ಬೆಳ್ಳಿತೆರೆಗೆ ಗಾಡ್ ಫಾದರ್ ಮುತ್ತಪ್ಪ ರೈ ಪದಾರ್ಪಣೆ
ಸಮಾಜ ಸೇವಕ, ಜಯ ಕರ್ನಾಟಕ ಕನ್ನಡ ಸಂಘಟನೆ ಸ್ಥಾಪಕ ಮುತ್ತಪ್ಪ ರೈ ಬೆಳ್ಳಿತೆರೆಗೆ ಅಡಿಯಿಡಲು ಮುಂದಾಗಿದ್ದಾರೆ. ಈ ಹಿಂದೆ ಅವರಿಗೆ ಚಿತ್ರದಲ್ಲಿ ನಟಿಸಲು ಸಾಕಷ್ಟು ಬಾರಿ ಕರೆ ಬಂದಿತ್ತು. ಆದರೆ ಅವರು ಯಾಕೋ ಏನೋ ಮನಸ್ಸು ಮಾಡಿರಲಿಲ್ಲ. ಈಗ ತುಳು ಚಿತ್ರವೊಂದರಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ . ಚಿತ್ರದ ಹೆಸರು 'ಕಂಚಿಲ್ದ ಬಾಲೆ'.
ಈ ಚಿತ್ರವನ್ನು ಕುಂಬ್ರ ರಘುನಾಥ ರೈ ನಿರ್ಮಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ಮುತ್ತಪ್ಪ ರೈ ಅವರದು ಅತಿಥಿ ಪಾತ್ರ. ಒಂದೆರಡು ದೃಶ್ಯಗಳಲ್ಲಿ ಅವರು ಕಾಣಿಸಲಿದ್ದಾರೆ. ಊರಿನ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿ ತುಳುನಾಡಿನ ಬಗ್ಗೆ ಭಾಷಣ ಮಾಡುವ ಪಾತ್ರ.
ಪಾತ್ರ ಸಣ್ಣದಾದರೂ ಹೆಚ್ಚು ಮಹತ್ವವುಳ್ಳದು ಎನ್ನುತ್ತಾರೆ ರಘುನಾಥ್. ಇದೊಂದು ಭಕ್ತಿ ಪ್ರಧಾನವಾದ ಚಿತ್ರ.ಮೊದಲು ನಟಿಸುವುದಾದರೆ ತುಳು ಚಿತ್ರದಲ್ಲೇ ನಟಿಸಬೇಕು ಅಂದುಕೊಂಡಿದ್ದೆ. ತುಳು ನನ್ನ ಮಾತೃ ಭಾಷೆ ಕೂಡ. 'ಕಂಚಿಲ್ದ ಬಾಲೆ' ಚಿತ್ರದ ಕತೆ ಇಷ್ಟವಾಯಿತು . ಹಾಗಾಗಿ ನಟಿಸಲು ಒಪ್ಪಿದೆ ಎನ್ನುತ್ತಾರೆ ರೈ.
ಮುಂದೆ ಬರುವ ಎಲ್ಲಾ ಆಫರ್‌ಗಳನ್ನು ಒಪ್ಪಿಕೊಳ್ಳಲು ಮುತ್ತಪ್ಪ ರೈ ಸಿದ್ಧರಿಲ್ಲವಂತೆ. ಕತೆ ಇಷ್ಟವಾಗಿ ನಟಿಸಬೇಕು ಅನ್ನಿಸಿದರೆ ಮಾತ್ರ ಬಣ್ಣ ಹಚ್ಚಿಕೊಳ್ಳುವುದಾಗಿ ಮುತ್ತಪ್ಪ ರೈ ಹೇಳಿದ್ದಾರೆ. ಮುಂದೊಂದು ದಿನ ತಮ್ಮ ಬದುಕಿನ ಚಿತ್ರಣವನ್ನು ತೆರೆಗೆ ತರುವ ಆಸೆ ಮುತ್ತಪ್ಪ ರೈ ಅವರಿಗಿದೆ.


Click it and Unblock the Notifications











