»   » ನೂರೈವತ್ತು ನಿರ್ಮಾಪಕರೇ, ಎಲ್ಲಿದ್ದೀರಿ?

ನೂರೈವತ್ತು ನಿರ್ಮಾಪಕರೇ, ಎಲ್ಲಿದ್ದೀರಿ?

Subscribe to Filmibeat Kannada

*ಜಯಂತಿ

ಸುಚಿತ್ರಾ ಫಿಲ್ಮ್ ಸೊಸೈಟಿ ಬೆಂಗಳೂರು ಚಿತ್ರೋತ್ಸವಕ್ಕೆ ಮುನ್ನುಡಿಯಾಗಿ ವಿಚಾರ ಸಂಕಿರಣ ಆಯೋಜಿಸಿತ್ತು. ಈ ಸಲ ಕನ್ನಡ ಚಿತ್ರೋದ್ಯಮಕ್ಕೆ ೭೫ ಸಂದ ಸಂದರ್ಭ. ಹಾಗಿದ್ದೂ ಸಂಕಿರಣಕ್ಕೆ ಚಿತ್ರರಂಗದ ಮೇನ್‌ಸ್ಟ್ರೀಮ್ ಮಂದಿ ನಿರೀಕ್ಷೆಯಂತೆಯೇ ಬಂದಿರಲಿಲ್ಲ. ಸಾಕ್ಷಾತ್ ಜಯಮಾಲ, ಗಿರೀಶ್ ಕಾಸರವಳ್ಳಿ ಕೂಡ ಮಧ್ಯಾಹ್ನ ಊಟ ಆದಮೇಲೆ ನಾಪತ್ತೆ.

ಹಿರಿಯ ವಿತರಕ ಗುಪ್ತಾ ಅಲ್ಲಿದ್ದರು. ಕೆಸಿಎನ್ ಚಂದ್ರು ಕೂಡ ಎಲ್ಲಾ ಕ್ಷಣಗಳಿಗೂ ಸಾಕ್ಷಿಯಾದರು. ವಾಣಿಜ್ಯ ಮಂಡಳಿಯ ಪ್ರತಿನಿಧಿಯಾಗಿ ಮಾರ್ ಸುರೇಶ್ ಆಗೀಗ ವಾದ ಮಂಡಿಸಿದ್ದೂ ಉಂಟು. ಸಿನಿಮಾ ನೋಡಿ ಸರ್ಟಿಫಿಕೇಟ್ ಕೊಟ್ಟುಕೊಟ್ಟು ಸುಸ್ತಾಗಿರುವ ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಎ.ಚಂದ್ರಶೇಖರ್ ಮಾತ್ರ ಇಡೀ ದಿನ ತಣ್ಣಗೆ ಕೂತು ಎಲ್ಲವನ್ನೂ ಆಲಿಸಿದರು. ಅವರೂ ಸಂಕಿರಣದಲ್ಲಿ ಇಂದಿನ ಸಿನಿಮಾಗಳ ಸ್ಥಿತಿ ಗತಿ ಕುರಿತು ಅಂಕಿಅಂಶಗಳ ಸಮೇತ ವಿಷಯ ಮಂಡಿಸಿದರು. ಅವರ ಮಂಡನೆಗೆ ಹೆಚ್ಚೇ ಚಪ್ಪಾಳೆ ಸಿಕ್ಕಿತು.

ಸಂಕಿರಣದಲ್ಲಿ ತೌಡು ಕುಟ್ಟಿದವರೇ ಹೆಚ್ಚು. ನಮಗೆ ಸುದ್ದಿ ಸಿಕ್ಕಿದ್ದು ವಂದನಾರ್ಪಣೆಯ ಸಂದರ್ಭದಲ್ಲಿ. ಇನ್ನೂರೈವತ್ತು ನಿರ್ಮಾಪಕರಿಗೆ ಆಹ್ವಾನ ಪತ್ರಿಕೆ ಕಳಿಸಿದ್ದೆವು. ನೂರಾಐವತ್ತು ಪತ್ರಿಕೆಗಳು ವಾಪಸ್ ಬಂದವು. ನಿರ್ಮಾಪಕರ ಸಂಘದಲ್ಲಿ ನಮೂದಾಗಿರುವ ವಿಳಾಸಗಳಿಗೇ ನಾವು ಕಳಿಸಿದ್ದು. ಅಂದರೆ, ತಮ್ಮ ಚೇಂಜ್ ಆಫ್ ಅಡ್ರೆಸನ್ನೂ ಕೊಡದ ನಿರ್ಮಾಪಕರ ಸಂಖ್ಯೆ ಎಷ್ಟೊಂದು ಇದೆ ನೋಡಿ... ಅಂದರು ಡಾ.ವಿಜಯಮ್ಮ.

ಹಾಗೆ ಆಹ್ವಾನ ಪತ್ರಿಕೆ ವಾಪಸ್ ಬಂದ ನಿರ್ಮಾಪಕರೆಲ್ಲಾ ಯಾರು? ಅವರೀಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಇತ್ಯಾದಿ ಪ್ರಶ್ನೆಗಳನ್ನು ವಂದನಾರ್ಪಣೆ ಹುಟ್ಟುಹಾಕಿತು.

ನಿರ್ಮಾಪಕರ ಸಂಘಕ್ಕೆ ಒಂದು ಸಿನಿಮಾ ಮಾಡಿದವರೂ ಸದಸ್ಯರಾಗಬಹುದು. ಅವರು ಆಮೇಲೆ ಸಿನಿಮಾ ಮಾಡದೇ ಇರುವ ಸಾಧ್ಯತೆ ಇದೆ. ಒಂದಿಷ್ಟು ಸಿನಿಮಾ ಮಾಡಿ, ದುಡ್ಡು ಕಳೆದುಕೊಂಡ ಮೇಲೆ ಊರು ಬಿಟ್ಟು ಹೋಗಿರಲೂಬಹುದು. ಕೆಲವರಿಗೆ ನಿರ್ಮಾಪಕರ ಸಂಘದಿಂದ ಏನೂ ಪ್ರಯೋಜನವಿಲ್ಲ ಎನಿಸಿರಲಿಕ್ಕೂ ಸಾಕು. ಇತ್ತೀಚೆಗೆ ಶೋಕಿಗಾಗಿ ಸಿನಿಮಾ ಮಾಡುವವರ ಸಂತತಿ ಹೆಚ್ಚುತ್ತಿದೆ. ರಿಯಲ್ ಎಸ್ಟೇಟಿನ ಹಣದೊಟ್ಟಿಗೆ ಆಟ ಆಡಿದವರ ಇಂಥವರೆಲ್ಲಾ ವರ್ಷದ ಕೊನೆ ಹೊತ್ತಿಗೆ ಸುಸ್ತಾಗಿದ್ದಾರೆ. ಯಾಕೆಂದರೆ, ರಿಯಲ್ ಎಸ್ಟೇಟ್ ರಿಯಲಿ ಬಿದ್ದುಹೋಗಿದೆ. ಅವರು ಸಹ ನಿರ್ಮಾಪಕರ ಸಂಘಕ್ಕೆ ತಮ್ಮ ಚೇಂಜ್ ಆಫ್ ಅಡ್ರೆಸ್ ಕೊಡದೇ ಇರಬಹುದು.

ಇಷ್ಟೆಲ್ಲಾ ಊಹೆಗಳು ಸುಳಿದ ಮೇಲೆ ಕೆಸಿಎನ್ ಚಂದ್ರು ಎಲ್ಲಕ್ಕೂ ಉತ್ತರವೆಂಬಂತೆ ಸಣ್ಣಗೆ ನಕ್ಕರಷ್ಟೆ. ಅಸಲಿಗೆ ನಿರ್ಮಾಪಕರೆಲ್ಲಾ ಎಲ್ಲಿ ಹೋದರು ಅನ್ನುವ ಪ್ರಶ್ನೆಗೆ ಅವರಿಗೂ ಉತ್ತರ ಗೊತ್ತಿಲ್ಲ!

ಮುಖ್ಯವಾಗಿ ಸಂಕಿರಣ ಕೇಳಬೇಕಾದವರು ಸಿನಿಮಾದವರು. ಅದರಲ್ಲೂ ಈಗ ಚಿತ್ರ ತಯಾರಿಸುವಲ್ಲಿ ತೊಡಗಿಕೊಂಡವರು. ಕ್ರೀಮ್ ಅಂತ ಇಟ್ಟುಕೊಂಡರೂ ರಾಕ್‌ಲೈನ್ ವೆಂಕಟೇಶ್, ಕೆ.ಮಂಜು ತರಹದ ನಿರ್ಮಾಪಕರು, ನಾಗತೀಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, ಸೂರಿ ತರಹದ ನಿರ್ದೇಶಕರು, ಗಣೇಶ್, ಪುನೀತ್, ದರ್ಶನ್, ಸುದೀಪ್ ಇತ್ಯಾದಿ ನಟ-ನಟರು, ನಾಯಕಿ ಪೂಜಾ ಗಾಂಧಿ, ಕ್ಯಾಮೆರಾಮನ್ ಕೃಷ್ಣಕುಮಾರ್, ಕೃಷ್ಣ ಮೊದಲಾದವರ ಹೆಸರು ನೆನಪಾಗುತ್ತದೆ. ಇವರಲ್ಲಿ ಕೆಲವರಾದರೂ ಬಂದರೆ ಸಂಕಿರಣ ಕಳೆಗಟ್ಟುವ ಸಾಧ್ಯತೆ ಇರುತ್ತದೆ. ಬಂಗಾಳಿ, ಮರಾಠಿ, ತೆಲುಗು ಚಿತ್ರರಂಗದಲ್ಲಿ ಕೆಲವು ಸೆಮಿನಾರುಗಳಿಗೆ ಹೀಗೆ ಚಾರ್ಮ್ ಬಂದಿರುವ ಉದಾಹರಣೆಗಳುಂಟು.

