ಬೆಂಗಳೂರಿನಲ್ಲಿ ಕಿಟ್ಟಿ, ಶರ್ಮಿಳಾ ಸ್ವಯಂವರ
ಡಾ.ರಾಜ್ ಕುಮಾರ್ ಮತ್ತು ಭಾರತಿ ಅವರು ನಟಿಸಿದ್ದ 'ಸ್ವಯಂವರ' ಚಿತ್ರ 1973ರಲ್ಲಿ ತೆರೆಕಂಡಿತ್ತು. ವೈ ಆರ್ ಸ್ವಾಮಿ ಆ ಚಿತ್ರದ ನಿರ್ದೇಶಕರು. ಈಗ ಅದೇ ಶೀರ್ಷಿಕೆಯಲ್ಲಿ ಮತ್ತೊಂದು ಕನ್ನಡ ಚಿತ್ರ ಚಿತ್ರೀಕರಣಗೊಳ್ಳುತ್ತಿದೆ. 'ಸಜನಿ' ಖ್ಯಾತಿಯ ಶರ್ಮಿಳಾ ಮಾಂಡ್ರೆ, 'ಸವಾರಿ'ಯ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಡುವೆ 'ಸ್ವಯಂವರ' ಏರ್ಪಟ್ಟಿದೆ.
ಶ್ರೀ ಸಾಯಿ ಕಂಬೈನ್ಸ್ ಲಾಂಛನದಲ್ಲಿ ಎಂ.ಚಂದ್ರು ಅವರು ನಿರ್ಮಿಸುತ್ತಿರುವ 'ಸ್ವಯಂವರ' ಚಿತ್ರದ ಚಿತ್ರೀಕರಣ ಉದ್ಯಾನನಗರದಲ್ಲಿ ಆರಂಭವಾಗಿದೆ. ಅನಂತರಾಜು ಅವರ ನಿರ್ದೇಶನದಲ್ಲಿ ಹೊರ ಹೊಮ್ಮುತ್ತಿರುವ ಈ ಚಿತ್ರಕ್ಕೆ ಮೊದಲು ಮಾತಿನ ಭಾಗದ ಚಿತ್ರೀಕರಣ ನೆರವೇರಲಿದ್ದು, ನಂತರ ಹಾಡುಗಳು ಚಿತ್ರೀಕರಣಗೊಳ್ಳಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದ್ದು, ನಂತರ ಮೈಸೂರು ಮುಂತಾದೆಡೆಗಳಲ್ಲಿ ನಡೆಯಲಿದೆ ಎಂದು ನಿರ್ದೇಶಕರು ನುಡಿದಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತವಿರುವ 'ಸ್ವಯಂವರ' ಚಿತ್ರಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪ್ರೇಂ, ಯೋಗರಾಜ್‌ಭಟ್, ವಿ.ನಾಗೇಂದ್ರಪ್ರಸಾದ್. ತುಷಾರ ರಂಗನಾಥ್ ಹಾಗೂ ಎ.ಪಿ.ಅರ್ಜುನ್ ಈ ಗೀತರಚನೆ ಮಾಡಿದ್ದಾರೆ.
ನಿರ್ದೆಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿರುವ 'ಸ್ವಯಂವರ'ದ ಉಳಿದ ತಾರಾಬಳಗದಲ್ಲಿ ತಾರಾ, ಓಂಪ್ರಕಾಶ್‌ರಾವ್, ಅರುಣ್‌ಸಾಗರ್ ಮುಂತಾದವರಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರರಂಗನಾಥ್ ಸಂಭಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











