ಚೈತ್ರದ ಪ್ರೇಮಾಂಜಲಿ ರಘುವೀರ್‌ಗೆ ಮತ್ತೆ ಬಂತು ಚೈತ್ರ
'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ರಘುವೀರ್ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ಕೆಲದಿನಗಳ ಹಿಂದೆ ರಘುವೀರ್ ಇಬ್ಬರು ವೇಶ್ಯೆಯರ ಜೊತೆ ಪೊಲೀಸರಿಗೆ ಸಿಕ್ಕಿಬಿದ್ದು ದೊಡ್ಡ ಸುದ್ದಿ ಮಾಡಿದ್ದರು. ಅದಾದ ಬಳಿಕ ರಘುವೀರ್ ಸುಳಿವಿರಲಿಲ್ಲ. ಈಗ 'ಮತ್ತೆ ಬಂತು ಚೈತ್ರ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಹಿಂದೆ ರಘುವೀರ್ ಪ್ರಮುಖ ಪಾತ್ರದಲ್ಲಿದ್ದ 'ಉಯ್ಯಾಲೆ' ಎಂಬ ಚಿತ್ರ ಸೆಟ್ಟೇರಿತ್ತು. ಟೆನ್ನಿಸ್ ಕೃಷ್ಣ, ದೊಡ್ಡಣ್ಣ, ಪದ್ಮಜಾರಾವ್ ಪೋಷಕ ಪಾತ್ರಗಳಲ್ಲಿದ್ದ ಆ ಚಿತ್ರಕ್ಕೆ ದಿನೇಶ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದರು. ಆಟೋಡ್ರೈವರ್ ಒಬ್ಬನ ಕಥಾಹಂದರದ ಚಿತ್ರ ಇದಾಗಿತ್ತು. ಬಳಿಕ ಆ ಚಿತ್ರದ ಏನಾಯಿತು ಎಂಬ ಬಗ್ಗೆ ಸುದ್ದಿಯಿಲ್ಲ.
ಸಂಜೀವ್ ಸಾಮ್ಯಲ್ ಹಾಗೂ ಶಿರೋಮಣಿ ನಿರ್ಮಿಸುತ್ತಿರುವ ಮತ್ತೆ ಬಂತು ಚೈತ್ರ ಚಿತ್ರಕ್ಕೆ ದೇವದಾಸ್ ನಿರ್ದೇಶಕರು. ಸಂಗೀತದ ಜವಾಬ್ದಾರಿಯನ್ನೂ ಅವರೇ ಹೊತ್ತಿರುವುದು ವಿಶೇಷ. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ ಎಂಬ ವಿವರಗಳು ಬಿಟ್ಟರೆ ಇನ್ನೇನು ವಿಶೇಷವಿಲ್ಲ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











