರದಲ್ಲೂ ಬಿಡುಗಡೆಯಾಗಲಿದೆ ಎಂದು ನಿರ್ಮಾಪರು ತಿಳಿಸಿದ್ದಾರೆ. ಒಟ್ಟಿನಲ್ಲಿ ಜಗ್ಗೇಶ್‌ರ ಕಾಮಿಡಿ 'ಕೋಳಿ'ಖಂಡಾಂತರ ಹಾರಲಿದೆ.


(ದಟ್ಸ್‌ಕನ್ನಡ ಸಿನಿವಾರ್ತೆ)

ಈಜುಡುಗೆಯಲ್ಲಿ ಮಿಂಚುತ್ತಿರುವ ಮಳೆ ಹುಡುಗಿ ಪೂಜಾಗಾಂಧಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada