»   » ನಮ್ AREAದಲ್ಲೊಂದಿನ ಎಂಬ ವಿ'ಚಿತ್ರ'

ನಮ್ AREAದಲ್ಲೊಂದಿನ ಎಂಬ ವಿ'ಚಿತ್ರ'

Subscribe to Filmibeat Kannada

ಬೇಕಾಬಿಟ್ಟಿ ಜೀವನ..ಬದ್ಕು ಚಿಂದಿ ಚಿತ್ರಾನ್ನ,,,ನಕ್ರಾ ಹೊಡೆದ್ರೆ ಗುನ್ನಾ.... ಒಟ್ನಲ್ಲಿ ವಿಚಿತ್ರವಾಗಿರ್ತಾರೆ ಜನ... ನಮ್ AREAದಲ್ಲೊಂದಿನ..ಹೀಗಿದೆ ಟ್ರೈಲರ್ ನಲ್ಲಿ ಬರೋ ಡೈಲಾಗ್

' ನಮ್ AREAದಲ್ಲೊಂದಿನ" ಎಂಬ ವಿಶಿಷ್ಟ, ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಹೊಸ ಬಗೆಯ ಚಿತ್ರ ತಯಾರಿಯಲ್ಲಿದ್ದಾರೆ ನಟ, ನಿರ್ದೇಶಕ ಅರವಿಂದ್ ಕೌಶಿಕ್. ಚಿತ್ರದ ಹೆಸರು ನೋಡಿದರೆ ಇದು ಪಕ್ಕಾ ರೌಡಿಸಂ, ಲಾಂಗು ಮಚ್ಚು ಚಿತ್ರ ಅಂಥಾ ಜನ ಭಾವಿಸಿದರೆ ಅದರಲ್ಲಿ ತಪ್ಪೇನಿಲ್ಲ. ಕನ್ನಡದಲ್ಲಿ ಈಗ ಬರೋ ಹತ್ತರಲ್ಲಿ ಏಳು ಚಿತ್ರ ಲಾಂಗು ಮಚ್ಚುಗಳ ತುದಿಯಲ್ಲೆ ಸುತ್ತುತ್ತಿರುತ್ತವೆ.

ಆದರೆ ನನ್ನ ಚಿತ್ರ ರೌಡಿಸಮ್ ಚಿತ್ರ ಅಲ್ಲ. ಅಪ್ಪಟ ಜನಸಾಮಾನ್ಯರ ನೋವು ನಲಿವಿನ ಚಿತ್ರ ಎನ್ನುತ್ತಾರೆ. ತಮ್ಮ ಚಿತ್ರದಲ್ಲಿ ಎಲ್ಲವೂ ವಿಶಿಷ್ಟವಾಗಿರಬೇಕು ಎಂದು ಬಯಸುವ ಅರವಿಂದ್, ಚಿತ್ರದ ಟೈಟಲ್, ಪಾತ್ರಧಾರಿಗಳ ಹೆಸರನ್ನು ಕೂಡ ವಿಚಿತ್ರವಾಗಿ ಆರಿಸಿದ್ದಾರೆ. ಸೈಲೇನ್ಸರ್ ಸೀನ, ಲೈಟ್ ಕಂಬ, ಕರಡಿ ಕುಮಾರ, ತಿಕ್ಲ, ಪುಕ್ಲಾ..ಇತ್ಯಾದಿ. ಆದರೆ ಈ ರೀತಿ ಹೆಸರು ನಮ್ ಏರಿಯಾದಲ್ಲಿ(ಎಲ್ಲಾ ಏರಿಯಾದಲ್ಲೂ) ಕಾಮನ್ ಎನ್ನುತ್ತಾರೆ ನಿರ್ದೇಶಕರು.

ನಮ್ಮ ಚಿತ್ರ ಕಿತ್ತೋಗಿರೋ ಚಿತ್ರ ಎನ್ನುವ ಜೊತೆಗೆ ಕತ್ತಲೆ ಜಗತ್ತಿನ ಕಥಾಹಂದರವುಳ್ಳ ಚಿತ್ರ ಎನ್ನುತ್ತಾರೆ ಅರವಿಂದ್. ಅದರ ಅರ್ಥ ಅವರನ್ನೇ ಕೇಳಬೇಕು. ಜನರ ಮೇಲೆ ತುಂಬಾ ಹೇವಿ ಎನ್ನಿಸೋ ಸಬ್ಜೆಕ್ಟ್ ಹೇರೊದರಲ್ಲಿ ಯಾವ ಅರ್ಥ ಇಲ್ಲ. ನಾವು ಸಮಾಜಸೇವೆ ಮಾಡೋಕೆ ಚಿತ್ರರಂಗಕ್ಕೆ ಬಂದಿಲ್ಲ. ಇಲ್ಲಿ ರಂಜನೆಯ ಜತೆಗೆ ಹಣಗಳಿಕೆಯೂ ಮುಖ್ಯ. ಒಟ್ಟಿನಲ್ಲಿ ಕನ್ನಡಿಗರಿಗೆ ಹೊಸ ಬಗೆಯ ಚಿತ್ರ ನೋಡಿದ ಅನುಭವ ವಾಗುವುದಂತೂ ಗ್ಯಾರಂಟಿ ಎಂದು ವಿಶ್ವಾಸದಿಂದ ಹೇಳುತ್ತಾರೆ.

ಚಿತ್ರದ ಪ್ರಚಾರಕ್ಕೆ ಈಗಾಗಲೇ ಬ್ಲಾಗ್ ಶುರು ಮಾಡಿ, ತಮ್ಮ ಕಲಾಜೀವನದ ಆಗುಹೋಗುಗಳನ್ನು ಅದರಲ್ಲಿ ತುಂಬುತ್ತಿದ್ದಾರೆ. ಮುಂದೆ ಚಿತ್ರದ ಟ್ರೈಲರ್, ಹಾಡುಗಳನ್ನು ಯೂಟೂಬ್, ಆರ್ಕುಟ್ ಸೇರಿದಂತೆ ಎಲ್ಲಾ ಬಗೆಯ ಅಂತರ್ಜಾಲ ಮಾಧ್ಯಮಗಳ ಮೂಲಕ ಪಸರಿಸುತ್ತಾರಂತೆ. ಈಗಾಗಲೇ ಟಿವಿಗಳಲ್ಲಿ ಚಿತ್ರದ ಟ್ರೈಲರ್ ಇಣುಕಿದ್ದಾಗಿದೆ.

'ಸೋಲುವುದೇ ಸುಂದರ ಇಲ್ಲಿ...ಸೋತೊಮ್ಮೆ ನೋಡಿಕೊ...ಸರಿಯಿಲ್ಲ ಈ ಪರಿಪಾಟ...ಸಾಕೆಂದು ಹೇಳಿಕೊ..'ಎಂಬುದು ಅವರ ಚಿತ್ರದ ಹಾಡು ಮಾತ್ರ ಆಗಲಿ..ವಾಸ್ತವದಲ್ಲಿ ಅವರಿಗೆ ಜಯವಾಗಲಿ ಎನ್ನೋಣ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada