ಪಾತ್ರಕ್ಕಾಗಿ ಊಟ ಬಿಟ್ಟು ತೆಳ್ಳಗಾದ ಕಿಟ್ಟಿ
ಅರಮನೆ ಚಿತ್ರದ ನಂತರ ನಾಗಶೇಖರ್ ಏನು ಮಾಡುತ್ತಿದ್ದಾರೆಂದು ಸಹಜವಾಗಿಯೇ ಏಳುವ ಕುತೂಹಲಕ್ಕೆ ಅಂತ್ಯ ಹಾಡಿ ಸಂಜು, ಗೀತಾ ಮದುವೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. 'ಸಂಜು ವೆಡ್ಸ್ ಗೀತಾ' ಚಿತ್ರದ ಗೀತಾ ಪಾತ್ರವನ್ನು ನಟಿ ರಮ್ಯ ನಿರ್ವಹಿಸುತ್ತಿದ್ದಾರೆ. ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 20 ದಿನ ಊಟಿಯ ರಮ್ಯ ಹೊರಾಂಗಣದಲ್ಲಿ ಹಾಡು ಹಾಗೂ ಮಾತಿನ ಭಾಗ ಮತ್ತು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಜೈಲ್ ಸೆಟ್‌ನಲ್ಲಿ 10 ದಿನ ಚಿತ್ರೀಕರಿಸಲಾಗಿದೆ. ದ್ವಿತೀಯಾರ್ಧದಲ್ಲಿ ಕಿಟ್ಟಿಗೆ ಬಹಳ ವಿಶೇಷವಾದ ಗೆಟಪ್ ಮಾಡಿಸಬೇಕಾಗಿದ್ದುದರಿಂದಲೇ 1 ತಿಂಗಳ ಕಾಲ ಶೂಟಿಂಗ್‌ಗೆ ವಿರಾಮ ಹಾಕಲಾಗಿತ್ತು.
ಕಿಟ್ಟಿ ಮುಖ ಗುರುತು ಹಿಡಿಯದ ಹಾಗೆ ಕುರುಚಲು ಗಡ್ಡ, ಮೀಸೆ ತಲೆತುಂಬಾ ಕೆದರಿದ ಕೂದಲು, ಆಹಾರ ಇಲ್ಲದೆ ಕೃಷವಾದ ದೇಹ, ಇದಕ್ಕಾಗಿ ಕಿಟ್ಟಿ ಒಂದು ತಿಂಗಳ ಕಾಲ ದೇಹ ದಂಡಿಸಿಕೊಂಡು ತಯಾರಾಗಿ ಈಗ ಮತ್ತೆ 25 ರಿಂದ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ಪಾತ್ರ ನೈಜವಾಗಿ ಮೂಡಿಬರಲೆಂದು ಕಿಟ್ಟಿ ನಿಜವಾಗಿಯೂ ಊಟ ಬಿಟ್ಟು ತೆಳ್ಳಗಾಗಿ ಪಾತ್ರಕ್ಕೆ ಜೀವ ತುಂಬಲು ತಯಾರಾಗಿದ್ದಾರೆ. ನಿರ್ದೇಶಕ ನಾಗಶೇಖರ್ ಹೇಳುವ ಪ್ರಕಾರ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿಯೇ ಒಂದು ವಿಶೇಷ ಪ್ರಯತ್ನವಾಗಲಿದೆಯಂತೆ.
ಕಥೆ ತುಂಬಾ ವಿಶೇಷ ವಾಗಿರುವುದರಿಂದ ಸಹಜವಾಗಿಯೇ ಗಾಂಧಿನಗರದಲ್ಲಿ ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇದೆ. ನಾಗಶೇಖರ್ ಪ್ರಯತ್ನಕ್ಕೆ ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಅದ್ಭುತ ಛಾಯಾಗ್ರಹಣ ಸಾಥ್ ನೀಡಿದೆ. ಹರಿಕೃಷ್ಣರ ಸಂಗೀತದ ನಾದ ಸಂಜು-ಗೀತಾ ಮದುವೆಗೆ ಮೆರಗು ನೀಡಲಿದೆ.


Click it and Unblock the Notifications