ಆದರೆ, ಭಾನುವಾರ ನಡೆದ ಸೆಮಿನಾರಿಗೆ ಹಾಜರಾಗಿದ್ದ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಸಂಖ್ಯೆಯೂ ಕಡಿಮೆಯೇ ಇತ್ತು. ಯಾರೋ ಒಬ್ಬ ಪ್ರೇಕ್ಷಕ ಕೊನೆಯಲ್ಲಿ ಎದ್ದು ನಿಂತು, ಮೇನ್‌ಸ್ಟ್ರೀಮ್ ಸಿನಿಮಾದ ಜನಪ್ರಿಯ ತಾರೆಗಳು ಇಲ್ಲಿಗೆ ಏಕೆ ಬಂದಿಲ್ಲ ಅಂತ ಪ್ರಶ್ನಿಸಿದ. ಅದಕ್ಕೆ ಕೆ.ಎಸ್.ಎಲ್.ಸ್ವಾಮಿ ಹೇಳಿದ್ದು- ಬಂದಿರೋರನ್ನು ನೋಡಿ. ಬರದೇ ಹೋದವರ ಬಗ್ಗೆ ಯಾಕೆ ಚಿಂತಿಸುತ್ತೀರಿ. ಚಿಂತಿಸಿ ಫಲವಿಲ್ಲ. ಎಲ್ಲಾ ಹೀಗೇ ಇರುತ್ತೆ. ಯಾರನ್ನೂ ತಿದ್ದೋಕಾಗಲ್ಲ. ನಮ್ಮ ಕಾಲದ ಸಿನಿಮಾ ಕಷ್ಟಗಳು ಅವರಿಗೆ ಗೊತ್ತಾಗೋದಿಲ್ಲ. ನಾನೊಂದು ಸಿನಿಮಾ ಮಾಡ್ತೀನಿ ಐವತ್ತು ಸಾವಿರ ಕೊಡಿ ಅಂತ ಗುಪ್ತಾ ಅವರನ್ನು 1970ರ ದಶಕದಲ್ಲಿ ಕೇಳಿದಾಗ ಕೈಯೆತ್ತಿ ಕೊಟ್ಟಿದ್ದರು. ಬಡ್ಡಿ ಕೂಡ ಕೇಳಲಿಲ್ಲ. ಆಮೇಲೆ ಸಿನಿಮಾ ಮಾಡಿಕೊಂಡೇ ಸಾಲ ತೀರಿಸುತ್ತಾ ಮೇಲೆ ಬಂದೆವು. ಆಗ ಹಣ ಕೊಟ್ಟು, ತಂತ್ರಜ್ಞರನ್ನು ಬೆಳೆಸುವ ಮಹನೀಯರಿದ್ದರು. ಇವತ್ತು ಅಂಥ ಒಬ್ಬರಾದರೂ ಇದ್ದಾರಾ? ಎಲ್ಲಾ ಸ್ಟಾರ್‌ಗಳ ಹಿಂದೆ ಬೀಳ್ತಾರೆ...

ಕೆ.ಎಸ್.ಎಲ್.ಸ್ವಾಮಿ ಮಾತಿಗೆ ಜೋರು ಚಪ್ಪಾಳೆ ಬಿತ್ತು. ಆದರೆ, ಹಾಗೆ ಚಪ್ಪಾಳೆ ಹೊಡೆದವರಲ್ಲಿ ಹೆಚ್ಚಾಗಿದ್ದವರು ಸಿನಿಮಾ ಕಲಿಯುತ್ತಿರುವ ವಿದ್ಯಾರ್ಥಿಗಳು!
ಸಿನಿಮಾಗೆ ಜ್ಞಾನಪೀಠ ಸಾಹಿತಿಗಳ ಕೊಡುಗೆ ಬೇಕು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada