twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕಸ್ತೂರಿಯಿಂದ ಸಿನಿಮಾ ಪ್ರಶಸ್ತಿ ಸ್ಥಾಪನೆ

    By Staff
    |

    ದೂರದರ್ಶನ ವಾಹಿನಿ "ಕಸ್ತೂರಿ" ಆರಂಭವಾಗಿ ಐದು ತಿಂಗಳಾಯಿತು. ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ಅನತಿ ಕಾಲದಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತು. ತನ್ನ ವಾಹಿನಿಯ ವ್ಯಾಪ್ತಿ ಹಾಗೂ ಪ್ರಭಾವವನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಕಸ್ತೂರಿ ಹೊಸಹೊಸ ಸಿನಿಮಾ ಪ್ರಶಸ್ತಿಗಳನ್ನು ಕೊಡಲು ಮುಂದಾಗಿದೆ. ಮಾ.2ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಕನ್ನಡ ಚಿತ್ರೋದ್ಯಮದ ಪ್ರತಿಭಾವಂತ ತಂತ್ರಜ್ಞರು, ನಟ, ನಟಿ, ನಿರ್ದೇಶಕರನ್ನು ಒಳಗೊಂಡಂತೆ ಚಲನಚಿತ್ರ ಪ್ರತಿಭೆಗಳಿಗೆ ಪ್ರಶಸ್ತಿಗಳನ್ನು ಕೊಡಲು ಬೃಹತ್ ಸಮಾರಂಭ ಹಮ್ಮಿಕೊಂಡಿದೆ.

    ಸಾಯಿಮಿರಾ ಕಂಪನಿಯೊಂದಿಗೆ ಕೈಜೋಡಿಸಿ 'ಸಿನಿಗಂಧ' ಪ್ರಶಸ್ತಿಯನ್ನು ಕನ್ನಡ ಚಿತ್ರೋದ್ಯಮದ ಪ್ರತಿಭೆಗಳಿಗೆ ಕೊಡಲು ನಿರ್ಧರಿಸಿದ್ದೇವೆ. ಏರ್‌ಟೆಲ್ ಕಂಪನಿಯ ಪ್ರಾಯೋಜಕದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಕಸ್ತೂರಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಅನಿತಾ ಕುಮಾರ ಸ್ವಾಮಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಎಸ್ ಎಂ ಎಸ್, ವಾಹಿನಿಗೆ ನೇರ ಪ್ರವೇಶ ಹಾಗೂ ತೀರ್ಪುಗಾರರ ಆಯ್ಕೆ , ಹೀಗೆ ಮೂರು ಮಾನದಂಡಗಳ ಮೂಲಕ 'ಸಿನಿಗಂಧ' ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ತೀರ್ಪುಗಾರರ ತಂಡದಲ್ಲಿ ಪತ್ರಕರ್ತ ಪಿ.ಜಿ.ಶ್ರೀನಿವಾಸ ಮೂರ್ತಿ ಸಹಾ ಇರುವುದಾಗಿ ''ಕಸ್ತೂರಿ'' ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ರಾಮಾನುಜಮ್ ತಿಳಿಸಿದರು.

    2007ರಲ್ಲಿ ತೆರೆಕಂಡ ಚಿತ್ರಗಳ ಜನಪ್ರಿಯತೆ ಆಧರಿಸಿ ಉತ್ತಮ ನಿರ್ದೇಶಕ, ನಟ, ನಟಿ, ಪೋಷಕ ನಟ, ಖಳನಾಯಕ, ಹಾಸ್ಯ ನಟ, ಛಾಯಾಗ್ರಾಹಕ, ಸಂಗೀತ ನಿರ್ದೇಶಕ... ಹೀಗೆ 18 ವಿಭಾಗಗಳಲ್ಲಿ 'ಸಿನಿಗಂಧ' ಪ್ರಶಸ್ತಿ ನೀಡಲಾಗುತ್ತದೆ. ಇವಿಷ್ಟೆ ಅಲ್ಲದೆ ಏಳು ಸಂಗೀತ ನಿರ್ದೇಶಕರಿಗೆ 'ಸಪ್ತಸ್ವರ' ಪ್ರಶಸ್ತಿ ಕೊಡಲಾಗುವುದು. ಡಾ.ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ರವಿಚಂದ್ರನ್ ಅವರಿಗೆ ''ಸ್ನೇಹಜೀವಿ'' ಪ್ರಶಸ್ತಿ ಕೊಟ್ಟು ಗೌರವಿಸಲಾಗುವುದು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ''ಡಾ.ರಾಜ್‌ಕುಮಾರ್ ತ್ರಿನೇತ್ರ'' ಪ್ರಶಸ್ತಿಯನ್ನು ನೀಡಲಾಗುವುದು ಎಂದರು ಅಜಯ್ ರಾಮಾನುಜಮ್.

    ಕಳೆದ ಎರಡು ವರ್ಷಗಳಲ್ಲಿ ಟಿವಿ ಕಾರ್ಯಕ್ರಮಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರ್ನಾಟಕದ ಒಟ್ಟು ಟಿವಿ ವೀಕ್ಷಕರಲ್ಲಿ ಶೇ.58ರಷ್ಟು ಜನ ಕನ್ನಡ ಕಾರ್ಯಕ್ರಮಗಳನ್ನು ನೋಡುತ್ತಿದ್ದಾರೆ. ಕಳೆದ ದಶಕಕ್ಕೆ ಹೋಲಿಸಿದರೆ ಕನ್ನಡ ಟಿವಿ ವೀಕ್ಷಕರ ಸಂಖ್ಯೆ ತೀರಾ ದುರ್ಭರವಾಗಿತ್ತು. ಕನ್ನಡ ಚಿತ್ರೋದ್ಯಮವೂ ಬೆಳೆಯುತ್ತಿದೆ. ಸಾಕಷ್ಟು ಪ್ರತಿಭಾವಂತ ತಂತ್ರಜ್ಞರು, ನಿರ್ದೇಶಕರು ಹೊರಹೊಮ್ಮುತ್ತಿದ್ದಾರೆ ಅಂತಹವರನ್ನು ಗುರುತಿಸಿ, ಪ್ರೋತ್ಸಾಹಿಸುವ ಸಲುವಾಗಿ ''ಸಿನಿಗಂಧ'' ಪ್ರಶಸ್ತಿ ನೀಡುತ್ತಿದ್ದೇವೆ ಎಂದು ಅಜಯ್ ರಾಮಾನುಜಮ್ ಹೇಳಿದರು.

    (ದಟ್ಸ್‌ಕನ್ನಡ ಸಿನಿವಾರ್ತೆ)

    Friday, March 29, 2024, 10:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X